More

    ಸಮಾನತೆ ಕೃತಿಯಲ್ಲಾಗದೆ ಆಚರಣೆಗೆ ತರೋಣ



    ಯಾದಗಿರಿ: ನೂರಾರು ಶರಣರು ಜನ್ಮವೆತ್ತಿದ ಈ ನಾಡಿನಲ್ಲಿ ಜನಿಸಿದ ನಾವು ಭಾಗ್ಯಶಾಲಿಗಳು ಎಂದು ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ ತಿಳಿಸಿದರು.

    ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಶುಕ್ರವಾರ ಜಿಲ್ಲಾಡಳಿತದಿಂದ ಆಯೋಜಿಸಿದ್ದ ದಲಿತ ವಚನಕಾರರ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, 12ನೇ ಶತಮಾನದಲ್ಲಿ ಎಲ್ಲ ಶರಣರು ಸರಳವಾದ ವಚನಗಳ ಮೂಲಕ ಸಮಾಜವನ್ನು ತಿದ್ದುವ ಕಾರ್ಯ ಮಾಡಿದರು. ಸಮಾಜದಲ್ಲಿನ ಅನಿಷ್ಠ ಪದ್ಧತಿಗಳನ್ನು ತೊಲಗಿಸಿ, ಎಲ್ಲರೂ ಸಮಾನರೆಂದು ಕೇವಲ ಮಾತಿನಲ್ಲಿ ಹೇಳದೆ ಆಚರಣೆಗೆ ತರುವ ಮೂಲಕ ತೋರಿಸಿಕೊಟ್ಟರು. ಅವರ ಸಂದೇಶಗಳು ಇಂದಿಗೂ ಪ್ರಸ್ತುತವಾಗಿದ್ದು, ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

    ದಲಿತ ವಚನಕಾರರಾದ ಢೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಮಾದಾರ ಚನ್ನಯ್ಯ, ಉರಿಲಿಂಗಪೆದ್ದಿ, ಮಾದಾರ ಧೂಳಯ್ಯ ಅವರ ವಚನಗಳ ಸಾರದಂತೆ ನಡೆದಾಗ ನಮ್ಮ ಜೀವನಕ್ಕೆ ಅರ್ಥ ಬರುತ್ತದೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ರಚನೆ ಸಂದರ್ಭದಲ್ಲಿ ಶರಣರ ಸಮಾನತೆಯ ತತ್ವ- ಸಿದ್ಧಾಂತಗಳನ್ನು ಅಳವಡಿಸಿದ್ದಾರೆ ಎಂಬುದನ್ನು ನಾವು ಅರಿತುಕೊಳ್ಳಬೇಕು. ಸಮಾನತೆಯ ಸಂವಿಧಾನ ರಚನೆಗೆ ಇಂತಹ ಶರಣರ ವಚನಗಳು ಕೂಡ ಪ್ರೇರಣೆಯಾಗಿವೆ ಎಂದರು.

    ಸುಬಮ ಪದವಿ ಮಹಾವಿದ್ಯಾಲಯದ ಉಪನ್ಯಾಸಕ ಗುರುಪ್ರಸಾದ ವೈದ್ಯ ವಿಶೇಷ ಉಪನ್ಯಾಸ ನೀಡಿ, ಬಸವಣ್ಣನವರು ಇಷ್ಟಲಿಂಗ ಅನುಗ್ರಹಿಸಿದ್ದರಿಂದ ಕೆಳವರ್ಗದಲ್ಲಿ ಹುಟ್ಟಿದ ಕರ್ಮ ದೂರಾಯಿತು ಎಂದು ಹೇಳಿಕೊಳ್ಳುವ ಢೋಹರ ಕಕ್ಕಯ್ಯನವರ ಅಭಿನವ ಮಲ್ಲಿಕಾರ್ಜು ನ ಎಂಬ ಅಂಕಿತನಾಮದ 6 ವಚನಗಳು ಲಭ್ಯವಾಗಿವೆ. ಅಧ್ಯಾತ್ಮ ಮತ್ತು ವೈಜ್ಞಾನಿಕ ವಿಚಾರವನ್ನು ಮೇಳೈಸುವ ಅಂಶಗಳು ಇವರ ವಚನಗಳಲ್ಲಿ ಕಂಡುಬರುತ್ತವೆ ಎಂದು ತಿಳಿಸಿದರು.

    ಉರಿಲಿಂಗ ಪೆದ್ದಿಯವರು ಉರಿಲಿಂಗ ದೇವನ ಶಿಷ್ಯ. ಉರಿಲಿಂಗ ದೇವನ ತರುವಾಯ ಇವರು ಗುರುಪೀಠವನ್ನು ಅಲಂಕರಿಸುತ್ತಾರೆ. ಜಾತಿಯಿಂದ ಅಸ್ಪಶ್ಯನಾದ್ದರಿಂದ ಇವರ ಪೀಠಾರೋಹಣದ ಘಟನೆ ವಿಶೇಷವಾಗಿದೆ. ಪ್ರಸ್ತುತ ಹರಿಜನ ಶಿವಭಕ್ತರ ಅನೇಕ ಮಠಗಳು ಕರ್ನಾಟಕದಲ್ಲಿದ್ದು, ಅವರ 366 ವಚನಗಳು ದೊರೆತಿವೆ ಎಂದು ವಿವರಿಸಿದರು.

    ಭಾರತ ಆಹಾರ ನಿಗಮದ ಮಾಜಿ ನಿರ್ದೇಶಕ ಖಂಡಪ್ಪ ದಾಸನ್, 12ನೇ ಶತಮಾನದಲ್ಲಿ ಮಹಾತ್ಮ ಬಸವೇಶ್ವರರಿಂದ ದಲಿತ ವಚನಕಾರರಿಗೆ ಶಿಕ್ಷಣ ಪ್ರಾಪ್ತವಾಯಿತು. ಇದರಿಂದ ಅಸಮಾನತೆಯ ವಿರುದ್ಧ ಧ್ವನಿ ಎತ್ತಲು ಸಾಧ್ಯವಾಯಿತು ಎಂದರು.


    ಪೌರಾಯುಕ್ತ ರಮೇಶ ಸುಣಗಾರ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಎಸ್.ಎಸ್.ಚನ್ನಬಸಪ್ಪ, ಮರೆಪ್ಪ ಚಟ್ಟರಕರ್, ಶಾಂತಪ್ಪ ಖಾನಳ್ಳಿ ಇದ್ದರು. ದತ್ತಪ್ಪ ಸಾಗನೂರ ಅವರು ಸ್ವಾಗತಿಸಿದರು. ಕರಬಸಯ್ಯ ದಂಡಗಿಮಠ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts