More

    ಸಮರ್ಪಕ ಕರೆಂಟ್ ಪೂರೈಸಲು ಶ್ರಮಿಸಿ

    ಯಲ್ಲಾಪುರ: ರಾಜ್ಯಕ್ಕೆ ವಿದ್ಯುತ್ ನೀಡಲು ತ್ಯಾಗ ಮಾಡಿದ ಜಿಲ್ಲೆ ನಮ್ಮದು. ಇಲ್ಲಿನ ಜನರಿಗೆ ಸರಿಯಾದ ವಿದ್ಯುತ್ ವ್ಯವಸ್ಥೆ ಕಲ್ಪಿಸುವ ದೃಷ್ಟಿಯಲ್ಲಿ ಅಧಿಕಾರಿಗಳು, ಸಿಬ್ಬಂದಿ ಕಾರ್ಯನಿರ್ವಹಿಸಬೇಕು ಎಂದು ಕಾರ್ವಿುಕ ಸಚಿವ ಶಿವರಾಮ ಹೆಬ್ಬಾರ ಹೇಳಿದರು.

    ಉಜ್ವಲ ಭಾರತ ಉಜ್ವಲ ಭವಿಷ್ಯ ಇಂಧನ ಇಲಾಖೆ, ಕೆಪಿಟಿಸಿಎಲ್ ಹಾಗೂ ಹೆಸ್ಕಾಂ ಆಶ್ರಯದಲ್ಲಿ ಪಟ್ಟಣದ ಎಪಿಎಂಸಿ ರೈತ ಸಭಾಭವನದಲ್ಲಿ ಸೋಮವಾರ ಆಯೋಜಿಸಿದ್ದ ವಿದ್ಯುತ್ ಮಹೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಹೆಸ್ಕಾಂ ಹಲವಾರು ಅಭಿವೃದ್ಧಿ ಕಾರ್ಯ ಮಾಡಿದೆ. ಲೈನ್​ವೆುನ್​ಗಳ ಕೊರತೆ ನೀಗಿಸಲಾಗಿದೆ. ಹೆಸ್ಕಾಂನ ಯೋಜನೆಗಳ ಬಗ್ಗೆ ಜನರಿಗೆ ತಿಳಿಸುವ ಕೆಲಸ ಆಗಬೇಕಾಗಿದೆ. ಕಟ್ಟಕಡೆಯ ಗ್ರಾಮಾಂತರ ಪ್ರದೇಶದ ಜನರಿಗೂ ನಿರಂತರ ಬೆಳಕು ಕೊಡುವ ಕೆಲಸ ಇನ್ನಷ್ಟು ಪರಿಣಾಮಕಾರಿಯಾಗಿ ಆಗಬೇಕು ಎಂದರು.

    ಪಪಂ ಅಧ್ಯಕ್ಷೆ ಸುನಂದಾ ದಾಸ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಶ್ಯಾಮಲಿ ಪಾಟಣಕರ, ಹೆಸ್ಕಾಂ ಅಧೀಕ್ಷಕ ಇಂಜಿನಿಯರ್ ದೀಪಕ ಕಾಮತ, ಸಾಮಾಜಿಕ ಕಾರ್ಯಕರ್ತರಾದ ಶ್ರೀಕಾಂತ ಶೆಟ್ಟಿ, ವಿಜಯ ಮಿರಾಶಿ, ವಿವಿಧ ಗ್ರಾಪಂ ಜನಪ್ರತಿನಿಧಿಗಳು, ಹೆಸ್ಕಾಂ ಅಧಿಕಾರಿಗಳು, ವಿದ್ಯುತ್ ಗುತ್ತಿಗೆದಾರರು ಪಾಲ್ಗೊಂಡಿದ್ದರು. ಎಇಇ ವಿನಾಯಕ ಪೇಟಕರ್ ಕಾರ್ಯಕ್ರಮ ನಿರ್ವಹಿಸಿದರು.

    ಮನೆಗಳ ವಿದ್ಯುತ್ತೀಕರಣ ಕಿರುಚಿತ್ರ, ಒಂದು ರಾಷ್ಟ್ರ ಒಂದು ವಿದ್ಯುತ್ ಜಾಲ, ಗ್ರಾಹಕರ ಹಕ್ಕುಗಳು, ನವೀಕರಿಸಬಹುದಾದ ಇಂಧನ, ವಿದ್ಯುತ್ ಸಾಮರ್ಥ್ಯ ವೃದ್ಧಿಸುವ ಕಿರುಚಿತ್ರ ಪ್ರದರ್ಶನ, ನುಕ್ಕಡ ನಾಟಕ ಪ್ರದರ್ಶನ, ಆನಗೋಡಿನ ಯಕ್ಷಗಾನ ಹಾಗೂ ಕಲಾಮಿತ್ರ ಮಂಡಳಿ ಟ್ರಸ್ಟ್ ವತಿಯಿಂದ ಯಕ್ಷನೃತ್ಯ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts