

ಲಖನೌ: ಸಯ್ಯದ್ ಮೋದಿ ಇಂಡಿಯಾ ಇಂಟರ್ನ್ಯಾಷನಲ್ ಸೂಪರ್-300 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಆತಿಥೇಯ ಭಾರತ ತಂಡ ಅವಳಿ ಪ್ರಶಸ್ತಿ ಜಯಿಸುವ ಕನಸು ಭಗ್ನಗೊಂಡಿದೆ. ಸತತ 3ನೇ ಬಾರಿ ಪ್ರಶಸ್ತಿ ಜಯಿಸುವ ನಿರೀಕ್ಷೆಯಲ್ಲಿದ್ದ ತ್ರೀಸಾ ಜೋಲಿ ಮತ್ತು ಗಾಯತ್ರಿ ಗೋಪಿಚಂದ್ ಜೋಡಿ ಮಹಿಳಾ ಡಬಲ್ಸ್ ವಿಭಾಗದ ಫೈನಲ್ನಲ್ಲಿ ಎಡವಿದರೆ, ತನ್ವಿ ಶರ್ಮ ಮಹಿಳಾ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಸುತ್ತಿನಲ್ಲಿ ನಿರಾಸೆ ಅನುಭವಿಸಿದರು.
ಅಗ್ರ ಶ್ರೇಯಾಂಕಿತ ತ್ರೀಸಾ-ಗಾಯತ್ರಿ ಜೋಡಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ 4ನೇ ಶ್ರೇಯಾಂಕಿತ ಇಂಡೋನೇಷ್ಯಾದ ಇಸಿಯಾನಾ ಸೈಹಿರ ಮಿದಾ ಮತ್ತು ರಿಂಜನಿ ಕ್ವಿನ್ನರ ನಸ್ಟಿನ್ ಜೋಡಿಯ ವಿರುದ್ಧ 24-22, 12-21, 19-21 ಗೇಮ್ಗಳಿಂದ ಮುಗ್ಗರಿಸಿತು. ಕಳೆದ 2 ಆವೃತ್ತಿಗಳಲ್ಲಿ ಚಾಂಪಿಯನ್ಗಳಾದ ತ್ರೀಸಾ-ಗಾಯತ್ರಿ ಮೊದಲ ಗೇಮ್ನಲ್ಲಿ ರೋಚಕ ಗೆಲುವು ಸಾಧಿಸಿದರೂ, ನಂತರದ 2 ಗೇಮ್ಗಳಲ್ಲಿ ಲಯ ತಪ್ಪಿದರು. ನಿರ್ಣಾಯಕ ಗೇಮ್ನಲ್ಲಿ ತ್ರೀಸಾ-ಗಾಯತ್ರಿ ಬಹುತೇಕ ನಿಯಂತ್ರಣ ಸಾಧಿಸಿದ್ದರು. ಆದರೆ ಕೊನೇ ಹಂತದಲ್ಲಿ ಎದುರಾಳಿಯಿಂದ ತಿರುಗೇಟು ಎದುರಿಸಿದರು.
ತನ್ವಿ ಶರ್ಮಗೂ ನಿರಾಸೆ
ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಅತಿ ಕಿರಿಯ ಆಟಗಾರ್ತಿ ಎನಿಸುವ ತವಕದಲ್ಲಿದ್ದ 17 ವರ್ಷದ ತನ್ವಿ ಶರ್ಮ ಕೂಡ ಫೈನಲ್ನಲ್ಲಿ ರನ್ನರ್ಅಪ್ ಸ್ಥಾನಕ್ಕೆ ತೃಪ್ತಿಪಟ್ಟರು. 2ನೇ ಶ್ರೇಯಾಂಕಿತೆ ತನ್ವಿ ಶರ್ಮ ಪ್ರಶಸ್ತಿ ಕಾದಾಟದಲ್ಲಿ 4ನೇ ಶ್ರೇಯಾಂಕಿತೆ ಥಾಯ್ಲೆಂಡ್ನ ಸುಪನಿದ ಕೇಟ್ತೊಂಗ್ ವಿರುದ್ಧ 21-11, 12-21, 15-21 ಗೇಮ್ಗಳಿಂದ ಪರಾಭವಗೊಂಡರು. ಮೊದಲ ಗೇಮ್ ಗೆದ್ದು ಉತ್ತಮ ಆರಂಭವನ್ನೇ ಕಂಡಿದ್ದ ತನ್ವಿ, ನಂತರ ತಿರುಗೇಟು ಎದುರಿಸಿದರು. ಹಾಲಿ ಋತುವಿನಲ್ಲಿ ತೈಪೆ ಓಪನ್ ಸೂಪರ್-300 ಪ್ರಶಸ್ತಿ ಗೆದ್ದು ಇತಿಹಾಸ ಬರೆದಿದ್ದ ಪಂಜಾಬ್ನ ತನ್ವಿ, ಕೊನೇ 2 ಗೇಮ್ಗಳಲ್ಲಿ ನಿರೀಕ್ಷಿತ ನಿರ್ವಹಣೆ ತೋರಲು ವಿಫಲರಾದರು. ತನ್ವಿ ಇದಕ್ಕೆ ಮುನ್ನ ಸೆಮೀಸ್ನಲ್ಲಿ ದೇಶಬಾಂಧವೆ ಉನ್ನತಿ ಹೂಡಾ ವಿರುದ್ಧ ಜಯಿಸಿದ್ದರು. ಪಿವಿ ಸಿಂಧು (2017, 2022, 2024) ಮತ್ತು ಸೈನಾ ನೆಹ್ವಾಲ್ (2009, 2014, 2015) ಬಳಿಕ ಈ ಟೂರ್ನಿಯ ಸಿಂಗಲ್ಸ್ನಲ್ಲಿ ಪ್ರಶಸ್ತಿ ಗೆದ್ದ ಭಾರತದ ಮೂರನೇ ಮಹಿಳೆ ಎನಿಸುವ ಸಾಧನೆಯಿಂದಲೂ ತನ್ವಿ ವಂಚಿತರಾದರು.
ಅಗ್ರ 20ರೊಳಗೆ ತನ್ವಿ ಎಂಟ್ರಿ
ಸಯ್ಯದ್ ಮೋದಿ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ತನ್ವಿ ಶರ್ಮ ಪ್ರಶಸ್ತಿ ಗೆಲ್ಲದಿದ್ದರೂ, ಫೈನಲ್ಗೇರಿದ ಸಾಧನೆಗಾಗಿ ಈ ವಾರ ವಿಶ್ವ ರ್ಯಾಂಕಿಂಗ್ನ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಅಗ್ರ 20ರೊಳಗೆ ಪ್ರವೇಶಿಸುವುದು ಖಚಿತಗೊಂಡಿದೆ. ಅವರು ಟೂರ್ನಿಗೆ ಮುನ್ನ 21ನೇ ರ್ಯಾಂಕ್ನಲ್ಲಿದ್ದರು. ಪಿವಿ ಸಿಂಧು ಬಳಿಕ ಟೀನೇಜ್ನಲ್ಲೇ ಅಗ್ರ 20ರೊಳಗೆ ಪ್ರವೇಶಿಸಿದ ಭಾರತದ 2ನೇ ಆಟಗಾರ್ತಿ ಎಂಬ ಹೆಗ್ಗಳಿಕೆ ತನ್ವಿ ಅವರದಾಗಿದೆ.