More

    ವಿಚಿತ್ರ ಕಾಯಿಲೆಗೆ ಹಂದಿಗಳ ಸಾವು: ಕನಕಗಿರಿ ಪಟ್ಟಣ ನಿವಾಸಿಗಳಲ್ಲಿ ಆತಂಕ

    ಕನಕಗಿರಿ: ಪಟ್ಟಣದಲ್ಲಿ ಕಳೆದ ಎಂಟ್ಹತ್ತು ದಿನಗಳಿಂದ ವಿಚಿತ್ರ ಹಾಗೂ ಕರ್ಕಶವಾಗಿ ಚೀರಾಟ ನಡೆಸಿ ಹಂದಿಗಳು ಸಾಯುತ್ತಿದ್ದು, ಸ್ಥಳೀಯರು ಹಾಗೂ ಸಾಕಣೆದಾರರಿಗೆ ತಲೆನೋವಾಗಿ ಪರಿಣಮಿಸಿದೆ.

    ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಆಹಾರ ಅರಸಿ ಬರುತ್ತಿದ್ದ ಹಂದಿಗಳಿಗೆ ವಿಚಿತ್ರ ಕಾಯಿಲೆ ಗಂಟು ಬಿದ್ದಿದ್ದು, ರೋಗಕ್ಕೆ ತುತ್ತಾದವು ಇದ್ದಕ್ಕಿದ್ದಂತೆ ಕರ್ಕಶ ಧ್ವನಿ ಮಾಡುತ್ತ ಹೊಟ್ಟೆ ಉಬ್ಬಿ ಪ್ರಾಣ ಬಿಡುತ್ತಿವೆ. ಸತ್ತ ಬಳಿಕ ನಾಯಿಗಳು ಮುಗಿ ಬೀಳುತ್ತಿದ್ದು, ದುರ್ವಾಸನೆ ಹರಡುತ್ತಿದೆ. ಇದರಿಂದ ನಿವಾಸಿಗಳು ಮನೆ ಬಾಗಿಲು ಮುಚ್ಚಿಕೊಂಡು ಇರಬೇಕಾಗಿದೆ. ಹೊರ ಬಂದರೆ ಮೂಗಿಗೆ ಕರವಸ್ತ್ರ ಹಿಡಿದು ಓಡಾಡುವಂತಾಗಿದೆ. ಸತ್ತ ಹಂದಿಗಳನ್ನು ವಿಲೇವಾರಿ ಮಾಡಲು ಸಾಕಣೆದಾರರು ಪರದಾಡುತ್ತಿದ್ದಾರೆ. ಒಂದನ್ನು ತೆಗೆದು ಸಾಗಿಸುವುದರೊಳಗೆ ಮತ್ತೊಂದು ಕಡೆ ಹಂದಿ ಸತ್ತು ಬೀಳುತ್ತಿದ್ದು, ನಿತ್ರಾಣಗೊಂಡಿದ್ದಾರೆ.

    ಪೌರ ಕಾರ್ಮಿಕರಿಗೂ ಕೆಲಸ: ಹಂದಿ ಸಾಕಣೆದಾರರು ಆಸ್ಪತ್ರೆ ಹಿಂದೆ ಹಾಗೂ ಪಕ್ಕಕ್ಕೆ ಸತ್ತ ಹಂದಿಗಳನ್ನು ಬಿಸಾಡಿದ್ದರಿಂದ ದುರ್ವಾಸನೆ ಮಿತಿ ಮೀರಿದೆ. ಸಾರ್ವಜನಿಕರು, ರೋಗಿಗಳು ಹಾಗೂ ಸಿಬ್ಬಂದಿ ತೀವ್ರ ಸಮಸ್ಯೆ ಎದುರಿಸುತ್ತಿದ್ದರು. ಸದ್ಯ ಪಪಂ ಪೌರ ಕಾರ್ಮಿಕರು, ಕಸ ತುಂಬುವ ವಾಹನ ಮೂಲಕ ತೆರವಿಗೆ ಮುಂದಾಗಿದ್ದಾರೆ. ಈಗಾಗಲೇ ಹೊಟ್ಟೆ ಒಡೆದ, ನಾಯಿ ಬಾಯಿಗೆ ತುತ್ತಾದ ಹಲವು ಹಂದಿಗಳನ್ನು ವಿಲೇವಾರಿ ಮಾಡುವುದು ಕಷ್ಟಸಾಧ್ಯವಾಗಿದ್ದರಿಂದ ಹಾಗೆಯೇ ಬಿದ್ದಿವೆ.

    ಸಾಂಕ್ರಾಮಿಕ ರೋಗದ ಭೀತಿ: ಪಟ್ಟಣದಲ್ಲಿ ಈವರೆಗೆ 300 ಹಂದಿಗಳು ಸತ್ತಿವೆ ಎಂದು ಅಂದಾಜಿದೆ. ಇವುಗಳ ಸಾವಿನಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಜನರನ್ನು ಕಾಡತೊಡಗಿದೆ. ಅಲ್ಲದೆ, ಜಾತ್ರೆಯೂ ಸಮೀಪಿಸುತ್ತಿದ್ದು, ಬಯಲಲ್ಲೇ ಶೆಡ್ ಹಾಕಿಕೊಂಡು ಇರುವ ವ್ಯಾಪಾರಿಗಳು, ಭಕ್ತರು ಬಯಲು ಬಹಿರ್ದೆಸೆಯನ್ನೇ ಅವಲಂಬಿಸಿದ್ದಾರೆ. ಹಂದಿಗಳ ಸರಣಿ ಸಾವಿನಿಂದ ಹಳ್ಳ ಹಾಗೂ ಸುತ್ತಲೂ ಸ್ವಚ್ಛತೆ ಕಾಪಾಡುವುದು ಕಷ್ಟ ಎಂಬ ಮಾತುಗಳು ಕೇಳಿಬರುತ್ತಿವೆ.

    ಹಂದಿಗಳ ಸಾವಿನ ಬಗ್ಗೆ ಗಮನಕ್ಕೆ ಬಂದಿದ್ದು, ಕಾರ್ಮಿಕರಿಂದ ವಿಲೇವಾರಿ ಮಾಡಿಸಲಾಗುತ್ತಿದೆ. ಪಶು ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂಜಾಗ್ರತಾ ಕ್ರಮಗಳ ಮಾಹಿತಿ ಪಡೆಯಲಾಗುವುದು.
    | ದತ್ತಾತ್ರೇಯ ಹೆಗಡೆ, ಮುಖ್ಯಾಧಿಕಾರಿ, ಕನಕಗಿರಿ ಪಪಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts