

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಆಲ್ರೌಂಡರ್ ಎಲ್. ಮನ್ವಂತ್ ಕುಮಾರ್ (135 ರನ್, 214 ಎಸೆತ, 11 ಬೌಂಡರಿ, 6 ಸಿಕ್ಸರ್) ಚೊಚ್ಚಲ ಶತಕದ ಸಾಹಸ ಮತ್ತು ವೇಗಿಗಳ ಬಿಗಿ ಬೌಲಿಂಗ್ ದಾಳಿಯ ಬಲದಿಂದ ಕರ್ನಾಟಕ ತಂಡ ಪ್ರತಿಷ್ಠಿತ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯ ತನ್ನ 2ನೇ ಲೀಗ್ ಪಂದ್ಯದಲ್ಲಿ ಪ್ರವಾಸಿ ಸೌರಾಷ್ಟ್ರ ವಿರುದ್ಧ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದೆ.
ಬೆಂಗಳೂರು ಹೊರವಲಯದ ಆಲೂರಿನ ಕೆಎಸ್ಸಿಎ ಗ್ರೌಂಡ್ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಸೋಮವಾರ 8 ವಿಕೆಟ್ಗೆ 281 ರನ್ಗಳಿಂದ ಎರಡನೇ ದಿನದಾಟ ಆರಂಭಿಸಿದ ಕರ್ನಾಟಕ ತಂಡ, ಮತ್ತೆ 61 ರನ್ ಸೇರಿಸಿ 111.3 ಓವರ್ಗಳಲ್ಲಿ 342 ರನ್ಗಳಿಗೆ ಆಲೌಟ್ ಆಯಿತು. ಪ್ರತಿಯಾಗಿ ಸೌರಾಷ್ಟ್ರ ತಂಡ ಉತ್ತಮ ಆರಂಭ ಕಂಡರೂ, ಬಳಿಕ ಕುಸಿತ ಅನುಭವಿಸಿ ದಿನದಂತ್ಯಕ್ಕೆ 53 ಓವರ್ಗಳಲ್ಲಿ 4 ವಿಕೆಟ್ಗೆ 164 ರನ್ ಗಳಿಸಿ ಸಂಕಷ್ಟದಲ್ಲಿದೆ. ಕರ್ನಾಟಕ ತಂಡ ಇನ್ನೂ 178 ರನ್ ಮುನ್ನಡೆಯಲ್ಲಿದೆ. ಅರ್ಪಿತ್ ವಸವಾಡ (25*) ಮತ್ತು ಪ್ರೇರಕ್ ಮಂಕಡ್ (13*) ಮುರಿಯದ 5ನೇ ವಿಕೆಟ್ಗೆ 82 ಎಸೆತಗಳಲ್ಲಿ 36 ರನ್ ಸೇರಿಸಿ 3ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಆರಂಭಿಕರಾದ ಹೆತ್ವಿಕ್ ಕೋಟಕ್ (46) ಮತ್ತು ಹಾರ್ವಿಕ್ ದೇಸಾಯಿ (77) ಮೊದಲ ವಿಕೆಟ್ಗೆ 175 ಎಸೆತಗಳಲ್ಲಿ 110 ರನ್ ಸೇರಿಸಿ ಕರ್ನಾಟಕಕ್ಕೆ ಸವಾಲೊಡ್ಡಿದರು. ಇನಿಂಗ್ಸ್ನ 30ನೇ ಓವರ್ನಲ್ಲಿ ಕೊನೆಗೂ ವೇಗಿ ವಿದ್ವತ್ ಕಾವೇರಪ್ಪ ಈ ಜತೆಯಾಟವನ್ನು ಬೇರ್ಪಡಿಸಿದರು. ಇದರ ಬೆನ್ನಲ್ಲೇ ಕರ್ನಾಟಕ ತಂಡ 18 ರನ್ ಅಂತರದಲ್ಲಿ 4 ವಿಕೆಟ್ ಕಬಳಿಸಿ ಮೇಲುಗೈ ಸಾಧಿಸಿತು. ಕರ್ನಾಟಕ ಇನಿಂಗ್ಸ್ಗೆ ಮರುಜೀವ ತುಂಬುವಲ್ಲಿ ಪ್ರಮುಖ ಪಾತ್ರ ವಹಿಸಿದ ವೇಗಿ ಅಭಿಲಾಷ್ ಶೆಟ್ಟಿ (26ಕ್ಕೆ 2) ಬಳಿಕ ಬೌಲಿಂಗ್ನಲ್ಲಿ ಮಿಂಚಿ, ಸತತ 2 ಓವರ್ಗಳಲ್ಲಿ ಚಿರಾಗ್ ಜಾನಿ (1) ಮತ್ತು ಜಯ್ ಗೋಯಿಲ್ (0) ವಿಕೆಟ್ ಕಬಳಿಸುವ ಮೂಲಕ ಸೌರಾಷ್ಟ್ರಕ್ಕೆ ಶಾಕ್ ನೀಡಿದರು. ಬಳಿಕ ಅರ್ಪಿತ್&ಪ್ರೇರಕ್ ಜೋಡಿ ಸೌರಾಷ್ಟ್ರಕ್ಕೆ ಆಸರೆಯಾಗಿ ನಿಂತಿತು.
ಮನ್ವಂತ್ ಚೊಚ್ಚಲ ಶತಕಕ್ಕೆ ಅಭಿಲಾಷ್ ಸಮರ್ಥ ಸಾಥ್
ಮನ್ವಂತ್ ಕುಮಾರ್ ಮತ್ತು ಅಭಿಲಾಷ್ ಶೆಟ್ಟಿ (14 ರನ್, 137 ಎಸೆತ, 1 ಬೌಂಡರಿ) ಜೋಡಿ 9ನೇ ವಿಕೆಟ್ಗೆ 346 ಎಸೆತಗಳಲ್ಲಿ 146 ರನ್ ಜತೆಯಾಟವಾಡುವ ಮೂಲಕ ಕರ್ನಾಟಕ ತಂಡದ ಇನಿಂಗ್ಸ್ನ ಚಿತ್ರಣವನ್ನೇ ಬದಲಾಯಿಸಿತು. ಈ ಮೂಲಕ ಕರ್ನಾಟಕ ತಂಡ ಪಂದ್ಯದಲ್ಲಿ ಹಿಡಿತ ಸಾಧಿಸಲು ನೆರವಾಯಿತು. ಮೈಸೂರಿನ 22 ವರ್ಷದ ಮನ್ವಂತ್ ಕುಮಾರ್ 9ನೇ ಕ್ರಮಾಂಕದಲ್ಲಿ ಕ್ರೀಸ್ಗೆ ಇಳಿದಾಗ ಕರ್ನಾಟಕ ತಂಡ 187 ರನ್ಗಳಿಗೆ 7 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟದಲ್ಲಿತ್ತು. ಬಳಿಕ ಸುಮಾರ 59 ಓವರ್ಗಳ ಕಾಲ ಕ್ರೀಸ್ನಲ್ಲಿ ಭದ್ರವಾಗಿ ನಿಂತ ಅವರು ರಾಜ್ಯದ ಇನಿಂಗ್ಸ್ಗೆ ಮರುಜೀವ ತುಂಬುವಲ್ಲಿ ಯಶಸ್ವಿಯಾದರು. ಅವರಿಗೆ ಬಾಲಂಗೋಚಿ ಅಭಿಲಾಷ್ ಶೆಟ್ಟಿ ಉತ್ತಮ ಬೆಂಬಲವನ್ನೇ ಒದಗಿಸಿದರು. 86 ರನ್ಗಳಿಂದ ದಿನದಾಟ ಆರಂಭಿಸಿದ ಮನ್ವಂತ್ 94 ರನ್ ಗಳಿಸಿದಾಗ ಜೀವದಾನ ಪಡೆದರು. ಇದರ ಲಾಭವೆತ್ತಿದ ಅವರು, ತನ್ನ 2ನೇ ರಣಜಿ ಪಂದ್ಯದಲ್ಲೇ ಚೊಚ್ಚಲ ಶತಕ ದಾಖಲಿಸುವಲ್ಲಿ ಯಶಸ್ವಿಯಾದರು. ಅಂತಿಮವಾಗಿ ಅವರು ಎಡಗೈ ಸ್ಪಿನ್ನರ್ ಪಾರ್ಥ್ ಭಟ್ಗೆ ವಿಕೆಟ್ ಒಪ್ಪಿಸಿ ನಿರ್ಗಮಿಸಿದರು. ಮರು ಓವರ್ನಲ್ಲಿ ವಿದ್ವತ್ ಕಾವೇರಪ್ಪ (1) ಅವರನ್ನೂ ಔಟ್ ಮಾಡಿದ ಪಾರ್ಥ್ ಭಟ್ 5 ವಿಕೆಟ್ ಗೊಂಚಲು ಸಾಧಿಸಿದರು.
ಕರ್ನಾಟಕ: 111.3 ಓವರ್ಗಳಲ್ಲಿ 342 (ಮನ್ವಂತ್ ಕುಮಾರ್ 135, ಅಭಿಲಾಷ್ ಶೆಟ್ಟಿ 14*, ವಿದ್ವತ್ 1, ಪಾರ್ಥ್ ಭಟ್ 89ಕ್ಕೆ 5, ಉನಾದ್ಕತ್ 61ಕ್ಕೆ 3), ಸೌರಾಷ್ಟ್ರ: 53 ಓವರ್ಗಳಲ್ಲಿ 4 ವಿಕೆಟ್ಗೆ 164 (ಹೆತ್ವಿಕ್ ಕೊಟಕ್ 46, ಹಾರ್ವಿಕ್ ದೇಸಾಯಿ 77, ಚಿರಾಗ್ ಜಾನಿ 1, ಜಯ್ ಗೋಹಿಲ್ 0, ಅರ್ಪಿತ್ ವಸವಾಡ 25*, ಪ್ರೇರಕ್ ಮಂಕಡ್ 13*, ಅಭಿಲಾಷ್ ಶೆಟ್ಟಿ 26ಕ್ಕೆ 2, ವೈಶಾಖ್ 47ಕ್ಕೆ 1, ವಿದ್ವತ್ ಕಾವೇರಪ್ಪ 31ಕ್ಕೆ 1).
ಕನ್ನಡಿಗ ಸಮರ್ಥ್, ಸರ್ಫ್ರಾಜ್ ಶತಕ; ಬಡೋನಿ ದ್ವಿಶತಕದಾಟ
ಕರ್ನಾಟಕದ ಬ್ಯಾಟರ್ ಆರ್. ಸಮರ್ಥ್ (143 ರನ್, 202 ಎಸೆತ, 17 ಬೌಂಡರಿ, 1 ಸಿಕ್ಸರ್) ವಿದರ್ಭ ಪರ ಹಾಲಿ ರಣಜಿ ಚಾಂಪಿಯನ್ ಜಮ್ಮು-ಕಾಶ್ಮೀರ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ಇನಿಂಗ್ಸ್ ಮುನ್ನಡೆ ಸಾಧಿಸಲು ನೆರವಾದರು. ಜಮ್ಮು-ಕಾಶ್ಮೀರದ 260 ರನ್ಗಳಿಗೆ ಪ್ರತಿಯಾಗಿ ವಿದರ್ಭ 305 ರನ್ ಕಲೆಹಾಕಿತು. ಸಮರ್ಥ್ ಪ್ರಥಮ ದಜೆ ಕ್ರಿಕೆಟ್ನಲ್ಲಿ ಬಾರಿಸಿದ 16ನೇ ಶತಕ ಇದಾಗಿದೆ. ಮತ್ತೊಂದೆಡೆ 42 ಬಾರಿಯ ಚಾಂಪಿಯನ್ ಸರ್ಫ್ರಾಜ್ ಖಾನ್ (139* ರನ್, 213 ಎಸೆತ, 18 ಬೌಂಡರಿ) ಶತಕ ಬಾರಿಸಿ, ಹಿಮಾಚಲ ಪ್ರದೇಶ ವಿರುದ್ಧ ಇನಿಂಗ್ಸ್ ಮುನ್ನಡೆ ಸಾಧಿಸಲು ನೆರವಾದರು. ಹಿ.ಪ್ರದೇಶದ 140 ರನ್ಗಳಿಗೆ ಪ್ರತಿಯಾಗಿ ಮುಂಬೈ 4 ವಿಕೆಟ್ಗೆ 398 ರನ್ ಗಳಿಸಿ ಮೇಲುಗೈ ಸಾಧಿಸಿದೆ. ದೆಹಲಿ ಪರ ಎಡಗೈ ಬ್ಯಾಟರ್ ಆಯುಷ್ ಬಡೋನಿ (217 ರನ್, 246 ಎಸೆತ, 22 ಬೌಂಡರಿ, 2 ಸಿಕ್ಸರ್) ದ್ವಿಶತಕ ಸಿಡಿಸಿ ಬೃಹತ್ ಮೊತ್ತ ಗಳಿಸಲು ನೆರವಾದರು. ದೆಹಲಿ 6 ವಿಕೆಟ್ಗೆ 648 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಚಂಡೀಗಢ ಎದುರು ಹರಿಯಾಣ ತಂಡ ಎರಡೇ ದಿನಗಳಲ್ಲಿ ಇನಿಂಗ್ಸ್ ಮತ್ತು 24 ರನ್ಗಳಿಂದ ಜಯಿಸಿತು.