ಕರ್ನಾಟಕ ಕಬಡ್ಡಿ ಪ್ರೀಮಿಯರ್‌ ಲೀಗ್‌: ಹೊಯ್ಸಳ ತಂಡಕ್ಕೆ 5ನೇ ಗೆಲುವು

ಗೆದ್ದು ಸ್ಪರ್ಧೆಯಲ್ಲುಳಿದ ವಿಜಯಪುರ ಲಯನ್ಸ್‌
kabaddi
ಕರ್ನಾಟಕ ಕಬಡ್ಡಿ ಪ್ರೀಮಿಯರ್​ ಲೀಗ್​ ಪಂದ್ಯದ ನೋಟಏಜೆನ್ಸಿ
Published on: 

ಬೆಂಗಳೂರು: ಬೆಂಗಳೂರು ಬಿಸನ್ಸ್‌ ತಂಡದ ವಿರುದ್ಧ ಭರ್ಜರಿ ಜಯ ದಾಖಲಿಸಿದ ವಿಜಯಪುರ ಲಯನ್ಸ್‌ ತಂಡ ಚೊಚ್ಚಲ ಆವೃತ್ತಿಯ ಕರ್ನಾಟಕ ಕಬಡ್ಡಿ ಪ್ರೀಮಿಯರ್‌ ಲೀಗ್‌ನ ಪ್ರಶಸ್ತಿ ರೇಸ್‌ನಲ್ಲಿ ಮುಂದುವರಿಯುವಲ್ಲಿ ಯಶಸ್ವಿಯಾಗಿದೆ. ಈ ಮಧ್ಯೆ, ಉತ್ತರ ಕನ್ನಡ ತಂಡವನ್ನು 41.-36 ಅಂಕಗಳಿಂದ ಸೋಲಿಸಿದ ಹೊಯ್ಸಳ ಎಂಪೈರ್‌ ಹಾಸನ ತಂಡ, ಲೀಗ್‌ನಲ್ಲಿ ಒಟ್ಟು 5 ಗೆಲುವುಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಜತೆಗೆ ಪ್ರಶಸ್ತಿ ಸ್ಪರ್ಧೆಗೆ ಇನ್ನಷ್ಟು ಸನಿಹಗೊಂಡಿದೆ.

ಇಲ್ಲಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಮೊದಲ ಪಂದ್ಯದಲ್ಲಿಅಧಿಕಾರಯುತ ಪ್ರದರ್ಶನ ನೀಡಿದ ವಿಜಯಪುರ ತಂಡ 50-25 ಅಂಕಗಳಿಂದ ಜಯಭೇರಿ ಬಾರಿಸಿತು. ಹಾಲಿ ಟೂರ್ನಿಯಲ್ಲಿ50 ಅಂಕಗಳನ್ನು ಕಲೆಹಾಕಿದ ಮೊದಲ ತಂಡ ಎಂಬ ಹಿರಿಮೆಗೆ ವಿಜಯಪುರ ತಂಡ ಭಾಜನವಾಯಿತು.

ಪಂದ್ಯದ ಪೂರ್ವಾರ್ಧಕ್ಕೆ 23-9ರಲ್ಲಿಮೇಲುಗೈ ಸಾಧಿಸಿದ ಲಯನ್ಸ್‌ ತಂಡ ಉತ್ತರಾರ್ಧದಲ್ಲೂಅದೇ ಲಯವನ್ನು ಕಾಯ್ದುಕೊಂಡಿತು. ಪರಿಣಾಮವಾಗಿ 25 ಅಂಕಗಳ ಅಂತರದಿಂದ ಬಿಸನ್ಸ್‌ ತಂಡಕ್ಕೆ ಆಘಾತ ನೀಡಿತು. ಈ ಫಲಿತಾಂಶದೊಂದಿಗೆ ಮೂರನೇ ಜಯ ಗಳಿಸಿದ ಲಯನ್ಸ್‌, ಒಟ್ಟು 15 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿಅಗ್ರ ನಾಲ್ಕರಲ್ಲಿಕಾಣಿಸಿಕೊಂಡಿತು. ಅತ್ತ ಸತತ ಐದನೇ ಪಂದ್ಯದಲ್ಲೂಸೋಲನುಭವಿಸಿದ ಬೆಂಗಳೂರು ತಂಡ ಪ್ರಶಸ್ತಿ ರೇಸ್‌ನಿಂದ ನಿರ್ಗಮಿಸಿತು. ಖಾತೆ ತೆರೆಯುವ ಇರಾದೆಯೊಂದಿಗೆ ಕಣಕ್ಕಿಳಿದ ಬೆಂಗಳೂರು ಒಮ್ಮೆಯೂ ಸಂಘಟಿತ ಹೋರಾಟ ನೀಡುವ ಧೈರ್ಯ ತೋರಲಿಲ್ಲ. ಟ್ಯಾಕಲ್‌ ಮತ್ತು ರೇಡಿಂಗ್‌ನಲ್ಲಿಸಮನ್ವಯತೆ ಕೊರತೆ ಎದ್ದು ಕಂಡಿತು.

ಬಾಗಲಕೋಟೆಗೆ ಮಣಿದ ಬೆಳಗಾವಿ

ದಿನದ ಎರಡನೇ ಪಂದ್ಯದಲ್ಲಿ ಬೆಳಗಾವಿ ಬುಲ್ಸ್‌ ತಂಡವನ್ನು 7 (39-32)ಅಂಕಗಳ ಅಂತರದಿಂದ ಹತ್ತಿಕ್ಕಿದ ಚಾಲುಕ್ಯಸೇನೆ ಬಾಗಲಕೋಟೆ ತಂಡ ಪೂರ್ಣ ಅಂಕಗಳನ್ನು ತನ್ನದಾಗಿಸಿಕೊಳ್ಳುವಲ್ಲಿಯಶಸ್ವಿಯಾಯಿತು. ವಿರಾಮಕ್ಕೂ ಮುನ್ನ 16-15ರಲ್ಲಿಅಲ್ಪ ಮುನ್ನಡೆ ಸಾಧಿಸಿದ್ದ ಬಾಗಲಕೋಟೆ ತಂಡ ಎರಡನೇ ಅವಧಿಯಲ್ಲಿ ಪ್ರಾಬಲ್ಯ ಕಾಯ್ದುಕೊಂಡಿತು. ನಾಲ್ಕು ಬೋನಸ್‌ ಪಾಯಿಂಟ್‌ಗಳ ಜತೆಗೆ ಎದುರಾಳಿ ತಂಡವನ್ನು ಮೂರು ಬಾರಿ ಆಲೌಟ್‌ ಮಾಡಿದ ಚಾಲುಕ್ಯ ಸೇನೆ ಆಟಗಾರರು ನಿರಂತರವಾಗಿ ಬುಲ್ಸ್‌ ಮೇಲೆ ಒತ್ತಡ ಹೇರಿದರು. ಪಂದ್ಯದ ಉಭಯ ಅವಧಿಗಳಲ್ಲಿ ತಲಾ 5 ಅಂಕಗಳ ಬೋನಸ್‌ ಹೋರತುಪಡಿಸಿ ಇತರ ಅಂಕಗಳನ್ನು ಗಳಿಸಲು ಬುಲ್ಸ್‌ ಪರದಾಡುವಂತಾಯಿತು.

ಹೊಯ್ಸಳಕ್ಕೆ ಸಾಟಿಯಾಗದ ಸ್ಟಾಲಿಯನ್ಸ್‌

ಸ್ಥಿರ ಪ್ರದರ್ಶನ ಮುಂದುವರಿಸಿದ ಹೊಯ್ಸಳ ಎಂಪೈರ್‌ ಹಾಸನ ತಂಡ ದಿನದ ಮೂರನೇ ಪಂದ್ಯದಲ್ಲಿ 41-36 ಅಂಕಗಳ ಅಂತರದಿಂದ ಉತ್ತರ ಕನ್ನಡ ಸ್ಟಾಲಿಯನ್ಸ್‌ ತಂಡವನ್ನು ಮಣಿಸಿತು. ಈ ಫಲಿತಾಂಶದೊಂದಿಗೆ ಒಟ್ಟು 25 ಅಂಕಗಳನ್ನು ಕಲೆಹಾಕಿದ ಎಂಪೈರ್‌ ತಂಡ, ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಾಪಾಡಿಕೊಳ್ಳುವ ಜತೆಗೆ ಪ್ಲೇಆಫ್‌ಗೆ ಇನ್ನಷ್ಟು ಹತ್ತಿರಗೊಂಡಿತು. ಮೊದಲಾರ್ಧಕ್ಕೆ 19-14ರಲ್ಲಿ ಮೇಲುಗೈ ಸಾಧಿಸಿದ ಹಾಸನ ತಂಡ ದ್ವಿತೀಯಾರ್ಧದಲ್ಲೂ ಸಂಘಟಿತ ಹೋರಾಟ ಪ್ರದರ್ಶಿಸುವಲ್ಲಿ ಯಶಸ್ವಿಯಾಯಿತು. ಉತ್ತರ ಕನ್ನಡ ಮೂರನೇ ಸೋಲಿಗೆ ಒಳಗಾಗುವ ಮೂಲಕ ತನ್ನ ಪ್ಲೇಆಫ್‌ ಹಾದಿಯನ್ನು ಕಠಿಣಗೊಳಿಸಿಕೊಂಡಿತು.

ಮಂಗಳೂರು ತಂಡಕ್ಕೆ ರೋಚಕ ಜಯ

ಪಂದ್ಯದ ಕೊನೆಯ ಕ್ಷ ಣದವರೆಗೂ ಪ್ರೇಕ್ಷಕರನ್ನು ಕುತೂಹಲದಿಂದ ಹಿಡಿದಿಟ್ಟ ಪಂದ್ಯದಲ್ಲಿಮಂಗಳೂರು ತಂಡ 1 ಅಂಕದಿಂದ ಮೈಸೂರು ಮಹಾಸೇನೆ ತಂಡವನ್ನು ಮಣಿಸಿ, ಪೂರ್ಣ ಅಂಕಗಳನ್ನು ಕಲೆಹಾಕಿತು. ಪಂದ್ಯದ ದ್ವಿತೀಯ ಅವಧಿಯಲ್ಲಿಅತ್ಯಂತ ನಿಕಟ ಪೈಪೋಟಿಯಿಂದ ಕೂಡಿದ್ದ ಪಂದ್ಯದ ವಿರಾಮಕ್ಕೆ 23-13ರಲ್ಲಿ ಮೇಲುಗೈ ಸಾಧಿಸಿದ್ದ ಮಂಗಳೂರು ತಂಡ, ಎರಡನೇ ಅವಧಿಯಲ್ಲಿ ಪ್ರಬಲ ಪೈಪೋಟಿ ಎದುರಿಸಿತು. ಆದರೆ ಕೊನೆಯ ಕ್ಷ ಣದ ಒತ್ತಡವನ್ನು ಮೆಟ್ಟಿನಿಂತ ಮಂಗಳೂರು ಮೂರನೇ ಜಯ ಗಳಿಸಿತು. ಅತ್ತ ಹ್ಯಾಟ್ರಿಕ್‌ ಗೆಲುವಿನ ನಂತರ ಮೈಸೂರು ತಂಡ ಮೂರನೇ ಸೋಲಿಗೆ ಗುರಿಯಾಯಿತು.

ಅಕ್ಟೋಬರ್‌ 7ರ ಪಂದ್ಯಗಳು

ಬೆಳಗಾವಿ ಬುಲ್ಸ್‌ ಮತ್ತು ಹೊಯ್ಸಳ ಎಂಪೈರ್‌ ಹಾಸನ(ಸಂಜೆ 6ಕ್ಕೆ), ಮೈಸೂರು ಮಹಾಸೇನೆ ಮತ್ತು ವಿಜಯಪುರ ಲಯನ್ಸ್‌(ಸಂಜೆ 7ಕ್ಕೆ), ಚಾಲುಕ್ಯಸೇನೆ ಬಾಗಲಕೋಟೆ ಮತ್ತು ಮಂಗಳೂರು ಇಂಡಿಯನ್ಸ್‌ (ರಾತ್ರಿ 8ಕ್ಕೆ) ಮತ್ತು ಬೆಂಗಳೂರು ಬಿಸನ್ಸ್‌ ಮತ್ತು ಉತ್ತರ ಕನ್ನಡ ಸ್ಟಾಲಿಯನ್ಸ್‌(ರಾತ್ರಿ 9ಕ್ಕೆ) ಸೆಣಸಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net