ಆಸೀಸ್​ ಪ್ರವಾಸಕ್ಕೆ ಬುಮ್ರಾ ಟೀಮ್​ ಇಂಡಿಯಾ ನಾಯಕರಾಗಲಿ ಎಂದ ಸುನೀಲ್​ ಗಾವಸ್ಕರ್​!

web bum
Published on

ನವದೆಹಲಿ: ಭಾರತ ತಂಡದ ನಾಯಕ ರೋಹಿತ್​ ಶರ್ಮ ಆಸ್ಟ್ರೆಲಿಯಾ ಪ್ರವಾಸದ ಮೊದಲ ಟೆಸ್ಟ್​ ಪಂದ್ಯಕ್ಕೆ ಗೈರಾಗುವುದಾದರೆ, ಉಪನಾಯಕ ಜಸ್​ಪ್ರೀತ್​ ಬುಮ್ರಾ ಅವರಿಗೇ ಇಡೀ ಸರಣಿಯ ನಾಯಕತ್ವ ವಹಿಸುವುದು ಉತ್ತಮ. ರೋಹಿತ್​ ನಂತರ ಭಾರತ ತಂಡಕ್ಕೆ ಮರಳಿದಾಗ ಸರಣಿಯ ಇತರ ಪಂದ್ಯಗಳಲ್ಲಿ ಸಾಮಾನ್ಯ ಆಟಗಾರನಾಗಿ ಆಡಲಿ ಎಂದು ಮಾಜಿ ನಾಯಕ ಸುನೀಲ್​ ಗಾವಸ್ಕರ್​ ಅಭಿಪ್ರಾಯಪಟ್ಟಿದ್ದಾರೆ.

ಬಾರ್ಡರ್​-ಗಾವಸ್ಕರ್​ ಟ್ರೋಫಿ ಟೆಸ್ಟ್​ ಸರಣಿ ನವೆಂಬರ್​ 22ರಂದು ಪರ್ತ್​ನಲ್ಲಿ ಶುರುವಾಗಲಿದೆ. ರೋಹಿತ್​ ಪತ್ನಿ ರಿತಿಕಾ 2ನೇ ಮಗುವಿಗೆ ಜನ್ಮ ನೀಡುವ ನಿರೀೆಯಲ್ಲಿ ಮೊದಲ ಟೆಸ್ಟ್​ ತಪ್ಪಿಸಿಕೊಳ್ಳುವ ನಿರೀಕ್ಷೆ ಇದೆ. ಹೀಗಾಗಿ ಮೊದಲ ಟೆಸ್ಟ್​ನಲ್ಲಿ ಬುಮ್ರಾ ನಾಯಕತ್ವ ನಿರ್ವಹಿಸುವುದು ಬಹುತೇಕ ಖಚಿತವೆನಿಸಿದೆ.

ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ ಫೈನಲ್​ಗೇರಲು ಭಾರತ, ಆಸೀಸ್​ ಪ್ರವಾಸದ 5 ಪಂದ್ಯಗಳ ಸರಣಿಯಲ್ಲಿ 4-0 ಅಂತರದಿಂದ ಗೆಲ್ಲಬೇಕಾಗಿದೆ. ಆದರೆ ಭಾರತ ತಂಡ ಈಗ ಡಬ್ಲ್ಯುಟಿಸಿ ಫೈನಲ್​ ಬಗ್ಗೆ ಯೋಚಿಸುವುದಕ್ಕಿಂತ ಆಸ್ಟ್ರೆಲಿಯಾದಲ್ಲಿ ಟೆಸ್ಟ್​ ಸರಣಿ ಜಯಿಸುವತ್ತ ಮಾತ್ರ ಗಮನಹರಿಸುವುದು ಉತ್ತಮ. ಅದು 1-0, 2-0, 3-0, 3-1, 2-1 ಎಷ್ಟೇ ಅಂತರದಿಂದ ಆಗಿರಲಿ. ಇದರಿಂದ ಭಾರತೀಯ ಕ್ರಿಕೆಟ್​ ಪ್ರೇಮಿಗಳೂ ಮತ್ತೆ ಸಂಭ್ರಮಿಸಲಿದ್ದಾರೆ ಎಂದು ಗಾವಸ್ಕರ್​ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net