

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಆತಿಥೇಯ ಬೆಂಗಳೂರು ಎಫ್ಸಿ ತಂಡ ಉದ್ಯಾನನಗರಿಯ ತುಂತುರು ಮಳೆಯ ನಡುವೆಯೇ ನಡೆದ ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಫುಟ್ಬಾಲ್ ಟೂರ್ನಿಯ ತನ್ನ 2ನೇ ಲೀಗ್ ಪಂದ್ಯದಲ್ಲಿ ಚೆನ್ನೈಯಿನ್ ಎಫ್ಸಿ ವಿರುದ್ಧ 2-0 ಗೋಲುಗಳಿಂದ ಗೆಲುವು ದಾಖಲಿಸಿದೆ. ಸತತ 2ನೇ ಜಯದೊಂದಿಗೆ ಬಿಎ್ಸಿ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.
ಅತ್ತ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಳೆಯಿಂದಾಗಿ ಕ್ರಿಕೆಟ್ ಪಂದ್ಯ 2 ಗಂಟೆ ತಡವಾಗಿ ಆರಂಭಗೊಂಡರೆ, ಇತ್ತ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಫುಟ್ಬಾಲ್ ಪಂದ್ಯ ಮಳೆಯ ನಡುವೆ ನಿಗದಿತ ಸಮಯದಲ್ಲೇ ಶುರುವಾಯಿತು. ರರ್ಯಾನ್ ವಿಲಿಯಮ್ಸ್ 24ನೇ ನಿಮಿಷದಲ್ಲಿ ದಾಖಲಿಸಿದ ಗೋಲಿನ ಬಲದಿಂದ ಸುನೀಲ್ ಛೇಟ್ರಿ ಪಡೆ ಮೊದಲಾರ್ಧದಲ್ಲೇ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಯಿತು. ಬಳಿಕ ದ್ವಿತೀಯಾರ್ಧದಲ್ಲಿ ಮಿಹೈಲೊ ಪೆರೋವಿಕ್ ಮುನ್ನಡೆಯನ್ನು ಹಿಗ್ಗಿಸಿದರು. ಅವರು 52ನೇ ನಿಮಿಷದಲ್ಲಿ ಗೋಲು ಬಾರಿಸಿದರು.
ಬಿಎಫ್ಸಿ ತವರಿನಲ್ಲೇ ಆಡಿದ ತನ್ನ ಮೊದಲ ಪಂದ್ಯದಲ್ಲಿ ಎಸ್ಸಿ ದೆಹಲಿ ವಿರುದ್ಧ 3-2ರಿಂದ ಗೆಲುವು ಸಾಧಿಸಿತ್ತು.
ಬಿಎಫ್ಸಿ ಮುಂದಿನ ಪಂದ್ಯ: ಅಕ್ಟೋಬರ್ 30; ಎದುರಾಳಿ: ನಾರ್ತ್ಈಸ್ಟ್ ಯುನೈಟೆಡ್, ಸ್ಥಳ: ಗುವಾಹಟಿ.