

ಕ್ರೖೆಸ್ಟ್ಚರ್ಚ್: ಮೂವರು ಬ್ಯಾಟ್ಸ್ಮನ್ಗಳು ಮಧ್ಯಮ ಕ್ರಮಾಂಕದಲ್ಲಿ ಜವಾಬ್ದಾರಿ ನಿಭಾಯಿಸಿ ಅರ್ಧಶತಕ ಸಿಡಿಸಿದರೂ, ಟೀಮ್ ಇಂಡಿಯಾ ಆತಿಥೇಯ ನ್ಯೂಜಿಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಸಾಧಾರಣ ಮೊತ್ತಕ್ಕೆ ಆಲೌಟ್ ಆಗಿದೆ. ಮೊದಲ ಟೆಸ್ಟ್ನಲ್ಲಿ ಭಾರತದ ಬ್ಯಾಟಿಂಗ್ ವಿಭಾಗಕ್ಕೆ ದುಸ್ವಪ್ನವಾಗಿ ಕಾಡಿದ್ದ ಏಳಡಿ ಎತ್ತರದ ವೇಗಿ ಕೈಲ್ ಜೇಮಿಸನ್ ಮತ್ತೊಮ್ಮೆ ಭಾರತದ ಬ್ಯಾಟಿಂಗ್ ವಿಭಾಗಕ್ಕೆ ಕಂಟಕವಾದರು.
ಹ್ಯಾಗ್ಲೆ ಓವಲ್ ಮೈದಾನದಲ್ಲಿ ಶನಿವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಬೌಲಿಂಗ್ ಆಯ್ದುಕೊಂಡರು. ವೇಗದ ಬೌಲಿಂಗ್ಗೆ ನೆರವೀಯುತ್ತಿದ್ದ ಪಿಚ್ನಲ್ಲಿ ಉತ್ತಮವಾಗಿ ಬ್ಯಾಟಿಂಗ್ ನಡೆಸಿದ್ದ ಭಾರತ ತಂಡ ಒಂದು ಹಂತದಲ್ಲಿ 4 ವಿಕೆಟ್ಗೆ 194 ರನ್ ಬಾರಿಸಿ ಉತ್ತಮ ಸ್ಥಿತಿಯಲ್ಲಿತ್ತು. ಆದರೆ, ಕೊನೇ ಆರು ವಿಕೆಟ್ಗಳು 48 ರನ್ಗಳ ಅಂತರದಲ್ಲಿ ಪತನಗೊಂಡಿದ್ದರಿಂದ 63 ಓವರ್ಗಳಲ್ಲಿ 242 ರನ್ಗೆ ಆಲೌಟ್ ಆಯಿತು. ಆ ಮೂಲಕ ಪಂದ್ಯದಲ್ಲಿ ಮೇಲುಗೈ ಸಾಧಿಸಲು ಸಿಕ್ಕಿದ್ದ ಸುವರ್ಣಅವಕಾಶವನ್ನು ಹಾಳು ಮಾಡಿಕೊಂಡಿತು.
ಮೊದಲ ಇನಿಂಗ್ಸ್ ಆರಂಭಿಸಿರುವ ನ್ಯೂಜಿಲೆಂಡ್ 23 ಓವರ್ಗಳನ್ನು ಎದುರಿಸಿದ್ದು ವಿಕೆಟ್ ನಷ್ಟವಿಲ್ಲದೆ 63 ರನ್ ಬಾರಿಸಿದೆ. ಟಾಮ್ ಲಾಥಮ್ (27) ಹಾಗೂ ಟಾಮ್ ಬ್ಲಂಡೆಲ್ (29) ಭಾನುವಾರಕ್ಕೆ ವಿಕೆಟ್ ಕಾಯ್ದುಕೊಂಡಿದ್ದು, ನ್ಯೂಜಿಲೆಂಡ್ ತಂಡ ಇನ್ನು 179 ರನ್ಗಳ ಹಿನ್ನಡೆಯಲ್ಲಿದೆ.
ಮುಂಜಾನೆ ಮಳೆ ಸುರಿದ ಕಾರಣದಿಂದಾಗಿ 45 ನಿಮಿಷ ತಡವಾಗಿ ಪಂದ್ಯ ಆರಂಭಗೊಂಡಿತು. ಪೃಥ್ವಿ ಷಾ (54ರನ್, 64 ಎಸೆತ, 8 ಬೌಂಡರಿ, 1 ಸಿಕ್ಸರ್) ಸ್ಪೋಟಕ ಇನಿಂಗ್ಸ್ ನಾಯಕ ವಿರಾಟ್ ಕೊಹ್ಲಿಗೆ ಟಾಸ್ ಸೋಲಿನ ಬೇಸರವನ್ನು ಕಡಿಮೆ ಮಾಡಿತ್ತು. ಐದು ಓವರ್ಗಳಲ್ಲಿ ವಿಕೆಟ್ನಷ್ಟವಿಲ್ಲದೆ 26 ರನ್ ಬಾರಿಸಿದ್ದ ವೇಳೆ ಭಾರತ, ನ್ಯೂಜಿಲೆಂಡ್ ಮೇಲೆ ಒತ್ತಡ ಹೇರಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ, 7 ರನ್ಗಳಿಸಿದ್ದ ಮಯಾಂಕ್ ಅಗರ್ವಾಲ್ ಎಲ್ಬಿ ಆಗುವುದರೊಂದಿಗೆ ಭಾರತ ಮೊದಲ ವಿಕೆಟ್ ಕಳೆದುಕೊಂಡಿತು.
ಆ ನಂತರ ಕ್ರೀಸ್ಗೆ ಇಳಿದ ಚೇತೇಶ್ವರ ಪೂಜಾರ ಮೊದಲ ರನ್ ಬಾರಿಸಲು 13 ಎಸೆತ ಆಡಿದರೆ, ಪೃಥ್ವಿ ಷಾ ಮಾತ್ರ ಸ್ಪೋಟಕ ಆಟ ಮುಂದುವರಿಸಿದ್ದರು. ಮೊದಲ ಒಂದು ಗಂಟೆಯ ಆಟದಲ್ಲಿ ಟೀಮ್ ಇಂಡಿಯಾ ಓವರ್ಗೆ 4ರಂತೆ ರನ್ ಪೇರಿಸಿತ್ತು. ಪೃಥ್ವಿಯ ಬಿರುಸಿನ ಆಟದಿಂದಾಗಿ 19 ಓವರ್ಗಳಲ್ಲಿ 1 ವಿಕೆಟ್ ನಷ್ಟಕ್ಕೆ ಭಾರತ 80 ರನ್ ಪೇರಿಸಿತ್ತು. ಯುವ ಆಟಗಾರನ ವಿದೇಶಿ ನೆಲದ ಮೊಟ್ಟ ಮೊದಲ ಅರ್ಧಶತಕ ಸಾಕಷ್ಟು ವಿಶೇಷತೆಯಿಂದ ಕೂಡಿತ್ತು. ನೀಲ್ ವ್ಯಾಗ್ನರ್ ಎಸೆತವನ್ನು ಫೈನ್ಲೆಗ್ನತ್ತ ಸಿಕ್ಸರ್ಗೆ ಅಟ್ಟಿದ್ದ ಪೃಥ್ವಿ, ಅದರ ಬೆನ್ನಲ್ಲಿಯೇ ಜೇಮಿಸನ್ ಎಸೆತದಲ್ಲಿ 2ನೇ ಸ್ಲಿಪ್ನಲ್ಲಿ ಕ್ಯಾಚ್ ನೀಡಿ ಹೊರನಡೆದರು.
ಕುಸಿದ ಭಾರತ ತಂಡ
ದೊಡ್ಡ ಮೊತ್ತದ ಆಸೆಯಲ್ಲಿದ್ದ ಭಾರತ ಪೂಜಾರ-ಹನುಮ ವಿಹಾರಿ ಜತೆಯಾಟ ಬೇರ್ಪಟ್ಟ ಬಳಿಕ ಆಘಾತ ಕಂಡಿತು. ವ್ಯಾಗ್ನರ್ರ ಬೌನ್ಸರ್ ಆಡುವಲ್ಲಿ ಎಡವಿದ ವಿಹಾರಿ ವಿಕೆಟ್ಕೀಪರ್ಗೆ ಕ್ಯಾಚ್ ನೀಡಿದರು. ಚಹಾ ವಿರಾಮದ ಬಳಿಕ ಜೇಮಿಸನ್ರ ಎಸೆತವನ್ನು ಹುಕ್ ಮಾಡುವ ಪ್ರಯತ್ನದಲ್ಲಿ ಎಡವಿದ ಪೂಜಾರ ಹೊರಬಿದ್ದರು. ಆ ಬಳಿಕ ರಿಷಭ್ ಪಂತ್ , ರವೀಂದ್ರ ಜಡೇಜಾ ಹಾಗೂ ಉಮೇಶ್ ಯಾದವ್ ಕೂಡ ಜೇಮಿಸನ್ಗೆ ಬಲಿಯಾದರು. ಇದರಿಂದಾಗಿ ಭಾರತ 9 ವಿಕೆಟ್ಗೆ 216 ರನ್ ಬಾರಿಸಿತ್ತು. ಕೊನೆಯಲ್ಲಿ ಮೊಹಮದ್ ಶಮಿ (16) ಹಾಗೂ ಜಸ್ಪ್ರೀತ್ ಬುಮ್ರಾ (10) 10ನೇ ವಿಕೆಟ್ಗೆ 26ರನ್ ಕೂಡಿಸಿದ್ದರಿಂದ 242 ರನ್ ಬಾರಿಸುವಲ್ಲಿ ಯಶ ಕಂಡಿತು.
ವಿರಾಟ್ ಕೊಹ್ಲಿ ಮತ್ತೆ ವೈಫಲ್ಯ, ಆಧರಿಸಿದ ಪೂಜಾರ-ಹನುಮ
ಮೊದಲ ಅವಧಿಯ ಕೊನೇ 20 ನಿಮಿಷಗಳಲ್ಲಿ ಬೌಲ್ಟ್ರ ಎಸೆತಗಳನ್ನು ಉತ್ತಮವಾಗಿ ಕೊಹ್ಲಿ ಎದುರಿಸಿದರು. ಇದರಿಂದಾಗಿ 2 ವಿಕೆಟ್ಗೆ 85 ರನ್ಗಳೊಂದಿಗೆ ಭಾರತ ತಂಡ ಭೋಜನ ವಿರಾಮಕ್ಕೆ ತೆರಳಿತ್ತು. ಕೊಹ್ಲಿ ಹಾಗೂ ಚೇತೇಶ್ವರ ಪೂಜಾರ ಜೋಡಿ ಕ್ರೀಸ್ನಲ್ಲಿದ್ದ ಕಾರಣ ಭಾರತ ದೊಡ್ಡ ಮೊತ್ತ ಬಾರಿಸುವ ನಿರೀಕ್ಷೆ ಇಟ್ಟಿತ್ತು. ಈ ಎಲ್ಲ ಲೆಕ್ಕಾಚಾರಗಳು 2ನೇ ಅವಧಿಯ ಆರಂಭದಲ್ಲಿಯೇ ಕುಸಿದುಹೋದವು. ಕೊಹ್ಲಿಗೆ ಔಟ್ಸೈಡ್ ಆಫ್ಸ್ಟಂಪ್ನ ಎಸೆತಗಳನ್ನೇ ಹಾಕುತ್ತಿದ್ದ ಬೌಲ್ಟ್, ವಿರಾಮದ ನಂತರ ಎಸೆದ 2ನೇ ಓವರ್ನ ಒಂದು ಎಸೆತವನ್ನು ನೇರವಾಗಿ ಸ್ಟಂಪ್ನತ್ತ ಎಸೆದರು. ಗಲಿಬಿಲಿಯಾದ ಕೊಹ್ಲಿ ಎಲ್ಬಿಗೆ ಒಳಗಾದರು. ಇದನ್ನು ಡಿಆರ್ಎಸ್ನಲ್ಲಿ ಪರಿಶೀಲಿಸುವ ಮೂಲಕ ಮತ್ತೊಂದು ತಪು್ಪ ಮಾಡಿದರು. ಇದರ ಬೆನ್ನಲ್ಲಿಯೇ 7 ರನ್ ಬಾರಿಸಿದ್ದ ಅಜಿಂಕ್ಯ ರಹಾನೆ ಕೂಡ ಪೆವಿಲಿಯನ್ ಸೇರಿದರು. ಈ ಹಂತದಲ್ಲಿ ಜತೆಯಾದ ಚೇತೇಶ್ವರ ಪೂಜಾರ (54ರನ್, 140 ಎಸೆತ, 6 ಬೌಂಡರಿ) ಹಾಗೂ ಹನುಮ ವಿಹಾರಿ (55ರನ್, 70 ಎಸೆತ, 10 ಬೌಂಡರಿ) 5ನೇ ವಿಕೆಟ್ಗೆ 81 ರನ್ ಪೇರಿಸಿದರು. ಪೂಜಾರ ಅರ್ಧಶತಕ ಬಾರಿಸುವ ವೇಳೆ ಹನುಮ ವಿಹಾರಿ 14 ರನ್ ಬಾರಿಸಿದ್ದರು. ಅದೇ ಹನುಮ ವಿಹಾರಿ ಅರ್ಧಶತಕ ಬಾರಿಸುವ ವೇಳೆ, ತಮ್ಮ ಅರ್ಧಶತಕದ ಮೊತ್ತಕ್ಕೆ ಕೇವಲ 3 ರನ್ ಸೇರಿಸಿದ್ದರು. ಆಕರ್ಷಕ ಆಟದ ಮೂಲಕ ತಂಡದ ಮೊತ್ತವನ್ನು 300ರ ಗಡಿ ತಲುಪಿಸುವ ಪ್ರಯತ್ನದಲ್ಲಿ ಈ ಜೋಡಿ ಇತ್ತು. ಆದರೆ, ದುರಾದೃಷ್ಟವಶಾತ್ ಭಾರತದ ಯಾವ ಯೋಜನೆಗಳೂ ನಂತರ ಕೈಗೂಡಲಿಲ್ಲ.
ಟಿಮ್ ಸೌಥಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 10ನೇ ಬಾರಿಗೆ ವಿರಾಟ್ ಕೊಹ್ಲಿ ವಿಕೆಟ್ ಉರುಳಿಸಿದರು. ವಿರಾಟ್ ಕೊಹ್ಲಿ ಅಲ್ಲದೆ, ಶ್ರೀಲಂಕಾ ತಂಡದ ಆಟಗಾರ ದಿಮುತ್ ಕರುಣರತ್ನೆ ವಿಕೆಟ್ಅನ್ನೂ ಕೂಡ 10 ಬಾರಿ ಪಡೆದಿದ್ದಾರೆ.
ಪಿಚ್ ಉತ್ತಮವಾಗಿತ್ತು. ಆದರೆ, ಶಾಟ್ಗಳ ಆಯ್ಕೆಯಲ್ಲಿ ಬ್ಯಾಟ್ಸ್ಮನ್ಗಳು ತಪು್ಪ ಮಾಡಿದ್ದ ಕಾರಣಕ್ಕಾಗಿಯೇ ವಿಕೆಟ್ಗಳನ್ನು ಕಳೆದುಕೊಂಡೆವು. ಪೃಥ್ವಿ ಷಾ, ಪೂಜಾರ ಎಲ್ಲರೂ ಉತ್ತಮವಾಗಿ ಆಡಿದ್ದರು. ಆದರೆ, ಈ ವಿಕೆಟ್ಗಳು ಪ್ರಮುಖ ಸಮಯದಲ್ಲಿ ಉರುಳಿದವು. ಪೂಜಾರ ಆಡುತ್ತಿದ್ದ ವೇಳೆಯಲ್ಲಿ ನಾನು ವೇಗವಾಗಿ ಆಡಬೇಕೆಂದು ತೀರ್ವನಿಸಿದ್ದೆ. ಆ ಮೂಲಕ ಮೊತ್ತವನ್ನು ಏರಿಸುವುದು ನನ್ನ ಗುರಿಯಾಗಿತ್ತು. | ಹನುಮ ವಿಹಾರಿ ಟೀಮ್ ಇಂಡಿಯಾ ಬ್ಯಾಟ್ಸ್ಮನ್
ನ್ಯೂಜಿಲೆಂಡ್ನಲ್ಲಿ ಚೇತೇಶ್ವರ ಪೂಜಾರ ತಮ್ಮ ಚೊಚ್ಚಲ ಅರ್ಧಶತಕ ಬಾರಿಸಿದರು. ಒಟ್ಟಾರೆ ಟೆಸ್ಟ್ನಲ್ಲಿ ಇದು ಅವರ 25ನೇ ಅರ್ಧಶತಕ ಎನಿಸಿದೆ.