ಚೊಚ್ಚಲ ಥಾಮಸ್​ ಕಪ್​ ಗೆದ್ದು ಹೊಸ ಇತಿಹಾಸ ಬರೆದ ಭಾರತದ ಬ್ಯಾಡ್ಮಿಂಟನ್​ ತಂಡ: ಪ್ರಧಾನಿ ಮೋದಿ ಮೆಚ್ಚುಗೆ

Badminton
Published on

ನವದೆಹಲಿ: ಇಂದು ಭಾರತೀಯ ಕ್ರೀಡಾಭಿಮಾನಿಗಳ ಪಾಲಿಗೆ ಅತ್ಯಂತ ಸ್ಮರಣೀಯ ಕ್ಷಣವಾಗಿದೆ. ಭಾರತರ ಪುರುಷರ ತಂಡವು ಇಂಡೋನೇಷ್ಯಾ ತಂಡವನ್ನು ಮಣಿಸಿ ಚೊಚ್ಚಲ ಥಾಮಸ್​ ಕಪ್​ ಗೆಲ್ಲುವ ಮೂಲಕ ಹೊಸ ಇತಿಹಾಸವನ್ನು ಬರೆದಿದೆ.

ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಆಂಥೋನಿ ಗಿಂಟಿಂಗ್ ಅವರನ್ನು 20 ವರ್ಷದ ಲಕ್ಷ್ಯಾ ಸೇನ್​ ಮಣಿಸುವ ಮೂಲಕ ನಾಕೌಟ್​ ಹಂತಗಳ ಬಳಿಕ ಭಾರತಕ್ಕೆ 1-0 ಮುನ್ನಡೆಯನ್ನು ತಂದುಕೊಟ್ಟರು. ಸೇನ್​ ಅವರು ಗಿಂಟಿಂಗ್ ವಿರುದ್ಧ 8-21, 21-17, 21-16 ಅಂತರದಲ್ಲಿ ಜಯಗಳಿಸಿದರು.

ಭಾರತದ ಡಬಲ್ಸ್​ ಜೋಡಿ ಸಾತ್ವಿಕ್​ ಸಾಯಿರಾಜ್​ ಮತ್ತು ಚಿರಾಗ್​ ಶೆಟ್ಟಿ ಅವರು ತಮ್ಮ ಎದುರಾಳಿ ಮೊಹಮ್ಮದ್ ಅಹ್ಸನ್ ಮತ್ತು ಕೆವಿನ್ ಸಂಜಯ ಸುಕಮುಲ್ಜೊ ಜೋಡಿಯನ್ನು 18-21, 23-21, 21-19 ಅಂತರದಲ್ಲಿ ಸೋಲಿಸುವ ಮೂಲಕ ಭಾರತಕ್ಕೆ 2-0 ಮುನ್ನಡೆಯನ್ನು ತಂದುಕೊಟ್ಟರು. ಕೊನೆಯಲ್ಲಿ ಕಿಡಂಬಿ ಶ್ರೀಕಾಂತ್, ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಜೊನಾಟನ್ ಕ್ರಿಸ್ಟಿಯನ್ನು ಅವರನ್ನು 21-15, 23-21ರಿಂದ ಸೋಲಿಸಿ ಸ್ಪರ್ಧೆಗೆ ಅಂತ್ಯ ಹಾಡುವ ಮೂಲಕ 3-0 ಅಂತರದಲ್ಲಿ ಥಾಮಸ್​ ಕಪ್​ ಅನ್ನು ಎತ್ತಿಹಿಡಿದರು.

ಪ್ರಧಾನಿ ಮೋದಿ ಮೆಚ್ಚುಗೆ

ಪ್ರಧಾನಿ ಮೋದಿ ಟ್ವೀಟ್​ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭಾರತ ಬ್ಯಾಡ್ಮಿಂಟನ್ ತಂಡ ಇತಿಹಾಸ ಬರೆದಿದೆ. ಥಾಮಸ್ ಕಪ್ ಗೆಲುವಿನಿಂದ ಇಡೀ ಭಾರತ ದೇಶವೇ ಸಂಭ್ರಮಿಸುತ್ತಿದೆ. ನಮ್ಮ ನಿಪುಣ ತಂಡಕ್ಕೆ ಅಭಿನಂದನೆಗಳು ಮತ್ತು ಅವರ ಮುಂದಿನ ಪ್ರಯತ್ನಗಳಿಗಾಗಿ ಅವರಿಗೆ ಶುಭಾಶಯಗಳನ್ನು ತಿಳಿಸುತ್ತೇನೆ. ಈ ಗೆಲುವು ಮುಂಬರುವ ಹಲವು ಕ್ರೀಡಾ ಪಟುಗಳಿಗೆ ಪ್ರೇರಣೆ ನೀಡಲಿದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net