

ಬೆಂಗಳೂರು: ಕರ್ನಾಟಕದ ಯುವ ಅಥ್ಲೀಟ್ಗಳಾದ ಶಶಾಂಕ್ ಪಾಟೀಲ್ ಮತ್ತು ಪ್ರಿಯಾಂಕಾ ಮಡಿವಾಳಪ್ಪ ಜೈಪುರದಲ್ಲಿ ಭಾನುವಾರ ಮುಕ್ತಾಯಗೊಂಡ 23 ವಯೋಮಿತಿಯ 6ನೇ ಇಂಡಿಯನ್ ಓಪನ್ ಅಥ್ಲೆಟಿಕ್ಸ್ ಕೂಟದಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಜತೆಗೆ ರಾಜ್ಯಕ್ಕೆ ಕೊನೇ ದಿನ 2 ಬೆಳ್ಳಿ ಮತ್ತು 1 ಕಂಚಿನ ಪದಕವೂ ಒಲಿಯಿತು.
ಬೆಳಗಾವಿಯ ಶಶಾಂಕ್ ಪಾಟೀಲ್ ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ 76.16 ಮೀ. ಎಸೆತದೊಂದಿಗೆ ಸ್ವರ್ಣ ಜಯಿಸಿದರು. ಪ್ರಿಯಾಂಕಾ ಮಡಿವಾಳಪ್ಪ ಮಹಿಳೆಯರ 400 ಮೀ. ಹರ್ಡಲ್ಸ್ನಲ್ಲಿ 1 ನಿಮಿಷ, 0.25 ಸೆಕೆಂಡ್ಗಳಲ್ಲಿ ಸ್ಪರ್ಧೆ ಮುಗಿಸಿ ಚಿನ್ನ ಗೆದ್ದರೆ, ಇದೇ ಸ್ಪರ್ಧೆಯಲ್ಲಿ ರಾಜ್ಯದ ಮತ್ತೋರ್ವ ಅಥ್ಲೀಟ್ ಅಪೂರ್ವ ಆನಂದ್ ನಾಯ್ಕ್ (1 ನಿ, 0.92 ಸೆ) ಕಂಚು ಜಯಿಸಿದರು.
ಬೆಂಗಳೂರಿನ ವರ್ಷಿತಾ ಸಿ. ಮಹಿಳೆಯರ ಟ್ರಿಪಲ್ ಜಂಪ್ನಲ್ಲಿ 12.50 ಮೀ. ಜಿಗಿದು ರಜತ ಪದಕಕ್ಕೆ ಕೊರಳೊಡ್ಡಿದರು. ಜೆಎಸ್ಡಬ್ಲ್ಯು ತಂಡವನ್ನು ಪ್ರತಿನಿಧಿಸಿದ ಕೊಡಗಿನ ಆರ್ಯನ್ ಪ್ರಜ್ವಲ್ ಕಶ್ಯಪ್ ಪುರುಷರ 400 ಮೀ. ಹರ್ಡಲ್ಸ್ನಲ್ಲಿ 50.28 ಸೆಕೆಂಡ್ಗಳಲ್ಲಿ ಓಡಿ ರಜತ ಪದಕ ಗೆದ್ದರು.