

ಬೆಂಗಳೂರು: ನಗರದ ಸರ್ ಎಂ. ವಿಶ್ವೇಶ್ವರಯ್ಯ ವಿದ್ಯಾನಿಕೇತನ ಶಾಲೆಯ ಆಶ್ರಯದಲ್ಲಿ ನವೆಂಬರ್ 27 ಮತ್ತು 28ರಂದು ಶಾಲಾ ಆವರಣದಲ್ಲಿ ನಡೆದ ರಾಜ್ಯಮಟ್ಟದ ಅಂತರ ಶಾಲಾ ವಾಲಿಬಾಲ್ ಪಂದ್ಯಾವಳಿ ಯಶಸ್ವಿಯಾಗಿ ಸಂಪನ್ನಗೊಂಡಿತು.
14 ವಯೋಮಿತಿ ಬಾಲಕರ, 14 ವಯೋಮಿತಿ ಬಾಲಕಿಯರ ಹಾಗೂ 17 ವಯೋಮಿತಿ ಬಾಲಕಿಯರ ವಿಭಾಗಗಳಲ್ಲಿ ನಡೆದ ಈ ಪಂದ್ಯಾವಳಿಯಲ್ಲಿ ರಾಜ್ಯದ ವಿವಿಧ ಶಾಲೆಗಳ ಸುಮಾರು 20 ತಂಡಗಳು ಭಾಗವಹಿಸಿದ್ದವು.
17 ವಯೋಮಿತಿ ಬಾಲಕಿಯರ ವಿಭಾಗದಲ್ಲಿ ಆರ್.ಆರ್. ನಗರದ ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಶಾಲಾ ತಂಡ ಆತಿಥೇಯ ಸರ್ ಎಂ. ವಿಶ್ವೇಶ್ವರಯ್ಯ ವಿದ್ಯಾನಿಕೇತನ ತಂಡವನ್ನು 2-1 ಸೆಟ್ಗಳಿಂದ (25-18, 15-25, 17-15) ಸೋಲಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
ಈ ವಿಭಾಗದಲ್ಲಿ ನ್ಯಾಷನಲ್ ಹಿಲ್ ವ್ಯೂ ಶಾಲೆಯ ಪ್ರಾಂಜಲ್ ಅವರು ಪಂದ್ಯಾವಳಿಯ ಅತ್ಯುತ್ತಮ ಆಟಗಾರ್ತಿ ಪ್ರಶಸ್ತಿ ಪಡೆದರೆ, ಶ್ರೇಯಾ ಎ. ಅತ್ಯುತ್ತಮ ಸೆಟ್ಟರ್ ಹಾಗೂ ಶ್ರೇಯಾ ಎಚ್. ಅತ್ಯುತ್ತಮ ಭರವಸೆಯ ಆಟಗಾರ್ತಿ ಪ್ರಶಸ್ತಿಗೆ ಭಾಜನರಾದರು. ಆತಿಥೇಯ ಶಾಲೆಯ ಸಿಂಧು ಅವರು ಅತ್ಯುತ್ತಮ ಸ್ಪೈಕರ್ ಪ್ರಶಸ್ತಿ ಪಡೆದರು.
14 ವಯೋಮಿತಿ ಬಾಲಕಿಯರ ವಿಭಾಗದಲ್ಲಿ ವಿದ್ಯಾ ಸೌಧ ಪಬ್ಲಿಕ್ ಶಾಲೆಯ ತಂಡವು ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಶಾಲೆಯನ್ನು 2-1 ಸೆಟ್ಗಳಿಂದ (10-15, 15-11, 15-10) ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು.
ವಿದ್ಯಾ ಸೌಧ ಶಾಲೆಯ ಲಹರಿ ಅವರು ಅತ್ಯುತ್ತಮ ಆಟಗಾರ್ತಿ ಹಾಗೂ ವಿನೇಶಾ ಅತ್ಯುತ್ತಮ ಸ್ಪೈಕರ್ ಪ್ರಶಸ್ತಿ ಪಡೆದರು. ನ್ಯಾಷನಲ್ ಹಿಲ್ ವ್ಯೂ ಶಾಲೆಯ ಅಥರ್ವೀ ಅತ್ಯುತ್ತಮ ಭರವಸೆಯ ಆಟಗಾರ್ತಿ ಹಾಗೂ ಕಂಗನಾ ಅತ್ಯುತ್ತಮ ಲಿಬೆರೊ ಪ್ರಶಸ್ತಿಗೆ ಭಾಜನರಾದರು.
14 ವಯೋಮಿತಿ ಬಾಲಕರ ವಿಭಾಗದಲ್ಲಿ ಜುಬಿಲಿ ಶಾಲೆಯ ತಂಡವು ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಶಾಲೆಯನ್ನು 2-0 ಸೆಟ್ಗಳಿಂದ (15-08, 15-11) ಸೋಲಿಸಿ ಪ್ರಶಸ್ತಿಯನ್ನು ಗೆದ್ದುಕೊಂಡಿತು.
ಜುಬಿಲಿ ಶಾಲೆಯ ಅಭಿನವ್ ಅವರು ಪಂದ್ಯಾವಳಿಯ ಅತ್ಯುತ್ತಮ ಆಟಗಾರ ಪ್ರಶಸ್ತಿ ಪಡೆದರು. ನ್ಯಾಷನಲ್ ಹಿಲ್ ವ್ಯೂ ಶಾಲೆಯ ಜೀವನ್ ಅತ್ಯುತ್ತಮ ಸ್ಪೈಕರ್ ಹಾಗೂ ಅಕ್ಷಯ್ ಅತ್ಯುತ್ತಮ ಭರವಸೆಯ ಆಟಗಾರ ಪ್ರಶಸ್ತಿ ಪಡೆದರು. ವಿದ್ಯಾ ಸೌಧ ಪಬ್ಲಿಕ್ ಶಾಲೆಯ ನಮಿತ್ ಅತ್ಯುತ್ತಮ ಸೆಟ್ಟರ್ ಪ್ರಶಸ್ತಿಗೆ ಭಾಜನರಾದರು.
ಎರಡು ದಿನಗಳ ಕಾಲ ನಡೆದ ಈ ಪಂದ್ಯಾವಳಿಯು ವಿದ್ಯಾರ್ಥಿಗಳ ಕ್ರೀಡಾ ಪ್ರತಿಭೆ, ತಂಡದ ಒಗ್ಗಟ್ಟು ಹಾಗೂ ಕ್ರೀಡಾಸ್ಫೂರ್ತಿಯನ್ನು ಪ್ರದರ್ಶಿಸಲು ಉತ್ತಮ ವೇದಿಕೆಯಾಯಿತು. ಪಂದ್ಯಾವಳಿಯಲ್ಲಿ ಭಾಗವಹಿಸಿದ ಎಲ್ಲ ತಂಡಗಳು, ವಿಜೇತರು ಹಾಗೂ ವೈಯಕ್ತಿಕ ಪ್ರಶಸ್ತಿ ಪುರಸ್ಕೃತರನ್ನು ಆಯೋಜಕರು ಅಭಿನಂದಿಸಿದ್ದಾರೆ.