

Virat Kohli : ನ.24ರ ಭಾನುವಾರ ಮತ್ತು ನ.25 ಸೋಮವಾರ ಎರಡು ದಿನಗಳ ಕಾಲ ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಐಪಿಎಲ್ 2025ರ ಮೆಗಾ ಹರಾಜು ನಡೆದಿದ್ದು ಗೊತ್ತೇ ಇದೆ. ಮೊದಲದ ಹರಾಜಿನಲ್ಲಿ ಆರ್ಸಿಬಿ ಮ್ಯಾನೇಜ್ಮೆಂಟ್ ನಡೆಗೆ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಅದಕ್ಕೆ ಕಾರಣ ಕನ್ನಡಿಗ ರಾಹುಲ್ ಸೇರಿದಂತೆ ಪ್ರಮುಖ ಆಟಗಾರರಿಗೆ ಬಿಡ್ ಮಾಡದೇ ಇರುವುದು. ಆದರೆ, ಎರಡನೇ ದಿನದ ಹರಾಜಿನಲ್ಲಿ ಬಹಳ ಬುದ್ಧಿವಂತಿಕೆಯಿಂದ ಹೆಜ್ಜೆ ಇಟ್ಟ ಆರ್ಸಿಬಿ ಉತ್ತಮ ಆಟಗಾರರನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ತಂಡದಲ್ಲಿ ಸಮತೋಲವನ್ನು ಕಾಯ್ದುಕೊಂಡಿರುವುದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.
ಮೆಗಾ ಹರಾಜಿನಲ್ಲಿ ಆರ್ಸಿಬಿ ಫ್ರಾಂಚೈಸಿಯ ಒಟ್ಟಾರೆ ಪ್ರದರ್ಶನ ಉತ್ತಮವಾಗಿದ್ದರೂ ಮಾರ್ಕ್ಯೂ ಇಂಡಿಯನ್ ಬ್ಯಾಟರ್ಗಳು ಅಂದರೆ, ಪ್ರಮುಖ ಆಟಗಾರರನ್ನು ಖರೀದಿ ಮಾಡುವ ಅವಕಾಶಗಳನ್ನು ಕಳೆದುಕೊಂಡಿದ್ದಕ್ಕೆ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಹಾಗೂ ವಿಶ್ಲೇಷಕ ಆಕಾಶ್ ಚೋಪ್ರಾ ಅಸಮಧಾನಗೊಂಡಿದ್ದಾರೆ.
ಈ ಬಾರಿ ಹರಾಜಿಗೆ ಬಂದ ಕೆ.ಎಲ್. ರಾಹುಲ್, ಶ್ರೇಯಸ್ ಅಯ್ಯರ್ ಹಾಗೂ ಇಶಾನ್ ಕಿಶಾನ್ರಂತಹ ಸ್ಟಾರ್ ಆಟಗಾರರ ಮೇಲೆ ಆರ್ಸಿಬಿ ಒಲವು ತೋರಲಿಲ್ಲ. ಹೀಗಾಗಿ ಆರ್ಸಿಬಿ ಫ್ರಾಂಚೈಸಿ ಮೇಲೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದರು. ಅಲ್ಲದೆ, ಆರ್ಸಿಬಿ ನಡೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಯು ಆಯಿತು. ಇದರ ನಡುವೆ ಭಾರತದ ಮಾಜಿ ಆರಂಭಿಕ ಆಟಗಾರ ಆಕಾಶ್ ಚೋಪ್ರಾ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹರಾಜು ತಂತ್ರವನ್ನು ಬಹಿರಂಗವಾಗಿ ಪ್ರಶ್ನಿಸಿದ್ದಾರೆ. ಈ ವರ್ಷದ ಹರಾಜಿನಲ್ಲಿ ಮಾರ್ಕ್ಯೂ ಭಾರತೀಯ ಆಟಗಾರರನ್ನು ಖರೀದಿಸುವ ಅಪರೂಪದ ಅವಕಾಶ ಸಿಕ್ಕಿತ್ತು. ಆದರೆ, ಆರ್ಸಿಬಿ ಅದನ್ನು ಬಳಸಿಕೊಳ್ಳಿಲ್ಲ ಎಂದು ಆಕಾಶ್ ಚೋಪ್ರಾ ಕಿಡಿಕಾರಿದ್ದಾರೆ.
ಐಪಿಎಲ್ 2025 ಹರಾಜು ಮುಗಿದ ಬಳಿಕ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಆಕಾಶ್ ಚೋಪ್ರಾ, ವಿರಾಟ್ ಕೊಹ್ಲಿಯನ್ನು ಹೊರತುಪಡಿಸಿ ಉನ್ನತ ಮಟ್ಟದ ಭಾರತೀಯ ಬ್ಯಾಟರ್ಗಳನ್ನು ಆಯ್ಕೆ ಮಾಡಲು ಆರ್ಸಿಬಿ ಹಿಂಜರಿದಿರುವುದು ಸ್ಪಷ್ಟವಾಗಿದೆ. ವಿರಾಟ್ ಕೊಹ್ಲಿ ಹೊರತುಪಡಿಸಿ ಬೇರೆ ಹೈ ಪ್ರೊಫೈಲ್ ಇಂಡಿಯನ್ ಬ್ಯಾಟರ್ಗಳು ಇರಬಾರದು ಎಂದು ಆರ್ಸಿಬಿ ಬಯಸಿದೆ. ರಿಷಭ್ ಪಂತ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ ಮತ್ತು ಇಶಾನ್ ಕಿಶನ್ ಎಂಬ ನಾಲ್ಕು ದೊಡ್ಡ ಹೆಸರುಗಳು ಲಭ್ಯವಿತ್ತು ಮತ್ತು ಜೇಬಿನಲ್ಲಿ ಭಾರಿ ಮೊತ್ತವೂ ಇತ್ತು. ಹೀಗಾಗಿ ತಮ್ಮ ಬ್ಯಾಟಿಂಗ್ ಲೈನ್ಅಪ್ಗೆ ಸ್ವಲ್ಪ ಸ್ಟಾರ್ ಶಕ್ತಿಯನ್ನು ಸೇರಿಸುವ ಅವಕಾಶವನ್ನು ಹೊಂದಿತ್ತು. ಆದರೆ, ಅದನ್ನು ಕಳೆದುಕೊಂಡಿದೆ ಎನ್ನುವ ಮೂಲಕ ವಿರಾಟ್ ಕೊಹ್ಲಿ ಇರುವವರೆಗೂ ಆರ್ಸಿಬಿ ಬದಲಾಗಲ್ಲ ಎಂದು ಆಕಾಶ್ ಚೋಪ್ರಾ ಟೀಕಿಸಿದ್ದಾರೆ.
ಈ ಹಿಂದೆ ಆರ್ಸಿಬಿಯಲ್ಲಿ ಸಾಮಾನ್ಯವಾಗಿ ಕಾಡುತ್ತಿದ್ದ ಸಮಸ್ಯೆಯೆಂದರೆ, ತಂಡದ ಸಮತೋಲನ. ಬ್ಯಾಟಿಂಗ್ ವಿಭಾಗ ಬಲಿಷ್ಠವಾಗಿದ್ದರೆ ಬೌಲಿಂಗ್ ವಿಭಾಗ ದುರ್ಬಲವಾಗಿತ್ತು. ಅಲ್ಲದೆ, ಆಲ್ರೌಂಡರ್ಗಳ ಕೊರತೆಯೂ ಕಾಡುತ್ತಿತ್ತು. ಆದರೆ, ಈ ಬಾರಿ ಈ ಮಿಸ್ಟೇಕ್ಗಳನ್ನು ಪುನಾರಾವರ್ತಿಸದೇ ಸಮತೋಲಿತ ತಂಡವನ್ನು ಕಟ್ಟಿದ್ದಾರೆ. ಈ ಬಾರಿ ಆರ್ಸಿಬಿ ಸಂಪೂರ್ಣ ಹೊಸ ತಂಡದಂತಿದೆ. ಕೆಲವೇ ಮಂದಿಯನ್ನು ಹೊರತುಪಡಿಸಿ ಹಳೆಯ ಆಟಗಾರರಿಗೆ ಮತ್ತೆ ಮಣೆಯಾಕದೇ ಹೊಸ ಮುಖಗಳನ್ನು ಆರ್ಸಿಬಿಗೆ ಪರಿಚಯಿಸಿದೆ. ಗ್ಲೇನ್ ಮ್ಯಾಕ್ಸ್ವೆಲ್, ಫಾಫ್ ಡುಪ್ಲೆಸಿಸ್, ಮೊಹಮ್ಮದ್ ಸಿರಾಜ್, ಕೆಮರೂನ್ ಗ್ರೀನ್, ಲಾಕಿ ಫರ್ಗುಸನ್, ಮಹಿಪಾಲ್ ಲೊಮ್ರೋರ್ ಹಾಗೂ ಅನುಜ್ ರಾವತ್ ಸೇರಿದಂತೆ ಬಹುತೇಕ ಆಟಗಾರರಿಗೆ ಆರ್ಸಿಬಿ ಮತ್ತೆ ಮಣೆ ಹಾಕಲಿಲ್ಲ. ಈ ಬಾರಿ ಉತ್ತಮ ಆಯ್ಕೆಗಳನ್ನು ಮಾಡಿದ್ದಾರೆ. ವಿಶ್ವ ನಂಬರ್ 2 ಟಿ20 ಬ್ಯಾಟ್ಸ್ಮನ್ ಫಿಲ್ ಸಾಲ್ಟ್ ಹಾಗೂ ಆಲ್ರೌಂಡರ್ ಲಿಯಾಮ್ ಲಿವಿಂಗ್ಸ್ಟೋನ್, ವೇಗದ ಬೌಲರ್ ಜೋಶ್ಹ್ಯಾಸಲ್ವುಡ್ ಹಾಗೂ ಸ್ವಿಂಗ್ ಸ್ಪೆಷಲಿಸ್ಟ್ ಭುವನೇಶ್ವರ್ ಕುಮಾರ್ ಆರ್ಸಿಬಿ ಪಾಳಕ್ಕೆ ಸೇರಿದ್ದು, ತಂಡಕ್ಕೆ ಬಲ ತುಂಬಿದ್ದಾರೆ. ಸಂಪೂರ್ಣ ಹೊಸತನಕ್ಕೆ ಆರ್ಸಿಬಿ ಸಾಕ್ಷಿಯಾಗಿದೆ. ಹೀಗಾಗಿ ಆರ್ಸಿಬಿ ಆಯ್ಕೆಯ ಬಗ್ಗೆ ಕೆಲವರಲ್ಲಿ ಸಮಾಧಾನವಿದೆ.
ಜೋಶ್ ಹ್ಯಾಸಲ್ವುಡ್ (12.50 ಕೋಟಿ), ಫಿಲ್ ಸಾಲ್ಟ್ (11.50 ಕೋಟಿ), ಜಿತೇಶ್ ಶರ್ಮ (11 ಕೋಟಿ), ಲಿಯಾಮ್ ಲಿವಿಂಗ್ಸ್ಟೋನ್ (8.75 ಕೋಟಿ), ರಸಿಕ್ ಸಲಾಂ (6 ಕೋಟಿ), ಸುಯಶ್ ಶರ್ಮ (2.60 ಕೋಟಿ). ಭುವನೇಶ್ವರ್ ಕುಮಾರ್ (10.75 ಕೋಟಿ), ಕೃನಾಲ್ ಪಾಂಡ್ಯ (5.75 ಕೋಟಿ), ಟಿಮ್ ಡೇವಿಡ್ (3 ಕೋಟಿ), ಜೇಕಬ್ ಬೆಥೆಲ್ (2.60 ಕೋಟಿ), ದೇವದತ್ ಪಡಿಕ್ಕಲ್ (2 ಕೋಟಿ), ನುವಾನ್ ತುಷಾರ (1.60 ಕೋಟಿ), ರೊಮಾರಿಯೊ ಶೆರ್ಡ್ (1.50 ಕೋಟಿ), ಸ್ವಪ್ನಿಲ್ ಸಿಂಗ್ (50 ಲಕ್ಷ), ಮನೋಜ್ ಭಾಂಡಗೆ (30 ಲಕ್ಷ), ಸ್ವಸ್ತಿಕ್ ಚಿಕರ (30 ಲಕ್ಷ), ಮೋಹಿತ್ ರಾಥೀ (30 ಲಕ್ಷ), ಅಭಿನಂದನ್ ಸಿಂಗ್ (30 ಲಕ್ಷ), ಲುಂಗಿ ಎನ್ಗಿಡಿ (1 ಕೋಟಿ).
ಬ್ಯಾಟರ್ಗಳು: ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ದೇವದತ್ ಪಡಿಕ್ಕಲ್, ಸ್ವಸ್ತಿಕ್ ಚಿಕಾರಾ.
ವಿಕೆಟ್ ಕೀಪರ್ಸ್: ಫಿಲ್ ಸಾಲ್ಟ್ ಮತ್ತು ಜಿತೇಶ್ ಶರ್ಮ
ಆಲ್ರೌಂಡರ್ಸ್ : ಲಿಯಾಮ್ ಲಿವಿಂಗ್ಸ್ಟೋನ್, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಮನೋಜ್ ಭಾಂಡಗೆ ಹಾಗೂ ಜಾಕೋಬ್ ಬೆಥೆಲ್.
ಫಾಸ್ಟ್ ಬೌಲರ್ಸ್: ಜೋಶ್ ಹ್ಯಾಸಲ್ವುಡ್, ರಸಿಖ್ ದಾರ್, ಭುವನೇಶ್ವರ್ ಕುಮಾರ್, ನುವಾನ್ ತುಷಾರ, ಯಶ್ ದಯಾಳ್, ಲುಂಗಿ ಎನ್ಗಿಡಿ ಹಾಗೂ ಅಭಿನಂದನ್ ಸಿಂಗ್.
ಸ್ಪಿನ್ನರ್ಗಳು: ಸುಯಶ್ ಶರ್ಮಾ ಹಾಗೂ ಮೋಹಿತ್ ರಾಥಿ.
ಒಟ್ಟಾರೆ ಆರ್ಸಿಬಿ ತಂಡ ಈ ಬಾರಿ ಹರಾಜಿನಲ್ಲೇ ಭರವಸೆ ಮೂಡಿಸಿದ್ದು, ಈ ಸಲ ಕಪ್ ನಮ್ಮದೇ ಎಂದು ಜೋರಾಗಿ ಹೇಳುವಂತೆ ಮಾಡಿದೆ. ಏಕೆಂದರೆ, ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಈ ಬಾರಿ ಆರ್ಸಿಬಿ ತಂಡ ಸಮತೋಲನ ಕಾಯ್ದುಕೊಂಡಿದೆ. ಕಳೆದ 17 ಸೀಸನ್ಗಳಿಂದ ಕೇಳಿಬರುತ್ತಿದ್ದ ಈ ಸಲ ಕಮ್ ನಮ್ಮದೇ ಎಂಬ ಮಾತು ಈ ಬಾರಿಯಾದರೂ ನಿಲ್ಲುತ್ತಾ ಕಾಯಬೇಕಿದೆ. (ಏಜೆನ್ಸೀಸ್)