

ಅಬುಧಾಬಿ: ಪ್ಲೇ-ಆಫ್ ಹಂತಕ್ಕೇರಲು ಕೂದಲೆಳೆ ಅವಕಾಶ ಹೊಂದಿರುವ ರಾಜಸ್ಥಾನ ರಾಯಲ್ಸ್ ಹಾಗೂ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡಗಳು ಎದುರಾಗಲಿವೆ. ಶೇಖ್ ಜಯೇದ್ ಸ್ಟೇಡಿಯಂನಲ್ಲಿ ನಡೆಯಲಿರುವ ಕದನ ರಾಯಲ್ಸ್ ಪಾಲಿಗೆ ಮಹತ್ವ ಪಡೆದಿದೆ. ಹಿಂದಿನ ಪಂದ್ಯದಲ್ಲಿ ಸನ್ರೈಸರ್ಸ್ ಎದುರು 8 ವಿಕೆಟ್ಗಳಿಂದ ಹೀನಾಯವಾಗಿ ಸೋಲು ಕಂಡಿರುವ ರಾಜಸ್ಥಾನ ತಂಡ ಪುಟಿದೇಳಬೇಕಿದೆ. ಮತ್ತೊಂದೆಡೆ, ಸಿಎಸ್ಕೆ ತಂಡವನ್ನು 10 ವಿಕೆಟ್ಗಳಿಂದ ಮಣಿಸಿ ಪ್ಲೇ-ಆಫ್ ಹಂತವನ್ನು ಬಹುತೇಕ ಖಾತ್ರಿಪಡಿಸಿಕೊಂಡಿರುವ ಮುಂಬೈ ಸುಲಭ ಜಯದ ನಿರೀಕ್ಷೆಯಲ್ಲಿದೆ. ಮೊದಲ ಮುಖಾಮುಖಿಯಲ್ಲಿ ಮುಂಬೈ 57 ರನ್ಗಳಿಂದ ಜಯ ದಾಖಲಿಸಿತ್ತು.
ಒತ್ತಡದಲ್ಲಿ ರಾಜಸ್ಥಾನ ರಾಯಲ್ಸ್:
ಪ್ರಮುಖರ ವೈಫಲ್ಯವೇ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ನಾಯಕ ಸ್ಟೀವನ್ ಸ್ಮಿತ್ 11 ಪಂದ್ಯಗಳಿಂದ ಕೇವಲ 265 ರನ್ಗಳಿಸಿದ್ದರೆ, ಬೆನ್ಸ್ಟೋಕ್ಸ್ (110ರನ್), ಸಂಜು ಸ್ಯಾಮ್ಸನ್ (272), ಜೋಸ್ ಬಟ್ಲರ್ (271) ದೊಡ್ಡ ಮೊತ್ತ ಸಿಡಿಸಲು ವಿಲರಾಗುತ್ತಿದ್ದಾರೆ. ಆರಂಭಿಕನಾಗಿ ಬಡ್ತಿ ನೀಡಿದರೂ ಕನ್ನಡಿಗ ರಾಬಿನ್ ಉತ್ತಪ್ಪ ನಿರ್ವಹಣೆ ನೆಲಕಚ್ಚಿದೆ. ಆಲ್ರೌಂಡರ್ ರಾಹುಲ್ ತೆವಾಟಿಯಾ (224ರನ್, 7 ವಿಕೆಟ್) ತಕ್ಕಮಟ್ಟಿಗೆ ಯಶಕಾಣುತ್ತಿದ್ದಾರೆ. ಇನ್ನು ಬೌಲಿಂಗ್ ವಿಭಾಗದಲ್ಲಿ ಜೋಫ್ರಾ ಆರ್ಚರ್ (15 ವಿಕೆಟ್) ಹೊರತುಪಡಿಸಿ ಉಳಿದ ಬೌಲರ್ಗಳಿಂದ ತಂಡಕ್ಕೆ ಸಾಥ್ ಸಿಗುತ್ತಿಲ್ಲ. ಯುವ ವೇಗಿ ಕಾರ್ತಿಕ್ ತ್ಯಾಗಿ ಸಿಕ್ಕ ಅವಕಾಶ ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಮುಂಬೈ ಎದುರು ಗೆದ್ದರಷ್ಟೇ ಪ್ಲೇ-ಆಫ್ ಹಂತಕ್ಕೇರುವ ಹೋರಾಟ ಜೀವಂತವಾಗಿರಲಿದೆ. ಒಂದು ವೇಳೆ ಸೋತರೆ ಟೂರ್ನಿಯಿಂದ 2ನೇ ತಂಡವಾಗಿ ಹೊರಬೀಳಲಿದೆ.
ಆತ್ಮವಿಶ್ವಾಸದಲ್ಲಿ ಮುಂಬೈ
ಮುಂಬೈ ಇಂಡಿಯನ್ಸ್ ತಂಡಕ್ಕೆ ಮಧ್ಯಮ ಕ್ರಮಾಂಕವೇ ದೊಡ್ಡ ಶಕ್ತಿಯಾಗಿದೆ. ಸೂರ್ಯಕುಮಾರ್ ಯಾದವ್ (243ರನ್), ಹಾರ್ದಿಕ್ ಪಾಂಡ್ಯ (164), ಕೈರಾನ್ ಪೊಲ್ಲಾರ್ಡ್ (208) ಒಳಗೊಂಡ ಮಧ್ಯಮ ಕ್ರಮಾಂಕ ಅಗತ್ಯವಿದ್ದಲ್ಲಿ ತಂಡಕ್ಕೆ ಸಾಥ್ ನೀಡುತ್ತಿದೆ. ಪಾಂಡ್ಯ ಸಹೋದರರು ಹಾಗೂ ಪೊಲ್ಲಾರ್ಡ್ ಎದುರಾಳಿ ತಂಡಕ್ಕೆ ನಡುಕಹುಟ್ಟಿಸಬಲ್ಲರು. ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬುಮ್ರಾ ಜೋಡಿಯೇ ಇದುವರೆಗೂ 33 ವಿಕೆಟ್ ಹಂಚಿಕೊಂಡಿದೆ. ಸ್ಪಿನ್ ವಿಭಾಗದಲ್ಲಿ ರಾಹುಲ್ ಚಹರ್ (13ವಿಕೆಟ್) ಹಾಗೂ ಕೃನಾಲ್ ಪಾಂಡ್ಯ (5 ವಿಕೆಟ್) ಜೋಡಿ ತಕ್ಕಮಟ್ಟಿಗೆ ಯಶಕಂಡಿದೆ.
ಟೀಮ್ ನ್ಯೂಸ್
ರಾಜಸ್ಥಾನ ರಾಯಲ್ಸ್
ಸತತ ವೈಫಲ್ಯ ಅನುಭವಿಸುತ್ತಿರುವ ರಾಬಿನ್ ಉತ್ತಪ್ಪ ಬದಲಿಗೆ ಮನನ್ ವೋಹ್ರಾ ಆಯ್ಕೆ ಪರಿಗಣಿಸಬಹುದು. ಕಾರ್ತಿಕ್ ತ್ಯಾಗಿ ಬದಲಿಗೆ ವರುಣ್ ಆರನ್, ರಿಯಾನ್ ಪರಾಗ್ ಬದಲಿಗೆ ಮಹಿಪಾಲ್ ಲೊಮ್ರೊರ್ ತಂಡಕ್ಕೆ ವಾಪಸಾಗಬಹುದು.
ಸಂಭಾವ್ಯ ತಂಡ:ರಾಬಿನ್ ಉತ್ತಪ್ಪ/ಮನನ್ ವೋಹ್ರಾ, ಬೆನ್ ಸ್ಟೋಕ್ಸ್, ಸಂಜು ಸ್ಯಾಮ್ಸನ್ (ವಿಕೀ), ಜೋಸ್ ಬಟ್ಲರ್, ಸ್ಟೀವನ್ ಸ್ಮಿತ್ (ನಾಯಕ), ರಿಯಾನ್ ಪರಾಗ್/ಮಹಿಪಾಲ್, ರಾಹುಲ್ ತೆವಾಟಿಯಾ, ಆರ್ಚರ್, ಶ್ರೇಯಸ್ ಗೋಪಾಲ್, ಅಂಕಿತ್ ರಜಪೂತ್, ಕಾರ್ತಿಕ್ ತ್ಯಾಗಿ/ವರುಣ್ ಆರನ್
ಕಳೆದ ಪಂದ್ಯ: ಸನ್ರೈಸರ್ಸ್ ಎದುರು 8 ವಿಕೆಟ್ ಸೋಲು
ಮುಂಬೈ ಇಂಡಿಯನ್ಸ್
ಗಾಯದ ಸಮಸ್ಯೆಯಿಂದ ಸಿಎಸ್ಕೆ ವಿರುದ್ಧ ಹೊರಗುಳಿದಿದ್ದ ರೋಹಿತ್ ಶರ್ಮ ತಂಡಕ್ಕೆ ವಾಪಸಾಗಲಿದ್ದಾರೆ. ಅವರೇ ತಂಡ ಮುನ್ನಡೆಸಲಿದ್ದಾರೆ. ರೋಹಿತ್ ಆಗಮನದಿಂದಾಗಿ ಸೌರವ್ ತಿವಾರಿ ಹೊರಗುಳಿಯಲಿದ್ದಾರೆ. ಜೇಮ್ಸ್ ಪ್ಯಾಟಿನ್ಸನ್, ಕೌಲ್ಟನ್ ನಥಾನ್ ನಿಲ್ ಬದಲಿಗೆ ತಂಡಕ್ಕೆ ವಾಪಸಾಗಬಹುದು.
ಸಂಭಾವ್ಯ ತಂಡ: ಕ್ವಿಂಟನ್ ಡಿ ಕಾಕ್ (ವಿಕೀ), ರೋಹಿತ್ ಶರ್ಮ (ನಾಯಕ), ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಕೈರಾನ್ ಪೊಲ್ಲಾರ್ಡ್, ಕೃನಾಲ್ ಪಾಂಡ್ಯ, ನಥಾನ್ ಕೌಲ್ಟರ್ ನಿಲ್/ಜೇಮ್ಸ್ ಪ್ಯಾಟಿನ್ಸನ್, ರಾಹುಲ್ ಚಹರ್, ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬುಮ್ರಾ
ಕಳೆದ ಪಂದ್ಯ: ಸಿಎಸ್ಕೆ ಎದುರು 10 ವಿಕೆಟ್ ಜಯ
ಪಂದ್ಯ ಆರಂಭ : ರಾತ್ರಿ: 7.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ಮುಖಾಮುಖಿ: 21, ರಾಜಸ್ಥಾನ: 10, ಮುಂಬೈ: 11.