

ಐಚಿ-ನಗೋಯಾ: ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾರತ ಗುರುವಾರ ಮಿಶ್ರಫಲ ಎದುರಿಸಿದೆ. ಪರ್ವೀನ್ ಮಹಿಳೆಯರ 65 ಕೆಜಿ ವಿಭಾಗದಲ್ಲಿ ವಾಕ್ಓವರ್ ಮೂಲಕ ಕ್ವಾರ್ಟರ್ಫೈನಲ್ಗೇರಿದ್ದರೆ, ಸಾಕ್ಷಿ ಚೌಧರಿ ಮತ್ತು ಸುಮಿತ್ 16ರ ಘಟ್ಟದಲ್ಲೇ ಸೋತು ಹೊರಬಿದ್ದಿದ್ದಾರೆ.
ಕಳೆದ ಆವೃತ್ತಿಯ ಏಷ್ಯಾಡ್ನಲ್ಲಿ ಕಂಚಿನ ಪದಕ ಗೆದ್ದಿದ್ದರೂ, ಬಳಿಕ ಉದ್ದೀಪನ ಪರೀಕ್ಷೆಯಲ್ಲಿ ಸಿಕ್ಕಿಬಿದ್ದು ಪದಕ ಕಳೆದುಕೊಂಡಿದ್ದ ಪರ್ವೀನ್ ಹೂಡಾ, ಇನ್ನೊಂದು ಪಂದ್ಯ ಗೆದ್ದರೆ ಪದಕ ಖಚಿತಪಡಿಸಿಕೊಳ್ಳುವ ಅವಕಾಶ ಹೊಂದಿದ್ದಾರೆ. ಅವರ ವಿರುದ್ಧ ಆಡಬೇಕಾಗಿದ್ದ ತಜಿಕಿಸ್ತಾನದ ಮಲಿಕಾ ನೊಜಿಮೋವಾ ಗಾಯದಿಂದಾಗಿ ಹಿಂದೆ ಸರಿದರು.
ಕಾಮನ್ವೆಲ್ತ್ ಗೇಮ್ಸ್ ಸ್ವರ್ಣ ಪದಕ ವಿಜೇತೆ ಸಾಕ್ಷಿ ಚೌಧರಿ ಮಹಿಳೆಯರ 51 ಕೆಜಿ ವಿಭಾಗದಲ್ಲಿ ಕಜಾಕ್ಸ್ತಾನದ ಅಲುವಾ ಬಲ್ಕಿಬೆಕೋವಾ ವಿರುದ್ಧ 2-3ರಿಂದ ಶರಣಾದರು. ಹರಿಯಾಣದ ಸುಮಿತ್ ಪುರುಷರ 70 ಕೆಜಿ ವಿಭಾಗದ ಪ್ರಿ ಕ್ವಾರ್ಟರ್ಫೈನಲ್ನಲ್ಲಿ ಇರಾಕ್ನ ಅಲ್ ಸರೇ ಅಲಿ ಖಾಸಿಮ್ ಎದುರಿನ ಪಂದ್ಯದ ವೇಳೆ ಗಾಯಗೊಂಡು ಹೊರಬಿದ್ದರು. ಮೊದಲ 2 ಸುತ್ತಿನಲ್ಲಿ ಮುನ್ನಡೆ ಸಾಧಿಸಿದ್ದ ಸುಮಿತ್, 3ನೇ ಸುತ್ತಿನ ವೇಳೆ ಪಂಚ್ ತಪ್ಪಿಸಲು ಯತ್ನಿಸುವಾಗ ಬಿದ್ದು ಮೊಣಕಾಲಿನ ಗಾಯಕ್ಕೊಳಗಾದರು. ಆಗ ಪಂದ್ಯ ಸ್ಥಗಿತಗೊಳಿಸಿದ ರೆಫ್ರಿ ಎದುರಾಳಿಯನ್ನು ವಿಜೇತ ಎಂದು ಘೋಷಿಸಿದರು.
ಪ್ರಣತಿ ನಾಯಕ್ 6ನೇ ಸ್ಥಾನಕ್ಕೆ ತೃಪ್ತಿ
ಏಷ್ಯಾಡ್ನಲ್ಲಿ ಸ್ಪರ್ಧಿಸಿದ ಭಾರತದ ಏಕಮಾತ್ರ ಜಿಮ್ನಾಸ್ಟ್ ಪ್ರಣತಿ ನಾಯಕ್ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್ ಸ್ಪರ್ಧೆಯ ಮಹಿಳೆಯರ ವಾಲ್ಟ್ ವಿಭಾಗದ ಫೈನಲ್ನಲ್ಲಿ 6ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಅಗ್ರ 8 ಜಿಮ್ನಾಸ್ಟ್ಗಳ ನಡುವೆ ಗುರುವಾರ ನಡೆದ ಸ್ಪರ್ಧೆಯಲ್ಲಿ 31 ವರ್ಷದ ಪ್ರಣತಿ ಮೊದಲ 2 ಸುತ್ತುಗಳಲ್ಲಿ ತಲಾ 12.900 ಅಂಕ ಗಳಿಸಿದರು. ಜತೆಗೆ 0.20 ಬೋನಸ್ ಅಂಕದೊಂದಿಗೆ ಒಟ್ಟು 13.100 ಅಂಕ ಗಳಿಸಿದರು. ಇದಕ್ಕೆ ಮುನ್ನ ಆಲ್ರೌಂಡ್ ವಿಭಾಗದಲ್ಲಿ 7ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದ ಅವರು, ವಾಲ್ಟ್ ವಿಭಾಗದಲ್ಲಿ ಮಾತ್ರ ಫೈನಲ್ಗೇರಿದ್ದರು.