More

    ನಾಳೆ ರಾಜ್ಯ ಮಟ್ಟದ ಆರೋಗ್ಯ ಮೇಳ

    ಕೊಳ್ಳೇಗಾಲ: ಪಟ್ಟಣದ ಎಂಜಿಎಸ್‌ವಿ ಜೂನಿಯರ್ ಕಾಲೇಜು ಮೈದಾನದಲ್ಲಿ ಜ.29ರಂದು ನಡೆಯುವ ರಾಜ್ಯಮಟ್ಟದ ಬೃಹತ್ ಆರೋಗ್ಯ ಮೇಳದಲ್ಲಿ ಜಿಲ್ಲೆಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದುಪಯೋಗಪಡಿಸಿಕೊಳ್ಳಬೇಕೆಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಮನವಿ ಮಾಡಿದರು.

    ಆರೋಗ್ಯ ಮೇಳವನ್ನು ಕೊಳ್ಳೇಗಾಲ ಕ್ಷೇತ್ರದಲ್ಲಿ ಆಯೋಜಿಸಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಧನ್ಯವಾದ ತಿಳಿಸುತ್ತೇನೆ. ಮೈಸೂರು, ಬೆಂಗಳೂರಿನಲ್ಲಿ ಉನ್ನತ ಚಿಕಿತ್ಸೆ ಪಡೆಯಲು ಕಷ್ಟಪಡುತ್ತಿದ್ದ ಜಿಲ್ಲೆಯ ಬಡವರಿಗೆ ಈ ಶಿಬಿರ ವರದಾನವಾಗಲಿದೆ. ಮಧ್ಯಾಹ್ನದ ಉಪಾಹಾರ ವ್ಯವಸ್ಥೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಜನರು ಆಗಮಿಸಿ ತಪಾಸಣೆಗೆ ಒಳಪಟ್ಟು ಸರ್ಕಾರದ ಸೇವೆ ಪಡೆಯಿರಿ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಆರೋಗ್ಯ ಮೇಳದಲ್ಲಿ ಹೃದಯ, ಸ್ತ್ರೀರೋಗ, ಮಕ್ಕಳ ಆರೋಗ್ಯ ಸೇರಿದಂತೆ ವಿವಿಧ ರೋಗಗಳ ತಜ್ಞ ವ್ಯೆದರು ಭಾಗವಹಿಸಲಿದ್ದಾರೆ. ಅದಕ್ಕಾಗಿ ಶಿಬಿರಾರ್ಥಿಗಳು ಹಿಂದೆ ವೈದ್ಯರ ಬಳಿ ತೋರಿಸಿದ್ದ ದಾಖಲೆ, ಔಷಧೋಪಚಾರ ಮಾಹಿತಿ, ಪಡಿತರ, ಆಧಾರ್ ಕಾರ್ಡ್, ಆಧಾರ್ ನೋಂದಣಿಗೊಳಪಟ್ಟ ಮೊಬೈಲ್ ತರಬೇಕು. ಮೇಳದಲ್ಲಿ 5 ಸಾವಿರ ಜನರು ಬರುವ ಸಾಧ್ಯತೆ ಇದೆ. ತಪಾಸಣೆಗೆ ಒಳಪಟ್ಟವರಿಗೆ ಉಚಿತ ಔಷಧ ನೀಡಲಾಗುತ್ತದೆ. ಉನ್ನತ ವೈದ್ಯಕೀಯ ಸೌಲಭ್ಯ ಅಗತ್ಯವಿದ್ದರೆ ಸಂಬಂಧಪಟ್ಟ ಸರ್ಕಾರಿ ಆಸ್ಪತ್ರೆಗೆ ಶಿಫಾರಸು ಮಾಡಿ ಚಿಕಿತ್ಸೆ ಕೊಡಿಸಲಾಗುವುದು ಎಂದರು.

    ಡಿಎಚ್‌ಒ ಡಾ.ಚಿದಂಬರಂ ಮಾತನಾಡಿ, ಗ್ರಾಮೀಣ ಭಾಗದಿಂದ ಆರೋಗ್ಯ ಮೇಳಕ್ಕೆ ಬರುವವರಿಗೆ ವಾಹನ ವ್ಯವಸ್ಥೆ ಮಾಡಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಈ ಜವಾಬ್ದಾರಿ ನಿರ್ವಹಿಸುತ್ತಾರೆ. ಆಶಾ ಕಾರ್ಯಕರ್ತರು, ಕಮ್ಯುನಿಟಿ ಹೆಲ್ತ್ ಆಫೀಸರ್ ವಾಹನಗಳಲ್ಲಿ ಜನರನ್ನು ಕರೆದುಕೊಂಡು ಬರುತ್ತಾರೆ. ಪಿಎಚ್‌ಸಿಗಳಿಂದ ಈಗಾಗಲೇ 7 ಸಾವಿರ ಜನರ ನೋಂದಣಿ ಮಾಡಲಾಗಿದೆ. ವಾಹನಗಳಲ್ಲಿ ಮೂರ್ನಾಲ್ಕು ಸಾವಿರ ಜನರು ಬರುವ ಮಾಹಿತಿ ಇದೆ. ತಪಾಸಣೆಯಲ್ಲಿ ಹೆಚ್ಚಿನ ಚಿಕಿತ್ಸೆ ಅಗತ್ಯವಿರುವವರ ಪಟ್ಟಿ ಮಾಡಿ ಪಿಎಚ್‌ಸಿ ಕೇಂದ್ರಗಳಿಗೆ ಸಲ್ಲಿಸಲಾಗುತ್ತದೆ. ನಂತರ, ಪಟ್ಟಿ ಅನ್ವಯ ಪಿಎಚ್‌ಸಿ ಕೇಂದ್ರಗಳ ಮೂಲಕ ಸರ್ಕಾರದ ಸೌಲಭ್ಯ ಬಳಸಿಕೊಂಡು ಚಿಕಿತ್ಸೆ ಕೊಡಿಸಲಾಗುವುದು. ಈ ಪ್ರಕ್ರಿಯೆಯನ್ನು ಜಿಲ್ಲಾ ಆರೋಗ್ಯ ಕೇಂದ್ರದಿಂದ ಫಾಲೋಅಪ್ ಮಾಡಲಾಗುತ್ತದೆ ಎಂದರು.

    ಹೃದಯ ಸಂಬಂಧಿತ ಎಕೋ ಚಿಕಿತ್ಸೆಯನ್ನು 500 ಮಂದಿಗೆ ನೀಡುವ ಗುರಿ ಹೊಂದಿದ್ದೇವೆ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ, ಕಾನ್ಸರ್ ಕಾಯಿಲೆ ತಪಾಸಣೆ ಮಾಡಲಾಗುತ್ತದೆ. ತಪಾಸಣೆ ಸಲಕರಣೆಗಳಿರುವ ವೋಲ್ವೋ ಬಸ್ ಬರುತ್ತದೆ. ಈ ವಾಹನದ ಸೇವೆಯನ್ನು ಹೋಬಳಿ ಮಟ್ಟಕ್ಕೂ ವಿಸ್ತರಿಸಲು 1 ವಾರ ಇಲ್ಲಿಯೇ ಉಳಿಸಿಕೊಳ್ಳುವ ಚಿಂತನೆ ಇದೆ. ಹಾಗೆಯೇ, ರಕ್ತದಾನ ಶಿಬಿರ ಏರ್ಪಡಿಸಿದ್ದೇವೆ. ಅಂಗಾಗದಾನಗಳ ನೋಂದಣೆ ಮಾಡಿಕೊಳ್ಳಲು ಅವಕಾಶವಿದೆ ಎಂದು ಮಾಹಿತಿ ನೀಡಿದರು.

    ಬೃಹತ್ ಆರೋಗ್ಯ ಮೇಳೆ ಬೆಳಗ್ಗೆ 7ಗೆ ಪ್ರಾರಂಭವಾಗುತ್ತದೆ. 11 ಗಂಟೆಗೆ ವೇದಿಕೆ ಕಾರ್ಯಕ್ರಮ ಆಯೋಜಿಸಲಾಗಿದ್ದು, ಆರೋಗ್ಯ ಸಚಿವರ ದಿನೇಶ್ ಗುಂಡೂರಾವ್, ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್, ಜಿಲ್ಲೆಯ ಶಾಸಕರು ಭಾಗಿಯಾಗಲಿದ್ದಾರೆ. ಇದಕ್ಕೂ ಮುನ್ನ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಮುಡಿಗುಂಡದ ರೇಷ್ಮೆ ಕೃಷಿ ಮಾರುಕಟ್ಟೆ ಆವರಣದಲ್ಲಿ ನೂತನವಾಗಿ ನಿರ್ಮಾಣವಾಗಿರುವ ರೇಷ್ಮೆ ಮಾರುಕಟ್ಟೆ ಹಾಗೂ ಪಟ್ಟಣದ ಬೆಂಗಳೂರು ರಸ್ತೆಯಲ್ಲಿರುವ ನೂತನ ಪಶು ಆಸ್ಪತ್ರೆ ಕಟ್ಟಡ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ರಾಜಶೇಖರ್, ಡಾ.ಗೋಪಾಲ್, ನಗರಸಭಾ ಸದಸ್ಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts