ಮುಂಬೈ ಚಾ ರಾಜಾ ಇಸ್ ಬ್ಯಾಕ್! ರೋಹಿತ್ ಶರ್ಮಾಗೆ ಮತ್ತೆ ನಾಯಕತ್ವದ ಪಟ್ಟ ಕಟ್ಟಿದ ಎಂಐ! | Rohit Sharma

ರೋಹಿತ್ ಶರ್ಮಾಗೆ ಮತ್ತೆ ನಾಯಕತ್ವದ ಪಟ್ಟ ಕಟ್ಟಿದ ಎಂಐ
ರೋಹಿತ್ ಶರ್ಮಾಗೆ ಮತ್ತೆ ನಾಯಕತ್ವದ ಪಟ್ಟ ಕಟ್ಟಿದ ಎಂಐ
Published on: 

ಮುಂಬೈ: ಐಪಿಎಲ್ ಇತಿಹಾಸದ ಅತ್ಯಂತ ಯಶಸ್ವಿ ನಾಯಕರಲ್ಲೊಬ್ಬರಾದ ರೋಹಿತ್ ಶರ್ಮಾ ಮುಂಬರುವ 2027ರ ಐಪಿಎಲ್ ಆವೃತ್ತಿಗಾಗಿ ಮತ್ತೆ ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿ ಮರಳಲಿದ್ದಾರೆ ಎಂದು ಫ್ರಾಂಚೈಸಿ ಅಧಿಕೃತವಾಗಿ ಘೋಷಿಸಿದೆ.

ಮೂರು ವರ್ಷಗಳ ಹಿಂದೆ ಗುಜರಾತ್ ಟೈಟಾನ್ಸ್‌ನಿಂದ ಆಲ್-ಕ್ಯಾಶ್ ಒಪ್ಪಂದದ ಮೂಲಕ ತಂಡಕ್ಕೆ ಬಂದಿದ್ದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರಿಗೆ ದಾರಿ ಮಾಡಿಕೊಡಲು ರೋಹಿತ್ ನಾಯಕತ್ವದಿಂದ ಕೆಳಗಿಳಿದಿದ್ದರು. ಆದರೆ, ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಐದು ಬಾರಿಯ ಚಾಂಪಿಯನ್ ತಂಡವು ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿ, ಅಂಕಪಟ್ಟಿಯಲ್ಲಿ ಕ್ರಮವಾಗಿ 10ನೇ, 4ನೇ ಮತ್ತು 9ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಈ ಹಿನ್ನೆಲೆಯಲ್ಲಿ ಫ್ರಾಂಚೈಸಿ ಮತ್ತೆ ರೋಹಿತ್ ಶರ್ಮಾ ಅವರ ಅನುಭವಕ್ಕೆ ಮಣೆ ಹಾಕಿದೆ.

ಅಂಬಾನಿ ಕುಟುಂಬ ಮತ್ತು ರೋಹಿತ್ ಸಂತಸ

ಈ ನಿರ್ಧಾರದ ಕುರಿತು ಪ್ರತಿಕ್ರಿಯಿಸಿರುವ ಫ್ರಾಂಚೈಸಿ ಮಾಲೀಕರಾದ ನೀತಾ ಅಂಬಾನಿ, 2011ರಲ್ಲಿ ನಾವು ರೋಹಿತ್ ಅವರನ್ನು ಖರೀದಿಸಿದ ಕ್ಷಣದಿಂದಲೇ ಅವರು ನಮ್ಮ ಮುಂಬೈ ಇಂಡಿಯನ್ಸ್ ಕುಟುಂಬದ ಭಾಗವಾದರು. ಒಬ್ಬ ಕ್ರಿಕೆಟಿಗನಾಗಿ, ಚಾಂಪಿಯನ್ ಆಗಿ ಮತ್ತು ನಾಯಕನಾಗಿ ಅವರು ಬೆಳೆದಿರುವುದನ್ನು ನೋಡುವುದು ನಮಗೆ ಹೆಮ್ಮೆಯ ವಿಷಯ ಎಂದಿದ್ದಾರೆ.

ಆಕಾಶ್ ಅಂಬಾನಿ ಮಾತನಾಡಿ, ನಮ್ಮ ಐತಿಹಾಸಿಕ 20ನೇ ಆವೃತ್ತಿಯಲ್ಲಿ ರೋಹಿತ್ ನೀಲಿ ಮತ್ತು ಚಿನ್ನದ ಬಣ್ಣದ ಜೆರ್ಸಿ ತಂಡವನ್ನು ಮುನ್ನಡೆಸುತ್ತಿರುವುದು ಅತೀವ ಸಂತಸ ತಂದಿದೆ. ಮುಂಬೈ ಇಂಡಿಯನ್ಸ್ ಮತ್ತು ನಮ್ಮ ಅಭಿಮಾನಿಗಳೊಂದಿಗೆ ರೋಹಿತ್ ಹಂಚಿಕೊಂಡಿರುವ ಬಾಂಧವ್ಯ ನಿಜಕ್ಕೂ ವಿಶೇಷವಾದುದು ಎಂದು ಹೇಳಿದ್ದಾರೆ.

ತಮ್ಮ ಮರುನೇಮಕದ ಬಗ್ಗೆ ಮಾತನಾಡಿದ 39 ವರ್ಷದ ರೋಹಿತ್ ಶರ್ಮಾ, ಮುಂಬೈ ಇಂಡಿಯನ್ಸ್ ನನ್ನ ಜೀವನದ ದೊಡ್ಡ ಭಾಗವಾಗಿದೆ. ಈ ತಂಡವನ್ನು ಮುನ್ನಡೆಸುವುದು ನನಗೆ ಯಾವಾಗಲೂ ಹೆಮ್ಮೆಯ ವಿಷಯ. 20ನೇ ಆವೃತ್ತಿಯ ಸವಾಲುಗಳನ್ನು ಎದುರಿಸಲು ಮತ್ತು ನಮ್ಮ ಅಭಿಮಾನಿಗಳಿಗೆ ಸಂಭ್ರಮಿಸುವ ಕ್ಷಣಗಳನ್ನು ನೀಡಲು ನಾನು ಸಿದ್ಧನಾಗಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರೋಹಿತ್ ನಾಯಕತ್ವದ ದಾಖಲೆ ಮತ್ತು ಮಹತ್ವ

2013ರ ಆವೃತ್ತಿಯ ಮಧ್ಯದಲ್ಲಿ ರಿಕಿ ಪಾಂಟಿಂಗ್ ಕೆಳಗಿಳಿದ ನಂತರ ನಾಯಕತ್ವ ವಹಿಸಿಕೊಂಡ ರೋಹಿತ್, ಮೊದಲ ವರ್ಷದಲ್ಲೇ ಮುಂಬೈಗೆ ಚೊಚ್ಚಲ ಐಪಿಎಲ್ ಮತ್ತು ಚಾಂಪಿಯನ್ಸ್ ಲೀಗ್ ಟಿ20 ಪ್ರಶಸ್ತಿ ಗೆದ್ದುಕೊಟ್ಟಿದ್ದರು. 11 ಆವೃತ್ತಿಗಳಲ್ಲಿ ನಾಯಕನಾಗಿ 2013, 2015, 2017, 2019 ಮತ್ತು 2020ರಲ್ಲಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ. ನಾಯಕನಾಗಿ 158 ಪಂದ್ಯಗಳಲ್ಲಿ 87 ಗೆಲುವುಗಳನ್ನು ದಾಖಲಿಸಿರುವ ರೋಹಿತ್, ಶೇ. 55ಕ್ಕೂ ಹೆಚ್ಚು ಗೆಲುವಿನ ಶೇಕಡಾವಾರು ಹೊಂದಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಐಪಿಎಲ್‌ನಲ್ಲಿ ರೋಹಿತ್ ಬ್ಯಾಟಿಂಗ್‌ನಲ್ಲಿ ಅಷ್ಟಾಗಿ ಮಿಂಚದಿದ್ದರೂ, ಹಾರ್ದಿಕ್ ನಾಯಕತ್ವದ ಅಸ್ಥಿರತೆಯ ನಂತರ ತಂಡಕ್ಕೆ ಸ್ಥಿರತೆ ತರಲು ಅವರ ನಾಯಕತ್ವ ಅತ್ಯಗತ್ಯವಾಗಿದೆ. ಜಸ್ಪ್ರೀತ್ ಬುಮ್ರಾ ಮತ್ತು ಅರ್ಷದೀಪ್ ಸಿಂಗ್ ಅವರಂತಹ ಬೌಲರ್‌ಗಳನ್ನು ಸಮರ್ಥವಾಗಿ ಬಳಸಿಕೊಳ್ಳುವ ಚಾಣಾಕ್ಷತನ ರೋಹಿತ್‌ಗಿದೆ. ಎಂ.ಎಸ್. ಧೋನಿ ಮಾದರಿಯಲ್ಲಿ ತಂಡವನ್ನು ಮುನ್ನಡೆಸುತ್ತಾ, ಅಗತ್ಯವಿದ್ದಾಗ ನಿರ್ಣಾಯಕ ಇನ್ನಿಂಗ್ಸ್ ಆಡುವ ಮೂಲಕ ರೋಹಿತ್ ಮುಂಬೈ ಇಂಡಿಯನ್ಸ್‌ಗೆ ಮತ್ತೆ ಪ್ರಶಸ್ತಿ ಗೆದ್ದುಕೊಡುವ ನಿರೀಕ್ಷೆಯಿದೆ(ಏಜೆನ್ಸೀಸ್​).