More

    ವಿಜ್ಞಾನದ ಜ್ಞಾನ ನಿಧಿ; ಯುವ ವಿಜ್ಞಾನಿ ಮೊಹಮ್ಮದ್ ಸುಹೇಲ್  

    ಮಕ್ಕಳಿಗಾಗಿ ಆಸ್ತಿ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಎಂಬ ಮಾತಿದೆ. ಈ ಮಾತನ್ನು ಸಾಬೀತು ಮಾಡಿ ತೋರಿಸಿದ್ದಾರೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ನೆಲೆಸಿರುವ ನಾಗಮಂಗಲ ತಾಲೂಕಿನ ಚಿಣ್ಯ ಗ್ರಾಮದ ಅನಾರ್ಕಲಿ ಸಲೀಂ ಮತ್ತು ಡಾ.ಪರ್ವಿನ್ ದಂಪತಿ. ಇವರ ಪುತ್ರ 18 ವರ್ಷದ ಮೊಹಮ್ಮದ್ ಸುಹೇಲ್ ಯುವ ವಿಜ್ಞಾನಿಯಾಗಿ ಇಡೀ ದೇಶವೇ ಹೆಮ್ಮೆ ಪಡುವ ಸಾಧನೆ ಮಾಡಿದ್ದಾನೆ.

    ಈಗಷ್ಟೇ 18 ತುಂಬಿರುವ ಈ ಯುವಕನ ಹೆಸರು ಸಿ.ಎಸ್. ಮೊಹಮ್ಮದ್ ಸುಹೇಲ್, ಮಂಗಳೂರು ಕರಾವಳಿಯ ಉಳ್ಳಾಲದ ಈತನೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯುವ ವಿಜ್ಞಾನಿಯಾಗಿ ಮಿಂಚಿದ್ದಾನೆ. ಎರಡು ಬಾರಿ ಅಮೆರಿಕ ಅಂತಾರಾಷ್ಟ್ರೀಯ ವಿಜ್ಞಾನ ಸಮಾವೇಶದಲ್ಲಿ ಭಾರತವನ್ನು ಪ್ರತಿನಿಧಿಸಿರುವ ಈತನ ಹೆಸರನ್ನು ಅಮೆರಿಕದ ಎಂಐಟಿ ಲಿಂಕನ್ ಲ್ಯಾಬೋರೇಟರಿ ಸಂಸ್ಥೆಯೊಂದು ಕ್ಷುದ್ರ ಗ್ರಹವೊಂದಕ್ಕೆ ನಾಮಕರಣ ಮಾಡಿದೆ.

    ತಂದೆ ಅನಾರ್ಕಲಿ ಸಲೀಂ ಚಿಣ್ಯ ಸಾಹಿತಿ ಹಾಗೂ ಹಿರಿಯ ಆರೋಗ್ಯ ನಿರೀಕ್ಷಕ. ತಾಯಿ ಡಾ.ಪರ್ವಿನ್ ಸಲೀಂ ಸರ್ಕಾರಿ ಶಾಲೆಯಲ್ಲಿ ಕನ್ನಡ ಅಧ್ಯಾಪಕಿ ಹಾಗೂ ಕವಯತ್ರಿ. ಹೀಗಾಗಿ ಸುಹೇಲ್​ಗೆ ಮನೆಯೇ ಮೊದಲ ಪಾಠ ಶಾಲೆ. ತಂದೆ ತಾಯಿಗಳೇ ಮೊದಲ ಗುರು. ಚಿಕ್ಕ ವಯಸ್ಸಿನಲ್ಲೇ ಪ್ರತಿಭಾನ್ವಿತನಾಗಿದ್ದ ಮೊಹಮ್ಮದ್​ಗೆ ವಿಜ್ಞಾನ ಎಂದರೆ ಅಪಾರ ಒಲವು.

    ಜತೆಗೆ, ಯೋಗ, ಕರಾಟೆ, ಸ್ಕೇಟಿಂಗ್, ಡ್ಯಾನ್ಸ್ , ಚೆಸ್ ಮೇಲೆ ಬಹಳಷ್ಟು ಆಸಕ್ತಿ. ವಿಜ್ಞಾನದ ಆವಿಷ್ಕಾರ, ಪ್ರಯೋಗ ಮಾಡುವುದರ ಜತೆಗೆ ಅನೇಕ ವಿಷಯಗಳನ್ನು ತಿಳಿದುಕೊಳ್ಳುವ ಕುತೂಹಲವಿತ್ತು. ಏಕೆಂದರೆ ವಿಜ್ಞಾನದಲ್ಲಿ ಏನಾದರೂ ಸಾಧಿಸಬೇಕು, ವಿಜ್ಞಾನಕ್ಕೆ ಸಂಬಂಧಿಸಿದಂತೆ ನನ್ನಿಂದ ದೇಶಕ್ಕೆ ಏನಾದರೂ ಅರ್ಪಿಸಬೇಕು ಎಂಬ ಮಹದಾಸೆ ಅವನದ್ದು.

    ತಾಯಿ ಡಾ.ಪರ್ವೀನ್ ಮಾರ್ಗದರ್ಶನದಲ್ಲಿ ಇಂಡಿಯನ್ ಸೈನ್ಸ್ ಕಾಂಗ್ರೆಸ್ ಸಮಾವೇಶದವರೆಗೂ ತಲುಪಿದ ಮೊಹಮ್ಮದ್​ಸುಹೇಲ್, ನಿರಂತರ ಅಭ್ಯಾಸ ಸತತ ಪ್ರಯತ್ನದಿಂದ ಹಲವು ಸಂಶೋಧನೆಗಳನ್ನು ಕೈಕೊಂಡು ಇಂದು ಭಾರತದ ಯುವ ವಿಜ್ಞಾನಿಯಾಗಿ ಹೊರ ಹೊಮ್ಮಿದ್ದಾನೆ.

    ಮನೆಯಲ್ಲಿದ್ದ ಪುಟ್ಟ ಗ್ರಂಥಾಲಯದಲ್ಲಿ ಸಾವಿರಾರು ಪುಸ್ತಕಗಳ ನಡುವೆ ಇದ್ದ ಎನ್​ಸೈಕ್ಲೋಪಿಡಿಯಾ ಸುಹೇಲ್​ಗೆ ಅಪಾರ ಜ್ಞಾನ ಒದಗಿಸಿತು. ಅದರಿಂದ ಹಲವಾರು ವಿಷಯ ಸಂಗ್ರಹಿಸಿ ಅನುಭವ ಹೆಚ್ಚಿಸಿಕೊಂಡ ಆತ, ತನ್ನ 13ನೇ ವಯಸ್ಸಿನಲ್ಲೇ ಅಶುದ್ಧ ನೀರಿನ ಮರು ಬಳಕೆ, ಮಾನವನ ನಡಿಗೆಯಿಂದ ವಿದ್ಯುತ್ ಉತ್ಪಾದನೆ ಸೇರಿದಂತೆ ಅನೇಕ ಸಂಶೋಧನೆಗಳನ್ನು ಮಾಡಿದ್ದಾನೆ.

    ಮಗನಲ್ಲಿದ್ದ ಅಪಾರ ಜ್ಞಾನ ಶಕ್ತಿಯನ್ನು ಕಂಡು ಆತನ ತಾಯಿ ಲ್ಯಾಪ್​ಟಾಪ್ ಅನ್ನು ಉಡುಗೊರೆಯಾಗಿ ನೀಡಿದರು. ಅದರಿಂದ ಆತನ ಓದಿಗೆ ಮತ್ತಷ್ಟು ಅನುಕೂಲವಾಯಿತು. ಇಂಟರ್​ನೆಟ್​ನಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ ಅನೇಕ ಮಾಹಿತಿ ಕಲೆ ಹಾಕುತ್ತಲೇ ಜ್ಞಾನ ವೃದ್ಧಿಸಿಕೊಂಡು ಸಾಧನೆಯ ಹಾದಿ ಸುಲಭವಾಗಿಸಿಕೊಂಡ.

    ಪ್ರಶಸ್ತಿಗಳ ಸುರಿಮಳೆ: ನಾಲ್ಕು ಅಂತಾರಾಷ್ಟ್ರೀಯ ಪ್ರಶಸ್ತಿ , 30 ರಾಷ್ಟ್ರೀಯ ಪ್ರಶಸ್ತಿ, ಎರಡು ಬಾರಿ ರಾಜ್ಯ ಯುವ ವಿಜ್ಞಾನಿ ಪ್ರಶಸ್ತಿ, ಚಂದನ ಟಿ.ವಿಯ ‘ಥಟ್ ಅಂತ ಹೇಳಿ’ ರಾಜ್ಯ ಮಟ್ಟದ ವಿಜ್ಞಾನ ಪ್ರಶಸ್ತಿ, ರೋಟರಿ ವಿಜ್ಞಾನಿ, ಜಿಲ್ಲಾ ಯುವ ವಿಜ್ಞಾನಿ, ಜಿಲ್ಲಾ ಬಾಲ ವಿಜ್ಞಾನಿ, ರಾಜ್ಯ ಅಸಾಧಾರಣ ಪ್ರತಿಭಾ ಪ್ರಶಸ್ತಿ, ಬಾಲ ವಿಕಾಸ ಅಕಾಡೆಮಿ ಪ್ರಶಸ್ತಿ, ಐರಿಸ್ ರಾಷ್ಟ್ರೀಯ ಪ್ರಶಸ್ತಿ ಸೇರಿದಂತೆ 500 ಕ್ಕೂ ಅಧಿಕ ಪ್ರಶಸ್ತಿಗಳ ಗೌರವ ಸ್ವೀಕರಿಸಿದ್ದಾನೆ.

    ಎಲ್.ಕೆ.ಜಿ.ಯಿಂದ ಪ್ರಥಮ ಪಿಯುಸಿವರೆಗೆ ಶ್ರೀರಂಗಪಟ್ಟಣದಲ್ಲೇ ವ್ಯಾಸಂಗ ಮಾಡಿರುವ ಸುಹೇಲ್ ಸದ್ಯ ಮಂಗಳೂರಿನ ಸೆಂಟ್ ಅಲೋಷಿಯಸ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದು, ಮುಂದೆ ಸಂಶೋಧನೆ ಆಧಾರಿತ ಉದ್ಯಮ ಆರಂಭಿಸಬೇಕು ಎಂಬ ಯೋಚನೆ ಹೊಂದಿದ್ದಾನೆ. ಈ ನಿಟ್ಟಿನಲ್ಲಿ ಅಮೆರಿಕ ಮತ್ತು ಲಂಡನ್​ಗೆ ತೆರಳಿ ಸಮಗ್ರ ಮಾಹಿತಿ ಪಡೆದುಕೊಂಡು ಬರುವ ಪ್ರಯತ್ನದಲ್ಲಿದ್ದಾನೆ. ಸರ್ಕಾರ ವೈಜ್ಞಾನಿಕ ಆವಿಷ್ಕಾರಕ್ಕೆ ಪ್ರೋತ್ಸಾಹ ನೀಡಿದರೆ ಭಾರತ ವಿಜ್ಞಾನ ಕ್ಷೇತ್ರದಲ್ಲಿ ಕಂಗೊಳಿಸುತ್ತದೆ ಎನ್ನುವುದು ಈತನ ಅಭಿಮತ.

    ಅಪಾರ ಗೌರವ

    ವೈಜ್ಞಾನಿಕ ಕ್ಷೇತ್ರದಲ್ಲಿನ ಅಪಾರ ಸಾಧನೆಗಾಗಿ ಸುಹೇಲ್ 2019 ರ ಜನವರಿಯಲ್ಲಿ ರಾಷ್ಟ್ರಪತಿಗಳಿಂದ ಒಂದು ಲಕ್ಷ ರೂಪಾಯಿ ನಗದಿನೊಂದಿಗೆ ಪ್ರಧಾನ ಮಂತ್ರಿ ಬಾಲ ಶಕ್ತಿ ರಾಷ್ಟ್ರೀಯ ಪುರಸ್ಕಾರ ಗೌರವ ಪಡೆದು, ಪ್ರಧಾನ ಮಂತ್ರಿಗಳ ನಿವಾಸದಲ್ಲಿ ಪ್ರಧಾನಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾನೆ.

    ಪ್ರಧಾನಿ ಉಡುಗೊರೆಯಾಗಿ ಸುಹೇಲ್​ಗೆ ತಮ್ಮ ಸಹಿ ಇರುವ ವಾಚ್ ನೀಡಿದ್ದಾರೆ. 2019 ಜನವರಿ 26 ರಂದು ದೆಹಲಿಯ ಇಂಡಿಯಾ ಗೇಟ್​ನಲ್ಲಿ ನಡೆದ ಗಣರಾಜ್ಯೋತ್ಸವ ಪೆರೇಡ್​ನಲ್ಲಿ ಸುಹೇಲ್ ಭಾಗವಹಿಸಿದ್ದ. 2019 ರ ರಾಷ್ಟ್ರ ಪ್ರಶಸ್ತಿ ಪಡೆದ ಸಾಧಕರಲ್ಲಿ ಮೊದಲ ಸ್ಥಾನದಲ್ಲಿದ್ದ ಸುಹೇಲ್ ಸಾಧನೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ. ಪ್ರಧಾನಿ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಸುಹೇಲ್ ಕುರಿತು ಶ್ಲಾಘನೀಯ ಸಾಲುಗಳನ್ನು ಬರೆದುಕೊಂಡಿದ್ದಾರೆ.

    ಸಂಶೋಧನಾ ಪ್ರಬಂಧ

    7ನೇ ತರಗತಿಯಿಂದ ಇಲ್ಲಿಯವರೆಗೆ ಜಮ್ಮು ಕಾಶ್ಮೀರ, ಮಹಾರಾಷ್ಟ್ರ, ಆಂಧ್ರಪ್ರದೇಶ, ಮಧ್ಯಪ್ರದೇಶ, ಬಾರಾಮತಿ, ತಮಿಳುನಾಡು, ಹುಬ್ಬಳ್ಳಿ, ಬೆಂಗಳೂರು, ದೆಹಲಿ ಹೀಗೆ ದೇಶದ ಉದ್ದಗಲಕ್ಕೂ ವಿಜ್ಞಾನ ಸಮಾವೇಶಗಳಲ್ಲಿ ವೈಜ್ಞಾನಿಕ ವಿಷಯಕ್ಕೆ ಸಂಬಂಧಿಸಿದ ಸಂಶೋಧನಾ ಪ್ರಬಂಧ ಮಂಡಿಸಿ, 2017 ರಲ್ಲಿ ಅಪೌಷ್ಟಿಕತೆ ಕುರಿತ ಸಂಶೋಧನಾ ಪ್ರಬಂಧವನ್ನು ಅಮೆರಿಕ ಅಂತಾರಾಷ್ಟ್ರೀಯ ಸಮಾವೇಶದಲ್ಲಿ ಗೆಳೆಯ ಸ್ವಸ್ತಿಕ್ ಪದ್ಮ ಜತೆ ಮಂಡಿಸಿ ಭಾರತಕ್ಕೆ ಎರಡನೆ ಗ್ರಾಂಡ್ ಅವಾರ್ಡ್ ಪ್ರಶಸ್ತಿಯ ಗೌರವ ತಂದಿದ್ದಾನೆ.

    |ಮೌಲಾಲಿ ಕೆ. ಅಲಗೂರ 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts