More

    ಪ್ರಾದೇಶಿಕ ಕ್ಯಾನ್ಸರ್ ಕೇಂದ್ರ ಸ್ಥಾಪನೆಗಾಗಿ ಪ್ರಸ್ತಾವನೆ ಸಲ್ಲಿಕೆ

    ಹುಬ್ಬಳ್ಳಿ: ಇಲ್ಲಿಯ ಕಿಮ್ಸ್‌ನಲ್ಲಿ ಪ್ರಾದೇಶಿಕ ಕ್ಯಾನ್ಸರ್ ಕೇಂದ್ರ ಸ್ಥಾಪನೆಗಾಗಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರವೇ ಅನುಮೋದನೆ ದೊರೆಯುವ ಸಾಧ್ಯತೆ ಇದೆ ಎಂದು ನಿರ್ದೇಶಕ ಡಾ.ಎಸ್.ಎಫ್. ಕಮ್ಮಾರ ತಿಳಿಸಿದರು.
    ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಈ ಕೇಂದ್ರ ಆರಂಭವಾಗಲಿದೆ. ರಾಜ್ಯ ಸರ್ಕಾರ ಸಿಬ್ಬಂದಿಯನ್ನು ಪೂರೈಕೆ ಮಾಡಲಿದೆ ಎಂದರು.
    ಈಗಾಗಲೇ ಎಂಆರ್‌ಐ, ಎಸ್‌ಎನ್‌ಸಿಯು, ಪಿಐಸಿಯು, ಬ್ರೇಖಿ ಥೆರಪಿ ಯಂತ್ರ ಅಳವಡಿಸಲಾಗಿದ್ದು, ಬಹಳಷ್ಟು ಬಡವರಿಗೆ ಅನುಕೂಲವಾಗಿದೆ. ರಾಜ್ಯ ಸರ್ಕಾರದ ಸಿಬ್ಬಂದಿ ಹಾಗೂ ಅವರ ಅವಲಂಬಿತರಿಗೆ ನಗದುರಹಿತ ಚಿಕಿತ್ಸೆ ನೀಡುವ ಕುರಿತು ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ 2023-24ನೇ ಸಾಲಿನಲ್ಲಿ ನಮ್ಮ ಕಿಮ್ಸ್ ಸಂಸ್ಥೆಯಲ್ಲಿ ಬಹಳಷ್ಟು ರೋಗಿಗಳು ಚಿಕಿತ್ಸೆ ಪಡೆದಿದ್ದು, ಮೊದಲ ಸ್ಥಾನ ಪಡೆದಿದೆ ಎಂದರು.
    ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ಡಿಜೆ ಸೌಂಡ್‌ಗೆ ಹೆಜ್ಜೆ ಹಾಕಿದ್ದರ ಕುರಿತು ಮಾಹಿತಿ ಸಂಗ್ರಹಿಸಲು ಪ್ರಾಚಾರ್ಯರ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ವರದಿ ನೀಡಿದ ನಂತರ ಕ್ರಮ ಜರುಗಿಸಲಾಗುವುದು. ಕಾಂಚನಾ ಮಾಲಗಾರ ಅವರನ್ನು ಸೇವೆಯಿಂದ ವಿಮುಕ್ತಗೊಳಿಸಲಾಗಿದೆ. ಇದರ ಮಧ್ಯೆಯೂ ಅವರು ಕಾರ್ಯನಿರ್ವಹಿಸಿದ್ದರ ಕುರಿತು ವರದಿ ಸಂಗ್ರಹಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಮುಂದಿನ ಕ್ರಮಕ್ಕಾಗಿ ಕಾಯುತ್ತಿದ್ದೇವೆ ಎಂದರು.
    ಪ್ರಾಚಾರ್ಯ ಡಾ.ಈಶ್ವರ ಹೊಸಮನಿ ಮಾತನಾಡಿ, ನಮ್ಮ ಸಂಸ್ಥೆಯಲ್ಲಿ ಅತಿ ವಿರಳ ಹಾಗೂ ಕ್ಲಿಷ್ಟಕರ ಶಸ್ತ್ರ ಚಿಕಿತ್ಸೆ ನಡೆಸಿದ್ದೇವೆ. ಖಾಸಗಿ ಆಸ್ಪತ್ರೆಗಿಂತಲೂ ಮಿಗಿಲಾದ ವೈದ್ಯಕೀಯ ತಂಡ ನಮ್ಮಲಿದೆ ಎಂದರು. ಮನೋರೋಗ ವಿಭಾಗದ ಮುಖ್ಯಸ್ಥ ಡಾ. ಸಮೀರ ಮಂಗಳವಾಡೆ ಮಾತನಾಡಿ, ನಮ್ಮ ಸಂಸ್ಥೆಯು ಸಾಮಾಜಿಕ ಜಾಲತಾಣದಲ್ಲಿಯೂ ಕ್ರಿಯಾಶೀಲವಾಗಿದೆ. ಇದನ್ನು ಸಾರ್ವಜನಿಕರು ಗಮನಿಸಬಹುದು ಎಂದರು.
    ಆರ್‌ಎಂಒ ಡಾ. ಸಿದ್ದೇಶ್ವರ ಕಟಕೋಳ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ರಾಜಾಶಂಕರ, ಡಾ. ರಾಜಶೇಖರ ದ್ಯಾಬೇರಿ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts