VIDEO| ಕರೊನಾದಂತಹ ಬಿಕ್ಕಟ್ಟಿನ ಸಮಯದಲ್ಲಿ ನಮ್ಮನ್ನು ಕಾಪಾಡುವುದು ನಮ್ಮ ಗುಣವೇ ಹೊರತು ಹಣ, ಪದವಿಗಳಲ್ಲ: ಇದು ಶ್ರೀಗುರುವಾಣಿ!

Corona saantvana
Published on

ಕರೊನಾ ಸೋಂಕು ಹರಡದಂತೆ ತಡೆಯಲು ನಾನಾ ರೀತಿಯಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಎಲ್ಲೆಡೆ ನಡೆದಿದೆ. ಇದೇ ವೇಳೆ ಮೈಸೂರಿನ ಅವಧೂತ ದತ್ತಪೀಠಂನ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ನಿತ್ಯವೂ ದಿಗ್ವಿಜಯ ನ್ಯೂಸ್​ನಲ್ಲಿ ಬೆಳಗ್ಗೆ ಚುಟುಕು ಪ್ರವಚನ ನೀಡುತ್ತಿದ್ದಾರೆ. ಕರೊನಾ ಲಾಕ್​ಡೌನ್​ ಅನ್ನು ಹೇಗೆ ಸದುಪಯೋಗ ಪಡಿಸಿಕೊಳ್ಳಬೇಕೆಂದು ಇಂದು ವಿವರಿಸಿದ್ದಾರೆ.

ಮೊದಲಿಗೆ ಮನುಷ್ಯನ ಗುಣಗಳ ಬಗ್ಗೆ ಮಾತನಾಡಿ ಮನಷ್ಯನಿಗೆ ಗುಣಗಳಿಂದ ಯಾವ ಹೆಚ್ಚುಗಾರಿಕೆ ದೊರೆಯುತ್ತಿದೆಯೋ ಅದು ಸಾಕಷ್ಟು ಸಂಪತ್ತಿನಿಂದಲೂ ದೊರೆಯುವುದಿಲ್ಲ. ಗೌರವ ದುಡ್ಡು ಕೊಟ್ಟರೆ ಸಿಗುವಂಥದ್ದಲ್ಲ. ಗೌರವ ಸ್ವಭಾವತಃ ಬರಬೇಕು. ಒಳ್ಳೆಯ ಕಾರ್ಯಗಳನ್ನು ಮಾಡುವ ಮೂಲಕ ಗೌರವ ಶಾಶ್ವತವಾಗಿ ಉಳಿಯುವಂತೆ ಮಾಡಬೇಕು ಎಂದರು.

ಚಂದ್ರ ಹಾಗೂ ಸೂರ್ಯ ದರ್ಶನವನ್ನು ನಾವೆಲ್ಲರೂ ಮಾಡಬೇಕು. ಇಂದು ಎಲ್ಲರೂ 6 ಗಂಟೆಯಾದರೆ ಸಾಕು ಮನೆಯೊಳಗೆ ಸೇರಿಬಿಡುತ್ತಾರೆ. ಮತ್ತೆ ಹೊರಗೆ ಬರುವುದೇ ಇಲ್ಲ. ಕಾಲಹರಣ ಮಾಡಿ ಊಟ ಮಾಡಿ ಮಲಗಿ ಬಿಡುತ್ತಾರೆ. ಅದು ಒಳ್ಳೆಯದಲ್ಲ. ಚಂದ್ರನ ಕಿರಣಗಳು ನಮ್ಮ ಮೇಲೆ ಬೀಳಬೇಕು. ಬಿದ್ದರೆ ನಾವು ಸೇವಿಸಿದಂತಹ ಔಷಧಿ ಕೆಲಸ ಮಾಡುತ್ತದೆ. ಜನರಿಗೆ ಶಾಂತಿ ನೀಡುವ ಗುಣ ಚಂದ್ರನಲ್ಲಿದೆ. ಹುಣ್ಣಿಮೆ ಚಂದ್ರನಿಗಿಂತ ಅಮಾವಾಸ್ಯೆ ಕಳೆದ ಎರಡನೇ ದಿನದ ಚಂದ್ರನ ದರ್ಶನ ಇನ್ನೂ ಶ್ರೇಷ್ಠ ಎಂದು ಶಾಸ್ತ್ರಗಳು ಹೇಳುತ್ತವೆ.

ಎಷ್ಟು ಹಣವಂತರು ಎಂಬುದಕ್ಕಿಂತ ಎಷ್ಟು ಗುಣವಂತರು ಎಂಬುದು ಮಾನವನ ಗೌರವವನ್ನು ಹೆಚ್ಚಿಸುತ್ತದೆ. ಹಣಕ್ಕೆ ಬೆಲೆ ಇದೆ. ಆದರೆ, ಗುಣಕ್ಕೆ ಬೆಲೆಯನ್ನೇ ಕಟ್ಟಲು ಸಾಧ್ಯವಿಲ್ಲ. ಹೀಗಾಗಿ ಕರೊನಾದಂತಹ ಆರೋಗ್ಯ ಬಿಕ್ಕಟ್ಟಿನ ಸಮಯದಲ್ಲಿ ನಮ್ಮ ಹಣವಾಗಲಿ, ಕೀರ್ತಿಯಾಗಲಿ, ತುಂಬಾ ಓದಿದ್ದೇನೆ ಎಂಬುದಾಗಲಿ, ಪದವಿಗಳಾಗಲಿ ಯಾವುದೂ ನಮ್ಮನ್ನು ಕಾಪಾಡುವುದಿಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ. ಮನೆಯಲ್ಲೇ ಇದ್ದು ರೋಗವನ್ನು ತಂದುಕೊಳ್ಳದೇ ಹರಡಿಸದಿರುವುದೇ ಸದ್ಯದ ಒಳ್ಳೆಯ ಗುಣವಾಗಿದೆ.

ಲಾಕ್​ಡೌನ್​ ಸಮಯದಲ್ಲಿ ಒಳ್ಳೆಯ ಅಭ್ಯಾಸ ಮಾಡಿಕೊಳ್ಳಿ, ಹೊಸ ಕೆಲಸ ಕಲಿಯುಕೊಳ್ಳಿ, ಒಳ್ಳೆಯ ಪುಸ್ತಕ ಓದಿ, ಒಳ್ಳೆಯ ಕೆಲಸಗಳನ್ನು ಮಾಡಿ ನಾವೆಲ್ಲರೂ ನಗುತ್ತಲೇ ಕರೊನಾವನ್ನು ಗೆಲ್ಲೋಣ ಎಂದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net