ಕರ್ನಾಟಕ ಕ್ರಿಕೆಟ್ ತಂಡಕ್ಕೆ ಆರ್. ಸಮರ್ಥ್ ಸಾರಥ್ಯ

SAMARTHjpgA for web
Published on

ವಿಜಯವಾಣಿ ಸುದ್ದಿಜಾಲ, ಬೆಂಗಳೂರು

ಬಲಗೈ ಬ್ಯಾಟ್ಸ್‌ಮನ್ ಆರ್.ಸಮರ್ಥ್, ಮುಂಬರುವ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಗೆ ಕರ್ನಾಟಕ ತಂಡದ ನೂತನ ನಾಯಕನಾಗಿ ಆಯ್ಕೆಯಾಗಿದ್ದಾರೆ. ಸತತ ವೈಫಲ್ಯದಿಂದ ಬಳಲುತ್ತಿರುವ ಕರುಣ್ ನಾಯರ್ ಬದಲಿಗೆ ಅನುಭವಿ ಆರಂಭಿಕ ಬ್ಯಾಟ್ಸ್‌ಮನ್ ಆರ್.ಸಮರ್ಥ್ 22 ಸದಸ್ಯರ ರಾಜ್ಯ ತಂಡವನ್ನು ಮುನ್ನಡೆಸಲಿದ್ದಾರೆ. ಆದರೆ, ಕರುಣ್ ನಾಯರ್ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ಸಫಲರಾಗಿದ್ದಾರೆ. ಮೊಣಕೈ ನೋವಿನಿಂದ ಸಂಪೂರ್ಣ ಚೇತರಿಸಿಕೊಳ್ಳದ ಮನೀಷ್ ಪಾಂಡೆ ವಿಜಯ್ ಹಜಾರೆ ಟೂರ್ನಿಗೂ ಅಲಭ್ಯರಾಗಲಿದ್ದಾರೆ.

ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಉಪ ನಾಯಕನಾಗಿದ್ದ ಆಲ್ರೌಂಡರ್ ಪವನ್ ದೇಶಪಾಂಡೆ ಅವರನ್ನು ತಂಡದಿಂದ ಕೈಬಿಡಲಾಗಿದೆ. ಕರ್ನಾಟಕ ತಂಡ ಟೂರ್ನಿಯ ಹಾಲಿ ಚಾಂಪಿಯನ್ ಆಗಿದ್ದು, ಒಟ್ಟಾರೆ 4 ಬಾರಿ ಪ್ರಶಸ್ತಿ ಜಯಿಸಿದೆ. ಈ ಬಾರಿ ತಂಡದ ಉಪನಾಯಕನ ಹೆಸರು ಪ್ರಕಟಿಸಿಲ್ಲ.

ತಂಡ: ಆರ್. ಸಮರ್ಥ್ (ನಾಯಕ), ದೇವದತ್ ಪಡಿಕಲ್, ರೋಹನ್ ಕದಂ, ನಿಶ್ಚಲ್ ಡಿ, ಕರುಣ್ ನಾಯರ್, ಶ್ರೀಜಿತ್ ಕೆಎಲ್, ಶರತ್ ಬಿಆರ್ (ವಿಕೀ), ರಕ್ಷಿತ್ ಎಸ್ (ವಿಕೀ), ಅನಿರುದ್ಧ್ ಜೋಶಿ, ಸಿದ್ಧಾರ್ಥ್ ಕೆವಿ, ನಿಕಿನ್ ಜೋಸ್, ಶ್ರೇಯಸ್ ಗೋಪಾಲ್, ಕೆ.ಗೌತಮ್, ಸುಚಿತ್ ಜೆ, ಆದಿತ್ಯ ಸೋಮಣ್ಣ, ಶುಭಾಂಗ್ ಹೆಗ್ಡೆ, ಅಭಿಮನ್ಯು ಮಿಥುನ್, ಪ್ರಸಿದ್ಧ್ ಕೃಷ್ಣ, ರೋನಿತ್ ಮೋರೆ, ವೈಶಾಕ್ ವಿಜಯ್‌ಕುಮಾರ್, ಮನೋಜ್ ಬಾಂಡಗೆ, ದರ್ಶನ್ ಎಂಬಿ.

* ಕೆ.ಗೌತಮ್ ವಾಪಸ್

ನೆಟ್‌ಬೌಲರ್ ಆಗಿ ರಾಷ್ಟ್ರೀಯ ತಂಡದೊಂದಿಗಿರುವ ಆಲ್ರೌಂಡರ್ ಕೆ.ಗೌತಮ್‌ಗೆ ಸ್ಥಾನ ಕಲ್ಪಿಸಲಾಗಿದೆ. ಸದ್ಯ ಚೆನ್ನೈನಲ್ಲಿ ರಾಷ್ಟ್ರೀಯ ತಂಡದೊಂದಿಗೆ ಇರುವ ಕೆ.ಗೌತಮ್ ವಿಜಯ್ ಹಜಾರೆ ಟ್ರೋಫಿ ಆರಂಭಗೊಳ್ಳುವ ವೇಳೆಗೆ ರಾಜ್ಯ ತಂಡ ಕೂಡಿಕೊಳ್ಳಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net