

ಐಚಿ-ನಗೋಯಾ: ಹಿಮಾಚಲ ಪ್ರದೇಶದ ಸಾವನ್ ಬರ್ವಾಲ್ ಏಷ್ಯಾಡ್ ಮ್ಯಾರಥಾನ್ ಸ್ಪರ್ಧೆಯಲ್ಲಿ ಭಾರತಕ್ಕೆ ಅನಿರೀಕ್ಷಿತ ರಜತ ಪದಕ ಗೆದ್ದುಕೊಟ್ಟು ಹೊಸ ಇತಿಹಾಸ ಬರೆದಿದ್ದಾರೆ. ಅವರು ಕಳೆದ 44 ವರ್ಷಗಳಲ್ಲಿ ಏಷ್ಯಾಡ್ ಮ್ಯಾರಥಾನ್ನಲ್ಲಿ ಪದಕ ಗೆದ್ದ ಮೊದಲ ಭಾರತೀಯರೆನಿಸಿದ್ದಾರೆ.
ಭಾರತೀಯ ಸೇನೆಯ ಸಾವನ್ 42.195 ಕಿಮೀ ದೂರವನ್ನು 2 ಗಂಟೆ, 11 ನಿಮಿಷ, 37 ಸೆಕೆಂಡ್ಗಳಲ್ಲಿ ಮುಗಿಸಿ 2ನೇ ಸ್ಥಾನ ಪಡೆದರು. ಈ ಮೂಲಕ ಅವರು ತನ್ನದೇ ಹೆಸರಿನಲ್ಲಿದ್ದ ರಾಷ್ಟ್ರೀಯ ದಾಖಲೆ ಮುರಿದರು. ಜಪಾನ್ನ ಇಚಿಟಕ ಯಮಶಿಟ (2 ಗಂಟೆ, 10 ನಿಮಿಷ, 49 ಸೆಕೆಂಡ್) ಚಿನ್ನ ಗೆದ್ದುಕೊಂಡರು. 28 ವರ್ಷದ ಸಾವನ್ ಅನಿರೀತ ಸಾಧನೆಯಿಂದ ಚೀನಾದ ಪೆಯು ಫೆಂಗ್ (2:12:13) ಕಂಚಿಗೆ ತೃಪ್ತಿಪಟ್ಟರು.
1982ರಲ್ಲಿ ನವದೆಹಲಿಯಲ್ಲಿ ನಡೆದ ಏಷ್ಯಾಡ್ನಲ್ಲಿ ಕೊನೆಯದಾಗಿ ಹೊಸುರು ಕುಕ್ಕಪ್ಪ ಸೀದರನ್ ಕೊನೆಯದಾಗಿ ಮ್ಯಾರಥಾನ್ನಲ್ಲಿ ಪದಕ (ಕಂಚು) ಗೆದ್ದಿದ್ದರು. ಅದಕ್ಕೆ ಮುನ್ನ 1951ರಲ್ಲೂ ನವದೆಹಲಿಯಲ್ಲೇ ನಡೆದ ಚೊಚ್ಚಲ ಆವೃತ್ತಿಯಲ್ಲಿ ಛೋಟಾ ಸಿಂಗ್ ಚಿನ್ನ ಮತ್ತು ಸೂರತ್ ಸಿಂಗ್ ಕಂಚು ಗೆದ್ದಿದ್ದರು. ಸಾವನ್ ಏಷ್ಯಾಡ್ ಮ್ಯಾರಥಾನ್ನಲ್ಲಿ ಪದಕ ಗೆದ್ದ 4ನೇ ಭಾರತೀಯ ಮತ್ತು ವಿದೇಶಿ ನೆಲದ ಆವೃತ್ತಿಯಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಎನಿಸಿದರು.
ಸ್ಪರ್ಧೆಯಲ್ಲಿದ್ದ ಮತ್ತೋರ್ವ ಭಾರತೀಯ ಕಾರ್ತಿಕ್ ಕರ್ಕೇರ (2:22:41) 17ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಈ ಹಿಂದೆ 5 ಸಾವಿರ, 10 ಸಾವಿರ ಮೀ. ಮತ್ತು ಹಾಫ್ ಮ್ಯಾರಥಾನ್ನಲ್ಲಿ ಓಡುತ್ತಿದ್ದ ಸಾವನ್, ಹಾಲಿ ವರ್ಷವಷ್ಟೇ ಮ್ಯಾರಥಾನ್ ಓಡಲಾರಂಭಿಸಿದ್ದರು. ಕಳೆದ ಏಪ್ರಿಲ್ನಲ್ಲಿ ಅವರು ಶಿವನಾಥ್ ಸಿಂಗ್ ಹೆಸರಿನಲ್ಲಿದ್ದ 48 ವರ್ಷ ಹಳೆಯ ರಾಷ್ಟ್ರೀಯ ದಾಖಲೆ ಮುರಿದಿದ್ದರು.