More

    28ರಿಂದ ಪಾರಂಪರಿಕ ದಸರಾ ಆಚರಣೆ: ಜಿಲ್ಲಾಧಿಕಾರಿ ಎಸ್.ಅಶ್ವಥಿ ಅಧ್ಯಕ್ಷತೆಯಲ್ಲಿ ಸಭೆ

    ಮಂಡ್ಯ: ಶ್ರೀರಂಗಪಟ್ಟಣ ಪಾರಂಪರಿಕ ದಸರಾ ಕಾರ್ಯಕ್ರಮವನ್ನು ಸೆ.28ರಿಂದ ಅ.2ರವರೆಗೆ ವಿಜೃಂಭಣೆ ಹಾಗೂ ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಐದು ದಿನದ ಕಾರ್ಯಕ್ರಮಗಳಲ್ಲಿ ಯಾವುದೇ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಸ್.ಅಶ್ವಥಿ ಸೂಚಿಸಿದರು.
    ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಬಾರಿ ಐದು ದಿನ ನಡೆಯುತ್ತಿದ್ದು, ಇಲಾಖೆಗಳಿಂದ ವೈವಿಧ್ಯಮಯ, ಆಕರ್ಷಣೀಯ, ಸಾರ್ವಜನಿಕರಿಗೆ ಮಾಹಿತಿ ಹಾಗೂ ಮನರಂಜನೆಯುತವಾಗಿರುವ ಕಾರ್ಯಕ್ರಮವನ್ನು ಆಯೋಜಿಸುವಂತೆ ತಿಳಿಸಿದರು.
    28ರಂದು ಜಂಬೂ ಸವಾರಿ ನಡೆಯುವ ಸ್ಥಳದಲ್ಲಿ ಬನ್ನಿಮಂಟಪದ ಸಣ್ಣ ಪುಟ್ಟ ರಿಪೇರಿಗಳಿದ್ದಲ್ಲಿ ಕೈಗೊಳ್ಳಬೇಕು. ಬನ್ನಿಮಂಟಪ, ಕಲ್ಯಾಣಿ ಹಾಗೂ ಕಾರ್ಯಕ್ರಮ ನಡೆಯುವ ಸ್ಥಳ ಹಾಗೂ ಮೆರವಣಿಗೆ ಸಾಗುವ ಸ್ಥಳದ ಸ್ವಚ್ಛತೆ ಕೈಗೊಂಡು ಸಿಂಗಾರ ಮಾಡಬೇಕು. ವಿವಿಧ ಕಲಾತಂಡಗಳು, ಕೃಷಿ, ತೋಟಗಾರಿಕೆ, ಮಹಿಳಾ ಹಾಗೂ ಇನ್ನಿತರ ಇಲಾಖೆಗಳ ಸ್ಥಬ್ದಚಿತ್ರಗಳು ಮೆರವಣಿಗೆಯಲ್ಲಿ ಸಾಗಲಿದೆ ಎಂದರು.
    ಯುವ ದಸರಾ: ಯುವ ದಸರಾದಲ್ಲಿ ಜಿಲ್ಲೆಯ ಎಲ್ಲ ಕಾಲೇಜುಗಳಲ್ಲಿ ಉತ್ತಮ ಪ್ರದರ್ಶನ ನೀಡುವ ವಿದ್ಯಾರ್ಥಿಗಳ ತಂಡಗಳನ್ನು ಆಯ್ಕೆ ಮಾಡಿ ಅವರಿಗೆ ಅವಕಾಶ ನೀಡಬೇಕು. ಇದರಿಂದ ವಿದ್ಯಾರ್ಥಿಗಳ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಬಹುದು. ಕಾರ್ಯಕ್ರಮವು ವಿವಿಧ ನೃತ್ಯ ವೈಖರಿಗಳಿಂದ ಕೂಡಿರಲಿ. ಇನ್ನು ಕ್ರೀಡಾ ದಸರಾದಲ್ಲಿ ಶ್ರೀರಂಗಪಟ್ಟಣ ತಾಲೂಕು ಕ್ರೀಡಾಂಗಣದಿಂದ ಕರಿಘಟ್ಟದವರೆಗೆ ಮ್ಯಾರಥಾನ್, ಕರಿಘಟ್ಟ ಬೆಟ್ಟಕ್ಕೆ ಚಾರಣ, ಕೆಸರುಗದ್ದೆ ಓಡುವ ಸ್ಪರ್ಧೆ, ಹಗ್ಗ-ಜಗ್ಗಾಟ, ಕುಸ್ತಿ, ಖೋ ಖೋ, ವಾಲಿಬಾಲ್, ಚೆಸ್ ಪಂದ್ಯಾವಳಿಗಳನ್ನು ಆಯೋಜಿಸಲು ವ್ಯವಸ್ಥಿತವಾಗಿ ಸಿದ್ಧತೆ ಮಾಡಿಕೊಳ್ಳಿ. ಶಾಲಾ-ಕಾಲೇಜುಗಳಿಗೆ ಮಾಹಿತಿ ನೀಡಿ. ನೋಂದಣಿ ಮಾಡಿಕೊಂಡು ಹೆಚ್ಚು ಕ್ರೀಡಾಪಟುಗಳು ಭಾಗವಹಿಸುವಂತೆ ಮಾಡಬೇಕು ಎಂದು ಸಲಹೆ ನೀಡಿದರು.
    ಇದಲ್ಲದೆ ಯೋಗ ದಸರಾ ಅಂಗವಾಗಿ ಯೋಗ ಗುಚ್ಛ, ಸರಳ ಯೋಗಾಸನಗಳು, ಯೋಗ ನೃತ್ಯ ರೂಪಕ, ಯೋಗ ನಡಿಗೆ ಸೇರಿದಂತೆ ಕಾರ್ಯಕ್ರಮ ಆಯೋಜಿಸಲು ತರಬೇತಿ ನೀಡಬೇಕು. ಈ ಬಾರಿ ಹೊಸದಾಗಿ ಆಹಾರ ಮೇಳ ಆಯೋಜಿಸಬೇಕು. ಇದಕ್ಕಾಗಿ ಉತ್ತಮವಾಗಿ ಆಹಾರ ತಯಾರಕರು, ಚಾಟ್‌ಸ್ಟಾಲ್ಗಳನ್ನು ಮಾಡಲು ಯೋಜನೆ ಮಾಡಿ. ರೈತ, ಮಹಿಳಾ, ಉದ್ಯೋಗ ಮೇಳ ಆಯೋಜನೆ ಬಗ್ಗೆಯೂ ಗಮನಹರಿಸಬೇಕು. ಪ್ರಮುಖವಾಗಿ ಸ್ಥಳದಲ್ಲಿ ಸ್ವಚ್ಛತೆ, ಕುಡಿಯುವ ನೀರು, ತಾತ್ಕಾಲಿಕ ಶೌಚಗೃಹದ ವ್ಯವಸ್ಥೆಗಳು ಇರಬೇಕು ಎಂದು ಸೂಚನೆ ನೀಡಿದರು.
    ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಜಿಪಂ ಉಪ ಕಾರ್ಯದರ್ಶಿ ಸರಸ್ವತಿ, ಪಾಂಡವಪುರ ಉಪವಿಭಾಗಾಧಿಕಾರಿ ಶಿವಾನಂದಮೂರ್ತಿ, ಮಂಡ್ಯ ಉಪವಿಭಾಗಾಧಿಕಾರಿ ಆರ್.ಐಶ್ವರ್ಯಾ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts