ಬೆಂಗಳೂರಿನಲ್ಲಿ ವರ್ಲ್ಡ್ ಟೆನಿಸ್ ಲೀಗ್; ವಿಶ್ವ ತಾರೆಯರ ಜೊತೆ ಆಡಲಿದ್ದಾರೆ ಭಾರತದ ಆಟಗಾರರು!

ಡಿಸೆಂಬರ್ 17ರಿಂದ 20ರವರೆಗೆ ಬೆಂಗಳೂರಿನ ಕೆಎಸ್‌ಎಲ್‌ಟಿಎ, ಎಸ್.ಎಂ. ಕೃಷ್ಣ ಟೆನಿಸ್ ಸ್ಟೇಡಿಯಂನಲ್ಲಿ WTL ಸೀಸನ್ 5 ನಡೆಯಲಿದೆ. ಈ ಬಾರಿ ಭಾರತದ ಎಂಟು ಆಟಗಾರರು ವಿಶ್ವ ಟೆನಿಸ್‌ನ ಪ್ರಮುಖ ತಾರೆಯರ ಜೊತೆ ಕೋರ್ಟ್‌ನಲ್ಲಿ ಆಡಲಿದ್ದಾರೆ.
WTL ಸೀಸನ್ 5
WTL ಸೀಸನ್ 5
Published on: 

ಬೆಂಗಳೂರು: ಡಿಸೆಂಬರ್ 17ರಿಂದ 20ರವರೆಗೆ ಬೆಂಗಳೂರಿನ ಕೆಎಸ್‌ಎಲ್‌ಟಿಎ, ಎಸ್.ಎಂ. ಕೃಷ್ಣ ಟೆನಿಸ್ ಸ್ಟೇಡಿಯಂನಲ್ಲಿ WTL ಸೀಸನ್ 5 ನಡೆಯಲಿದೆ. ಈ ಬಾರಿ ಭಾರತದ ಎಂಟು ಆಟಗಾರರು ವಿಶ್ವ ಟೆನಿಸ್‌ನ ಪ್ರಮುಖ ತಾರೆಯರ ಜೊತೆ ಕೋರ್ಟ್‌ನಲ್ಲಿ ಆಡಲಿದ್ದಾರೆ. ಈ ಆಟಗಾರರ ಸಾಧನೆ ಮತ್ತು ಪಯಣದ ಪರಿಚಯ ಇಲ್ಲಿದೆ.

ಹರಿಯಾಣದ ಝಜ್ಜರ್‌ನಲ್ಲಿ ಹುಟ್ಟಿ, ದೆಹಲಿಯಲ್ಲಿ ಬೆಳೆದ ಸುಮಿತ್ ನಾಗಲ್ ಅವರ ತಂದೆ ಶಾಲಾ ಶಿಕ್ಷಕರು. ಎಂಟು ವರ್ಷದವನಿದ್ದಾಗಲೇ ಟೆನಿಸ್ ರಾಕೆಟ್ ಹಿಡಿದ ಸುಮಿತ್, ಹಂತ ಹಂತವಾಗಿ ಬೆಳೆದು ಭಾರತದ ಪ್ರಮುಖ ಪುರುಷರ ಸಿಂಗಲ್ಸ್ ಆಟಗಾರರಲ್ಲಿ ಒಬ್ಬರಾದರು. 2024ರಲ್ಲಿ ವಿಶ್ವ ರ‍್ಯಾಂಕಿಂಗ್‌ನಲ್ಲಿ 68ನೇ ಸ್ಥಾನಕ್ಕೇರಿದ ಸುಮಿತ್, ಮಾಂಟೆ ಕಾರ್ಲೊದಲ್ಲಿ ನಡೆದ ATP ಮಾಸ್ಟರ್ಸ್ 1000 ಟೂರ್ನಿಯ ಕ್ಲೇ ಕೋರ್ಟ್‌ನಲ್ಲಿ ಮುಖ್ಯ ಸುತ್ತಿನ ಪಂದ್ಯ ಗೆದ್ದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾದರು.

ದಕ್ಷಿಣೇಶ್ವರ್ ಸುರೇಶ್ : ಟೆನಿಸ್ ವೃತ್ತಿಜೀವನವೇ ಒಂದು ಹಂತದಲ್ಲಿ ಕೊನೆಯಾಗುವ ಪರಿಸ್ಥಿತಿ ಎದುರಾಗಿತ್ತು. ಗಂಭೀರ ಬೆನ್ನಿನ ಗಾಯದಿಂದಾಗಿ ಅವರ ಟೆನಿಸ್ ಕನಸು ನಿಂತುಹೋಗುವ ಭೀತಿ ಎದುರಾಗಿತ್ತು. ಮತ್ತೆ ಆಡಲು ಸಾಧ್ಯವಾಗುತ್ತದೆಯೇ ಎಂಬ ಅನುಮಾನವನ್ನು ವೈದ್ಯರೂ ವ್ಯಕ್ತಪಡಿಸಿದ್ದರು. ಆದರೆ, ಮಧುರೈ ಮೂಲದ ಈ ಆಟಗಾರ ಟೆನಿಸ್ ಬಿಡುವ ಬದಲು ಮತ್ತೆ ಮೊದಲಿನಿಂದ ಶುರು ಮಾಡಲು ನಿರ್ಧರಿಸಿದರು. ಅಮೆರಿಕದಲ್ಲಿ ಕಾಲೇಜು ಟೆನಿಸ್ ಆಡುತ್ತಾ ತಮ್ಮ ಆಟವನ್ನು ಮರಳಿ ಕಟ್ಟಿಕೊಂಡರು. 2025ರಲ್ಲಿ ವೇಕ್ ಫಾರೆಸ್ಟ್ ತಂಡ NCAA ತಂಡ ಚಾಂಪಿಯನ್‌ಶಿಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದರು. 2026ರಲ್ಲಿ ನೆದರ್ಲೆಂಡ್ಸ್ ವಿರುದ್ಧದ ಡೇವಿಸ್ ಕಪ್ ಪಂದ್ಯದಲ್ಲಿ ಭಾರತಕ್ಕೆ ಮೂರು ಗೆಲುವು ತಂದುಕೊಟ್ಟು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಸಾಮರ್ಥ್ಯ ತೋರಿಸಿದರು.

ರಾಮ್‌ಕುಮಾರ್ ರಾಮನಾಥನ್‌ ಐದು ವರ್ಷದವನಿದ್ದಾಗ ತಂದೆಯಿಂದ ಟೆನಿಸ್ ಪರಿಚಯವಾಯಿತು. ತಮ್ಮ ಕನಸನ್ನು ಬೆನ್ನತ್ತಿ 15ನೇ ವಯಸ್ಸಿಗೇ ತರಬೇತಿಗಾಗಿ ಸ್ಪೇನ್‌ನ ಬಾರ್ಸಿಲೋನಾಗೆ ತೆರಳಿದರು. ಅಲ್ಲಿ ಪ್ರಸಿದ್ಧ ಸಾಂಚೆಜ್-ಕಸಲ್ ಅಕಾಡೆಮಿಯಲ್ಲಿ ತರಬೇತಿ ಪಡೆದರು. ಈ ನಿರ್ಧಾರ ಅವರ ವೃತ್ತಿಜೀವನಕ್ಕೆ ದೊಡ್ಡ ತಿರುವು ನೀಡಿತು. 2018ರಲ್ಲಿ ನ್ಯೂಪೋರ್ಟ್ ATP ಸಿಂಗಲ್ಸ್ ಫೈನಲ್ ತಲುಪಿದ ರಾಮ್‌ಕುಮಾರ್, 2011ರಲ್ಲಿ ಸೋಮದೇವ್ ದೇವವರ್ಮನ್ ಬಳಿಕ ATP ಸಿಂಗಲ್ಸ್ ಫೈನಲ್ ತಲುಪಿದ ಮೊದಲ ಭಾರತೀಯ ಆಟಗಾರರಾದರು.

ಯೂಕಿ ಭಾಂಬ್ರಿ: ಜೂನಿಯರ್ ಟೆನಿಸ್‌ನಲ್ಲಿ ದೊಡ್ಡ ಯಶಸ್ಸು ಕಂಡವರು. ಆದರೆ ವೃತ್ತಿಪರ ಟೆನಿಸ್‌ನಲ್ಲಿ ತಮ್ಮ ಸ್ಥಾನ ಗಟ್ಟಿಮಾಡಿಕೊಳ್ಳಲು ಹಲವು ಸವಾಲುಗಳನ್ನು ಎದುರಿಸಿದರು. 2009ರ ಆಸ್ಟ್ರೇಲಿಯನ್ ಓಪನ್ ಜೂನಿಯರ್ ಸಿಂಗಲ್ಸ್ ಚಾಂಪಿಯನ್ ಹಾಗೂ ಮಾಜಿ ಜೂನಿಯರ್ ವಿಶ್ವ ನಂ. 1 ಆಗಿರುವ ಯೂಕಿ, ನಂತರ ಡಬಲ್ಸ್‌ನಲ್ಲಿ ಭಾರತದ ಪ್ರಮುಖ ಆಟಗಾರರಾಗಿ ಬೆಳೆದರು. 2025ರಲ್ಲಿ ಮೈಕೆಲ್ ವೀನಸ್ ಜೊತೆಗೂಡಿ US ಓಪನ್ ಪುರುಷರ ಡಬಲ್ಸ್ ಸೆಮಿಫೈನಲ್ ತಲುಪಿದ್ದು ಅವರ ವೃತ್ತಿಜೀವನದ ಮಹತ್ವದ ಸಾಧನೆಯಾಯಿತು.

ಕೊಯಮತ್ತೂರಿನ ಮಾಯಾ ರಾಜೇಶ್ವರನ್ ರೇವತಿ ಈಗಾಗಲೇ ವೃತ್ತಿಪರ ಟೆನಿಸ್‌ನಲ್ಲಿ ಗಮನ ಸೆಳೆಯುತ್ತಿದ್ದಾರೆ. ಸ್ಪೇನ್‌ನ ರಾಫಾ ನಡಾಲ್ ಅಕಾಡೆಮಿಯಲ್ಲಿ ವಿದ್ಯಾರ್ಥಿವೇತನ ಪಡೆದು ತರಬೇತಿ ಪಡೆಯುತ್ತಿರುವ ಮಾಯಾ, ಜೂನಿಯರ್ ಟೆನಿಸ್‌ನಿಂದ ವೃತ್ತಿಪರ ಮಟ್ಟದತ್ತ ಮುನ್ನಡೆಯುತ್ತಿದ್ದಾರೆ. 2026ರ ಅಕ್ಟೋಬರ್‌ನಲ್ಲಿ ನೈಜೀರಿಯಾದ ಲಾಗೋಸ್‌ನಲ್ಲಿ ನಡೆದ ITF W35 ಟೂರ್ನಿಯಲ್ಲಿ ತಮ್ಮ ಮೊದಲ ವೃತ್ತಿಪರ ಸಿಂಗಲ್ಸ್ ಪ್ರಶಸ್ತಿ ಗೆದ್ದರು. W35 ಅಥವಾ ಅದಕ್ಕಿಂತ ಹೆಚ್ಚಿನ ಮಟ್ಟದ ಮಹಿಳೆಯರ ಸಿಂಗಲ್ಸ್ ಪ್ರಶಸ್ತಿ ಗೆದ್ದ ಅತಿ ಕಿರಿಯ ಭಾರತೀಯ ಆಟಗಾರ್ತಿ ಎಂಬ ದಾಖಲೆ ಬರೆದರು.

ಹೈದರಾಬಾದ್‌ನ ಶ್ರಿವಳ್ಳಿ ರಶ್ಮಿಕಾ ಭಾಮಿಡಿಪಾಟಿ ಅವರ ಟೆನಿಸ್ ಪಯಣ ಆಕಸ್ಮಿಕವಾಗಿ ಶುರುವಾದದ್ದು. ಆದರೆ, ಆರಂಭದಲ್ಲಿ ಸುಮ್ಮನೆ ಶುರುವಾದ ಟೆನಿಸ್ ಆಟ ಮುಂದೆ ಅವರ ಗಂಭೀರ ಗುರಿಯಾಯಿತು. 2023ರಲ್ಲಿ ರಾಷ್ಟ್ರೀಯ ಸಿಂಗಲ್ಸ್ ಮತ್ತು ಡಬಲ್ಸ್ ಎರಡೂ ಪ್ರಶಸ್ತಿಗಳನ್ನು ಗೆದ್ದು ದೇಶೀಯ ಟೆನಿಸ್‌ನಲ್ಲಿ ತಮ್ಮ ಸಾಮರ್ಥ್ಯ ತೋರಿಸಿದರು. ಬಿಲ್ಲಿ ಜೀನ್ ಕಿಂಗ್ ಕಪ್‌ನಲ್ಲಿ ಭಾರತವನ್ನು ನಿಯಮಿತವಾಗಿ ಪ್ರತಿನಿಧಿಸುತ್ತಿರುವ ಶ್ರಿವಳ್ಳಿ, 2025ರಲ್ಲಿ ದೇಶಕ್ಕಾಗಿ ಆಡಿದ ಐದೂ ಪಂದ್ಯಗಳಲ್ಲಿ ಗೆಲುವು ಸಾಧಿಸಿದರು.

2023ರಲ್ಲಿ ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ ಏಷ್ಯನ್ ಗೇಮ್ಸ್ ಋತುಜಾ ಭೋಸಲೆ ಅವರ ವೃತ್ತಿಜೀವನದ ಅತ್ಯಂತ ವಿಶೇಷ ಕ್ಷಣಗಳಲ್ಲಿ ಒಂದು. ಟೆನಿಸ್ ದಿಗ್ಗಜ ರೋಹನ್ ಬೋಪಣ್ಣ ಜೊತೆಗೂಡಿ ಮಿಕ್ಸ್ಡ್ ಡಬಲ್ಸ್‌ನಲ್ಲಿ ಚಿನ್ನದ ಪದಕ ಗೆದ್ದರು. ಪಂದ್ಯ ಗೆದ್ದ ಬಳಿಕ ಬೋಪಣ್ಣ ಅವರನ್ನು ಎತ್ತಿಕೊಂಡ ಕ್ಷಣವನ್ನು ಋತುಜಾ ತಮ್ಮ ಜೀವನದ ಮರೆಯಲಾಗದ ನೆನಪು ಎಂದು ಬಣ್ಣಿಸಿದ್ದರು. ಈ ಗೆಲುವು ಅವರ ವೃತ್ತಿಜೀವನದ ಪ್ರಮುಖ ಸಾಧನೆಗಳಲ್ಲಿ ಒಂದಾಗಿದೆ.

ಪುಣೆಯಲ್ಲಿ ಹುಟ್ಟಿ ಬೆಳೆದ ವೈಷ್ಣವಿ ಅಡ್ಕರ್, 2026ರಲ್ಲಿ ಭಾರತದ ಅಗ್ರ ಶ್ರೇಯಾಂಕದ ಮಹಿಳಾ ಸಿಂಗಲ್ಸ್ ಆಟಗಾರ್ತಿಯಾದರು. ಚೆನ್ನೈ ಓಪನ್‌ನಲ್ಲಿ ಜೋಡಿ ಬುರೇಜ್ ವಿರುದ್ಧ ಗೆಲುವು ಸಾಧಿಸುವ ಮೂಲಕ ಮೊದಲ ಬಾರಿಗೆ WTA ಟೂರ್‌ನ ಮುಖ್ಯ ಸುತ್ತಿನಲ್ಲಿ ಪಂದ್ಯ ಗೆದ್ದರು. ಇದೇ ವರ್ಷ ಬೆಂಗಳೂರಿನಲ್ಲಿ ನಡೆದ ITF W100 ಟೂರ್ನಿಯ ಫೈನಲ್ ತಲುಪಿದ ಅವರು, ಭಾರತೀಯ ಟೆನಿಸ್‌ನಲ್ಲಿ ಗಮನಿಸಬೇಕಾದ ಆಟಗಾರ್ತಿಯರಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ.

ಭಾರತದ ಅನುಭವಿ ಆಟಗಾರರು ಮತ್ತು ಯುವ ಪ್ರತಿಭೆಗಳು WTL ಸೀಸನ್ 5ರಲ್ಲಿ ವಿಶ್ವದ ಪ್ರಮುಖ ಟೆನಿಸ್ ತಾರೆಯರ ಜೊತೆ ಕೋರ್ಟ್‌ನಲ್ಲಿ ಆಡಲಿದ್ದಾರೆ. ಡಿಸೆಂಬರ್ 17ರಿಂದ 20ರವರೆಗೆ ಬೆಂಗಳೂರಿನ ಕೆಎಸ್‌ಎಲ್‌ಟಿಎ, ಎಸ್.ಎಂ. ಕೃಷ್ಣ ಟೆನಿಸ್ ಸ್ಟೇಡಿಯಂನಲ್ಲಿ ನಡೆಯಲಿರುವ ಟೂರ್ನಿಯ ಪಂದ್ಯಗಳನ್ನು ವೀಕ್ಷಿಸಲು ನಿಮ್ಮ ಟಿಕೆಟ್‌ಗಳನ್ನು [ಡಿಸ್ಟ್ರಿಕ್ಟ್ (District) ಆ್ಯಪ್‌ನಲ್ಲಿ ಬುಕ್ ಮಾಡಿ