More

    ಸಮಸ್ಯೆಗಳ ಸುರಿಮಳೆಗೈದ ವಿದ್ಯಾರ್ಥಿಗಳು

    ಸೋಮವಾರಪೇಟೆ: ಗೌಡಳ್ಳಿ ಗ್ರಾಮ ಪಂಚಾಯಿತಿ, ಬೆಂಗಳೂರು ಮಕ್ಕಳ ಕಲ್ಯಾಣ ನಿರ್ದೇಶನಾಲಯ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತ್‌ರಾಜ್ ಇಲಾಖೆ ಹಾಗೂ ನಾವು ಪ್ರತಿಷ್ಠಾನ ವತಿಯಿಂದ ಗೌಡಳ್ಳಿ ಪ್ರೌಢಶಾಲೆ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಮಕ್ಕಳ ಗ್ರಾಮಸಭೆಯಲ್ಲಿ ವಿದ್ಯಾರ್ಥಿಗಳು ಸಮಸ್ಯೆಗಳ ಸುರಿಮಳೆಗೈದರು.

    ಶುಂಠಿ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಎರಡು ಕೊಠಡಿಯ ಛಾವಣಿಯ ಮರಗಳು ಗೆದ್ದಲು ಹಿಡಿದಿದ್ದು, ಕುಸಿದು ಬೀಳಬಹುದು ಎಂದು 5ನೇ ತರಗತಿ ಶ್ರೀನಿಧಿ ಸಭೆಯ ಗಮನ ಸೆಳೆದರು.

    ಶಿಕ್ಷಣ ಇಲಾಖೆಯ ಅಧಿಕಾರಿಗಳು ಬಂದು ನೋಡಿ ಹೋಗುತ್ತಾರೆ. ಆದರೆ ದುರಸ್ತಿ ಕೆಲಸ ಮಾಡಿಸಿಲ್ಲ. ಮಕ್ಕಳ ಜೀವಕ್ಕೆ ಹಾನಿಯಾದರೆ ಯಾರು ಜವಾಬ್ದಾರರು? ಎಂದು ಪ್ರಶ್ನಿಸಿದ ಶ್ರೀನಿಧಿ, ಪಂಚಾಯಿತಿ ವತಿಯಿಂದ ಇಂಗು ಗುಂಡಿ ನಿರ್ಮಾಣ ಮಾಡಲಾಗಿದೆ. ಆದರೆ ಪೈಪ್ ಅಳವಡಿಸಿಲ್ಲ. ಶಾಲಾ ಆವರಣ ಗಬ್ಬು ವಾಸನೆಯಿಂದ ಕೂಡಿದೆ. ಗ್ರಾಮೀಣ ಭಾಗದಿಂದ ಮಕ್ಕಳು ಕಾಲ್ನಡಿಗೆಯಲ್ಲೇ ಬರಬೇಕು. ಮಳೆಗಾಲದಲ್ಲಿ ಛತ್ರಿ ಮತ್ತು ಸ್ವೆಟ್ಟರ್ ನೀಡಬೇಕು ಎಂದು ಮನವಿ ಮಾಡಿದರು.

    ನಂದಿಗುಂದ ಸರ್ಕಾರಿ ಪ್ರಾಥಮಿಕ ಶಾಲೆಗೆ ಕೈತೊಳೆಯುವ ತೊಟ್ಟಿ ನಿರ್ಮಿಸಿಕೊಡಬೇಕು. ಶಾಲೆಯ ಮೆಟ್ಟಿಲುಗಳವರೆಗೆ ಕಾಂಕ್ರೀಟ್ ರಸ್ತೆ ಬೇಕು. ಆಟದ ಮೈದಾನ ಸ್ಚಚ್ಛಗೊಳಿಸಬೇಕು ಎಂದು ಶಾಲೆಯ ವಿದ್ಯಾರ್ಥಿ ಬೇಡಿಕೆ ಸಲ್ಲಿಸಿದ.

    ಗೌಡಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸುತ್ತ ಕಾಡು ಬೆಳೆದಿದ್ದು, ಹಾವುಗಳು ಕೊಠಡಿಯೊಳಗೆ ಬರುತ್ತವೆ. ಕಾಡು ಕಡಿಸಿಕೊಡಿ ಎಂದು ಪಂಚಾಯಿತಿಗೆ ಮಕ್ಕಳು ಮನವಿ ಸಲ್ಲಿಸಿದರು.

    ರಾತ್ರಿ ಸಮಯದಲ್ಲಿ ಕಿಡಿಗೇಡಿಗಳು ಕೊಠಡಿಯ ಬೀಗ ಒಡೆದು ಕಪ್ಪು ಹಲಗೆಯಲ್ಲಿ ಅಶ್ಲೀಲ ಪದ ಬರೆಯುತ್ತಾರೆ. ಕೊಠಡಿಯೊಳಗೆ ಮೂತ್ರ ಮಾಡಿ ಹೋಗುತ್ತಾರೆ. ನಮ್ಮ ಶಾಲೆಗೆ ರಕ್ಷಣೆ ಬೇಕು ಎಂದು ಕೇಳಿದರು.

    ಶಾಲೆಯ ವಿದ್ಯಾರ್ಥಿಗಳು ವಿವಿಧ ಕ್ರೀಡೆಗಳಲ್ಲಿ ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದ್ದು, ಕ್ರೀಡಾ ಸಾಮಗ್ರಿಗಳನ್ನು ಒದಗಿಸಿ ಕೊಡಬೇಕೆಂದು ಗೌಡಳ್ಳಿ ಪ್ರೌಢಶಾಲೆಯ ಕೌಶಿಕ್ ಕೋರಿದರು.

    ಶನಿವಾರಸಂತೆ ಗೌಡಳ್ಳಿ, ಸೋಮವಾರಪೇಟೆ ರಾಜ್ಯ ಹೆದ್ದಾರಿಯ ಇಕ್ಕೆಲಗಳಲ್ಲಿ ಕಾಡುಬೆಳೆದಿದ್ದು, ಲೋಕೋಪಯೋಗಿ ಇಲಾಖೆಯವರು ಕೂಡಲೆ ಕಾಡು ಕಡಿಸಬೇಕು ಎಂದು ಗೌಡಳ್ಳಿ ಶಾಲೆಯ ವಿದ್ಯಾರ್ಥಿ ಲೋಕೇಶ್ ಮನವಿ ಮಾಡಿದರು.

    ಪಿಡಿಒ ಲಿಖಿತಾ ಮಾತನಾಡಿ, ಕಳೆದ ಸಭೆಯಲ್ಲಿ ವಿದ್ಯಾರ್ಥಿಗಳು ಅನೇಕ ಬೇಡಿಕೆ ಇಟ್ಟಿದ್ದರು. ಗೌಡಳ್ಳಿ ಸರ್ಕಾರಿ ಶಾಲೆಗೆ ರಸ್ತೆ, ಶೌಚಗೃಹ, ಕಾಂಪೌಂಡ್ ಮಾಡಲಾಗಿದೆ. ನಂದಿಗುಂದ, ಶುಂಠಿ ಶಾಲೆಗೂ ಕಾಂಪೌಂಡ್ ಮಾಡಲಾಗಿದೆ. ಉದ್ಯಾನವನ್ನು ಮಾಡಿಕೊಡಲಾಗುವುದು. ಕಟ್ಟಡ ದುರಸ್ತಿ ಕುರಿತು ಜಿಲ್ಲಾ ಪಂಚಾಯಿತಿ ಅರ್ಜಿ ಸಲ್ಲಿಸಲಾಗಿದೆ ಎಂದರು.


    ನಾವು ಪ್ರತಿಷ್ಠಾನದ ಕಾರ್ಯಕಾರಿ ನಿರ್ದೇಶಕಿ ಸುಮನಾ ಮ್ಯಾಥ್ಯು ಮಾತನಾಡಿ, ಬದುಕುವ, ರಕ್ಷಣೆ ಹೊಂದುವ, ಭಾಗವಹಿಸುವ ಹಕ್ಕನ್ನು ಸಂವಿಧಾನ ನೀಡಿದ್ದು, ಎಲ್ಲವೂ ಸಿಗುವಂತಾಗಬೇಕು. ಮಕ್ಕಳು ಯಾವುದೇ ಮುಲಾಜಿಲ್ಲದೆ ಕೇಳಿ ಪಡೆದುಕೊಳ್ಳಬೇಕು ಎಂದು ಹೇಳಿದರು.


    ಸಭೆಯಲ್ಲಿ ಗೌಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನವೀನ್ ಅಜ್ಜಳ್ಳಿ, ಉಪಾಧ್ಯಕ್ಷೆ ವಿಶಾಲಾಕ್ಷಿ, ಸದಸ್ಯರಾರ ರೋಹಿಣಿ, ಸುಮಾ, ಮಲ್ಲಿಕಾ, ಮಂಜುನಾಥ್, ವೆಂಕಟೇಶ್, ನಾಗರಾಜು, ಗಣೇಶ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಸಲಹೆಗಾರರಾದ ಜಿ.ಆರ್.ತುಳಸಿ, ಮಕ್ಕಳ ಸಹಾಯವಾಣಿ ಸಂಯೋಜಕ ನವೀನ್‌ಕುಮಾರ್, ನಾವು ಪ್ರತಿಷ್ಠಾನದ ಸ್ಥಾಪಕ ಗೌತಮ್ ಕಿರಗಂದೂರು, ವಿದ್ಯಾರ್ಥಿಗಳಾದ ಸ್ಫೂರ್ತಿ, ಗಾನವಿ, ಜಯಶ್ರೀ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts