More

    ಮೊಬೈಲ್ ಬ್ಯಾಂಕಿಂಗ್ ವಾಹನಕ್ಕೆ ಡಿಸಿಸಿ ಬ್ಯಾಂಕ್ ಚಾಲನೆ ; ನಬಾರ್ಡ್ ಜನರಲ್ ಮ್ಯಾನೇಜರ್ ನೀರಜ್ ಕುಮಾರ್ ವರ್ಮಾ ಹರ್ಷ

    ಕೋಲಾರ : ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಕೋಲಾರದ ಡಿಸಿಸಿ ಬ್ಯಾಂಕ್ ಡಿಜಿಟಲ್ ಕ್ರಾಂತಿ ಮೂಲಕ ಬ್ಯಾಂಕ್ ಮತ್ತು ಸೊಸೈಟಿಗಳಲ್ಲಿ ಪಾರದರ್ಶಕತೆಗೆ ಬುನಾದಿ ಹಾಕಿದೆ ಎಂದು ನಬಾರ್ಡ್ ಮಹಾ ಪ್ರಧಾನ ವ್ಯವಸ್ಥಾಪಕ ನೀರಜ್ ಕುಮಾರ್ ವರ್ಮಾ ಹರ್ಷ ವ್ಯಕ್ತಪಡಿಸಿದರು.

    ನಗರದ ಡಿಸಿಸಿ ಬ್ಯಾಂಕ್ ಆವರಣದಲ್ಲಿ ಶನಿವಾರ ನಬಾರ್ಡ್ ಹಣಕಾಸು ನೆರವಿನೊಂದಿಗೆ ಡಿಸಿಸಿ ಬ್ಯಾಂಕ್ ಅನುಷ್ಠಾನಕ್ಕೆ ತಂದಿರುವ ಮೊಬೈಲ್ ಬ್ಯಾಂಕಿಂಗ್ ವಾಹನಗಳಿಗೆ ಚಾಲನೆ ನೀಡಿ ಮಾತನಾಡಿದರು. ಕೋಲಾರ ಡಿಸಿಸಿ ಬ್ಯಾಂಕ್ ಮಾದರಿಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಗೂ ಈ ಯೋಜನೆ ವಿಸ್ತರಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.

    ಬ್ಯಾಂಕ್ ಒಂದು ಕಾಲದಲ್ಲಿ ಯಾರಿಗೂ ಬೇಡವಾಗಿತ್ತು. ಈ ಸಂಸ್ಥೆ ಇನ್ನೆಂದೂ ತಲೆ ಎತ್ತದು ಎಂಬ ಅನುಮಾನ ಕಾಡಿತ್ತು. ಆದರೆ ಕಳೆದ ಏಳೂವರೆ ವರ್ಷಗಳ ಹಿಂದೆ ಅಧಿಕಾರ ಹಿಡಿದ ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮತ್ತವರ ತಂಡ ಬ್ಯಾಂಕನ್ನು ಪ್ರಗತಿ ಪಥದತ್ತ ಕೊಂಡೊಯ್ಯುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆಂದು ಪ್ರಶಂಸಿದರು.

    ನಬಾರ್ಡ್ ನೆರವು: ಡಿಸಿಸಿ ಬ್ಯಾಂಕ್ ಮೂಲಕ ಬಡವರಿಗೆ ಆಗಿರುವ ಪ್ರಯೋಜನಗಳು ಅರಿವಿಗೆ ಬಂದಿವೆ. ಬ್ಯಾಂಕ್ ಮೂಲಕ ಸಾಲ ಪಡೆದ ಸಾವಿರಾರು ಮಹಿಳೆಯರು ಸ್ವಾವಲಂಬಿಗಳಾಗಿದ್ದಾರೆ. ಬ್ಯಾಂಕ್ ಸೇರಿ ಎರಡೂ ಜಿಲ್ಲೆಯ ಸೊಸೈಟಿಗಳ ಗಣಕೀಕರಣಕ್ಕೆ ನಬಾರ್ಡ್ ನೆರವು ನೀಡಿದ್ದು, ಅದೇ ರೀತಿ ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆಗೆ ಸಹಾಯ ಪಡೆಯಲು ಗೋವಿಂದಗೌಡ ಮತ್ತವರ ತಂಡದ ಪ್ರಯತ್ನ ಕಾರಣ ಎಂದು ನೀರಜ್ ಕುಮಾರ್ ವರ್ಮಾ ತಿಳಿಸಿದರು.

    ಎನ್‌ಪಿಎ ಶೇ.1ಕ್ಕೆ ಇಳಿದಾಗ ಹರ್ಷ: ಮೊಬೈಲ್ ಬ್ಯಾಂಕಿಂಗ್ ಸೇವೆಗೆ ಚಾಲನೆ ಸಿಕ್ಕಿರುವುದು ಐತಿಹಾಸಿಕ ದಿನ ಎನ್ನುವುದಕ್ಕಿಂತ ಅದನ್ನು ಉಳಿಸಿಕೊಂಡು ಹೋಗುವ ಸವಾಲು ನಮ್ಮದಾಗಿದೆ ಎಂದು ಗೋವಿಂದಗೌಡ ತಿಳಿಸಿದರು.ನಾನು ಅಧಿಕಾರ ಸ್ವೀಕರಿಸಿದಾಗ ಬ್ಯಾಂಕಿನ ಎನ್‌ಪಿಎ ಶೇ.98 ಇತ್ತು. ಬ್ಯಾಂಕ್ ಉಳಿಸಬೇಕೆಂದು ಪಣತೊಟ್ಟು ಬ್ಯಾಂಕಿನ ಎನ್‌ಪಿಎ ಕಡಿಮೆ ಮಾಡಲು ಕೆಲಸ ಪ್ರಾರಂಭಿಸಿದೆವು. ಇದರ ಫಲವಾಗಿ ಪ್ರಸ್ತುತ ಎನ್‌ಪಿಎ ಶೇ.2.5ರಷ್ಟಿದ್ದು, ಈ ವರ್ಷ ಶೇ.1 ಕ್ಕೆ ಇಳಿಸುವುದು ಬ್ಯಾಂಕಿನ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಹೇಳಿದರು. ಬ್ಯಾಂಕಿನ ಉಪಾಧ್ಯಕ್ಷ ನಾಗರಾಜ್, ಮೊಬೈಲ್ ಬ್ಯಾಂಕಿಂಗ್ ಬಗ್ಗೆ ಚರ್ಚಿಸುವಾಗ ಇದು ಸಾಧ್ಯವೇ ಎಂಬ ಅನುಮಾನ ಕಾಡಿತ್ತು. ತಮಾಷೆ ಎಂದು ಭಾವಿಸಿದ್ದೆ. ಆದರೆ ನಮ್ಮಅಧ್ಯಕ್ಷರು ಸಾಧಿಸಿ ತೋರಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. ನಿರ್ದೇಶಕ ನಾಗನಾಳ ಸೋಮಣ್ಣ ಮಾತನಾಡಿ, ಡಿಸಿಸಿ ಬ್ಯಾಂಕ್ ಸಾಧನೆ ನೋಡಿ ಖುಷಿಪಟ್ಟಿದ್ದಾರೆ, ನಮ್ಮನ್ನು ಅನುಮಾನದಿಂದ ನೋಡುತ್ತಿದ್ದ ನಬಾರ್ಡ್ ಗಣಕೀಕರಣ ಸೇರಿ ಇನ್ನಿತರ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ನೆರವು ನೀಡುತ್ತಿದೆ ಎಂದರು.

    ಎಕ್ಸ್ ಪೇ ಕಂಪನಿಯ ಸಿಇಒ ರೋಹಿತ್ ಕುಮಾರ್, ನಿರ್ದೇಶಕ ಕಾರ್ತಿಕ್, ದೀಪಕ್, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ನಾಗಿರೆಡ್ಡಿ, ರೇವಣ್ಣ, ಎಂ.ಎಲ್.ಅನಿಲ್ ಕುಮಾರ್, ಮೋಹನ್ ರೆಡ್ಡಿ, ವೆಂಕಟರೆಡ್ಡಿ, ಗೋವಿಂದರಾಜುಲು, ನಾರಾಯಣರೆಡ್ಡಿ, ಅಶ್ವತ್ಥಪ್ಪ, ಎಂಡಿ ರವಿ, ಡಿಸಿಸಿ ಬ್ಯಾಂಕ್ ಅಧಿಕಾರಿಗಳಾದ ಶಿವಕುಮಾರ್, ಹುಸೇನ್ ಸಾಬ್ ದೊಡ್ಡಮನಿ, ಖಲೀಮುಲ್ಲಾ ಉಪಸ್ಥಿತರಿದ್ದರು.

    ಮನೆಬಾಗಿಲಿನಲ್ಲಿ ಬ್ಯಾಂಕಿಂಗ್ ಸೇವೆ ಕಲ್ಪಿಸಲು ಸಂಚಾರಿ ವಾಹನಗಳಿಗೆ ಚಾಲನೆ ನೀಡಲಾಗಿದೆ. ಗ್ರಾಮೀಣಾಭಿವೃದ್ಧಿಯಲ್ಲಿ ಸಹಕಾರಿ ಬ್ಯಾಂಕ್‌ಗಳ ಪಾತ್ರ ಮುಖ್ಯವಾಗಿದೆ. ಇನ್ನಷ್ಟು ಸೇವೆಗಳನ್ನು ಹಂತ ಹಂತವಾಗಿ ಕಲ್ಪಿಸಲಾಗುವುದು. ಮಹಿಳೆಯರು, ರೈತರು ಬ್ಯಾಂಕಿನಿಂದ ಆರ್ಥಿಕ ನೆರವು ಪಡೆದು ಸಬಲರಾಗಿ ಬ್ಯಾಂಕಿನ ಪ್ರಗತಿಗೂ ಸಹಕರಿಸಬೇಕು.
    ಶಿವಾನಿ, ನಬಾರ್ಡ್ ಎಜಿಎಂ

    ಬಾಕಿ ಉಳಿದಿರುವ ಸೊಸೈಟಿಗಳನ್ನು ಕಂಪ್ಯೂಟರೀಕರಣಗೊಳಿಸಲು ನಬಾರ್ಡ್ ಆರ್ಥಿಕ ನೆರವು ನೀಡಬೇಕು. ಈಗ ನೀಡಿರುವ ಮೊಬೈಲ್ ಬ್ಯಾಂಕಿಂಗ್ ವಾಹನಗಳು ಸಾಲದು. ಮುಂದಿನ ದಿನಗಳಲ್ಲಿ ಪ್ರತಿ ತಾಲೂಕಿಗೆ ಒಂದು ಮೊಬೈಲ್ ವಾಹನದ ವ್ಯವಸ್ಥೆ ಮಾಡಲು ಪ್ರಯತ್ನಿಸಲಾಗುವುದು.
    ಗೋವಿಂದಗೌಡ, ಡಿಸಿಸಿ ಬ್ಯಾಂಕ್ ಅಧ್ಯಕ್ಷ

    ಗುಂಡಮ್ಮನತ್ತ ಗ್ರಾಮದಲ್ಲಿ ಸ್ತ್ರೀಶಕ್ತಿಯ ಮೆರಗು:  ಡಿಸಿಸಿ ಬ್ಯಾಂಕಿನ ಮೊಬೈಲ್ ಬ್ಯಾಂಕಿಂಗ್ ವಾಹನಗಳಿಗೆ ಚಾಲನೆ ನೀಡಿದ ಬಳಿಕ ಶ್ರೀನಿವಾಸಪುರ ತಾಲೂಕಿನ ಗುಂಡಮ್ಮನತ್ತ ಗ್ರಾಮಕ್ಕೆ ಭೇಟಿ ನೀಡಿ ನಬಾರ್ಡ್ ಮಹಾ ಪ್ರಧಾನ ವ್ಯವಸ್ಥಾಪಕ ನೀರಜ್ ಕುಮಾರ್ ವರ್ಮಾ ಅವರು ಶ್ರೀಗಂಗಮ್ಮ ಸ್ತ್ರೀಶಕ್ತಿ ಸಂಘ ಹಾಗೂ ವೇದಿಕ್ ಪುಡ್ ಪ್ರಾಡೆಕ್ಟ್ ಎಂಟರ್ ಪ್ರೈಸೆಸ್‌ನಿಂದ ಸಿರಿಧಾನ್ಯಗಳ ಮೂಲಕ ತಯಾರಿಸುವ ಆಹಾರ ಪಾದಾರ್ಥಗಳ ಘಟಕ ವೀಕ್ಷಣೆ ಮಾಡಿ, ಮೆಚ್ಚುಗೆ ವ್ಯಕ್ತಪಡಿಸಿ, ವ್ಯಾಪಾರ ವಹೀವಾಟು ವಿಸ್ತರಣೆಗೆ ನಬಾರ್ಡ್‌ನಿಂದ ಸಹಕಾರ ನೀಡುವುದಾಗಿ ತಿಳಿಸಿದರು.

    ಕಳೆದ 4 ವರ್ಷಗಳ ಹಿಂದೆ ಪ್ರಾರಂಭಿಸಿದ ಘಟಕದಲ್ಲಿ ಸುಮಾರು 10 ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಗುಣಮಟ್ಟದ ಆಹಾರ ಪದಾರ್ಥ ತಯಾರಿಸಿ ಮಾರಾಟ ಮಾಡಲಾಗುತ್ತಿದ್ದು, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಘಟಕದ ಮಾಲೀಕರಾದ ತ್ನಮ್ಮ ಹಾಗೂ ಮಾಲಾ ವಿವರಿಸಿದರು.

    ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ, ಶ್ರೀಗಂಗಮ್ಮ ಸ್ತ್ರೀಶಕ್ತಿ ಸಂಘಕ್ಕೆ ಬ್ಯಾಂಕಿನಿಂದ ನೀಡಿರುವ ಸಾಲಕ್ಕೆ ನ್ಯಾಯ ಸಿಗುವ ರೀತಿಯಲ್ಲಿ ಸದಸ್ಯರು ಶ್ರಮಿಸುತ್ತಿದ್ದಾರೆ. ಈ ಸಂಘದ ಪ್ರತಿಯೊಬ್ಬರ ಸದಸ್ಯೆಗೆ ತಲಾ 1 ಲಕ್ಷ ರೂ ಸಾಲ ನೀಡಲು ಬದ್ಧ ಎಂದು ತಿಳಿಸಿದರು.
    ಘಟಕದ ಮಾಲೀಕರಾದ ರತ್ನಮ್ಮ ತಾವು ಮೈಸೂರಿನಲ್ಲಿರುವ ಸಿಎಫ್‌ಟಿಆರ್‌ಐನಲ್ಲಿ ತರಬೇತಿ ಪಡೆದಿದ್ದು ಘಟಕ ವಿಸ್ತರಣೆಗೆ ಆಧುನಿಕ ಯಂತ್ರಗಳ ಖರೀದಿಗೆ ಪ್ರಯತ್ನಿಸುತ್ತಿದ್ದು ನಬಾರ್ಡ್‌ನಿಂದ ಹೆಚ್ಚಿನ ಆರ್ಥಿಕ ನೆರವು ದೊರೆತಲ್ಲಿ ಹತ್ತಾರು ಹೆಣ್ಣು ಮಕ್ಕಳಿಗೆ ಉದ್ಯೋಗ ಸಿಗಲಿದೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts