More

    ದಸರಾ ಆಚರಣೆಗೆ ಜಿಲ್ಲಾಡಳಿತ ಸಿದ್ಧ: ಜಿಲ್ಲಾಧಿಕಾರಿ ಎಸ್.ಅಶ್ವಥಿ ಹೇಳಿಕೆ

    ಮಂಡ್ಯ: ಜಿಲ್ಲಾಡಳಿತದಿಂದ ಸೆ.28 ರಿಂದ ಅ.2ರವರೆಗೆ ಶ್ರೀರಂಗಪಟ್ಟಣ ಪಾರಂಪರಿಕ ದಸರಾ ಆಚರಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಅಶ್ವಥಿ ತಿಳಿಸಿದರು.
    ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಬುಧವಾರ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ದಸರಾ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 28ರಂದು ಮಧ್ಯಾಹ್ನ 3 ಗಂಟೆಯಿಂದ ಕಿರಂಗೂರಿನ ಬನ್ನಿಮಂಟಪದ ಬಳಿ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಗೆ ಅಗ್ರ ಪೂಜೆ, ಪುಷ್ಪಾರ್ಚನೆ, 108 ಕಳಸ ಪೂಜೆ, ಪೊಲೀಸ್ ಬ್ಯಾಂಡ್, ಅಶ್ವಪಡೆ, ಕಲಾತಂಡ ಹಾಗೂ ಸ್ತಬ್ಧಚಿತ್ರಗಳ ಮೆರವಣಿಗೆ ನಡೆಯಲಿದೆ. 6.30ಕ್ಕೆ ಶ್ರೀರಂಗನಾಥಸ್ವಾಮಿ ದೇವಾಲಯದ ಮುಂಭಾಗದ ಶ್ರೀರಂಗ ವೇದಿಕೆಯಲ್ಲಿ ದಸರಾ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ ಎಂದರು.
    ಮೆರವಣಿಗೆ ಸಾಗುವ ರಸ್ತೆಯ ಸ್ವಚ್ಛತೆಗೆ ಆದ್ಯತೆ ನೀಡಬೇಕು. ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿದ ಅಧಿಕಾರಿಗಳು ಸ್ವಚ್ಛತೆ ಮಾಡಿಸಬೇಕು. ಬನ್ನಿಮಂಟಪದ ಹತ್ತಿರ ಮೆರವಣಿಗೆ ವೀಕ್ಷಣೆಗೆ ಗ್ಯಾಲರಿ ನಿರ್ಮಿಸಬೇಕು. ಮ್ಯಾರಥಾನ್, ಕ್ರೀಡಾ ದಸರಾ ನಡೆಯುವ ಸ್ಥಳ, ಚಾರಣ ನಡೆಯುವ ಸ್ಥಳಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಶ್ರೀರಂಗ ವೇದಿಕೆಯ ಹತ್ತಿರ ತಾತ್ಕಾಲಿಕ ಶೌಚಗೃಹದ ವ್ಯವಸ್ಥೆಯಾಗಬೇಕು ಎಂದು ಸೂಚನೆ ನೀಡಿದರು.
    ಯೋಗ ದಸರಾ, ಕ್ರೀಡಾ ದಸರಾ, ಯುವ ದಸರಾ, ಮಹಿಳಾ ದಸರಾ, ಮಕ್ಕಳ ದಸರಾ, ಸ್ಟಾರ್ ನೈಟ್, ಜಲ ಸಾಹಸ ಕ್ರೀಡೆಗಳು, ಗಂಗಾರತಿ, ಕವಿ ಗೋಷ್ಠಿ, ಚರ್ಚಾ ಗೋಷ್ಠಿ, ಉದ್ಯೋಗ ಮೇಳ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ದಿನಾಂಕ ನಿಗದಿ ಮಾಡಲಾಗಿದೆ. ಕಾರ್ಯಕ್ರಗಳಲ್ಲಿ ಭಾಗವಹಿಸುವ ಗಣ್ಯರ ವಿವರಗಳೊಂದಿಗೆ ಪಟ್ಟಿ ಸಿದ್ಧಪಡಿಸಿ ಸಲ್ಲಿಸುವಂತೆ ತಿಳಿಸಿದರು.
    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಮಾತನಾಡಿ, ಮೆರವಣಿಗೆಯಲ್ಲಿ ಭಾಗವಹಿಸುವ ಕಲಾತಂಡಗಳು, ಸ್ತಬ್ಧ ಚಿತ್ರಗಳಿಗೆ ಸ್ಥಳ ನಿಗದಿಮಾಡಬೇಕು. ಅದೇ ಮಾರ್ಗದಲ್ಲಿಯೇ ಮೆರವಣಿಗೆ ಸಾಗಬೇಕು. ಇದಕ್ಕೆ ಒಬ್ಬರು ನೋಡಲ್ ಅಧಿಕಾರಿಯನ್ನು ನೇಮಕ ಮಾಡಬೇಕು ಎಂದರು.
    ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಜಿಪಂ ಸಿಇಒ ಶಾಂತಾ ಎಲ್.ಹುಲ್ಮನಿ, ಉಪವಿಭಾಗಾಧಿಕಾರಿಗಳಾದ ಬಿ.ಸಿ.ಶಿವಾನಂದಮೂರ್ತಿ, ಆರ್.ಐಶ್ವರ್ಯಾ, ಜಿಲ್ಲಾಧಿಕಾರಿ ಕಚೇರಿ ಸಹಾಯಕ ಸ್ವಾಮಿಗೌಡ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts