More

    ದೀದಿ ನಾಡಲ್ಲಿ ಆತಂಕದ ಛಾಯೆ: ಕರೊನಾ ಪ್ರಕರಣ ಕುರಿತ ಅಂಕಿ-ಅಂಶ ಮುಚ್ಚಿಡುತ್ತಿರುವ ಆರೋಪ

    ನವದೆಹಲಿ: ಮಾರ್ಚ್ 17ರಂದು ಮೊದಲ ಕರೊನಾ ಕೇಸು ಪತ್ತೆಯಾದ ಪಶ್ಚಿಮ ಬಂಗಾಳದಲ್ಲಿ ಈವರೆಗೆ 339 ವೈರಾಣು ಸೋಂಕಿತರಿರುವುದು ಖಚಿತವಾಗಿದೆ. 66 ಮಂದಿ ಗುಣಮುಖರಾಗಿದ್ದಾರೆ, 12 ಮಂದಿ ಮೃತಪಟ್ಟಿದ್ದಾರೆ. ಸೋಂಕಿತರ ಬಗ್ಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ನೀಡುತ್ತಿರುವ ಮಾಹಿತಿಯಲ್ಲಿ ಅಪಾರ ವ್ಯತ್ಯಾಸಗಳು ಕಂಡು ಬರುತ್ತಿದ್ದು, ಕರೊನಾ ನಿಯಂತ್ರಣದ ವಿಷಯದಲ್ಲಿ ರಾಜ್ಯ ಸರ್ಕಾರ ಧೋರಣೆ ವೈದ್ಯ ವೃಂದದಿಂದಲೇ ಟೀಕೆಗೆ ಗುರಿಯಾಗಿದೆ.

    ನಿರೀಕ್ಷಿತ ಪ್ರಮಾಣದಲ್ಲಿ ಟೆಸ್ಟ್ ಗಳು ಆಗುತ್ತಿಲ್ಲ. ಪಿಪಿಇ ಕಿಟ್ ಗಳ ಲಭ್ಯತೆ ಇಲ್ಲ. ಕರೊನಾ ಸೋಂಕಿತರು, ಶಂಕಿತರು ಹಾಗೂ ಸಾಮಾನ್ಯ ರೋಗಿಗಳನ್ನು ಪ್ರತ್ಯೇಕಿಸದೆಯೇ ಕೆಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದರಿಂದ ರಾಜ್ಯದಲ್ಲಿ ಭಾರೀ ಅನಾಹುತ ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು ಪಶ್ಚಿಮ ಬಂಗಾಳ ವೈದ್ಯರ ಸಂಘ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಈಚಿಗೆ ಬರೆದಿರುವ ಪತ್ರವೇ ರಾಜ್ಯದ ಆತಂಕಕಾರಿ ಸ್ಥಿತಿಯನ್ನು ತೆರೆದಿಟ್ಟಿದೆ. ಕಳೆದ 3 ದಿನಗಳಲ್ಲಿ ಸುಮಾರು 137 ಮೆಡಿಕಲ್ ಸಿಬ್ಬಂದಿ, ನರ್ಸ್ ಗಳು ಹಾಗೂ ಪ್ಯಾರಾ ಮೆಡಿಕಲ್ ಸಿಬ್ಬಂದಿಯನ್ನು ಕೋವಿಡ್-19 ಶಂಕೆಯ ಮೇಲೆ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. ಸಮರ್ಪಕ ಪಿಪಿಇ ಕಿಟ್ ಗಳ ಕೊರತೆಯ ಮಧ್ಯೆಯೇ ಈ ಸಿಬ್ಬಂದಿ ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದರು. ಕೆಲವೇ ದಿನಗಳಲ್ಲಿ ಅವರಿಗೂ ಸೋಂಕು ತಗುಲಿಕೊಂಡಿತು.

    ರಾಜ್ಯದಲ್ಲಿ ಸಿಎಂ ಮಮತಾ ಅವರೇ ಆರೋಗ್ಯ ಇಲಾಖೆ ನಿಭಾಯಿಸುತ್ತಿದ್ದಾರೆ. ದೇಶಾದ್ಯಂತ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದರೂ ಪಶ್ಚಿಮ ಬಂಗಾಳ ಮಾತ್ರ ದೊಡ್ಡ ಪ್ರಮಾಣದಲ್ಲಿ ಕರೊನಾ ಪರೀಕ್ಷೆಗಳನ್ನು ನಡೆಸಲು ಮುಂದಾಗದಿರುವುದು ಅಚ್ಚರಿಗೆ ಕಾರಣವಾಗಿದೆ. ಈ ಕುರಿತೂ ವೈದ್ಯರು ಸಿಎಂಗೆ ಬರೆದ ಪತ್ರದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ. 40000 ಕಿಟ್ ಗಳು ಲಭ್ಯವಿದ್ದರೂ ಪರೀಕ್ಷೆಗಳನ್ನೇಕೆ ನಡೆಸಲಾಗುತ್ತಿಲ್ಲ ಎಂದು ವೈದ್ಯರೊಬ್ಬರು ಪ್ರಶ್ನಿಸಿದ್ದಾರೆ.

    ಪಾರದರ್ಶಕತೆ ಇಲ್ಲ?

    ಸೋಂಕಿತರು ಮತ್ತು ಮೃತಪಟ್ಟವರ ಸಂಖ್ಯೆಯನ್ನು ರಾಜ್ಯ ಸರ್ಕಾರ ಉದ್ದೇಶಪೂರ್ವಕವಾಗಿ ಮುಚ್ಚಿಡುತ್ತಿದೆ ಎಂಬ ಆರೋಪ ಬಲವಾಗಿ ಕೇಳಿಬಂದಿದೆ. ವ್ಯಕ್ತಿಯೊಬ್ಬ ನಿಜವಾಗಿಯೂ ಕರೊನಾ ವೈರಾಣುವಿನಿಂದ ಮೃತಪಟ್ಟನೋ ಅಥವಾ ಬೇರೆ ಕಾರಣ ಇರಬಹುದೋ ಎಂಬ ಬಗ್ಗೆ ಅಧ್ಯಯನ ನಡೆಸಿದ ಬಳಿಕವೇ ಮೃತರ ಕುರಿತು ಅಧಿಕೃತ ಮಾಹಿತಿ ಬಿಡುಗಡೆ ಮಾಡಬೇಕು ಎಂದು ಸರ್ಕಾರ ತೀರ್ವನಿಸಿದ್ದು ಅನುಮಾನಕ್ಕೆಡೆ ಮಾಡಿದೆ. ಈ ಕೆಲಸಕ್ಕಾಗಿ ವೈದ್ಯರನ್ನೊಳಗೊಂಡ ತಜ್ಞರ ಸಮಿತಿ ರಚಿಸಿದ್ದು, ಅವರ ವರದಿ ಬಳಿಕವೇ ಮಾಹಿತಿ ಬಹಿರಂಗಪಡಿಸಲಾಗುತ್ತಿದೆ. ಚಿಕಿತ್ಸೆ ನೀಡುವ ವೈದ್ಯನಿಗೆ ರೋಗಿ ಹೇಗೆ ಸತ್ತಿದ್ದಾನೆ ಎಂಬುದು ಗೊತ್ತಾಗುವುದಿಲ್ಲವೇ? ಸಮಿತಿ ರಚನೆ ಯಾವ ಉದ್ದೇಶಕ್ಕಾಗಿ ಎಂದು ವೈದ್ಯರು ಕಿಡಿಕಾರಿದ್ದಾರೆ.

    ವ್ಯತ್ಯಾಸ ಏಕೆ?

    ಕೋವಿಡ್-19 ಸನ್ನಿವೇಶದಲ್ಲೂ ಮಮತಾ ಓಲೈಕೆ ರಾಜಕಾರಣ ಮಾಡುತ್ತಿದ್ದಾರೆಯೇ ಎಂಬ ಚರ್ಚೆಯಾಗುತ್ತಿದೆ. ಏಕೆಂದರೆ ಏ.1ರಂದು, ತಬ್ಲಿಘಿ ಸಭೆಯಲ್ಲಿ ಪಾಲ್ಗೊಂಡಿದ್ದ ರಾಜ್ಯದವರ ಸಂಖ್ಯೆ 54 ಮಾತ್ರ, ಇವರಲ್ಲಿ 44 ಮಂದಿ ವಿದೇಶಿಗರು ಎಂದು ದೀದಿ ಹೇಳಿದ್ದರು. ಆದರೆ ಕೇಂದ್ರದ ಮಾಹಿತಿ ಪ್ರಕಾರ, 232 ಮಂದಿ ಜಮಾತ್ ಸಭೆಯಲ್ಲಿ ಪಾಲ್ಗೊಂಡಿದ್ದರು. ಇವರಲ್ಲಿ 123 ಮಂದಿ ಭಾರತೀಯರು ಮತ್ತು 109 ಮಂದಿ ವಿದೇಶಿಯರು. ಇದಾದ ಬಳಿಕ ಸ್ಪಷ್ಟೀಕರಣ ನೀಡಿದ್ದ ಸಿಎಂ, ಅಂಕಿ-ಸಂಖ್ಯೆ ಸರಿಪಡಿಸಿಕೊಂಡಿದ್ದರು. ಏಪ್ರಿಲ್ 17ರಂದು ಕರೊನಾ ಸೋಂಕಿತರ ಸಂಖ್ಯೆ 144 ಎಂದು ರಾಜ್ಯ ತಿಳಿಸಿತ್ತು. ಆದರೆ ಅದೇ ದಿನ ಕೇಂದ್ರ ನೀಡಿದ್ದ ಮಾಹಿತಿ ಪ್ರಕಾರ ಸೋಂಕಿತರ ಸಂಖ್ಯೆ 204. ಬಾಂಗ್ಲಾ ದೇಶಕ್ಕೆ ಸನಿಹದಲ್ಲಿರುವ ಉತ್ತರದ ಗಡಿ ಜಿಲ್ಲೆಗಳಾದ ದಿನಾಜ್ ಪುರ್, ಮುಶಿದಾಬಾದ್, ಮಾಲ್ಡ ಜಿಲ್ಲೆಗಳಿಂದಲೂ ಸಮರ್ಪಕ ಅಂಕಿ-ಸಂಖ್ಯೆ ಹೊರಬರುತ್ತಿಲ್ಲ ಎನ್ನಲಾಗಿದೆ.

    ಎಚ್ಚರಿಕೆ ಸಂದೇಶ ರವಾನೆ

    ಪ.ಬಂಗಾಳದ ಪರಿಸ್ಥಿತಿ ಬಗ್ಗೆ ಗಂಭೀರ ಎಚ್ಚರಿಕೆ ಸಂದೇಶ ರವಾನಿಸಿರುವ ಕೇಂದ್ರ ಗೃಹ ಇಲಾಖೆ, ಹಾಟ್ ಸ್ಪಾಟ್ ಜಿಲ್ಲೆಗಳಾದ ಹೌರಾ, ಕೊಲ್ಕತ್ತಾ, ಜಲ್ಪಾಯ್ ಗುರಿ, ಉತ್ತರ 24 ಪರಗಣ, ಪೂರ್ವ ಮೇದಿನಿಪುರ, ಡಾರ್ಜಿಲಿಂಗ್, ಕಲಿಂಪಾಂಗ್ ಸೇರಿ 7 ಜಿಲ್ಲೆಗಳಲ್ಲಿ ಲಾಕ್​ಡೌನ್ ನಿಯಮಗಳ ಉಲ್ಲಂಘನೆಯಿಂದಾಗಿ ಸಮಸ್ಯೆ ಹೆಚ್ಚುವ ಸಾಧ್ಯತೆ ಇದೆ ಎಂದು ಹೇಳಿದೆ. ರಾಜ್ಯದಲ್ಲಿ ಅಂತರ್ ಸಚಿವಾಲಯದ ಕೇಂದ್ರ ತಂಡವನ್ನು ರಚನೆ ಮಾಡಲಾಗಿದ್ದು, ವರದಿಯನ್ನು ಕೇಂದ್ರ ಗೃಹ ಇಲಾಖೆಗೆ ಸಲ್ಲಿಸಲಿವೆ. ಜನರ ಹಿತ ರಕ್ಷಣೆಯ ಉದ್ದೇಶದಿಂದಲೇ ಈ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ ಎಂದು ಕೇಂದ್ರ ಹೇಳಿದ್ದು, ಆದೇಶದ ಪ್ರತಿಯನ್ನು ರಾಜ್ಯ ಮುಖ್ಯ ಕಾರ್ಯದರ್ಶಿಗೆ ಕಳುಹಿಸಿಕೊಟ್ಟಿದೆ. ಆದರೆ, ಕೇಂದ್ರದ ಕ್ರಮಕ್ಕೆ ಆಕ್ಷೇಪಿಸಿರುವ ಸಿಎಂ ಮಮತಾ, ಈ ಜಿಲ್ಲೆಗಳನ್ನು ಆಯ್ಕೆ ಮಾಡಿರುವ ನಿರ್ಧಾರವೇ ಅಸ್ಪಷ್ಟವಾಗಿದೆ. ಈ ತೀರ್ಮಾನ ಕೈಗೊಂಡಿರುವ ಹಿನ್ನೆಲೆ ಹಾಗೂ ಕಾರಣಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವರು ಸಮರ್ಥನೆ ನೀಡಬೇಕೆಂದು ನಾನು ಒತ್ತಾಯಿಸುತ್ತೇನೆ ಎಂದು ಸರಣಿ ಟ್ವೀಟ್ ಮಾಡಿದ್ದಾರೆ.

    ಹೆಚ್ಚಿನ ಟೆಸ್ಟ್​ಗಳಿಲ್ಲ

    ತ್ವರಿತಗತಿಯಲ್ಲಿ ಹೆಚ್ಚಿನ ಪರೀಕ್ಷೆಗಳನ್ನು ನಡೆಸುವುದಕ್ಕೂ ರಾಜ್ಯ ಆದ್ಯತೆ ನೀಡಿಲ್ಲ. ಸುಮಾರು 9 ಕೋಟಿ ಜನಸಂಖ್ಯೆ ಇರುವ ರಾಜ್ಯದಲ್ಲಿ ಈವರೆಗೆ 3000 ಮಂದಿಗೆ ಕರೊನಾ ಟೆಸ್ಟಿಂಗ್ ನಡೆಸಲಾಗಿದೆ. ಅಂದರೆ ಸರಾಸರಿ 10 ಲಕ್ಷ ಜನರಲ್ಲಿ ಶೇ.33.7 ಮಂದಿಗಷ್ಟೇ ಪರೀಕ್ಷೆ ನಡೆದಿದೆ. ಇದೇ ಪ್ರಮಾಣಕ್ಕೆ ರಾಷ್ಟ್ರೀಯ ಸರಾಸರಿ 156.9 ಇದ್ದರೆ, ರಾಜಸ್ತಾನದಲ್ಲಿ ಸರಾಸರಿ 10 ಲಕ್ಷ ಮಂದಿಯಲ್ಲಿ 442 ಮಂದಿಗೆ ಪರೀಕ್ಷೆ ಕೈಗೊಳ್ಳಲಾಗಿದೆ. ಆದರೆ ಶಂಕಿತರನ್ನು ಹುಡುಕಿ ಟೆಸ್ಟಿಂಗ್ ನಡೆಸುವ ಕೆಲಸ ಸಮರೋಪಾದಿಯಲ್ಲಿ ಆಗುತ್ತಿಲ್ಲ. ಇದು ಆತಂಕ ಸೃಷ್ಟಿಸಿದೆ.

    ಕೇಂದ್ರದ ತಂಡಕ್ಕೆ ವಿರೋಧ

    ಪ. ಬಂಗಾಳದ ಕರೊನಾ ಪೀಡಿತ ನಗರಗಳ ಸ್ಥಿತಿ ಪರಿಶೀಲನೆಗೆ ಕೇಂದ್ರ ತಂಡದ ಭೇಟಿಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರೋಧ ವ್ಯಕ್ತಪಡಿಸಿದ್ದಾರೆ. ಕರೊನಾ ವಿರುದ್ಧದ ಹೋರಾಟದಲ್ಲಿ ಕೇಂದ್ರ ಸರ್ಕಾರದ ಎಲ್ಲ ಬೆಂಬಲ ಮತ್ತು ಸಲಹೆಯನ್ನು ಸ್ವಾಗತಿಸುತ್ತೇವೆ. ಆದರೆ ವಿಪತ್ತು ಎಂಜಿಎಂಟಿ ಕಾಯ್ದೆ 2005ರ ಅಡಿಯಲ್ಲಿ ಕೇಂದ್ರ ಸರ್ಕಾರ ಯಾವ ಆಧಾರದ ಮೇಲೆ ಆಯ್ದ ನಗರಗಳಲ್ಲಿ ಪರಿಶೀಲನೆ ನಡೆಸಲು ಐಎಂಸಿಟಿ ತಂಡಗಳನ್ನು ರವಾನಿಸುತ್ತಿದೆ ಎಂಬುದು ಸ್ಪಷ್ಟವಾಗಿಲ್ಲ ಎಂದು ಅವರು ಹೇಳಿದ್ದಾರೆ.

    ಮೈಸೂರಿನಲ್ಲಿ ನಾಲ್ಕು ಕೋತಿಗಳ ಶಂಕಾಸ್ಪದ ಸಾವು, ಮಂಗನ ಕಾಯಿಲೆ ವದಂತಿ ಹಿನ್ನೆಲೆ ಮಂಗಗಳ ದೇಹದ ಪರೀಕ್ಷೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts