ಮನ್ವಂತ್ ಮನಮೋಹಕ ಹೋರಾಟ: ಸೌರಾಷ್ಟ್ರಕ್ಕೆ ದಿಟ್ಟ ತಿರುಗೇಟು ನೀಡಿದ ಕರ್ನಾಟಕ

ಮೈಸೂರಿನ ಆಲ್ರೌಂಡರ್ ಎಲ್. ಮನ್ವಂತ್ ಕುಮಾರ್ (86* ರನ್, 124 ಎಸೆತ, 6 ಬೌಂಡರಿ, 5 ಸಿಕ್ಸರ್) ದಿಟ್ಟ ಬ್ಯಾಟಿಂಗ್ ನಿರ್ವಹಣೆಯಿಂದಾಗಿ ಆರಂಭಿಕ ಆಘಾತ ಹಾಗೂ ಮಧ್ಯಮ ಕ್ರಮಾಂಕದ ಕುಸಿತದಿಂದ ಚೇತರಿಸಿಕೊಂಡ ಎಂಟು ಬಾರಿಯ ಚಾಂಪಿಯನ್ ಕರ್ನಾಟಕ ತಂಡ ಪ್ರತಿಷ್ಠಿತ ರಣಜಿ ಟ್ರೋಫಿಯ ಎರಡನೇ ಸುತ್ತಿನಲ್ಲಿ ಪ್ರವಾಸಿ ಸೌರಾಷ್ಟ್ರ ತಂಡಕ್ಕೆ ತಿರುಗೇಟು ನೀಡಿದೆ.
ಎಲ್. ಮನ್ವಂತ್ ಕುಮಾರ್
ಎಲ್. ಮನ್ವಂತ್ ಕುಮಾರ್
Published on: 
ಕರ್ನಾಟಕ ಪರ 2ನೇ ಪಂದ್ಯವನ್ನಾಡುತ್ತಿರುವ ಮನ್ವಂತ್, ಅತ್ಯುತ್ತಮ ಹೊಡೆತಗಳ ಆಯ್ಕೆಯೊಂದಿಗೆ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದು, ತಂಡ ಸಂಕಷ್ಟದಲ್ಲಿದ್ದಾಗ ಅವರು ತೋರಿದ ದೃಢ ಆಟ, ಬದ್ಧತೆ ಶ್ಲಾಘನೀಯ. ಭವಿಷ್ಯ ಉಜ್ವಲವಾಗಿದೆ. ವಿನಯ್ ಕುಮಾರ್, ಕರ್ನಾಟಕ ತಂಡದ ಮುಖ್ಯ ಕೋಚ್

ಬೆಂಗಳೂರು: ಮೈಸೂರಿನ ಆಲ್ರೌಂಡರ್ ಎಲ್. ಮನ್ವಂತ್ ಕುಮಾರ್ (86* ರನ್, 124 ಎಸೆತ, 6 ಬೌಂಡರಿ, 5 ಸಿಕ್ಸರ್) ದಿಟ್ಟ ಬ್ಯಾಟಿಂಗ್ ನಿರ್ವಹಣೆಯಿಂದಾಗಿ ಆರಂಭಿಕ ಆಘಾತ ಹಾಗೂ ಮಧ್ಯಮ ಕ್ರಮಾಂಕದ ಕುಸಿತದಿಂದ ಚೇತರಿಸಿಕೊಂಡ ಎಂಟು ಬಾರಿಯ ಚಾಂಪಿಯನ್ ಕರ್ನಾಟಕ ತಂಡ ಪ್ರತಿಷ್ಠಿತ ರಣಜಿ ಟ್ರೋಫಿಯ ಎರಡನೇ ಸುತ್ತಿನಲ್ಲಿ ಪ್ರವಾಸಿ ಸೌರಾಷ್ಟ್ರ ತಂಡಕ್ಕೆ ತಿರುಗೇಟು ನೀಡಿದೆ. ಇದರೊಂದಿಗೆ ಶ್ರೇಯಸ್ ಗೋಪಾಲ್ ಬಳಗ ಮೊದಲ ಸರದಿಯಲ್ಲಿ ಪೈಪೋಟಿಯುತ ಮೊತ್ತ ದಾಖಲಿಸುವ ನಿರೀಕ್ಷೆ ಹರಡಿದೆ.

ಬೆಂಗಳೂರು ಹೊರವಲಯ ಆಲೂರಿನ ಕೆಎಸ್‌ಸಿಎ ಗ್ರೌಂಡ್‌ನಲ್ಲಿ ಬಿ ಗುಂಪಿನ ಪಂದ್ಯ ಭಾನುವಾರ ಮಳೆಯಿಂದಾಗಿ ನಿಗದಿತ ಸಮಯಕ್ಕಿಂತ ಅರ್ಧ ಗಂಟೆ ತಡವಾಗಿ ಶುರುವಾಯಿತು. ಟಾಸ್ ಗೆದ್ದ ಸೌರಾಷ್ಟ್ರ ಬೌಲಿಂಗ್ ಆಯ್ದುಕೊಂಡರೆ, 13 ರನ್‌ಗೆ 2 ವಿಕೆಟ್ ಕಳೆದುಕೊಂಡ ಕರ್ನಾಟಕಕ್ಕೆ ನಿರೀಕ್ಷಿತ ಆರಂಭ ಸಿಗಲಿಲ್ಲ. ನಂತರ ಕೆವಿ ಅನೀಶ್ (59 ರನ್, 96 ಎಸೆತ, 8 ಬೌಂಡರಿ) ಅರ್ಧಶತಕದ ಜತೆಗೆ ಮಾಜಿ ನಾಯಕ ಮಯಾಂಕ್ ಅರ್ಗವಾಲ್ (42) ಜತೆಯಾಟದಿಂದ ಸುಧಾರಿಸಿಕೊಂಡು ಭೋಜನಾ ವಿರಾಮಕ್ಕೆ 2 ವಿಕೆಟ್‌ಗೆ 91 ರನ್‌ಗಳಿಸಿತು. ವಿರಾಮದ ನಂತರ ಮತ್ತೆ ಕುಸಿತ ಕಂಡರೂ ಕರುಣ್ ನಾಯರ್ (46) ಚೇತರಿಕೆ ನೀಡಿದರು. ಬಳಿಕ 22 ವರ್ಷದ ಮನ್ವಂತ್ ಕುಮಾರ್ ಹಾಗೂ ಬಾಲಂಗೋಚಿ ಅಭಿಲಾಷ್ ಶೆಟ್ಟಿ (6*) ಜೋಡಿಯ ಜತೆಯಾಟದಿಂದ ಕರ್ನಾಟಕ ತಂಡ ದಿನದಂತ್ಯಕ್ಕೆ 86 ಓವರ್‌ಗಳಲ್ಲಿ 8 ವಿಕೆಟ್‌ಗೆ 281 ರನ್‌ಗಳ ಗೌರವಯುತ ಮೊತ್ತ ಕಲೆಹಾಕಿದೆ. ಮನ್ವಂತ್ ಹಾಗೂ ಅಭಿಲಾಷ್ ಚಹಾ ವಿರಾಮದ ನಂತರ ಮುರಿಯದ 9ನೇ ವಿಕೆಟ್‌ಗೆ 87 ರನ್‌ಗಳಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಕಳೆದ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದ ಮನ್ವಂತ್ ಕುಮಾರ್ ಎರಡನೇ ದಿನದಾಟದಲ್ಲಿ ತನ್ನ ಚೊಚ್ಚಲ ಶತಕ ಬಾರಿಸುವ ನಿರೀಕ್ಷೆ ಹರಡಿದೆ.

ಕರ್ನಾಟಕ: 86 ಓವರ್‌ಗಳಲ್ಲಿ 8 ವಿಕೆಟ್‌ಗೆ 281 (ರೋಹನ್ ಪಾಟೀಲ್ 6, ಮಯಾಂಕ್ ಅಗರ್ವಾಲ್ 42, ವೈಶಾಖ್ ವಿಜಯ್ ಕುಮಾರ್ 1, ಕೆವಿ ಅನೀಶ್ 59, ಕರುಣ್ 46, ಅನೀಶ್ವರ್ ಗೌತಮ್ 4, ಕೆಎಲ್ ಶ್ರೀಜಿತ್ 21, ಶ್ರೇಯಸ್ ಗೋಪಾಲ್ 3, ಮನ್ವಂತ್ 86*, ಅಭಿಲಾಷ್ ಶೆಟ್ಟಿ 6*, ಉನಾದ್ಕತ್ 51ಕ್ಕೆ 3, ಪಾರ್ಥ್ 73ಕ್ಕೆ 3, ಚೇತನ್ ಸಕರಿಯ 48ಕ್ಕೆ 2).

ಅನೀಶ್ವರ್, ರೋಹನ್ ಪದಾರ್ಪಣೆ

ಕರ್ನಾಟಕ ಪರ 25 ವರ್ಷದ ಎಡಗೈ ಬ್ಯಾಟರ್ ರೋಹನ್ ಪಾಟೀಲ್ ಹಾಗೂ 23 ವರ್ಷದ ಅನೀಶ್ವರ್ ಗೌತಮ್ ಕ್ರಮವಾಗಿ 321, 322ನೇ ಆಟಗಾರರಾಗಿ ರಣಜಿ ಟ್ರೋಫಿಗೆ ಪದಾರ್ಪಣೆ ಮಾಡಿದರು. ಅನುಭವಿ ಸ್ಪಿನ್ನರ್ ಶ್ರೇಯಸ್ ಗೋಪಾಲ್ ಜತೆಗೆ ವೇಗಿಗಳಾದ ವೈಶಾಖ್ ವಿಜಯಕುಮಾರ್, ವಿದ್ವತ್ ಕಾವೇರಪ್ಪ ಸಹ ಆಡುವ 11ರ ಬಳಗಕ್ಕೆ ಮರಳಿದರು. ರಿತೇಶ್ ಭಟ್ಕಳ್‌ರನ್ನು ಕೈಬಿಡಲಾಯಿತು.

ಅನೀಶ್-ಮನ್ವಂತ್ ಆಸರೆ

ಮಯಾಂಕ್ ಜತೆಯಾಗಿ ಇನಿಂಗ್ಸ್ ಆರಂಭಿಸಿದ ರೋಹನ್ ಪಾಟೀಲ್ (6) ಬೌಂಡರಿಯೊಂದಿಗೆ ರಣಜಿಯಲ್ಲಿ ತನ್ನ ಮೊದಲ ರನ್‌ಗಳಿಸಿದರೂ, 5ನೇ ಓವರ್‌ನಲ್ಲಿ ಉನಾದ್ಕತ್ ಎಸೆತದಲ್ಲಿ ಎಲ್‌ಬಿ ಆದರು. ನಂತರ ಕ್ರಮಾಂಕದಲ್ಲಿ ಅಚ್ಚರಿಯ ಬಡ್ತಿ ಪಡೆದ ವೈಶಾಖ್ ವಿಜಯ್‌ಕುಮಾರವ (1), ಚೇತನ್ ಸಕರಿಯ ಎಸೆತದಲ್ಲಿ ಬೌಲ್ಡ್ ಆದರು. ಆಗ, ಮಯಾಂಕ್ ಅಗರ್ವಾಲ್ ಜತೆಯಾದ ಕೆವಿ ಅನೀಶ್ ಮೂರನೇ ವಿಕೆಟ್‌ಗೆ 164 ಎಸೆತಗಳಲ್ಲಿ 98 ರನ್ ಗಳಿಸಿದರು. ತಾನೆದುರಿಸಿದ ಮೊದಲ 27 ಎಸೆತಗಳಲ್ಲಿ 3 ರನ್‌ಗಳಿಸಿದ್ದ ಅನೀಶ್ ನಂತರ ವೇಗವಾಗಿ ರನ್‌ಗಳಿಸಿದರು. ವಿರಾಮದ ನಂತರ 30 ರನ್ ಅಂತರದಲ್ಲಿ ಮಯಾಂಕ್, ಅನೀಶ್ ಜತೆಗೆ ಅನೀಶ್ವರ್ ಗೌತಮ್ (1) ವಿಕೆಟ್ ಕಬಳಿಸಿದ ಸೌರಾಷ್ಟ್ರ ಮೇಲುಗೈ ಸಾಧಿಸಿತು. ಕರುಣ್ ನಾಯರ್ ಹಾಗೂ ವಿಕೆಟ್ ಕೀಪರ್-ಬ್ಯಾಟರ್ ಕೆಎಲ್ ಶ್ರೀಜಿತ್ (21) ಆರನೇ ವಿಕೆಟ್‌ಗೆ 64 ಎಸೆತಗಳಲ್ಲಿ 43 ರನ್ ಸೇರಿಸಿದರು. ಶ್ರೇಯಸ್ ಗೋಪಾಲ್ (3) ಹೆಚ್ಚು ಸಮಯ ನಿಲ್ಲಲಿಲ್ಲ. ಆಗ, ಮನ್ವಂತ್ ಕುಮಾರ್ ಜತೆಯಾದ ಅಭಿಲಾಷ್ ಶೆಟ್ಟಿ ಸಮರ್ಥ ಬೆಂಬಲ ನೀಡಿದರು. 85 ಎಸೆತ ಎದುರಿಸಿದ ಅಭಿಲಾಷ್ ಒಂದೆಡೆ ವಿಕೆಟ್ ಕಾಯ್ದುಕೊಂಡರೆ, ಆಕ್ರಮಣಕಾರಿ ಬ್ಯಾಟಿಂಗ್ ನಡೆಸಿದ ಮನ್ವಂತ್ ಕುಮಾರ್ ಗೌರವಯುತ ಮೊತ್ತ ಪೇರಿಸಲು ನೆರವಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net