

ಲಖನೌ: ಆತಿಥೇಯ ಭಾರತದ ತ್ರೀಸಾ ಜೋಲಿ-ಗಾಯತ್ರಿ ಗೋಪಿಚಂದ್ ಮತ್ತು ತನ್ವಿ ಶರ್ಮ ಅವರು ಸಯ್ಯದ್ ಮೋದಿ ಇಂಡಿಯಾ ಅಂತಾರಾಷ್ಟ್ರೀಯ ಸೂಪರ್-300 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ರಮವಾಗಿ ಮಹಿಳೆಯರ ಡಬಲ್ಸ್ ಮತ್ತು ಸಿಂಗಲ್ಸ್ ವಿಭಾಗದಲ್ಲಿ ಫೈನಲ್ಗೇರಿದ್ದಾರೆ. ಇದರೊಂದಿಗೆ ಭಾರತಕ್ಕೆ ಭಾನುವಾರ ಅವಳಿ ಪ್ರಶಸ್ತಿ ಒಲಿಯುವ ನಿರೀಕ್ಷೆ ಮೂಡಿದೆ.
ಹ್ಯಾಟ್ರಿಕ್ ಪ್ರಶಸ್ತಿ ನಿರೀಕ್ಷೆಯಲ್ಲಿರುವ ಅಗ್ರ ಶ್ರೇಯಾಂಕಿತ ತ್ರೀಸಾ-ಗಾಯತ್ರಿ ಜೋಡಿ ಶನಿವಾರ ನಡೆದ ಸೆಮಿೈನಲ್ ಪಂದ್ಯದಲ್ಲಿ 3ನೇ ಶ್ರೇಯಾಂಕಿತ ಯೂಕ್ರೇನ್ನ ಪೊಲಿನಾ ಬುಹ್ರೋವಾ ಮತ್ತು ಯೆಹಿನಿಯಾ ಕಂಟೆಮೈರ್ ಜೋಡಿಯನ್ನು 13-21, 21-10, 21-12 ಗೇಮ್ಗಳಿಂದ ಪರಾಭವಗೊಳಿಸಿತು. ಈ ಮೂಲಕ ತ್ರೀಸಾ&ಗಾಯತ್ರಿ ಸತತ 3ನೇ ಬಾರಿ ಟೂರ್ನಿಯ ಫೈನಲ್ಗೇರಿದ್ದು, 4ನೇ ಶ್ರೇಯಾಂಕಿತ ಇಂಡೋನೇಷ್ಯಾದ ಇಸ್ಯಾನಾ ಸೈಹಿರಾ ಮಿದಾ ಮತ್ತು ರಿಂಜನಿ ಕೆವಿನ್ನರ ನಸ್ಟಿನ್ ವಿರುದ್ಧ ಪ್ರಶಸ್ತಿಗಾಗಿ ಸೆಣಸಲಿದ್ದಾರೆ.
ಮಿಶ್ರ ಡಬಲ್ಸ್ ಸೆಮಿಫೈನಲ್ನಲ್ಲಿ ಭಾರತದ ಸಾತ್ವಿಕ್ ರೆಡ್ಡಿ ಕನಪುರಂ ಮತ್ತು ರೆಶಿಕಾ ಉದಯಸೂರರ್ಯನ್ ಜೋಡಿ ನಿರಾಸೆ ಅನುಭವಿಸಿತು. ಸಾತ್ವಿಕ್-ರೆಶಿಕಾ ಜೋಡಿ ಮಲೇಷ್ಯಾದ ವೀ ಯೀ ಹೆರ್ನ್-ವನೀ ಗೋಬಿ ಜೋಡಿಯ ಎದುರು 17-21, 18-21ರಿಂದ ಪರಾಭವಗೊಂಡಿತು.
ಪ್ರಶಸ್ತಿ ಸನಿಹ ತನ್ವಿ ಶರ್ಮ
2ನೇ ಶ್ರೇಯಾಂಕಿತೆ ತನ್ವಿ ಶರ್ಮ ಸೆಮಿಫೈನಲ್ನಲ್ಲಿ ದೇಶಬಾಂಧವೆ ಹಾಗೂ 3ನೇ ಶ್ರೇಯಾಂಕಿತೆ ಉನ್ನತಿ ಹೂಡಾ ವಿರುದ್ಧ 11-21, 21-10, 21-13 ಗೇಮ್ಗಳಿಂದ ಗೆಲುವು ಸಾಧಿಸಿದರು. 17 ವರ್ಷದ ತನ್ವಿ ಈಗ ಟೂರ್ನಿಯ ಅತಿ ಕಿರಿಯ ಚಾಂಪಿಯನ್ ಎನಿಸಿಸುವ ಅವಕಾಶ ಹೊಂದಿದ್ದಾರೆ. ಆಲ್ ಇಂಡಿಯನ್ ಉಪಾಂತ್ಯ ಕಾದಾಟದಲ್ಲಿ ತನ್ವಿ ಮೊದಲ ಗೇಮ್ ಸೋತರೂ, ನಂತರದ 2 ಗೇಮ್ಗಳಲ್ಲಿ 19 ವರ್ಷದ ಉನ್ನತಿಗೆ ತಿರುಗೇಟು ನೀಡಿದರು. ಪಂಜಾಬ್ನ ಹೋಶಿಯಾರ್ಪುರದ ತನ್ವಿ ಫೈನಲ್ನಲ್ಲಿ 4ನೇ ಶ್ರೇಯಾಂಕಿತೆ ಥಾಯ್ಲೆಂಡ್ನ ಸುಪನಿದ ಕಟೆಥೊಂಗ್ ವಿರುದ್ಧ ಸೆಣಸಲಿದ್ದಾರೆ. ಸುಪನಿದ ಸೆಮೀಸ್ನಲ್ಲಿ ಅಗ್ರ ಶ್ರೇಯಾಂಕಿತೆ ಜಪಾನ್ನ ರಿಕೊ ಗುಂಜಿಗೆ 21-16, 20-22, 21-10ರಿಂದ ಆಘಾತಕಾರಿ ಸೋಲುಣಿಸಿದರು.