More

    ಪ್ರವಾಹ ಪರಿಸ್ಥಿತಿ ಎದುರಿಸಲು ಸರ್ಕಾರ ಸನ್ನದ್ಧ; ನೆರೆ ಬಾಧಿತ 19 ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಸಚಿವ ಅಶೋಕ್ ಸಂವಾದ

    ಬೆಂಗಳೂರು: ಮಹಾರಾಷ್ಟ್ರ ಸೇರಿ ಹಲವು ರಾಜ್ಯಗಳಲ್ಲಿ ಮಳೆ ಸುರಿಯುತ್ತಿರುವ ಕಾರಣ ಸಂಭವನೀಯ ಪರಿಸ್ಥಿತಿ ಎದುರಿಸಲು ರಾಜ್ಯ ಸರ್ಕಾರ ಸನ್ನದ್ಧವಾಗಿದ್ದು, ಈ ನಿಟ್ಟಿನಲ್ಲಿ ಯುದ್ಧೋಪಾದಿಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾ ಆಡಳಿತಗಳಿಗೆ ಸೂಚಿಸಲಾಗಿದೆ ಎಂದು ಕಂದಾಯ ಸಚಿವ, ಕರ್ನಾಟಕ ವಿಪತ್ತು ನಿರ್ವಹಣಾ ಸಮಿತಿ ಉಪಾಧ್ಯಕ್ಷ ಆರ್.ಅಶೋಕ್ ತಿಳಿಸಿದರು.

    ಕಳೆದ ವರ್ಷ ಪ್ರವಾಹ ಬಾಧಿತ 19 ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಶನಿವಾರ ವಿಧಾನಸೌಧದ ಸಮಿತಿ ಸಭಾಂಗಣದಲ್ಲಿ ವಿಡಿಯೋ ಸಂವಾದ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅತಿವೃಷ್ಟಿ ಜತೆಗೆ ಮಹಾರಾಷ್ಟ್ರ, ಕೇರಳ ಮತ್ತು ಗೋವಾ ರಾಜ್ಯದ ಜಲಾಶಯಗಳ ನೀರು ಬಿಡುಗಡೆಯಿಂದಾಗುವ ಪ್ರವಾಹ ಪರಿಸ್ಥಿತಿ ಕುರಿತು ಅವಲೋಕಿಸಲಾಗಿದೆ. ಜಲಾಶಯಗಳ ಹೆಚ್ಚುವರಿ ನೀರು ಹಠಾತ್ ಬಿಡುಗಡೆ ಮಾಡಿದ್ದರಿಂದಾಗಿ ಕಳೆದ ವರ್ಷ ರಾಜ್ಯ ವಿಕೋಪ ಎದುರಿಸಿದೆ. ಯಾವುದೇ ಜಲಾಶಯಗಳಿಂದ ಹೆಚ್ಚುವರಿ ನೀರು ಬಿಡುಗಡೆಗೆ 1 ವಾರ ಮುಂಚೆ ಮಾಹಿತಿ ನೀಡಬೇಕೆಂದು ನೆರೆಯ ರಾಜ್ಯಗಳಿಗೆ ಕೋರಲಾಗಿದ್ದು, ಹೈಕೋರ್ಟ್ ಕೂಡ ಇದೇ ನಿರ್ದೇಶನ ನೀಡಿದೆ ಎಂದರು.

    ವಾಟ್ಸ್ ಆಪ್ ಗ್ರೂಪ್ ರಚನೆ: ಪ್ರವಾಹ ಬಾಧಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳು ನೆರೆಯ ರಾಜ್ಯಗಳ ಜಿಲ್ಲಾಧಿಕಾರಿಗಳ ಜತೆ ಸಮನ್ವಯ ಸಾಧಿಸಿ, ಕಾಲ ಕಾಲಕ್ಕೆ ಮಾಹಿತಿ ವಿನಿಮಯ ಮಾಡಿಕೊಳ್ಳಲೆಂದು ವಾಟ್ಸ್ ಆಪ್ ಗ್ರೂಪ್ ರಚಿಸಿಕೊಳ್ಳಲು ಸೂಚಿಸಲಾಗಿದೆ. ಪ್ರತಿದಿನದ ಮಾಹಿತಿಯನ್ನು ಅಪ್​ಡೇಟ್ ಮಾಡಬೇಕು, ಮಳೆ ಮುನ್ನೆಚ್ಚರಿಕೆ ಕುರಿತು ನಾನೇ ನೇರವಾಗಿ ಡಿಸಿಗಳಿಗೆ ಪ್ರತಿದಿನ ಮಾಹಿತಿ ರವಾನಿಸುವೆ ಎಂದರು.

    1981 ಹಳ್ಳಿಗಳು ಬಾಧಿತ: ಪ್ರಾಥಮಿಕ ಮಾಹಿತಿ ಪ್ರಕಾರ ಪ್ರವಾಹದ ಅಪಾಯವಿರುವ 19 ಜಿಲ್ಲೆಗಳ 1981 ಹಳ್ಳಿಗಳನ್ನು ಪಟ್ಟಿ ಮಾಡಲಾಗಿದೆ. 51,81,359 ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸುವುದಕ್ಕೆ ಗುರುತಿಸಿದ್ದು, ಗ್ರಾ.ಪಂ.ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ.

    ಸಮನ್ವಯ ಸಮಿತಿ ಕಾರ್ಯಪಡೆ: ಜಿಲ್ಲಾಮಟ್ಟದಲ್ಲಿ ಕಂದಾಯ, ಪೊಲೀಸ್, ವಿದ್ಯುತ್, ಜಲ ಸಂಪನ್ಮೂಲ, ಸಣ್ಣ ನೀರಾವರಿ, ಕುಡಿಯುವ ನೀರು ಸೇರಿ ಸಂಬಂಧಿಸಿದ ಇಲಾಖೆಗಳನ್ನೊಳಗೊಂಡ ಸಮನ್ವಯ ಕಾರ್ಯಪಡೆ ರಚಿಸಲು ಸೂಚಿಸಲಾಗಿದ್ದು, ಪ್ರತಿ 15 ದಿನಗಳಿಗೊಮ್ಮೆ ಸಭೆ ಸೇರಿ ರ್ಚಚಿಸಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ವರದಿ ಸಲ್ಲಿಸಲು ಸೂಚಿಸಲಾಗಿದೆ ಎಂದರು. ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದಕ್ಕೆ ಹಣದ ಕೊರತೆಯಿಲ್ಲ. ಎಲ್ಲ ಡಿಸಿಗಳ ವೈಯಕ್ತಿಕ ಠೇವಣಿ ಖಾತೆಯಲ್ಲಿ 1,144 ಕೋಟಿ ರೂ. ಲಭ್ಯವಿದೆ. ಮುನ್ನೆಚ್ಚರಿಕೆ ಕ್ರಮಗಳಿಗಾಗಿ ಕೇಂದ್ರ ಸರ್ಕಾರ ಕಳೆದ ವರ್ಷ 108 ಕೋಟಿ ರೂ. ನೀಡಿದ್ದರೆ, ಈ ಬಾರಿ 318 ಕೋಟಿ ರೂ. ಬಿಡುಗಡೆ ಮಾಡಿದ್ದು, ಪ್ರಧಾನಿ ಮೋದಿ ಅವರ ದೂರದೃಷ್ಟಿ ನಿರ್ಧಾರವು ಅಭಿನಂದನೀಯವೆಂದು ಅಶೋಕ್ ಮೆಚ್ಚುಗೆ ವ್ಯಕ್ತಪಡಿಸಿದರು.

    ಹಳ್ಳಿಗಳಲ್ಲಿ ಕಾರ್ಯಪಡೆ: ಪ್ರಕೃತಿ ವಿಕೋಪ, ಕರೊನಾದಂತಹ ಸಾಂಕ್ರಾಮಿಕ ರೋಗ ಬಾಧಿಸಿದ ಸಂದರ್ಭದಲ್ಲಿ ತಕ್ಷಣ ಸ್ಪಂದನೆ ಹಾಗೂ ಕಾರ್ಯಪ್ರವೃತ್ತರಾಗುವುದಕ್ಕೆ ಪ್ರತಿ ಹಳ್ಳಿಯಲ್ಲಿ ತಲಾ 10 ಜನರನ್ನು ಒಳಗೊಂಡ ಕಾರ್ಯಪಡೆ ರಚಿಸಲಿದ್ದು, ಅಗತ್ಯ ತರಬೇತಿ ನೀಡಲಾಗುವುದು. ಜನರ ಮನವೊಲಿಕೆ ಸೇರಿ ನೆರವಿನ ಕಾರ್ಯಕ್ಕೆ ಕೈಜೋಡಿಸುವುದು ಈ ತಂಡದ ರಚನೆ ಉದ್ದೇಶ. ರಾಜ್ಯ ಸರ್ಕಾರ ಕೈಗೊಂಡ ಈ ತೀರ್ವನದ ಬಗ್ಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿದು, ಮಾಹಿತಿ ಕೇಳಿದೆ ಎಂದು ಅಶೋಕ್ ಹೇಳಿದರು.

    ಎಸ್​ಡಿಆರ್​ಎಫ್ ಭವನ: ಪದೇಪದೆ ಪ್ರವಾಹಪೀಡಿತ ತಾಲೂಕುಗಳಲ್ಲಿ ಬಹೂಪಯೋಗಿ ಸುಸಜ್ಜಿತ ಎಸ್​ಡಿಆರ್​ಎಫ್ ಭವನ ನಿರ್ವಿುಸಲು ನಿರ್ಧರಿಸಲಾಗಿದೆ. ತಲಾ 5-10 ಕೋಟಿ ರೂ. ವೆಚ್ಚವಾಗಲಿದೆ. ಈಗಾಗಲೆ ಕಾರವಾರದಲ್ಲಿ ನಿರ್ವಿುಸಿದ್ದು, ಅದೇ ಮಾದರಿಯಲ್ಲಿ ಉಡುಪಿ, ಕೊಡಗು, ಚಿಕ್ಕಮಗಳೂರು, ಹಾವೇರಿ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಈ ಭವನಗಳು ನಿರ್ವಣವಾಗಲಿವೆ ಎಂದು ಸಚಿವರು ಹೇಳಿದರು.

    ಇಂದಿನಿಂದ ರಾಜ್ಯದಲ್ಲಿ ಭಾರಿ ಮಳೆ: ಬಂಗಾಳ ಕೊಲ್ಲಿ ಹಾಗೂ ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿಯಿಂದಾಗಿ ರಾಜ್ಯದಲ್ಲಿ ಮಳೆಯಾಗುತ್ತಿದ್ದು, ಮುಂದಿನ 5 ದಿನ ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ. ದಾವಣಗೆರೆ ಜಿಲ್ಲೆಯಲ್ಲಿ ಶನಿವಾರ 24.4 ಮಿ.ಮೀ. ಸರಾಸರಿ ಮಳೆಯಾಗಿದ್ದು, ಜಗಳೂರು ತಾಲೂಕು ಸಾಲೇಹಳ್ಳಿ ಗ್ರಾಮದಲ್ಲಿ ಚೆಕ್​ಡ್ಯಾಮ್ ಏರಿ ಒಡೆದು ನೀರು ಪೋಲಾಗಿದೆ. ಜಿಲ್ಲೆಯಲ್ಲಿ ಸುಮಾರು 28 ಮನೆ, 1 ಕೊಟ್ಟಿಗೆ ಹಾನಿಗೊಳಗಾಗಿವೆ. 7 ಎಕರೆ ಮೆಕ್ಕೆಜೋಳ ಫಸಲು ನೆಲಕ್ಕುರುಳಿದೆ. ದಾವಣಗೆರೆ ತಾಲೂಕಿನಲ್ಲಿ ಅತಿಹೆಚ್ಚು 40 ಮಿ.ಮೀ. ಮಳೆಯಾಗಿದೆ.

    ಹಿಂದಿಗಿಂತಲೂ ಭವ್ಯ, ಎತ್ತರ, ವಿಶಾಲ; ಹೇಗಿದೆ ಗೊತ್ತೆ ರಾಮ ಮಂದಿರದ ನೂತನ ವಿನ್ಯಾಸ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts