More

    ಮಕ್ಕಳಿಗೆ ಬೇಸಿಗೆ ರಜಾ ಮಜಾ! ಏ.12ರಿಂದ ರಂಗಾಯಣದಲ್ಲಿ ಶಿಬಿರ

    ಅವಿನಾಶ್ ಜೈನಹಳ್ಳಿ ಮೈಸೂರು
    ಮಕ್ಕಳ ಪಾಲಿಗೆ ಬೇಸಿಗೆ ‘ರಜಾ’ ಎಂಬ ಪದಕ್ಕೆ ಪರ್ಯಾಯ ಅರ್ಥವೇ ‘ಮಜಾ’…!
    ಶೈಕ್ಷಣಿಕ ವರ್ಷ ಕೊನೆಗೊಳ್ಳುವ ಹಿನ್ನೆಲೆಯಲ್ಲಿ ಶಾಲೆಗಳಿಂದ ಬೇಸಿಗೆ ಸಂದರ್ಭ ಮಕ್ಕಳಿಗೆ ರಜೆ ನೀಡಲಾಗುತ್ತದೆ. ಮಕ್ಕಳ ಈ ರಜಾ ಅವಧಿಯಲ್ಲಿ ಪಠ್ಯೇತರ ಚಟುವಟಿಕೆಗಳ ಮೂಲಕ ಅವರ ಪ್ರತಿಭೆ ಅರಳಿಸುವುದು ಬೇಸಿಗೆ ಶಿಬಿರಗಳ ಉದ್ದೇಶವಾಗಿದೆ. ಅದಕ್ಕಾಗಿ ‘ಚಿಣ್ಣರ ಮೇಳ’ ಆಯೋಜಿಸಲು ರಂಗಾಯಣ ಮುಂದಾಗಿದ್ದು, ರಂಗಾಯಣ ಅಂಗಳದಲ್ಲಿ ವರ್ಷದ ಬಳಿಕ ಮತ್ತೆ ಚಿಣ್ಣರ ಚಿಲಿಪಿಲಿ ಕೇಳಲಿದೆ.

    ಚಿಣ್ಣರ ಮೇಳ ಸಂಘಟಿಸಲು ರಂಗಾಯಣದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಚಿಣ್ಣರಿಗೆ ಒಂದು ತಿಂಗಳ ಕಾಲ ಭರಪೂರ ‘ರಂಗರಸ’ ದೊರೆಯಲಿದೆ.
    ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಹಲವು ಸಂಘ-ಸಂಸ್ಥೆಗಳು, ಕ್ರೀಡೆ, ರಂಗಭೂಮಿ ಸೇರಿದಂತೆ ವಿವಿಧ ಬಗೆಯ ಬೇಸಿಗೆ ಶಿಬಿರಗಳನ್ನು ಆಯೋಜಿಸುತ್ತವೆ. ಆದರೆ ರಂಗಾಯಣದ ಚಿಣ್ಣರ ಮೇಳಕ್ಕೆ ತನ್ನದೇ ಆದ ಮಹತ್ವ ಇದ್ದು, ಪಾಲಕರು ತಮ್ಮ ಮಕ್ಕಳನ್ನು ಈ ಮೇಳಕ್ಕೆ ಸೇರಿಸಲು ನಡೆಸುವ ದೊಡ್ಡ ಮಟ್ಟದ ಕಸರತ್ತು ಇದಕ್ಕೆ ನಿದರ್ಶನವಾಗಿದೆ.

    ಸಮರಸವೇ ಜೀವನ ಆಶಯ:

    ಮಕ್ಕಳು ಪ್ರಕೃತಿಯ ಕೊಡುಗೆ, ಮನಸ್ಸುಮುಕ್ತ, ಕನಸು ಕಣಜ, ಕಲ್ಪನೆ ಅದ್ಭುತ ಇವುಗಳನ್ನು ಮುತುವರ್ಜಿಯಿಂದ ಕಾಪಿಡುವ, ರೂಪಿಸುವ ಹೊಣೆ ಪಾಲಕರು, ಶಿಕ್ಷಕರು, ಸಮಾಜದ್ದು. ಸಮರಸವೇ ಜೀವನ ಆಶಯದಡಿ ಈ ಬಾರಿ ಚಿಣ್ಣರ ಮೇಳ ನಡೆಯಲಿದೆ. ಬಂಧನಮುಕ್ತ ಸಾಂಸ್ಕೃತಿಕ ವಾತಾವರಣದ ನಿರ್ಮಾಣ ಮತ್ತು ನಿರ್ವಹಣೆಯ ನೈತಿಕ ಜವಾಬ್ದಾರಿ ಎಂದರಿತ ರಂಗಾಯಣವು ಪ್ರತಿವರ್ಷ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ತಕ್ಕಂತೆ 18ನೇ ಚಿಣ್ಣರ ಮೇಳವನ್ನು ಈ ಬಾರಿ ಅಚ್ಚುಕಟ್ಟಾಗಿ, ಅರ್ಥಪೂರ್ಣವಾಗಿ ಆಯೋಜಿಸುತ್ತಿದೆ. ಮಕ್ಕಳ ಲೋಕವನ್ನು ಪರಿಣಾಮಕಾರಿಯಾಗಿ ಸೃಷ್ಟಿಸಲು ಮುಂದಾಗಿದೆ.
    ಮಕ್ಕಳೊಂದಿಗೆ ಸೂಕ್ಷ್ಮ ವರ್ತನೆ ಅಗತ್ಯ. ಅವರ ಕಲ್ಪನೆಗಳು ಮುಕ್ಕಾಗದ ಹಾಗೆ ಅವರ ಭಾಷೆ, ಭಾವಗಳನ್ನು ಅರ್ಥ ಮಾಡಿಕೊಂಡು ಅವರದ್ದೇ ಲೋಕವನ್ನು ಒಲವಿನ ಒಡನಾಟದೊಂದಿಗೆ ಉಲ್ಲಾಸ, ಸಂತಸದ ವಾತಾವರಣ ನಿರ್ಮಿಸಿ ಮಕ್ಕಳು ನಲಿಯುತ್ತ ಕಲಿಯುವ ಪ್ರಕ್ರಿಯೆಗೆ ತೊಡಗಿಸುವ ಉದ್ದೇಶವೇ ಚಿಣ್ಣರಮೇಳ. ಮಕ್ಕಳು ತಮ್ಮನ್ನು ತಾವೇ ಕಂಡುಕೊಳ್ಳುವ ರೂಪ ರೂಪಗಳನ್ನು ದಾಟುವ, ನಾಮಕೋಟಿಗಳನ್ನು ಮೀಟುವ ಕ್ರಿಯಾತ್ಮಕ ರಂಗಚಟುವಟಿಕೆಗಳ ಮೂಲಕ ಒಂದು ತಿಂಗಳು ನಡೆಯುವ ಅನಿಕೇತನದಲ್ಲಿ ಮಕ್ಕಳು ಆಡುತ್ತಾ, ಕುಣಿಯುತ್ತಾ ತಮ್ಮ ಕಲ್ಪನೆಯ ಬಣ್ಣ-ಬಣ್ಣದ ಚಿತ್ರಗಳನ್ನು ಬಿಡಿಸುತ್ತಾ, ಕರಕುಶಲಗಳನ್ನು ತಯಾರಿಸುತ್ತಾ, ಕಥೆಗಳನ್ನು ಹೇಳುತ್ತಾ, ಕೇಳುತ್ತಾ ನಾಡಿನ ಹೆಸರಾಂತ ಮಕ್ಕಳ ಚಿಂತಕರೊಂದಿಗೆ ಮುಖಾಮುಖಿ ಚರ್ಚೆ ನಡೆಸುತ್ತಾ, ಹಕ್ಕಿ-ಪಕ್ಷಿ ಪರಿಸರವನ್ನು ಸ್ಪರ್ಶಿಸುತ್ತಾ ಗ್ರಾಮ ವೀಕ್ಷಣೆ ಮಾಡಿ ಸರಳ ಹಾಗೂ ಶ್ರಮದ ಬದುಕನ್ನು ಅರಿಯುತ್ತಾರೆ. ಅಭಿನಯದ ಮೂಲಕ ನಾಟಕಗಳನ್ನು ಕಟ್ಟಿ ಪ್ರದರ್ಶಿಸುತ್ತಾ ರಂಗಪಯಣ ನಡೆಸಲಿದ್ದಾರೆ. ಮಕ್ಕಳು ಕೂಡಿ, ಹಾಡಿ, ಊಟ ಮಾಡಿ ತಮ್ಮ ಮನಸ್ಸಿನಾಳದ ಮಾತುಗಳನ್ನು ಹಂಚಿಕೊಳ್ಳುತ್ತಾ ಅನಿಕೇತನದತ್ತ ಸಾಗಲೆಂಬುದು ಈ ಚಿಣ್ಣರಮೇಳದ ಉದ್ದೇಶವಾಗಿದೆ ಎಂದು ರಂಗಾಯಣ ಉಪನಿರ್ದೇಶಕಿ ನಿರ್ಮಲಾ ಮಠಪತಿ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ರಂಗಕಲೆ ಪರಿಚಯ

    ಈ ಬಾರಿಯ ಶಿಬಿರ ಏ.12ರಿಂದ ಮೇ 7ರವರೆಗೆ ಒಟ್ಟು 25 ದಿನಗಳ ಕಾಲ ನಡೆಯಲಿದೆ. ಏ.2ರಂದು ಬೆಳಗ್ಗೆ 10ಕ್ಕೆ ರಂಗಾಯಣದ ಕಚೇರಿಯಲ್ಲಿ ಅರ್ಜಿ ವಿತರಿಸಲಾಗುತ್ತದೆ. ಪ್ರತಿ ಮಗುವಿಗೆ 3,000 ರೂ. ಪ್ರವೇಶ ಶುಲ್ಕ ನಿಗದಿ ಮಾಡಲಾಗಿದೆ. ಒಟ್ಟು 250 ಅರ್ಜಿಗಳನ್ನು ಮಾತ್ರ ನೀಡಲು ತೀರ್ಮಾನಿಸಲಾಗಿದೆ. ಮೊದಲು ಬಂದವರಿಗೆ ಆದ್ಯತೆ ನೀಡಲಾಗುತ್ತದೆ ಎಂದು ನಿರ್ಮಲಾ ಮಠಪತಿ ತಿಳಿಸಿದ್ದಾರೆ.
    ಮಕ್ಕಳಿಗೆ ರಂಗ ಚಟುವಟಿಕೆ, ರಂಗಕಲೆ ಪರಿಚಯವಾಗಲಿದೆ. ಶಿಬಿರದ ಮಧ್ಯೆ ಒಂದು ಗ್ರಾಮಕ್ಕೆ ಮಕ್ಕಳನ್ನು ಕರೆದೊಯ್ದು ಗ್ರಾಮೀಣ ಪರಿಸರದ ಪರಿಚಯ ಮಾಡಿಸುವ ಪ್ರಯತ್ನ ನಡೆಯಲಿದೆ. ರಂಗಾಟಗಳು, ಸಮೂಹ ಗಾಯನ, ಸಮೂಹ ನೃತ್ಯ, ಮೂಕಾಭಿನಯ, ಹಾವುಗಳ ಪ್ರದರ್ಶನ, ಅಗ್ನಿಶಾಮಕ ಇಲಾಖೆಯಿಂದ ಬೆಂಕಿ ನಂದಿಸುವ ಪ್ರಾತ್ಯಕ್ಷಿಕೆ, ಪರಿಸರ ವೀಕ್ಷಣೆ, ಮಕ್ಕಳ ಚಲನಚಿತ್ರ ಪ್ರದರ್ಶನ, ಮಕ್ಕಳಿಂದ ಸಂತೆ, ಸಾಮೂಹಿಕ ಓಕುಳಿ ಮುಂತಾದ ಕಾರ್ಯಕ್ರಮಗಳೂ ಇರಲಿವೆ.


    ‘ರಂಗಾಯಣ’ದಲ್ಲಿ ಈ ಬಾರಿಯೂ ಮಕ್ಕಳಿಗೆ ಚಿಣ್ಣರ ಮೇಳವನ್ನು ಏ.12ರಿಂದ ಮೇ 7 ರವರೆಗೆ ಆಯೋಜಿಸಲಾಗಿದ್ದು, ಏ.2ರಂದು ಬೆಳಗ್ಗೆ 10ಕ್ಕೆ ರಂಗಾಯಣದ ಕಚೇರಿಯಲ್ಲಿ ಅರ್ಜಿ ವಿತರಿಸಲಾಗುತ್ತದೆ. ಮಕ್ಕಳು ಶಿಬಿರದಿಂದ ಹೊರಬರುವ ಹೊತ್ತಿಗೆ ಒಂದಷ್ಟು ನಾಟಕ ಪ್ರದರ್ಶಿಸುತ್ತಾರೆ. ಮಣ್ಣಿನ ಆಕೃತಿ ಮಾಡುವುದು, ಚಿತ್ರ ಬರೆಯುವುದು, ರಂಗದ ಆಟಗಳನ್ನು ಹೇಳಿಕೊಡುತ್ತಾರೆ. ಇದರಿಂದ ಕೇವಲ ಪರೀಕ್ಷೆ, ಹೋಂವರ್ಕ್‌ನ ಒತ್ತಡದಿಂದ ಮಕ್ಕಳಿಗೆ ರಿಲ್ಯಾಕ್ಸ್ ಸಿಗಲಿದೆ.
    ನಿರ್ಮಲಾ ಮಠಪತಿ
    ರಂಗಾಯಣ ಉಪ ನಿರ್ದೇಶಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts