

ಅಹಮದಾಬಾದ್: ಸಂಘಟಿತ ನಿರ್ವಹಣೆ ತೋರಿದ ಕರ್ನಾಟಕ ತಂಡ ಬಿಸಿಸಿಐ ಆಯೋಜಿಸಿದ ಸೀನಿಯರ್ ರಾಷ್ಟ್ರೀಯ ಮಹಿಳಾ ಟಿ20 ಟೂರ್ನಿಯಲ್ಲಿ ಮೊಟ್ಟಮೊದಲ ಬಾರಿಗೆ ಚಾಂಪಿಯನ್ ಪಟ್ಟವೇರಿದೆ. ಶುಭಾ ಸತೀಶ್ ಸಾರಥ್ಯದ ಕರ್ನಾಟಕ ತಂಡ ಶುಕ್ರವಾರ ನಡೆದ ಫೈನಲ್ ಪಂದ್ಯದಲ್ಲಿ 11 ಬಾರಿಯ ಚಾಂಪಿಯನ್ ರೈಲ್ವೇಸ್ ವಿರುದ್ಧ 3 ರನ್ಗಳಿಂದ ರೋಚಕ ಗೆಲುವು ದಾಖಲಿಸಿತು. ಈ ಮುನ್ನ 2018-19ರ ಆವೃತ್ತಿಯಲ್ಲಿ ಫೈನಲ್ಗೇರಿ ರನ್ನರ್ಅಪ್ಗೆ ತೃಪ್ತಿಪಟ್ಟಿದ್ದ ಕರ್ನಾಟಕ ಕೊನೆಗೂ ಚೊಚ್ಚಲ ಪ್ರಶಸ್ತಿ ಕನಸು ನನಸಾಗಿಸಿಕೊಂಡಿತು.
ನರೇಂದ್ರ ಮೋದಿ ಸ್ಟೇಡಿಯಂ ಬಿ ಗ್ರೌಂಡ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಕರ್ನಾಟಕ, ನಾಯಕ ಶುಭಾ ಸತೀಶ್ (48) ಮತ್ತು ನಿಕಿ ಪ್ರಸಾದ್ (28) ಆಸರೆಯಲ್ಲಿ 8 ವಿಕೆಟ್ಗೆ 149 ರನ್ ಗಳಿಸಿತು. ಪ್ರತಿಯಾಗಿ ರೈಲ್ವೇಸ್ ತಂಡ ಸ್ಪಿನ್ನರ್ಗಳಾದ ಬಿ.ಜಿ. ತೇಜಸ್ವಿನಿ (20ಕ್ಕೆ 3) ಮತ್ತು ಶ್ರೇಯಾಂಕಾ ಪಾಟೀಲ್ (29ಕ್ಕೆ 2) ದಾಳಿಗೆ ಕುಸಿದು, 8 ವಿಕೆಟ್ಗೆ 146 ರನ್ ಗಳಿಸಲಷ್ಟೇ ಶಕ್ತವಾಯಿತು.
ಕರ್ನಾಟಕ: 8 ವಿಕೆಟ್ಗೆ 149 (ಶುಭಾ ಸತೀಶ್ 48, ವೃಂದಾ 7, ಶಿಶಿರಾ ಗೌಡ 12, ನಿಕಿ 28, ಸೌಮ್ಯ 11, ಶ್ರೇಯಾಂಕಾ 11, ಪೂನಂ 18ಕ್ಕೆ 3, ಸ್ನೇಹಾ 20ಕ್ಕೆ 2), ರೈಲ್ವೇಸ್: 8 ವಿಕೆಟ್ಗೆ 146 (ಪ್ರತಿಕಾ 18, ಶಿಪ್ರ ಗಿರಿ 21, ಮಿನ್ನು ಮಣಿ 30, ಆರುಶಿ ಗೋಯಲ್ 41, ಸ್ನೇಹಾ 1, ತನುಜಾ 18*, ಏಕ್ತಾ 8, ತೇಜಸ್ವಿನಿ 20ಕ್ಕೆ 3, ಶ್ರೇಯಾಂಕಾ 29ಕ್ಕೆ 2, ಮೋನಿಕಾ 29ಕ್ಕೆ 1, ಅನನ್ಯಾ ಹೆಗ್ಡೆ 21ಕ್ಕೆ 1). ಸರಣಿಶ್ರೇಷ್ಠ: ಶ್ರೇಯಾಂಕಾ ಪಾಟೀಲ್.