

ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯ ಎಂದರೆ ಅಭಿಮಾನಿಗಳಿಗೆ ಅದೊಂದು ಹಬ್ಬ. ಎರಡು ದೇಶಗಳ ನಡುವಿನ ಐತಿಹಾಸಿಕ ಪೈಪೋಟಿ, ಆಟಗಾರರ ಮೇಲಿನ ನಿರೀಕ್ಷೆ, ಮೈದಾನದಲ್ಲಿನ ರೋಚಕ ಕ್ಷಣಗಳು ಹಾಗೂ ಕೋಟ್ಯಂತರ ಪ್ರೇಕ್ಷಕರ ಕುತೂಹಲ – ಇವೆಲ್ಲವೂ ಈ ಪಂದ್ಯಗಳಿಗೆ ವಿಶೇಷ ಮಹತ್ವ ತಂದುಕೊಟ್ಟಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಪೈಪೋಟಿ ಕ್ರೀಡಾ ಸ್ಫೂರ್ತಿಯ ಮಿತಿಯನ್ನು ಮೀರಿ, ಅತಿಯಾದ ಪ್ರಚಾರ, ವಾಣಿಜ್ಯ ಲೆಕ್ಕಾಚಾರ ಮತ್ತು ಮೈದಾನದ ಹೊರಗಿನ ವಿವಾದಗಳ ಪ್ರದರ್ಶನವಾಗುತ್ತಿದೆಯೇ ಎಂಬ ಪ್ರಶ್ನೆ ಮೂಡಿದೆ.
ದ್ವಿಪಕ್ಷೀಯ ಕ್ರಿಕೆಟ್ ಸಂಬಂಧಗಳು ಸ್ಥಗಿತಗೊಂಡಿದ್ದರೂ ಭಾರತ ಮತ್ತು ಪಾಕಿಸ್ತಾನ ತಂಡಗಳು ಪರಸ್ಪರ ಎದುರಾಗುವ ಸಂದರ್ಭಗಳು ಮಾತ್ರ ಕಡಿಮೆಯಾಗಿಲ್ಲ. ಕಳೆದ 14 ತಿಂಗಳಲ್ಲಿ ವಿವಿಧ ಹಂತಗಳ ಕ್ರಿಕೆಟ್ನಲ್ಲಿ ಉಭಯ ದೇಶಗಳು ಬರೋಬ್ಬರಿ 14 ಬಾರಿ ಮುಖಾಮುಖಿಯಾಗಿವೆ. ಇತ್ತೀಚೆಗೆ ದೋಹಾದಲ್ಲಿ ನಡೆದ ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ ಪಂದ್ಯವೂ ಈ ಪಟ್ಟಿಗೆ ಹೊಸ ಸೇರ್ಪಡೆ.
ಭಾನುವಾರ ನಡೆದ ಈ ಪಂದ್ಯದಲ್ಲಿ ತಿಲಕ್ ವರ್ಮ ನೇತೃತ್ವದ ಭಾರತ ಎ ತಂಡ ಪಾಕಿಸ್ತಾನ ಶಹೀನ್ಸ್ ವಿರುದ್ಧ 48 ರನ್ಗಳಿಂದ ಸೋಲು ಕಂಡಿತು. ವಿರಾಟ್ ಕೊಹ್ಲಿ, ರೋಹಿತ್ ಶರ್ಮ ಅವರಂತಹ ಹಿರಿಯ ಆಟಗಾರರಿಲ್ಲದಿದ್ದರೂ ಪಂದ್ಯಕ್ಕೆ ಭಾರೀ ಕುತೂಹಲವಿತ್ತು. ಅಭಿಷೇಕ್ ಶರ್ಮ, ವೈಭವ್ ಸೂರ್ಯವಂಶಿ ಸೇರಿದಂತೆ ಯುವ ಆಟಗಾರರು ಕಣದಲ್ಲಿದ್ದರು. ಆದರೆ, ಪಂದ್ಯದ ಗಮನ ಸೆಳೆದದ್ದು ಆಟಕ್ಕಿಂತ ಹೆಚ್ಚಾಗಿ ಆಟಗಾರರ ನಡುವಿನ ಮಾತಿನ ಚಕಮಕಿ ಮತ್ತು ಉದ್ವಿಗ್ನ ವಾತಾವರಣ.
ದ್ವಿಪಕ್ಷೀಯ ಸರಣಿಗಳಿಗಿಂತ ಈಗ ಹೆಚ್ಚು ಪಂದ್ಯ!
ಕಳೆದ 2025ರ ಸೆಪ್ಟೆಂಬರ್ನಲ್ಲಿ ನಡೆದ ಹಿರಿಯರ ಏಷ್ಯಾಕಪ್ನಿಂದ ಈವರೆಗೆ ಭಾರತ ಮತ್ತು ಪಾಕಿಸ್ತಾನ ತಂಡಗಳು ಹಿರಿಯರ, ಎ ತಂಡ ಹಾಗೂ ವಯೋಮಿತಿ ಕ್ರಿಕೆಟ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ 14 ಬಾರಿ ಮುಖಾಮುಖಿಯಾಗಿವೆ. ಇದನ್ನು 2007ರೊಂದಿಗೆ ಹೋಲಿಸಿದರೆ ಅಚ್ಚರಿಯಾಗುತ್ತದೆ. ಭಾರತ ಮತ್ತು ಪಾಕಿಸ್ತಾನ ನಡುವೆ ದ್ವಿಪಕ್ಷೀಯ ಟೆಸ್ಟ್ ಸರಣಿ ನಡೆದ ಕೊನೆಯ ವರ್ಷವಾದ 2007ರಲ್ಲಿ ಉಭಯ ತಂಡಗಳು ಒಟ್ಟು 10 ಪಂದ್ಯಗಳಲ್ಲಿ ಸೆಣಸಿದ್ದವು. ಅದರಲ್ಲಿ ಐದು ಏಕದಿನ, ಮೂರು ಟೆಸ್ಟ್ ಹಾಗೂ ಎರಡು ಟಿ20 ವಿಶ್ವಕಪ್ ಪಂದ್ಯಗಳು ಸೇರಿದ್ದವು.
ಆದರೆ, ಈಗ ದ್ವಿಪಕ್ಷೀಯ ಸರಣಿಗಳೇ ಇಲ್ಲದ ಪರಿಸ್ಥಿತಿಯಲ್ಲಿ 14 ತಿಂಗಳಲ್ಲಿ 14 ಪಂದ್ಯಗಳು ನಡೆದಿವೆ! ಹಾಗಾದರೆ, ದ್ವಿಪಕ್ಷೀಯ ಕ್ರಿಕೆಟ್ ಬೇಡ ಎನ್ನುವ ನಿಲುವಿನ ನಡುವೆಯೇ ಬಹುರಾಷ್ಟ್ರೀಯ ಟೂರ್ನಿಗಳಲ್ಲಿ ಪದೇಪದೆ ಮುಖಾಮುಖಿಯಾಗುತ್ತಿರುವುದರ ಹಿಂದಿನ ಲೆಕ್ಕಾಚಾರವೇನು?
ಏಷ್ಯನ್ ಕ್ರಿಕೆಟ್ ಮಂಡಳಿ (ಎಸಿಸಿ), ಪ್ರಸಾರ ಸಂಸ್ಥೆಗಳು ಹಾಗೂ ಉಭಯ ದೇಶಗಳ ಕ್ರಿಕೆಟ್ ಮಂಡಳಿಗಳು ಈ ಬಗ್ಗೆ ಸ್ಪಷ್ಟನೆ ನೀಡಬೇಕಿದೆ. ಬಹುರಾಷ್ಟ್ರೀಯ ಟೂರ್ನಿಗಳ ಗುಂಪು ಹಂತದಲ್ಲೇ ಭಾರತ ಮತ್ತು ಪಾಕಿಸ್ತಾನವನ್ನು ಒಂದೇ ಗುಂಪಿನಲ್ಲಿ ಇರಿಸುವುದರಿಂದ ಕನಿಷ್ಠ ಒಂದು ಪಂದ್ಯ ಖಚಿತವಾಗುತ್ತದೆ. ಟೂರ್ನಿಯ ಮಾದರಿಯನ್ನು ಅವಲಂಬಿಸಿ ನಾಕೌಟ್ ಹಂತದಲ್ಲೂ ಮತ್ತೊಮ್ಮೆ ಮುಖಾಮುಖಿಯಾಗುವ ಸಾಧ್ಯತೆ ಇರುತ್ತದೆ.
ಕ್ರಿಕೆಟ್ಗಿಂತ ವಾಣಿಜ್ಯ ಲೆಕ್ಕಾಚಾರವೇ ಮುಖ್ಯವೇ?
ಭಾರತ–ಪಾಕಿಸ್ತಾನ ಪಂದ್ಯಗಳಿಗೆ ಜಾಗತಿಕ ಮಟ್ಟದಲ್ಲಿ ಭಾರೀ ವೀಕ್ಷಕ ವರ್ಗವಿದೆ. ಟಿವಿ ಪ್ರಸಾರ, ಡಿಜಿಟಲ್ ಸ್ಟ್ರೀಮಿಂಗ್, ಜಾಹೀರಾತು ಮತ್ತು ಪ್ರಾಯೋಜಕತ್ವದ ದೃಷ್ಟಿಯಿಂದ ಇವು ಅತ್ಯಂತ ಆಕರ್ಷಕ ಪಂದ್ಯಗಳು. ಹೀಗಾಗಿ ಪ್ರಸಾರ ಸಂಸ್ಥೆಗಳು ಹಾಗೂ ಟೂರ್ನಿ ಆಯೋಜಕರಿಗೆ ಈ ಮುಖಾಮುಖಿ ದೊಡ್ಡ ವಾಣಿಜ್ಯ ಅವಕಾಶ ಎಂಬುದು ರಹಸ್ಯವೇನಲ್ಲ.
ಕ್ರಿಕೆಟ್ ಒಂದು ವೃತ್ತಿಪರ ಕ್ರೀಡೆ. ಅದರಲ್ಲಿ ವಾಣಿಜ್ಯ ಹಿತಾಸಕ್ತಿಗಳಿರುವುದರಲ್ಲಿ ತಪ್ಪಿಲ್ಲ. ಆದರೆ, ದ್ವಿಪಕ್ಷೀಯ ಸರಣಿಗಳಿಗೆ ಸಂಬಂಧಿಸಿದಂತೆ ರಾಜಕೀಯ ಮತ್ತು ಆಡಳಿತಾತ್ಮಕ ಕಾರಣಗಳನ್ನು ಮುಂದಿಡುವಾಗ, ಬಹುರಾಷ್ಟ್ರೀಯ ಟೂರ್ನಿಗಳಲ್ಲಿ ಅದೇ ಎರಡು ತಂಡಗಳನ್ನು ಪದೇಪದೆ ಮುಖಾಮುಖಿಯಾಗಿಸುವುದರ ಹಿಂದಿನ ಉದ್ದೇಶವೇನು ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ.
ಒಂದು ಕಡೆ ದ್ವಿಪಕ್ಷೀಯ ಕ್ರಿಕೆಟ್ಗೆ ಅವಕಾಶವಿಲ್ಲ ಎನ್ನಲಾಗುತ್ತದೆ. ಮತ್ತೊಂದೆಡೆ ಭಾರತ–ಪಾಕಿಸ್ತಾನ ಪಂದ್ಯಗಳಿಗೆ ಮಾತ್ರ ವಿಶೇಷ ಪ್ರಚಾರ ನೀಡಲಾಗುತ್ತದೆ. ಈ ವೈರುಧ್ಯಕ್ಕೆ ಕ್ರಿಕೆಟ್ ಆಡಳಿತ ಮಂಡಳಿಗಳು ಉತ್ತರಿಸಬೇಕಿದೆ.
ಯುವ ಕ್ರಿಕೆಟಿಗರಿಗೂ ಹರಡುತ್ತಿರುವ ವೈಷಮ್ಯ
ಭಾರತ–ಪಾಕಿಸ್ತಾನ ಪಂದ್ಯಗಳಲ್ಲಿನ ಉದ್ವಿಗ್ನತೆ ಈಗ ಹಿರಿಯರ ಕ್ರಿಕೆಟ್ಗೆ ಮಾತ್ರ ಸೀಮಿತವಾಗಿಲ್ಲ. ಯುವ ಆಟಗಾರರ ನಡುವೆಯೂ ಅದರ ಪ್ರಭಾವ ಕಾಣಿಸತೊಡಗಿದೆ.
ಇತ್ತೀಚೆಗೆ ನಡೆದ 19 ವಯೋಮಿತಿ ಏಷ್ಯಾಕಪ್ ಫೈನಲ್ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಕೊನೆಯ ಎಸೆತದಲ್ಲಿ ರೋಚಕ ಗೆಲುವು ಸಾಧಿಸಿತ್ತು. 338 ರನ್ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಭಾರತ ಒಂದು ವಿಕೆಟ್ನಿಂದ ಪಂದ್ಯ ಗೆದ್ದಿತ್ತು. ಆದರೆ, ಈ ಐತಿಹಾಸಿಕ ಗೆಲುವಿನ ಸಂಭ್ರಮದ ವೇಳೆ ಕೆಲವು ಭಾರತೀಯ ಆಟಗಾರರು ಪಾಕಿಸ್ತಾನ ಆಟಗಾರರೊಂದಿಗೆ ಆಕ್ರಮಣಕಾರಿ ವರ್ತಿಸಿದರು. ಇದಕ್ಕೆ ಮುನ್ನ ಲೀಗ್ ಪಂದ್ಯ ಗೆದ್ದ ನಂತರ ಪಾಕಿಸ್ತಾನ ತಂಡದ ಆಟಗಾರರನ್ನು ಕೆಣಕುವ ರೀತಿಯಲ್ಲಿ ವರ್ತನೆ ತೋರಿದ್ದು, ಭಾರತೀಯರು ಈ ರೀತಿ ಕೆರಳಲು ಕಾರಣವಾಗಿತ್ತು.
ಹೀಗಾಗಿಯೇ ಭಾರತ ತಂಡದ ವರ್ತನೆಯ ಬಗ್ಗೆ ಪ್ರತಿಕ್ರಿಯಿಸಿದ್ದ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, ಯುವ ಆಟಗಾರರು ಗೆಲುವನ್ನು ಸಂಭ್ರಮಿಸುವ ಹಕ್ಕು ಹೊಂದಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ದೋಹಾದಲ್ಲಿ ನಡೆದ ರೈಸಿಂಗ್ ಸ್ಟಾರ್ಸ್ ಪಂದ್ಯದಲ್ಲೂ ಹರ್ಷಿತ್ ರಾಣಾ ಮತ್ತು ಪಾಕಿಸ್ತಾನದ ಬ್ಯಾಟರ್ಗಳ ನಡುವೆ ಮಾತಿನ ಚಕಮಕಿ ನಡೆಯಿತು. ಆಗ ನಾಯಕ ತಿಲಕ್ ವರ್ಮ ಮಧ್ಯಪ್ರವೇಶಿಸಿ, ಪಾಕ್ ಆಟಗಾರರಿಗೆ ತಿರುಗೇಟು ನೀಡಿದ್ದರು.
ಹಸ್ತಲಾಘವದಿಂದ ಹಿಡಿದು ಸನ್ನೆಗಳವರೆಗೆ!
2025ರ ಏಷ್ಯಾಕಪ್ನಲ್ಲಿ ಭಾರತ ತಂಡ ಪಾಕಿಸ್ತಾನ ಆಟಗಾರರೊಂದಿಗೆ ಸಾಂಪ್ರದಾಯಿಕ ಹಸ್ತಲಾಘವ ವಿನಿಮಯ ಮಾಡಿಕೊಳ್ಳದ ನಿರ್ಧಾರ ಕೈಗೊಂಡಾಗ ವಿವಾದ ಆರಂಭವಾಗಿತ್ತು. ನಂತರದ ಪಂದ್ಯಗಳಲ್ಲಿಯೂ ಈ ವಿಚಾರ ಮತ್ತೆ ಮತ್ತೆ ಚರ್ಚೆಗೆ ಬಂದಿತು.
ಪಾಕಿಸ್ತಾನದ ಸಾಹಿಬ್ಜಾದಾ ಫರ್ಹಾನ್ ಅವರ ಬಂದೂಕು ಹಾರಿಸುವ ರೀತಿಯ ಸಂಭ್ರಮ, ಹ್ಯಾರಿಸ್ ರೌಫ್ ಅವರ '6-0' ಸನ್ನೆ ಮತ್ತು ವಿಮಾನ ಪತನವನ್ನು ಹೋಲುವ ಸನ್ನೆಗಳು ವಿವಾದಕ್ಕೆ ಕಾರಣವಾಗಿದ್ದವು. ಇದಕ್ಕೆ ಪ್ರತಿಯಾಗಿ ಭಾರತೀಯ ಆಟಗಾರರಿಂದಲೂ ಪ್ರತಿಕ್ರಿಯೆಗಳು ವ್ಯಕ್ತವಾದವು.
ಹೀಗೆ ಕ್ರಿಕೆಟ್ ಮೈದಾನದಲ್ಲಿ ನಡೆಯಬೇಕಾದ ಸ್ಪರ್ಧೆ ಕೆಲವೊಮ್ಮೆ ಸನ್ನೆಗಳು, ವ್ಯಂಗ್ಯ, ಪ್ರಚೋದನೆ ಮತ್ತು ಪ್ರತೀಕಾರದ ಪ್ರದರ್ಶನವಾಗಿ ಬದಲಾಗುತ್ತಿದೆ.
ಆಟಗಾರರಲ್ಲಿ ಆಕ್ರಮಣಕಾರಿ ಮನೋಭಾವ ಮತ್ತು ಗೆಲ್ಲುವ ಹಠ ಇರಬೇಕು. ಆದರೆ ಎದುರಾಳಿಯನ್ನು ಅವಮಾನಿಸುವುದೇ ಸಂಭ್ರಮದ ಭಾಗವಾಗಬಾರದು. ಅದರಲ್ಲೂ ಯುವ ಆಟಗಾರರು ಹಿರಿಯ ಕ್ರಿಕೆಟಿಗರ ವರ್ತನೆಯನ್ನು ಅನುಸರಿಸುವ ಸಾಧ್ಯತೆ ಇರುವುದರಿಂದ ಇಂತಹ ಘಟನೆಗಳನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಭಾರತ–ಪಾಕಿಸ್ತಾನ ಪಂದ್ಯಗಳ ಸಂದರ್ಭದಲ್ಲಿ ರಾಷ್ಟ್ರೀಯತೆಯ ಹೆಸರಿನಲ್ಲಿ ನಿಂದನೆ, ದ್ವೇಷದ ಸಂದೇಶಗಳು ಮತ್ತು ವೈಯಕ್ತಿಕ ಟೀಕೆಗಳು ಹೆಚ್ಚಾಗುತ್ತಿವೆ. ಮೈದಾನದೊಳಗಿನ ಅಸಭ್ಯ ವರ್ತನೆ ಇಂತಹ ಪ್ರವೃತ್ತಿಗಳಿಗೆ ಮತ್ತಷ್ಟು ಇಂಧನ ನೀಡುವ ಅಪಾಯವಿದೆ.
ಟ್ರೋಫಿ ಗೆದ್ದರೂ ಕೈಗೆ ಸಿಗದ ಪರಿಸ್ಥಿತಿ!
ಭಾರತ–ಪಾಕಿಸ್ತಾನ ಕ್ರಿಕೆಟ್ ಸಂಬಂಧಿತ ವಿವಾದಗಳ ನಡುವೆ ಮತ್ತೊಂದು ವಿಚಿತ್ರ ಬೆಳವಣಿಗೆಯೂ ಗಮನ ಸೆಳೆದಿದೆ. ಪುರುಷರ ಮತ್ತು ಮಹಿಳೆಯರ ಏಷ್ಯಾಕಪ್ ಪ್ರಶಸ್ತಿಗಳನ್ನು ಗೆದ್ದಿರುವ ಭಾರತ ತಂಡಗಳಿಗೆ ಇನ್ನೂ ಅಧಿಕೃತ ಟ್ರೋಫಿಗಳು ಹಸ್ತಾಂತರವಾಗಿಲ್ಲ ಎಂಬುದು ಕ್ರಿಕೆಟ್ ಆಡಳಿತದ ಕಾರ್ಯವೈಖರಿಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಏಷ್ಯನ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷರೂ ಆಗಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಈ ವಿವಾದಗಳ ಕೇಂದ್ರಬಿಂದುವಾಗಿದ್ದಾರೆ. ಟ್ರೋಫಿಗಳನ್ನು ಮುಂಬೈಗೆ ತಲುಪಿಸುವುದಾಗಿ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಭರವಸೆ ನೀಡಿದ್ದರೂ, ವಿಜೇತ ತಂಡಗಳಿಗೆ ತಮ್ಮ ಪ್ರಶಸ್ತಿಗಳು ತಲುಪುವ ಪ್ರಕ್ರಿಯೆ ಇನ್ನೂ ಪ್ರಶ್ನಾರ್ಹವಾಗಿದೆ.
ಒಂದು ಖಂಡದ ಚಾಂಪಿಯನ್ಷಿಪ್ನಲ್ಲಿ ಗೆದ್ದ ತಂಡಗಳು ಟ್ರೋಫಿಗಾಗಿ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದು ಕ್ರೀಡಾ ಆಡಳಿತಕ್ಕೆ ಶೋಭೆ ತರುವ ಸಂಗತಿಯಲ್ಲ. ಪ್ರಶಸ್ತಿ ಪ್ರದಾನ ಸಮಾರಂಭವೂ ವಿವಾದದ ವಿಷಯವಾಗಬೇಕಾದರೆ ಏಷ್ಯನ್ ಕ್ರಿಕೆಟ್ ಮಂಡಳಿಯ ಕಾರ್ಯವೈಖರಿಯ ಬಗ್ಗೆ ಪ್ರಶ್ನೆಗಳು ಏಳುವುದು ಸಹಜ.
ಪೈಪೋಟಿ ಇರಲಿ, ದ್ವೇಷ ಬೇಡ!
ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪೈಪೋಟಿ ಹಲವು ದಶಕಗಳ ಇತಿಹಾಸ ಹೊಂದಿದೆ. ಈ ಪಂದ್ಯಗಳು ಅಭಿಮಾನಿಗಳಿಗೆ ನೀಡುವ ರೋಮಾಂಚನವನ್ನು ನಿರಾಕರಿಸಲಾಗದು. ಯುವ ಆಟಗಾರರಿಗೆ ಇಂತಹ ಪಂದ್ಯಗಳು ಒತ್ತಡದ ಪರಿಸ್ಥಿತಿಯಲ್ಲಿ ಆಡುವ ಅನುಭವವನ್ನೂ ನೀಡುತ್ತವೆ. ಎ ತಂಡ ಮತ್ತು ವಯೋಮಿತಿ ಟೂರ್ನಿಗಳನ್ನು ನಡೆಸುವುದರಲ್ಲಿಯೂ ಮಹತ್ವವಿದೆ.
ಆದರೆ, ಒಂದೇ ಅವಧಿಯಲ್ಲಿ ಹಿರಿಯರ ಏಷ್ಯಾಕಪ್, 19 ವಯೋಮಿತಿ ಏಷ್ಯಾಕಪ್ ಮತ್ತು ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ಗಳ ಮೂಲಕ ಪದೇಪದೆ ಭಾರತ–ಪಾಕಿಸ್ತಾನ ಪಂದ್ಯಗಳನ್ನು ಆಯೋಜಿಸುವ ಅಗತ್ಯವೇನು ಎಂಬ ಪ್ರಶ್ನೆ ಎದುರಾಗಿದೆ.
ಈ ಪಂದ್ಯಗಳು ಯುವ ಪ್ರತಿಭೆಗಳನ್ನು ಬೆಳೆಸುವ ವೇದಿಕೆಗಳಾಗಬೇಕೇ ಹೊರತು ಮತ್ತೊಂದು ಭಾರತ–ಪಾಕಿಸ್ತಾನ ಹೈವೋಲ್ಟೇಜ್ ಕಾದಾಟವೆಂಬ ಪ್ರಚಾರದ ಸರಕಾಗಬಾರದು. ಪಂದ್ಯಗಳ ಸಂಖ್ಯೆಯನ್ನು ಹೆಚ್ಚಿಸುವುದಕ್ಕಿಂತ ಕ್ರೀಡಾ ಗುಣಮಟ್ಟ, ಆಟಗಾರರ ಶಿಸ್ತು ಮತ್ತು ಕ್ರೀಡಾ ಸ್ಫೂರ್ತಿಗೆ ಆದ್ಯತೆ ನೀಡಬೇಕಿದೆ.
ದ್ವಿಪಕ್ಷೀಯ ಸರಣಿಗಳಿಲ್ಲದಿದ್ದರೂ 14 ಪಂದ್ಯಗಳು ನಡೆದಿವೆ. ಎರಡು ಏಷ್ಯಾಕಪ್ ಟ್ರೋಫಿಗಳು ವಿಜೇತರ ಕೈ ಸೇರಿಲ್ಲ. ಹಸ್ತಲಾಘವವೂ ವಿವಾದದ ವಿಷಯವಾಗಿದೆ. ಯುವ ಆಟಗಾರರ ನಡುವೆಯೂ ಮೈದಾನದ ಹೊರಗಿನ ವೈಷಮ್ಯದ ನೆರಳು ಕಾಣಿಸುತ್ತಿದೆ.
ಮುಂದಿನ ಭಾರತ–ಪಾಕಿಸ್ತಾನ ಪಂದ್ಯ ಬಂದಾಗಲೂ ಅದೇ ಪ್ರಚಾರ, ಅದೇ ನಿರೀಕ್ಷೆ, ಅದೇ ವಾಣಿಜ್ಯ ಲೆಕ್ಕಾಚಾರ ಮತ್ತೆ ಆರಂಭವಾಗಬಹುದು. ಆದರೆ, ಕ್ರಿಕೆಟ್ ಆಡಳಿತಗಾರರು ಒಂದು ಸಂಗತಿಯನ್ನು ಮರೆಯಬಾರದು.
ಭಾರತ–ಪಾಕಿಸ್ತಾನ ಪೈಪೋಟಿ ಕ್ರಿಕೆಟ್ನ ಸೊಬಗನ್ನು ಹೆಚ್ಚಿಸಬೇಕೇ ಹೊರತು ಕ್ರೀಡೆಯ ಸ್ಫೂರ್ತಿಯನ್ನೇ ಮರೆಮಾಚಬಾರದು. ಎದುರಾಳಿಯನ್ನು ಸೋಲಿಸುವುದೇ ಗುರಿಯಾಗಲಿ, ಅವಮಾನಿಸುವುದಲ್ಲ. ಮೈದಾನದಲ್ಲಿ ಗೆಲುವು-ಸೋಲು ಇರಲಿ, ದ್ವೇಷಕ್ಕೆ ಜಾಗವಿರಬಾರದು.