ಶುಭಾರಂಭ ಕಂಡ ಪಿವಿ ಸಿಂಧು: ಭಾರತದ ಧ್ವಜಧಾರಿಗೆ ಸುಲಭ ಜಯ

New-Project-2-8
Published on

ಪ್ಯಾರಿಸ್: ಮೂರನೇ ಒಲಿಂಪಿಕ್ಸ್ ಪದಕದ ಮೇಲೆ ಕಣ್ಣಿಟ್ಟಿರುವ ಭಾರತದ ಸ್ಟಾರ್ ಷಟ್ಲರ್ ಪಿವಿ ಸಿಂಧು ಬ್ಯಾಡ್ಮಿಂಟನ್ ಸ್ಪರ್ಧೆಯ ಮಹಿಳೆಯರ ಸಿಂಗಲ್ಸ್ ವಿಭಾಗದ ಗುಂಪು ಹಂತದ ಮೊದಲ ಪಂದ್ಯದಲ್ಲಿ ಸುಲಭ ಗೆಲುವಿನೊಂದಿಗೆ ಅಭಿಯಾನ ಆರಂಭಿಸಿದರು. ಶುಕ್ರವಾರ ಉದ್ಘಾಟನಾ ಸಮಾರಂಭದಲ್ಲಿ ಭಾರತ ತಂಡದ ಧ್ವಜಧಾರಿಯಾಗಿದ್ದ ಪಿವಿ ಸಿಂಧು, ಒಂದು ದಿನದ ಬಿಡುವಿನ ಬಳಿಕ ಕಣಕ್ಕಿಳಿದು 29 ನಿಮಿಷಗಳಲ್ಲೇ ಗೆಲುವು ಒಲಿಸಿಕೊಂಡರು.ಅವಳಿ ಒಲಿಂಪಿಕ್ಸ್ ಪದಕ ವಿಜೇತೆ ಸಿಂಧು ಭಾನುವಾರ ನಡೆದ ಪಂದ್ಯದಲ್ಲಿ ಮಾಲ್ದೀವ್ಸ್‌ನ ಫಾತಿಮತ್ ಅಬ್ದುಲ್ ರಜಾಕ್ ವಿರುದ್ಧ 21-9, 21-6 ನೇರ ಗೇಮ್‌ಗಳ ಜಯ ಸಾಧಿಸಿದರು.

ವಿಶ್ವ ನಂ.13 ಸಿಂಧು ವಿಶ್ವ ನಂ.111 ಫಾತಿತಿಮತ್ ಎದುರು ಏಕಪಕ್ಷೀಯ ಮೇಲುಗೈ ಸಾಧಿಸಿದರು. 2016ರ ರಿಯೋ ಗೇಮ್ಸ್ ಬೆಳ್ಳಿ ಪದಕ ಹಾಗೂ ಟೋಕಿಯೊದಲ್ಲಿ ನಡೆದ ಕಂಚಿನ ಪದಕ ಗೆದ್ದಿರುವ 10ನೇ ಶ್ರೇಯಾಂಕಿತೆ ಸಿಂಧು, ಬುಧವಾರ ನಡೆಯಲಿರುವ ಗುಂಪಿನ ತನ್ನ 2ನೇ ಪಂದ್ಯದಲ್ಲಿ ವಿಶ್ವ ನಂ.75 ಎಸ್ಟೋನಿಯಾದ ಕ್ರಿಸ್ಟಿನ್ ಕುಬಾ ಅವರನ್ನು ಎದುರಿಸಲಿದ್ದಾರೆ.

ಮಹಿಳಾ ಡಬಲ್ಸ್‌ನಲ್ಲಿ ಕನ್ನಡತಿ ಅಶ್ವಿನಿ ಪೊನ್ನಪ್ಪ-ತನಿಷಾ ಕ್ರಾಸ್ಟೋ ಜೋಡಿ ಗುಂಪಿನ ಮೊದಲ ಪಂದ್ಯದಲ್ಲಿ ನಿರಾಸೆ ಅನುಭವಿಸಿದೆ. ಶನಿವಾರ ರಾತ್ರಿ ನಡೆದ ಪಂದ್ಯದಲ್ಲಿ ಅಶ್ವಿನಿ-ತನಿಷಾ 18-21, 10-21 ನೇರ ಗೇಮ್‌ಗಳಿಂದ ದಕ್ಷಿಣ ಕೊರಿಯಾದ ಕಿಮ್ ಸೊ ಯೆಯೊಂಗ್-ಕಾಂಗ್ ಹೀ ಯೋಂಗ್ ಎದುರು ಮುಗ್ಗರಿಸಿದರು. ಸಿ ಗುಂಪಿನಲ್ಲಿ ಸ್ಥಾನ ಪಡೆದಿರುವ ಅಶ್ವಿನಿ-ತನಿಷಾ 44 ನಿಮಿಷದಲ್ಲಿ ಸೋಲು ಕಂಡಿತು. ಸೋಮವಾರ ತನ್ನ ಎರಡನೇ ಪಂದ್ಯದಲ್ಲಿ 4ನೇ ಶ್ರೇಯಾಂಕಿತ ಜಪಾನ್‌ನ ಚಿಹಾರು ಶಿಡಾ-ನಮಿ ಮಟ್ಸುಯೊಮ ಸವಾಲು ಎದುರಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net