ಇಟಲಿಯಲ್ಲಿ ಬೆಂಗಳೂರಿನ ಕರಾಟೆ ಪಟುಗಳ ಸಾಧನೆ: ವಿಶ್ವ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ 17 ಪದಕಗಳ ಬೇಟೆ!

karate
ಕರಾಟೆ ಚಾಂಪಿಯನ್​ಷಿಪ್​ನಲ್ಲಿ ಪದಕ ಗೆದ್ದ ಬೆಂಗಳೂರಿನ ಕರಾಟೆ ಪಟುಗಳುಏಜೆನ್ಸಿ
Published on: 

ಬೆಂಗಳೂರು: ಇಟಲಿಯ ಲಿಗ್ನಾನೊ ಸಬ್ಬಿಯಡೊರೊದಲ್ಲಿ ಅಕ್ಟೋಬರ್ 14ರಿಂದ 18ರವರೆಗೆ ನಡೆದ 33ನೇ ಎಸ್‌ಕೆಡಿಯುಎನ್ ವಿಶ್ವ ಶೋಟೋಕಾನ್ ಕರಾಟೆ ಚಾಂಪಿಯನ್‌ಶಿಪ್ ಮತ್ತು 18ನೇ ಎಸ್‌ಕೆಡಿಯುಎನ್ ವಿಶ್ವ ಶೋಟೋಕಾನ್ ಕರಾಟೆ ಕಪ್‌ನಲ್ಲಿ ಬೆಂಗಳೂರಿನ ಯುವ ಕರಾಟೆ ಪಟುಗಳು ಗಮನಾರ್ಹ ಸಾಧನೆ ಮಾಡಿದ್ದಾರೆ. ಜಪಾನ್ ಶೋಟೋಕಾನ್ ಕರಾಟೆ-ಡೊ ಇಂಡಿಯಾ ಫೆಡರೇಷನ್ ಸಂಸ್ಥೆ (ಜೆಎಸ್‌ಕೆಐಎಫ್‌) ಪರವಾಗಿ ಸ್ಪರ್ಧಿಸಿದ ಕ್ರೀಡಾಪಟುಗಳು ಒಟ್ಟು 5 ಚಿನ್ನ, 2 ಬೆಳ್ಳಿ ಹಾಗೂ 10 ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದಾರೆ.

ವಿವಿಧ ದೇಶಗಳ ಸ್ಪರ್ಧಿಗಳು ಭಾಗವಹಿಸಿದ್ದ ಈ ಅಂತಾರಾಷ್ಟ್ರೀಯ ಟೂರ್ನಿಯಲ್ಲಿ ಬೆಂಗಳೂರಿನ ಕರಾಟೆ ಪಟುಗಳು ತಮ್ಮ ಕೌಶಲ, ಶಿಸ್ತು ಮತ್ತು ಆತ್ಮವಿಶ್ವಾಸದ ಮೂಲಕ ಗಮನ ಸೆಳೆದರು. ಸೆನ್ಸೈ ಮಹಾಲಕ್ಷ್ಮಿ ವರುಣ್ ಅವರ ಮಾರ್ಗದರ್ಶನದಲ್ಲಿ, ಕೋಚ್ ಕಸ್ತೂರಿ ಅವರ ನೇತೃತ್ವದಲ್ಲಿ ತಂಡ ಸ್ಪರ್ಧಿಸಿತ್ತು.

ಚಿನ್ನದ ಪದಕ ವಿಜೇತರು

ತಂಡದ ಪ್ರಮುಖ ಸಾಧಕರಲ್ಲಿ ಒಬ್ಬರಾಗಿ ಕ್ಲಾರೆಟ್ಸ್ ವಿಶ್ವವಿದ್ಯಾಲಯದ ಗಗನಾ ಹೊರಹೊಮ್ಮಿದ್ದು, ಎರಡು ಚಿನ್ನ ಹಾಗೂ ಎರಡು ಕಂಚಿನ ಪದಕಗಳನ್ನು ಗೆದ್ದಿದ್ದಾರೆ. ಏವಿಯೇಷನ್ ಶಾಲೆಯ ಮೋಹನಾ ಒಂದು ಚಿನ್ನ ಮತ್ತು ಮೂರು ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಕ್ರೈಸ್ಟ್ ಹೈಸ್ಕೂಲ್‌ನ ಮೊಹಿತ್ ರಾವ್ ಒಂದು ಚಿನ್ನ ಹಾಗೂ ಒಂದು ಕಂಚಿನ ಪದಕ ಗೆದ್ದು ಗಮನ ಸೆಳೆದಿದ್ದಾರೆ.

ಸಿಂಧಿ ಹೈಸ್ಕೂಲ್‌ನ ಲಕ್ಷ್ಮಣ್ ನೀಲಕಂಠನ್ ಒಂದು ಚಿನ್ನ ಮತ್ತು ಒಂದು ಕಂಚಿನ ಪದಕ ಗೆದ್ದರೆ, ಇದೇ ಶಾಲೆಯ ಇಶಿತಾ ನಾಗರಾಜ್ ಒಂದು ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಕ್ಲೂನಿ ಕಾನ್ವೆಂಟ್‌ಗೆ 2 ಪದಕ

ಜೂನಿಯರ್ ವಿಭಾಗದಲ್ಲಿ ಕ್ಲೂನಿ ಕಾನ್ವೆಂಟ್ ಹೈಸ್ಕೂಲ್‌ನ ಚಾರ್ವಿ ಸಿಂಪ್ಸನ್ ಎರಡು ಕಂಚಿನ ಪದಕಗಳನ್ನು ಗೆದ್ದಿದ್ದಾರೆ. ನಿರ್ಮಲಾ ರಾಣಿ ICSE ಶಾಲೆಯ ಮಹಾಲಕ್ಷ್ಮಿ ಒಂದು ಕಂಚಿನ ಪದಕ ಪಡೆದು ತಂಡದ ಪದಕಗಳ ಸಂಖ್ಯೆಯನ್ನು ಹೆಚ್ಚಿಸಿದ್ದಾರೆ.

ಸೆನ್ಸೈ ಮಹಾಲಕ್ಷ್ಮಿ ವರುಣ್‌ಗೂ ಬೆಳ್ಳಿ ಪದಕ

ಜಪಾನ್ ಶೋಟೋಕಾನ್ ಕರಾಟೆ-ಡೊ ಇಂಡಿಯಾ ಫೆಡರೇಷನ್ ಸಂಸ್ಥೆಯ (ಜೆಎಸ್‌ಕೆಐಎಫ್‌) ಮುಖ್ಯ ತರಬೇತುದಾರ ಹಾಗೂ SKDUN ಇಂಡಿಯಾದ ಕಂಟ್ರಿ ಡೈರೆಕ್ಟರ್ ಆಗಿರುವ ಸೆನ್ಸೈ ಮಹಾಲಕ್ಷ್ಮಿ ವರುಣ್ ಅವರು ಕೂಡ ಭಾರತವನ್ನು ಪ್ರತಿನಿಧಿಸಿ ಸ್ಪರ್ಧೆಯಲ್ಲಿ ಒಂದು ಬೆಳ್ಳಿ ಪದಕ ಗೆದ್ದಿದ್ದಾರೆ.

ತಂಡದ ಸಿದ್ಧತೆ, ತರಬೇತಿ ಮತ್ತು ಸ್ಪರ್ಧೆಯಲ್ಲಿನ ಪ್ರದರ್ಶನದಲ್ಲಿ ಮಹಾಲಕ್ಷ್ಮಿ ವರುಣ್ ಹಾಗೂ ಕೋಚ್ ಕಸ್ತೂರಿ ಅವರ ಮಾರ್ಗದರ್ಶನ ಪ್ರಮುಖ ಪಾತ್ರ ವಹಿಸಿದೆ. ನಿರಂತರ ಅಭ್ಯಾಸ, ಶಿಸ್ತು, ಪರಿಶ್ರಮ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿದ ಅನುಭವ ಈ ಸಾಧನೆಗೆ ನೆರವಾಗಿದೆ ಎಂದು ಫೆಡರೇಷನ್‌ನ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net