ಹೊಸ ಕ್ರೀಡಾ ಆಡಳಿತ ಕಾಯ್ದೆ ಅನ್ವಯ ಡಿ.5ಕ್ಕೆ ಭಾರತೀಯ ಒಲಿಂಪಿಕ್​ ಸಂಸ್ಥೆ ಚುನಾವಣೆ

ಪಿ.ಟಿ. ಉಷಾ ಸಾರಥ್ಯದ ಹಾಲಿ ಆಡಳಿತ ಮಂಡಳಿಯ ಅಧಿಕಾರ ಅವಧಿ ಮುಕ್ತಾಯಕ್ಕೆ ಕೇವಲ 5 ದಿನ ಬಾಕಿ ಇರುವಾಗ ಈ ಘೋಷಣೆ ಮಾಡಲಾಗಿದೆ.
olympic
Published on: 

ನವದೆಹಲಿ: ನೂತನ ರಾಷ್ಟ್ರೀಯ ಕ್ರೀಡಾ ಆಡಳಿತ ಕಾಯ್ದೆಯ ಅನ್ವಯ ಭಾರತೀಯ ಒಲಿಂಪಿಕ್​ ಸಂಸ್ಥೆಯ (ಐಒಎ) ಕಾರ್ಯಕಾರಿ ಸಮಿತಿಗೆ ಡಿಸೆಂಬರ್​ 5ರಂದು ಚುನಾವಣೆ ನಡೆಯಲಿದೆ ಎಂದು ಶನಿವಾರ ಪ್ರಕಟಿಸಲಾಗಿದೆ. ಪಿ.ಟಿ. ಉಷಾ ಸಾರಥ್ಯದ ಹಾಲಿ ಆಡಳಿತ ಮಂಡಳಿಯ ಅಧಿಕಾರ ಅವಧಿ ಮುಕ್ತಾಯಕ್ಕೆ ಕೇವಲ 5 ದಿನ ಬಾಕಿ ಇರುವಾಗ ಈ ಘೋಷಣೆ ಮಾಡಲಾಗಿದೆ. ಚುನಾವಣೆಯ ಮೊದಲ ಪ್ರಕ್ರಿಯೆಯಾಗಿ ಸಂಜಯ್​ ಕುಮಾರ್​ ಶ್ರೀವಾಸ್ತವ ಅವರನ್ನು ಚುನಾವಣಾಧಿಕಾರಿಯಾಗಿ ನೇಮಕ ಮಾಡಲಾಗಿದೆ.

ಶ್ರೀವಾಸ್ತವ ಅವರು ದೆಹಲಿ ಮತ್ತು ಚಂಡೀಗಢದ ಮಾಜಿ ಮುಖ್ಯ ಚುನಾವಣಾ ಆಯುಕ್ತರಾಗಿದ್ದಾರೆ. 2025ರ ರಾಷ್ಟ್ರೀಯ ಕ್ರೀಡಾ ಆಡಳಿತ ಕಾಯ್ದೆಯ ನಿಯಮಾವಳಿಯ ಅನ್ವಯ ಐಒಎ ಇತ್ತೀಚೆಗೆ ತನ್ನ ಸಂವಿಧಾನವನ್ನು ರಚಿಸಿತ್ತು. ಇದರ ಅನ್ವಯವೇ ಇದೀಗ ಚುನಾವಣಾ ಪ್ರಕ್ರಿಯೆ ನಡೆಯಲಿದೆ. ಅಥ್ಲೀಟ್​ಗಳ ಆಯೋಗ, ಅತ್ಯುತ್ತಮ ಸಾಧನೆ ಮಾಡಿದ ಕ್ರೀಡಾಪಟುಗಳ ವಿಭಾಗ (ಎಸ್​ಒಎಂ) ಮತ್ತು ಐಒಎ ಕಾರ್ಯಕಾರಿ ಮಂಡಳಿಯ ಚುನಾವಣೆಯ ಮೇಲ್ವಿಚಾರಣೆಯನ್ನು ಚುನಾವಣಾಧಿಕಾರಿ ವಹಿಸಿಕೊಳ್ಳಲಿದ್ದಾರೆ.

ಈ ಚುನಾವಣೆಯು ಉತ್ತಮ ಆಡಳಿತವನ್ನು ಬಲಪಡಿಸುವ ಪ್ರಯತ್ನದ ಕ್ರಮವಾಗಿ ಹೊಸ ಮೈಲಿಗಲ್ಲು ಸೃಷ್ಟಿಸಲಿದೆ ಎಂದು ಪಿ.ಟಿ. ಉಷಾ ಬಣ್ಣಿಸಿದ್ದಾರೆ. 2022ರ ಡಿಸೆಂಬರ್​ನಲ್ಲಿ ಐಒಎ ಚುಕ್ಕಾಣಿ ಹಿಡಿದಿದ್ದ ಪಿ.ಟಿ. ಉಷಾ ಈ ಬಾರಿ ಮರುಆಯ್ಕೆ ಬಯಸುವ ನಿರೀಕ್ಷೆ ಇದೆ. ಆದರೆ ಕಳೆದ ಬಾರಿ ಅವಿರೋಧ ಆಯ್ಕೆಯಾಗಿದ್ದ ಅವರಿಗೆ ಈ ಬಾರಿ ಪ್ರತಿಸ್ಪರ್ಧೆ ಎದುರಾಗುವುದೇ ಎಂದು ಕಾದುನೋಡಬೇಕಾಗಿದೆ.

2036ರ ಒಲಿಂಪಿಕ್ಸ್​ ಆತಿಥ್ಯಕ್ಕೆ ಭಾರತ ಸಲ್ಲಿಸುತ್ತಿರುವ ಬಿಡ್​ ಪ್ರಕ್ರಿಯೆಯನ್ನು ಸಮರ್ಥವಾಗಿ ನಿಭಾಯಿಸುವ ಬಲುದೊಡ್ಡ ಹೊಣೆ ಈ ಬಾರಿ ಐಒಎ ಆಡಳಿತ ಮಂಡಳಿಯ ಮೇಲಿರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net