More

    ಬ್ಯಾಡಗಿ ಬರಪೀಡಿತ ತಾಲೂಕು ಘೊಷಿಸದಿದ್ದರೆ ಹೋರಾಟ

    ಬ್ಯಾಡಗಿ: ರೈತರ ತಾಳ್ಮೆ ಪರೀಕ್ಷೆ ಮಾಡದೆ, ಕೂಡಲೇ ಸಂಪೂರ್ಣ ಜಿಲ್ಲೆಯನ್ನು ಬರಗಾಲವೆಂದು ಘೊಷಿಸದಿದ್ದಲ್ಲಿ ಸರ್ಕಾರ ಹೋರಾಟದ ತೀವ್ರತೆ ಎದುರಿಸಬೇಕಾಗುತ್ತದೆ ಎಂದು ರಾಜ್ಯ ರೈತ ಸಂಘದ ವರಿಷ್ಠ ಕೆ.ಟಿ. ಗಂಗಾಧರ ಎಚ್ಚರಿಸಿದರು.

    ಇಲ್ಲಿನ ತಹಸೀಲ್ದಾರ್ ಕಾರ್ಯಾಲಯ ಎದುರು ಶುಕ್ರವಾರ 2ನೇ ದಿನದ ಅಹೋರಾತ್ರಿ ಧರಣಿ ಉದ್ದೇಶಿಸಿ ಅವರು ಮಾತನಾಡಿದರು.

    ಬೆಳೆ ವಿಮೆ, ಬೆಳೆ ಪರಿಹಾರ, ರೈತರಿಗೆ ಬ್ಯಾಂಕ್​ಗಳಲ್ಲಿ ಸಾಲ ನೀಡುವುದು, ನೀರಾವರಿಗೂ ಹೋರಾಟದಿಂದ ಹಕ್ಕು ಪಡೆಯುವ ದುಸ್ತಿತಿಯನ್ನು ಆಳುವ ಸರ್ಕಾರಗಳು ತಂದೊಡ್ಡಿವೆ. ಸ್ಥಳೀಯ ಅಧಿಕಾರಿಗಳು ಸರ್ಕಾರಕ್ಕೆ ನೈಜ ವರದಿ ಕಳುಹಿಸಿದರೂ ತಾರತಮ್ಯ ಏಕೆ..? ಕೂಡಲೇ ಸ್ಥಳೀಯ ಶಾಸಕರು ನ್ಯಾಯ ಒದಗಿಸಬೇಕು. ನಿರ್ಲಕ್ಷಿಸಿದರೆ, ಹೋರಾಟ ತೀವ್ರವಾಗಲಿದೆ ಎಂದು ಎಚ್ಚರಿಸಿದರು.

    ರೈತಮುಖಂಡ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಸರ್ಕಾರ ಜಾರಿಗೊಳಿಸಿದ ನೀರಾವರಿ ಯೋಜನೆಯಿಂದ ತಾಲೂಕಿನಲ್ಲಿ ಎಲ್ಲ ಕೆರೆ-ಕಟ್ಟೆಗಳು ನೀರಿನಿಂದ ತುಂಬಿ ತುಳುಕಬೇಕಿತ್ತು. ಆದರೆ, ನೀರಾವರಿ ಇಲಾಖೆ ಅಧಿಕಾರಿಗಳು ಯೋಜನೆ ಪೂರ್ಣಗೊಳ್ಳುವ ಮುನ್ನವೇ ಉದ್ಘಾಟನೆ ನೆರವೇರಿಸಿ ಕೈತೊಳೆದುಕೊಂಡಿದ್ದಾರೆ. ಸಾರ್ವಜನಿಕರ ಐನೂರಕ್ಕೂ ಹೆಚ್ಚು ತೆರಿಗೆ ಹಣ ಖರ್ಚಾಯಿತೆ ವಿನಃ ಪ್ರಯೋಜನವಾಗಲಿಲ್ಲ ಎಂದರು.

    ಕಂದಾಯ, ಕೃಷಿ, ತೋಟಗಾರಿಕೆ ಜಂಟಿಯಾಗಿ ಶೇ. 75 ಬೆಳೆ ಹಾನಿಯಾದ ವರದಿ ನೀಡಿದರೂ ಸರ್ಕಾರ ರೈತರನ್ನು ಬೀದಿಗಿಳಿಸಿದೆ. ಹೋರಾಟ ತೀವ್ರತೆ ಪಡೆಯಲಿದೆ ಎಂದು ಎಚ್ಚರಿಸಿದರು.

    ಧರಣಿಯಲ್ಲಿ ರುದ್ರಗೌಡ್ರ ಕಾಡನಗೌಡ್ರ, ಗಂಗಣ್ಣ ಎಲಿ, ನಿಂಗಪ್ಪ ಹೆಗ್ಗಣ್ಣನವರ, ಶೇಖಪ್ಪ ಕಾಶಿ, ಕಿರಣಕುಮಾರ ಗಡಿಗೋಳ, ಮಲ್ಲೇಶಪ್ಪ ಡಂಬಳ, ನಂಜುಂಡಯ್ಯ ಹಾವೇರಿಮಠ, ನ್ಯಾಯವಾದಿ ಸಂಘದ ಅಧ್ಯಕ್ಷ ಎಸ್.ಎನ್. ರ್ಬಾ, ವಕೀಲರಾದ ಪ್ರಕಾಶ ಬನ್ನಿಹಟ್ಟಿ, ಹಾಲೇಶ ಜಾಧವ, ನಿಂಗಪ್ಪ ಬಟ್ಟಲಕಟ್ಟೆ, ಆರ್.ವಿ. ಬೆಳಕೇರಿಮಠ, ಎಂ.ಎ. ಮುಳಗುಂದ, ಭಾರತಿ ಕುಲಕರ್ಣಿ ಇತರರಿದ್ದರು.

    ಮುಂಗಾರು ಮಳೆ ಹಿನ್ನೆಡೆಯಿಂದ ಎರಡು ಹೋಬಳಿ ಸೇರಿ 30 ಹೆಕ್ಟೇರ್ ಬಿತ್ತನೆ ಜಮೀನು ಪೈಕಿ, 24 ಹೆಕ್ಟೇರ್ ಜಮೀನಿನಲ್ಲಿ ಶೇ. 75 ಬೆಳೆ ಹಾನಿಯಾಗಿದೆ. ವಿಷಯ ಸ್ಥಳೀಯ ಶಾಸಕರ ಗಮನಕ್ಕೂ ತಂದಿದ್ದು, ಸರ್ಕಾರ ಅಂತಿಮ ನಿರ್ಣಯ ಘೊಷಿಸಬೇಕಿದೆ. ಧರಣಿ ಕುರಿತು ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೇವೆ.

    | ಎಸ್.ವಿ. ಪ್ರಸಾದ್ ತಹಸೀಲ್ದಾರ್, ಬ್ಯಾಡಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts