ರಾಹುಲ್​ರನ್ನು ಕೈಬಿಟ್ಟಿದ್ದಲ್ಲದೆ ನಾಲಿಗೆ ಹರಿಬಿಟ್ಟ ಸಂಜೀವ್​ ಗೋಯೆಂಕಾ ವಿರುದ್ಧ ನೆಟ್ಟಿಗರ ಆಕ್ರೋಶ! KL Rahul

KL Rahul
Published on

KL Rahul : ಐಪಿಎಲ್​ 2025ರ ರಿಟೇನ್​ ಪಟ್ಟಿಯಲ್ಲಿ ಸ್ಟಾರ್ ಕ್ರಿಕೆಟಿಗ ಕೆಎಲ್ ರಾಹುಲ್ ಅವರನ್ನು ಲಖನೌ ಸೂಪರ್​ಜೈಂಟ್ಸ್​ (ಎಲ್​ಎಸ್​ಜಿ) ಕೈಬಿಟ್ಟಿರುವುದು ಗೊತ್ತೇ ಇದೆ. ಎಲ್​ಎಸ್​ಜಿಯ ಈ ನಿರ್ಧಾರವು ಇದೀಗ ಭಾರಿ ಟ್ರೋಲ್​ಗೆ ಗುರಿಯಾಗಿದೆ. ನಿಕೋಲಸ್ ಪೂರನ್, ರವಿ ಬಿಷ್ಣೋಯ್, ಮಯಾಂಕ್ ಯಾದವ್ ಮತ್ತು ಮೊಹ್ಸಿನ್ ಖಾನ್ ಅವರನ್ನು ಮಾತ್ರ ಎಲ್​ಎಸ್​ಜಿ ಉಳಿಸಿಕೊಂಡಿದೆ.

ಇದೆಲ್ಲದರ ನಡುವೆ ಎಲ್​ಎಸ್​ಜಿ ಮಾಲೀಕ ಸಂಜೀವ್​ ಗೋಯೆಂಕಾ ಆಡಿರುವ ಮಾತುಗಳು ಇದೀದ ಕೆ.ಎಲ್​. ರಾಹುಲ್​ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ರಿಟೇನ್​ ಮಾಡುವ ಮುನ್ನ ಆಟಗಾರರ ಆಯ್ಕೆಯಲ್ಲಿ ನಾವು ಒಂದೇ ಒಂದು ವಿಷಯವನ್ನು ಮಾತ್ರ ಪರಿಗಣಿಸಿದ್ದೇವೆ. ಗೆಲ್ಲುವ ಗುರಿ ಹೊಂದಿರುವವರನ್ನು ಮಾತ್ರ ಆಯ್ಕೆ ಮಾಡಿದ್ದೇವೆ. ವೈಯಕ್ತಿಕ ಗುರಿಗಳಿಂದ ದೂರವಾಗಿ ತಂಡದ ಯಶಸ್ಸಿಗಾಗಿ ಶ್ರಮಿಸುವವರಿಗೆ ಮಾತ್ರ ಆದ್ಯತೆ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

ನಮ್ಮ ಮೊದಲ ರಿಟೇನ್​ ನಿರ್ಧಾರವನ್ನು ಕೇವಲ ಎರಡೇ ನಿಮಿಷಗಳಲ್ಲಿ ತೆಗೆದುಕೊಳ್ಳಲಾಗಿದೆ ಎಂದು ಎಲ್​ಎಸ್​ಜಿ ಮಾಲೀಕ ಸಂಜೀವ್ ಗೋಯೆಂಕಾ ಹೇಳಿದ್ದಾರೆ. ನಾವು ಅನ್‌ಕ್ಯಾಪ್ಡ್ ಆಟಗಾರರಾದ ಮೊಹ್ಸಿನ್ ಖಾನ್ ಮತ್ತು ಆಯುಷ್ ಬದೋನಿ ಅವರನ್ನು ತಂಡದೊಂದಿಗೆ ಮುಂದುವರಿಸುತ್ತಿದ್ದೇವೆ. ಈ ಸಂಪೂರ್ಣ ಪ್ರಕ್ರಿಯೆಯನ್ನು ಜಹೀರ್ ಖಾನ್ ಮತ್ತು ಜಸ್ಟಿನ್ ಲ್ಯಾಂಗರ್ ಜಂಟಿಯಾಗಿ ಮೇಲ್ವಿಚಾರಣೆ ಮಾಡಿದರು ಎಂದು ಗೋಯೆಂಕಾ ಹೇಳಿದರು.

ಕಳೆದ ಋತುವಿನಲ್ಲಿ ನಮಗೆ ಮೂವರು ಭಾರತೀಯ ಬೌಲರ್‌ಗಳ ಅಗತ್ಯವಿತ್ತು. ಪೂರನ್ ಆಯ್ಕೆ ವಿಚಾರದಲ್ಲಿ ಎರಡನೇ ಯೋಚನೆಯೇ ಇರಲಿಲ್ಲ. 6 ಮತ್ತು 7ನೇ ಸ್ಥಾನದಲ್ಲಿರುವ ಆಯುಷ್ ನಮಗೆ ತುಂಬಾ ಉಪಯುಕ್ತವಾಗಿದ್ದಾರೆ ಎಂದು ಗೋಯೆಂಕಾ ಹೇಳಿದ್ದಾರೆ. ಆದರೆ, ವೈಯಕ್ತಿಕ ಗುರಿಗಳ ಬಗ್ಗೆ ಸಂಜೀವ್ ಗೋಯೆಂಕಾ ಮಾಡಿರುವ ಕಾಮೆಂಟ್​ ಇದೀಗ ಕ್ರೀಡಾಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಈ ಹೇಳಿಕೆಯನ್ನು ಕೆ.ಎಲ್​. ರಾಹುಲ್​ ಅವರನ್ನು ಗುರಿಯಾಗಿಸಿಕೊಂಡು ಆಡಿದ್ದಾರೆ ಎಂದು ಅಭಿಮಾನಿಗಳು ಆಕ್ರೋಶಗೊಂಡಿದ್ದು, ಗೋಯೆಂಕಾ ವಿರುದ್ಧ ಕಿಡಿಕಾರುತ್ತಿದ್ದಾರೆ.

ಕೆ.ಎಲ್. ರಾಹುಲ್ ಅವರು ತಂಡಕ್ಕಾಗಿ ನಿಸ್ವಾರ್ಥವಾಗಿ ಆಡುವ ಆಟಗಾರ. ಅವರನ್ನು ಕೈ ಬಿಟ್ಟಿದ್ದಲ್ಲದೆ, ಈ ರೀತಿಯ ಮಾತುಗಳನ್ನು ಆಡುವುದು ಸರಿಯಲ್ಲ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡುತ್ತಿದ್ದಾರೆ. ಆಟಗಾರರೊಂದಿಗೆ ಮಾತನಾಡುವ ರೀತಿಯನ್ನು ಬದಲಾಯಿಸಬೇಕು ಎಂದು ಮತ್ತೊಬ್ಬ ನೆಟ್ಟಿಗ ಟೀಕೆ ಮಾಡಿದ್ದಾರೆ.

ಅಂದಹಾಗೆ ಕಳೆದ ಐಪಿಎಲ್​ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಲಖನೌ ಸೂಪರ್‌ಜೈಂಟ್ಸ್ (ಎಲ್​ಎಸ್​ಜಿ) ನಡುವೆ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಎಲ್​ಎಸ್​ಜಿ ಹೀನಾಯವಾಗಿ ಸೋತಿದ್ದರಿಂದ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಮೈದಾನದಲ್ಲೇ ನಾಯಕ ಕೆ.ಎಲ್. ರಾಹುಲ್ ಮೇಲೆ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ಕೋಚ್ ಜಸ್ಟಿನ್ ಲ್ಯಾಂಗರ್ ಜತೆಯೂ ಇದೇ ರೀತಿಯ ವರ್ತನೆ ತೋರಿದರು. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ವೈರಲ್ ಆಗಿ, ಗೋಯೆಂಕಾ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಬಳಿಕ ಗೋಯೆಂಕಾ ಅವರು ಕ್ಷಮೆಯಾಚಿಸಿದ್ದರು. ಆದರೆ, ಕೆ.ಎಲ್​. ರಾಹುಲ್​ ಮೇಲಿನ ಕೋಪ ಹಾಗೇ ಇದೆ ಎಂಬುದಕ್ಕೆ ಇದೀಗ ಗೋಯೆಂಕಾ ಅವರು ಆಡಿರುವ ಮಾತುಗಳು ಸಾಕ್ಷಿಯಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net