More

    ಕಥೆಗಳನ್ನು ಹೇಳುವ ರೇಣಿ ಹಳ್ಳಿ!

    | ರಾಘವ ಶರ್ಮ ನಿಡ್ಲೆ ಚಮೋಲಿ (ಉತ್ತರಾಖಂಡ)

    ಉತ್ತರಾಖಂಡದ ಜೋಶಿಮಠದಿಂದ 30 ಕಿ.ಮೀ. ದೂರದಲ್ಲಿರುವ ರೇಣಿ ಹಳ್ಳಿ ನಿವಾಸಿಗರಿಗೆ ಭಾನುವಾರದ ಹಿಮ ದುರಂತವನ್ನು ಈಗಲೂ ಅರಗಿಸಿಕೊಳ್ಳಲಾಗುತ್ತಿಲ್ಲ. ಕಂಡೂಕೇಳರಿಯದ ಹಿಮಪ್ರವಾಹದಿಂದಾಗಿ ಮೃತ್ಯುಕೂಪದಲ್ಲಿ ಬದುಕುತ್ತಿದ್ದೇವೆ ಎಂದು ಆತಂಕಿತರಾಗಿದ್ದಾರೆ. ನಂದಾದೇವಿ ಹಿಮ ಕರಗಿ ಈ ದುರಂತ ಸಂಭವಿಸಿರುವ ಸಾಧ್ಯತೆ ಇದೆ ಎಂದು ಭೂಗರ್ಭ ತಜ್ಞರು ಹೇಳುತ್ತಿದ್ದರೂ, ‘ದೇವಿಯ ಶಾಪದಿಂದಾಗಿ ಈ ಅನಾಹುತ ಸಂಭವಿಸಿದೆ’ ಎನ್ನುವುದು ಹಳ್ಳಿಗರ ಪ್ರತಿಪಾದನೆ.

    ಜೋಶಿಮಠ ಪಟ್ಟಣದ ಕೆಳಭಾಗದಲ್ಲಿರುವ ವಿಷ್ಣುಪ್ರಯಾಗದಲ್ಲಿ ಅಲಕಾನಂದ ನದಿಯೊಂದಿಗೆ ಸಂಗಮವಾಗುವ ಧೌಲಿಗಂಗಾ ನದಿಯನ್ನು ರಿಷಿಗಂಗಾ ನದಿ ಸಂರ್ಪಸುವುದು ರೇಣಿಯಲ್ಲಿ. ಈ ಸಂಗಮ ಪ್ರದೇಶದ ಕೊಂಚ ಮೇಲ್ಭಾಗದಲ್ಲೇ ಪುರಾತನ ದೇವಿ ಮಂದಿರವಿತ್ತು. ಹಳ್ಳಿಗರ ಪ್ರಮುಖ ಧಾರ್ವಿುಕ ಕೇಂದ್ರವಾಗಿದ್ದ ಈ ಮಂದಿರ ಭಾನುವಾರದ ಪ್ರವಾಹದಲ್ಲಿ ಕೊಚ್ಚಿ ಹೋಗಿದೆ. ಅಪಾರ ಸಾವು-ನೋವು ಮತ್ತು ಮಂದಿರ ನಾಶಗೊಂಡಿರುವುದು ರೇಣಿಯಲ್ಲಿ ಸೂತಕದ ಛಾಯೆ ಮೂಡಿಸಿದೆ.

    ದೇಗುಲದೊಂದಿಗೆ ಭಾವನಾತ್ಮಕ ನಂಟು ಹೊಂದಿದ್ದ ಗ್ರಾಮಸ್ಥರೀಗ, ‘ಇದು ಮಾನವನ ದುರಾಸೆಗೆ ದೇವಿಯೇ ಕೊಟ್ಟ ಶಿಕ್ಷೆ’ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಕಡಿದಾದ ರಸ್ತೆ, ಸೇತುವೆ ದಾಟಿ ಮೆಟ್ಟಿಲುಗಳನ್ನು ಹತ್ತಬೇಕಿರುವುದರಿಂದ ವೃದ್ಧರು, ಅಂಗವಿಕಲರು ಈ ದೇಗುಲಕ್ಕೆ ತಲುಪಲು ಸಾಧ್ಯವಿಲ್ಲ. ಹೀಗಾಗಿ, ಮಂದಿರದ ನೇರದಿಕ್ಕಿನಲ್ಲಿ, ಮೇಲ್ಭಾಗದಲ್ಲಿರುವ ರೇಣಿ ಹಳ್ಳಿಯ ಮತ್ತೊಂದು ಬದಿಯ ರಸ್ತೆಗೆ ಚಾಚಿಕೊಂಡೇ ಪರ್ಯಾಯವಾಗಿ ಕಾಳಿ ಮಂದಿರವೊಂದನ್ನು ನಿರ್ವಿುಸಲಾಗಿತ್ತು. ಈ ಮಂದಿರದಲ್ಲೇ ದೇವಿಗೆ ಅನೇಕರು ನಮಿಸುತ್ತಿದ್ದರು. ಇಲ್ಲಿ ಸಲ್ಲಿಸುವ ಪೂಜೆ,

    ಮೂಲದೇಗುಲಕ್ಕೆ ಸಲ್ಲಿಕೆಯಾಗುತ್ತದೆ ಎನ್ನುವುದು ಸ್ಥಳೀಯರ ನಂಬಿಕೆ. ಆದರೆ, ರೇಣಿಯಲ್ಲಿ ರಿಷಿಗಂಗಾ ಥರ್ಮಲ್ ವಿದ್ಯುತ್ ಘಟಕ ತಲೆಎತ್ತುತ್ತಿದ್ದಂತೆ ಪರ್ಯಾಯ ಮಂದಿರವನ್ನು ಬೇರೆಡೆಗೆ ಸ್ಥಳಾಂತರಿಸಬೇಕೆಂದು ಕಂಪನಿ ಒತ್ತಾಯಿಸಿತು. ಹಳ್ಳಿಗರು ಒಪ್ಪಲಿಲ್ಲ. ಪ್ರಕರಣ ಕೋರ್ಟ್ ಮೆಟ್ಟಿಲೇರಿತು. ಸರ್ಕಾರಿ ಭೂಮಿಯಲ್ಲಿ ಮಂದಿರವಿದೆ ಎಂದ ಕೋರ್ಟ್ ಹಳ್ಳಿಗರ ವಿರೋಧವನ್ನು ತಿರಸ್ಕರಿಸಿತು. ‘ಹೊಸದಾಗಿ ಮಂದಿರ ನಿರ್ಮಾಣ ಮಾಡಿಕೊಡಲಿದ್ದೇವೆ’ ಎಂದು ಕಂಪನಿ ಭರವಸೆ ನೀಡಿದರೂ ಅದು ಈಡೇರಿಲ್ಲ. ದೇವಿಗೆ ಕಂಪನಿ ಅವಮಾನ ಮಾಡಿದೆ ಎಂದೇ ಆಕ್ರೋಶಗೊಂಡ ಗ್ರಾಮಸ್ಥರು, ಈ ಭಾಗದಲ್ಲಿ ಪ್ರಳಯ ಆವರಿಸಲಿದೆ, ದೇವಿಶಾಪಕ್ಕೆ ನಾವೆಲ್ಲರೂ ಬಲಿಯಾಗಲಿದ್ದೇವೆ ಎಂದೇ ಕೆಲ ವರ್ಷಗಳಿಂದ ರ್ಚಚಿಸುತ್ತಿದ್ದರು. ಅದಕ್ಕೆ ಪೂರಕ ಎನಿಸುವಂತೆ, ಭಾನುವಾರ ಹಿಮಪ್ರವಾಹ ಅಪ್ಪಳಿಸಿದ್ದರಿಂದ ರೇಣಿಯಲ್ಲೀಗ ‘ದೇವಿಶಾಪ’ದ್ದೇ ಮಾತು. ಪರ್ಯಾಯ ದೇವಿ ಮಂದಿರದ ಮೇಲೆಯೇ ನಿರ್ವಿುಸಿದ್ದ ವಿದ್ಯುತ್ ಕಂಬ, ತಂತಿಗಳು ಪ್ರವಾಹದಿಂದ ನಾಶವಾಗದಿದ್ದರೂ, ರಿಷಿಗಂಗಾ ಥರ್ಮಲ್ ವಿದ್ಯುತ್ ಘಟಕ ಸಂಪೂರ್ಣ ನಾಮಾವಶೇಷಗೊಂಡಿದೆ. ಸಾವಿರಾರು ಕೋಟಿ ರೂಪಾಯಿ ನಷ್ಟಕ್ಕೀಡಾಗಿದೆ.

    ಪಾಂಡವರು ಓಡಾಡಿದ್ದರು!

    ನಂದಾದೇವಿ ಪರ್ವತದ ಕಣಿವೆ ಸೇರಿ ಸುತ್ತಮುತ್ತಲಿನ ಪ್ರದೇಶಗಳು ಮಹಾಭಾರತದ ಪಾಂಡವರು ಓಡಾಡಿದ್ದ ಪ್ರದೇಶ ಎಂಬ ಪ್ರತೀತಿ ಇದೆ. ಅವರ ಕಾಲದಲ್ಲೇ ಈ ದೇವಿ ಮಂದಿರ ನಿರ್ವಣವಾಗಿತ್ತು ಎಂದು ಗ್ರಾಮಸ್ಥರು ನಂಬಿದ್ದಾರೆ. ಇದೇ ಕಾರಣಕ್ಕಾಗಿ, ರೇಣಿ ಹಳ್ಳಿಯ ದೇವಿ ಮಂದಿರಕ್ಕೆ ಎಲ್ಲಿಲ್ಲದ ಮಹತ್ವವಿತ್ತು. ಪರವೂರಿನ ಭಕ್ತರೂ ಇಲ್ಲಿಗೆ ಬಂದು ಪೂಜೆ, ಪುನಸ್ಕಾರಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಭಾನುವಾರದ ಪ್ರವಾಹ ಇಲ್ಲಿರುವ ಮೂರೂ ಮಂದಿರಗಳನ್ನು ತನ್ನೊಂದಿಗೆ ಕೊಂಡೊಯ್ದಿದೆ ಎಂದು ಬಾರ್ಡರ್ ರೋಡ್ ಆರ್ಗನೈಸೇಷನ್ (ಬಿ.ಆರ್.ಒ) ಚೆನ್ನೈ ಮೂಲದ ಅಧಿಕಾರಿಯೊಬ್ಬರು ಮಾಹಿತಿ ಹಂಚಿಕೊಂಡರು.

    ವಿದ್ಯುತ್ ಘಟಕಕ್ಕೆ ವಿರೋಧ

    ರೇಣಿ ಗ್ರಾಮ ಈ ಸೂಕ್ಷ್ಮ ವಲಯದ ವ್ಯಾಪ್ತಿಗೆ ಬಂದರೂ ಇಲ್ಲಿ ರಿಷಿಗಂಗಾ ಹೈಡ್ರೋ ಪವರ್ ಘಟಕ ನಿರ್ಮಾಣ ಮಾಡಲು ಸರ್ಕಾರ ಅನುಮೋದನೆ ನೀಡಿತ್ತು. ಪರಿಸರ ಹೋರಾಟಗಾರರು, ಗ್ರಾಮಸ್ಥರ ವಿರೋಧಕ್ಕೆ ಸರ್ಕಾರ, ಕಂಪನಿಗಳು ತಲೆಕೆಡಿಸಿಕೊಳ್ಳಲಿಲ್ಲ. ಕಲ್ಲುಕ್ವಾರಿ ಚಟುವಟಿಕೆ ಸೇರಿ ಹಲವು ಸೂಕ್ಷ್ಮ ವಲಯಗಳಲ್ಲಿ ನಿಷೇಧಿಸಿರುವ ಚಟುವಟಿಕೆಗಳು ಜೀವವೈವಿಧ್ಯಕ್ಕೂ ಹಾನಿ ಮಾಡಿವೆ ಎಂದು 2019ರಲ್ಲಿ ರೇಣಿ ಗ್ರಾಮಸ್ಥರು ಜೋಶಿಮಠದ ಜಿಲ್ಲಾ ಮ್ಯಾಜಿಸ್ಟ್ರೇಟ್​ಗೆ ಪತ್ರ ಬರೆದಿದ್ದರು. ‘2005ರಿಂದ ನಡೆಯುತ್ತಿರುವ ರಿಷಿಗಂಗಾ ಜಲ ವಿದ್ಯುತ್ ಯೋಜನೆ ಪರಿಸರ ನಿಯಮಗಳನ್ನು ಉಲ್ಲಂಘಿಸಿತ್ತು. ಈ ಯೋಜನೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. ನ್ಯಾಯಾಲಯಗಳಲ್ಲೂ ನಮಗೆ ನ್ಯಾಯ ಸಿಗಲಿಲ್ಲ. ಹಳ್ಳಿಗರ ಮಾತಿಗೆ ಬೆಲೆ ಎಲ್ಲಿ ಇದೆ ಹೇಳಿ?’ ಎಂದು ಪ್ರಶ್ನಿಸುತ್ತಾರೆ ಗ್ರಾಮಸ್ಥ ಪವನ್ ಖಂಡೂರಿ.

    2013ರಲ್ಲೂ ಇದೇ ಆಗಿತ್ತು

    ರೇಣಿಯಲ್ಲಿ ನಡೆದಂತೆ, 2013ರಲ್ಲಿ ರಾಜ್ಯದ ಶ್ರೀನಗರದ ಧಾರಿ ಎಂಬ ಗ್ರಾಮದಲ್ಲಿದ್ದ ‘ಧಾರಿದೇವಿ’ ದೇಗುಲವನ್ನು ತೆರವುಗೊಳಿಸಿದ್ದರಿಂದಲೇ ಆ ವರ್ಷ ರಾಜ್ಯ ಭಾರೀ ಪ್ರವಾಹಕ್ಕೆ ಸಾಕ್ಷಿಯಾಗಿತ್ತು ಎನ್ನುತ್ತಾರೆ ಅನೇಕರು. 2013ರ ಪ್ರವಾಹದಲ್ಲಿ ಮೃತರ ಸಂಖ್ಯೆ 6000 ಎಂದು ಸರ್ಕಾರ ಹೇಳಿದರೂ, 20 ಸಾವಿರಕ್ಕೂ ಹೆಚ್ಚು ಮಂದಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆನ್ನಲಾಗಿದೆ. ರಾಜ್ಯದ ಚಾರ್​ಧಾಮ್ಳ (ಗಂಗೋತ್ರಿ, ಯಮುನೋತ್ರಿ, ಕೇದಾರನಾಥ, ಬದರೀನಾಥ) ರಕ್ಷಿಸುವ ಮಾತೆಯೇ ಧಾರಿದೇವಿ. ಆಕೆಯ ಶಾಪವೇ ಪ್ರಾಕೃತಿಕ ದುರಂತಕ್ಕೆ ಕಾರಣವಾಯ್ತು ಎಂದು ಇಲ್ಲಿನ ಧಾರ್ವಿುಕ ಶ್ರದ್ಧಾಳುಗಳು ನಂಬಿದ್ದಾರೆ.

    ನೆನಪಿನ ದ್ವಾರ

    ಗೌರಾದೇವಿ ಜನಿಸಿದ್ದು ಲಾಥಾ ಹಳ್ಳಿಯಲ್ಲಿ. ರೇಣಿ ಹಳ್ಳಿಯಲ್ಲಿದ್ದ ಸೇತುವೆ ಪ್ರವಾಹದಲ್ಲಿ ಕೊಚ್ಚಿ ಹೋಗಿರುವುದರಿಂದ ಲಾಥಾ ಕೂಡ ಈಗ ಸಂಪರ್ಕ ಕಳೆದುಕೊಂಡಿದೆ. ರೇಣಿಗೆ ಸೊಸೆಯಾಗಿ ಬಂದಿದ್ದ ಗೌರಾದೇವಿ, 22ನೇ ವಯಸ್ಸಿನಲ್ಲೇ ಗಂಡನನ್ನು ಕಳೆದುಕೊಂಡರು. ಆಗ ಗೌರಾದೇವಿ ಮಗನಿಗೆ 2 ವರ್ಷ. ನಂತರ ಜೀವನವನ್ನು ಸಾಮಾಜಿಕ ಚಟುವಟಿಕೆಗಳಿಗೆ ಮೀಸಲಿಟ್ಟ ಗೌರಾದೇವಿ, ಹಿಂತಿರುಗಿ ನೋಡಿರಲಿಲ್ಲ. ಗೌರಾದೇವಿ ಹೋರಾಟಗಳ ನೆನಪಿಗಾಗಿಯೇ ರೇಣಿ ಹಳ್ಳಿಯ ಪ್ರವೇಶದ್ವಾರಕ್ಕೆ ‘ಚಿಪ್ಕೋ ಆಂದೋಲನ್ ಕೀ ಜನನಿ ಶ್ರೀಮತಿ ಗೌರಾದೇವಿ ಸ್ಮೃತಿದ್ವಾರ್’ ಎಂದು ಹೆಸರಿಡಲಾಗಿದೆ.

    ಚಿಪ್ಕೋ ಚಳವಳಿಗೆ ಪ್ರೇರಣೆ

    ವಿಶ್ವಖ್ಯಾತಿಯ ‘ಚಿಪ್ಕೋ ಚಳವಳಿ’ಗೆ ಸಮರ್ಪಕ ರೂಪ ನೀಡಿದ್ದವರು ಸುಂದರ್ ಲಾಲ್ ಬಹುಗುಣ ಆಗಿದ್ದರೂ, ರೇಣಿ ಹಳ್ಳಿಯಲ್ಲಿ ಗೌರಾದೇವಿ ನೇತೃತ್ವದಲ್ಲಿ 1974ರಲ್ಲಿ ನಡೆಸಿದ್ದ ಅರಣ್ಯ ಹಕ್ಕಿನ ಹೋರಾಟ ಚಿಪ್ಕೋ ಚಳವಳಿಗೆ ಪ್ರೇರಣೆಯಾಗಿತ್ತು. 1974ರಲ್ಲಿ ಅಂದಿನ ಉತ್ತರಪ್ರದೇಶ ಸರ್ಕಾರ (ಉತ್ತರಾಖಂಡ ಆಗ ಉತ್ತರಪ್ರದೇಶದ ಭಾಗವಾಗಿತ್ತು. 2000ದಲ್ಲಿ ಪ್ರತ್ಯೇಕ ರಾಜ್ಯವಾಯಿತು) ಹಳ್ಳಿಯಲ್ಲಿ 2500 ಮರಗಳನ್ನು ಕಡಿಯಲು ಮುಂದಾಗಿದ್ದ ವೇಳೆ ರೇಣಿ ನಿವಾಸಿ ಗೌರಾದೇವಿ 3000 ಸ್ಥಳೀಯ ಮಹಿಳೆಯರನ್ನು ಸೇರಿಸಿ ಅರಣ್ಯ ಹಕ್ಕಿಗಾಗಿ ಹೋರಾಟ ನಡೆಸಿದ್ದರು. ಈ ಮಹಿಳೆಯರು ಮರಗಳನ್ನು ಅಪ್ಪಿಕೊಂಡು ಪ್ರತಿರೋಧ ವ್ಯಕ್ತಪಡಿಸಿದ್ದರು. ಗೌರಾದೇವಿಯವರ ಪರಿಸರ ಪರ ಹೋರಾಟಕ್ಕೆ 1973ರ ಹೋರಾಟ ಸ್ಪೂರ್ತಿ ತುಂಬಿತ್ತು ಮತ್ತು ನಂತರದ ದಿನಗಳಲ್ಲಿ ಸುತ್ತಮುತ್ತಲಿನ ಹಳ್ಳಿಗರಲ್ಲೂ ಪರಿಸರ ಜಾಗೃತಿ ಹೆಚ್ಚಿಸಿದರು. ಗೌರಾದೇವಿ ಹೋರಾಟದಿಂದಲೇ ನಂದಾದೇವಿ ಪರ್ವತ ಸುತ್ತಮುತ್ತಲಿನ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದೂ ಘೊಷಿಸಲಾಯ್ತು. ಮೇಲಾಗಿ, ನಂದಾದೇವಿ ಪ್ರದೇಶ ವಿಶ್ವಸಂಸ್ಥೆ ಗುರುತಿಸುವ ವಿಶ್ವ ಪಾರಂಪರಿಕ ತಾಣವೂ ಹೌದು.

    ನಮ್ಮ ಧಾರ್ವಿುಕ ಭಾವನೆಗಳಿಗೆ ಬೆಲೆ ಕೊಡಲಿಲ್ಲ. ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ವಿದ್ಯುತ್ ಸ್ಥಾವರ ನಿರ್ಮಾಣ ಮಾಡಬೇಡಿ ಎಂದು ಸರ್ಕಾರಕ್ಕೆ ಎಷ್ಟೇ ಕೇಳಿಕೊಂಡರೂ ಖಾಸಗಿ ಸಂಸ್ಥೆಗೆ ನಮ್ಮ ಭೂಮಿಗಳನ್ನು ಮಾರಲಾಯಿತು. ಈಗ ಏನಾಯ್ತು ನೋಡಿ. ವಿದ್ಯುತ್ ಘಟಕ ಸರ್ವನಾಶವಾಗಿದ್ದು ಮಾತ್ರವಲ್ಲ, ನಾವೆಲ್ಲರೂ ಭಯದಿಂದಲೇ ದಿನ ದೂಡಬೇಕಾಗಿದೆ.

    | ಭವಾನ್ ರಾಣಾ ರೇಣಿ ಗ್ರಾಮಪ್ರಧಾನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts