ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ: ಕರ್ನಾಟಕ ಗೆಲುವಿನ ನಿರ್ಗಮನ

ಎರಡು ಬಾರಿಯ ಚಾಂಪಿಯನ್ ಕರ್ನಾಟಕ ತಂಡ ದೇಶೀಯ ಟಿ20 ಟೂರ್ನಿ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಗೆಲುವಿನೊಂದಿಗೆ ನಿರ್ಗಮನ ಕಂಡಿದೆ. ಶ್ರೀಶ ಆಚಾರ್ (24ಕ್ಕೆ 4) ಹಾಗೂ ವಿದ್ವತ್ ಕಾವೇರಪ್ಪ (28ಕ್ಕೆ 4) ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಬರೋಡ ತಂಡ ಎಲೀಟ್ ಎ ಗುಂಪಿನ ತನ್ನ ಕೊನೇ ಪಂದ್ಯದಲ್ಲಿ ಕರ್ನಾಟಕ ಎದುರು 8 ವಿಕೆಟ್‌ಗಳ ಸೋಲುಂಡಿತು. ಇದರೊಂದಿಗೆ ಆರ್.ಸ್ಮರಣ್ ಪಡೆ ಗುಂಪಿನ 4ನೇ ಸ್ಥಾನಿಯಾಗಿ ಅಭಿಯಾನ ಮುಗಿಸಿದರೆ, ಬರೋಡ ಹಾಗೂ ರಾಜಸ್ಥಾನ (ತಲಾ 20 ಅಂಕ) ಅಗ್ರ 2 ತಂಡಗಳಾಗಿ ಸೂಪರ್ ಲೀಗ್‌ಗೆ ಮುನ್ನಡೆದವು.
ಶ್ರೀಶ ಆಚಾರ್, ವಿದ್ವತ್ ಕಾವೇರಪ್ಪ, ರಿತೇಶ್ ಭಟ್ಕಳ್, ಅಭಿಲಾಷ್ ಶೆಟ್ಟಿ
ಶ್ರೀಶ ಆಚಾರ್, ವಿದ್ವತ್ ಕಾವೇರಪ್ಪ, ರಿತೇಶ್ ಭಟ್ಕಳ್, ಅಭಿಲಾಷ್ ಶೆಟ್ಟಿಏಜೆನ್ಸಿ
Published on: 

ಮುಂಬೈ: ಎರಡು ಬಾರಿಯ ಚಾಂಪಿಯನ್ ಕರ್ನಾಟಕ ತಂಡ ದೇಶೀಯ ಟಿ20 ಟೂರ್ನಿ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಗೆಲುವಿನೊಂದಿಗೆ ನಿರ್ಗಮನ ಕಂಡಿದೆ. ಶ್ರೀಶ ಆಚಾರ್ (24ಕ್ಕೆ 4) ಹಾಗೂ ವಿದ್ವತ್ ಕಾವೇರಪ್ಪ (28ಕ್ಕೆ 4) ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಬರೋಡ ತಂಡ ಎಲೀಟ್ ಎ ಗುಂಪಿನ ತನ್ನ ಕೊನೇ ಪಂದ್ಯದಲ್ಲಿ ಕರ್ನಾಟಕ ಎದುರು 8 ವಿಕೆಟ್‌ಗಳ ಸೋಲುಂಡಿತು. ಇದರೊಂದಿಗೆ ಆರ್.ಸ್ಮರಣ್ ಪಡೆ ಗುಂಪಿನ 4ನೇ ಸ್ಥಾನಿಯಾಗಿ ಅಭಿಯಾನ ಮುಗಿಸಿದರೆ, ಬರೋಡ ಹಾಗೂ ರಾಜಸ್ಥಾನ (ತಲಾ 20 ಅಂಕ) ಅಗ್ರ 2 ತಂಡಗಳಾಗಿ ಸೂಪರ್ ಲೀಗ್‌ಗೆ ಮುನ್ನಡೆದವು.

ಬಿಕೆಸಿ ಶರದ್ ಪವಾರ್ ಕ್ರಿಕೆಟ್ ಅಕಾಡೆಮಿಯಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಬರೋಡ ತಂಡ, ಶ್ರೀಶ ಮತ್ತು ವಿದ್ವತ್ ದಾಳಿಗೆ ನಲುಗಿ ಭರ್ತಿ 20 ಓವರ್‌ಗಳಲ್ಲಿ 118 ರನ್‌ಗಳಿಗೆ ಆಲೌಟ್ ಆಯಿತು. ಪ್ರತಿಯಾಗಿ ರೋಹನ್ ಪಾಟೀಲ್ (48) ಹಾಗೂ ಕೆಎಲ್ ಶ್ರೀಜಿತ್ (33) ಒದಗಿಸಿದ ಆರಂಭದ ನೆರವಿನಿಂದ 16.1 ಓವರ್‌ಗಳಲ್ಲಿ 2 ವಿಕೆಟ್‌ಗೆ 120 ರನ್‌ಗಳಿಸಿದ ಕರ್ನಾಟಕ ಸುಲಭ ಗೆಲುವು ಒಲಿಸಿಕೊಂಡಿತು. ಕರ್ನಾಟಕ ತಂಡ ಇನ್ನು ಡಿ. 14ರಂದು ಆರಂಭವಾಗಲಿರುವ ದೇಶೀಯ ಏಕದಿನ ಟೂರ್ನಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಕಣಕ್ಕಿಳಿಯಲಿದೆ.

ಬರೋಡ: 20 ಓವರ್‌ಗಳಲ್ಲಿ 119 (ಅಮಿತ್ 7, ಶಿವಾಲಿಕ್ 8, ಶಾಶ್ವತ್ 31, ದೀಪಕ್ 3, ಜಿತೇಶ್ 10, ಧ್ರುವ್ ಪಟೇಲ್ 33, ರಾಜ್ ಲಿಂಬಾನಿ 17, ಶ್ರೀಶ ಆಚಾರ್ 24ಕ್ಕೆ 4, ವಿದ್ವತ್ 28ಕ್ಕೆ 4). ಕರ್ನಾಟಕ: 16.1 ಓವರ್‌ಗಳಲ್ಲಿ 2 ವಿಕೆಟ್‌ಗೆ 120 (ರೋಹನ್ ಪಾಟೀಲ್ 48, ಕೆಎಲ್ ಶ್ರೀಜಿತ್ 33, ಕರುಣ್ ನಾಯರ್ 30*, ಆರ್.ಸ್ಮರಣ್ 6*, ರಾಜ್ ಲಿಂಬಾನಿ 14ಕ್ಕೆ 2). ಪಂದ್ಯಶ್ರೇಷ್ಠ: ವಿದ್ವತ್ ಕಾವೇರಪ್ಪ

4. 2018-19, 2019-20ರಲ್ಲಿ ಸತತವಾಗಿ ಪ್ರಶಸ್ತಿ ಜಯಿಸಿದ್ದ ಕರ್ನಾಟಕ ತಂಡ ಇದೀಗ ಸತತ 4ನೇ ವರ್ಷ ನಾಕೌಟ್ ಹಂತಕ್ಕೇರದೆ ಗುಂಪು ಹಂತದಲ್ಲೇ ನಿರ್ಗಮನ ಕಂಡಿದೆ. 2022ರಲ್ಲಿ ಕೊನೆಯದಾಗಿ ಕ್ವಾರ್ಟರ್‌ಫೈನಲ್‌ಗೇರಿತ್ತು.

ಕರ್ನಾಟಕಕ್ಕೆ ಮುಂದಿನ ಟೂರ್ನಿ

ವಿಜಯ್ ಹಜಾರೆ ಟ್ರೋಫಿ

ಯಾವಾಗ: ಡಿಸೆಂಬರ್ 14

ಎದುರಾಳಿ: ತ್ರಿಪುರ

ಬೆಳಗ್ಗೆ: 9.00