

ಕ್ರೈಸ್ಟ್ಚರ್ಚ್: ಭಾರತೀಯ ಬ್ಯಾಟ್ಸ್ಮನ್ಗಳ ಸತತ ಬ್ಯಾಟಿಂಗ್ ವೈಫಲ್ಯದಿಂದ ಆತಿಥೇಯ ನ್ಯೂಜಿಲೆಂಡ್ ವಿರುದ್ಧದ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲೂ ಹೀನಾಯವಾಗಿ ಸೋಲುವ ಮೂಲಕ ಟೀಮ್ ಇಂಡಿಯಾ ಕಿವೀಸ್ ಎದುರು ಟೆಸ್ಟ್ ಸರಣಿಯನ್ನು ಕೈಚೆಲ್ಲಿ ಭಾರಿ ಮುಖಭಂಗ ಅನುಭವಿಸಿದೆ.
ಶನಿವಾರ ಕ್ರೈಸ್ಟ್ಚರ್ಚ್ನ ಹ್ಯಾಗ್ಲೆ ಓವಲ್ ಮೈದಾನದಲ್ಲಿ ಆರಂಭವಾದ ಎರಡನೇ ಟೆಸ್ಟ್ ಪಂದ್ಯ ಕೇವಲ ಮೂರನೇ ದಿನದಲ್ಲಿ ಅಂತ್ಯಗೊಂಡಿತು. ಟಾಸ್ ಸೋತು ಮೊದಲನೇ ಇನ್ನಿಂಗ್ಸ್ ಆರಂಭಿಸಿದ ಭಾರತ 63 ಓವರ್ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 242 ರನ್ ಕಲೆಹಾಕಿತು. ಬಳಿಕ ಮೊದಲ ಇನ್ನಿಂಗ್ಸ್ ಆರಂಭಿಸಿದ ಕಿವೀಸ್ ಪಡೆ ಭಾರತೀಯ ಬೌಲರ್ಗಳ ದಾಳಿಗೆ ತುತ್ತಾಗಿ 73.1 ಓವರ್ಗಳಲ್ಲಿ 235 ರನ್ಗೆ ಆಲೌಟ್ ಆಯಿತು.
ಏಳು ರನ್ಗಳ ಅಲ್ಪ ಮುನ್ನೆಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಮತ್ತೆ ತನ್ನ ಬ್ಯಾಟಿಂಗ್ ವೈಫಲ್ಯವನ್ನು ಮುಂದುವರಿಸಿತು. ಇದರ ಪರಿಣಾಮವಾಗಿ 46 ಓವರ್ಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು ಕೇವಲ 124 ರನ್ ಗಳಿಸಲಷ್ಟೇ ಶಕ್ತವಾಯಿತು.
ಟೀಮ್ ಇಂಡಿಯಾ ನೀಡಿದ್ದ ಗುರಿ ಬೆನ್ನತ್ತಿದ ಕಿವೀಸ್ ಪಡೆ ಎರಡನೇ ಇನ್ನಿಂಗ್ಸ್ನಲ್ಲಿ 36 ಓವರ್ಗಳಲ್ಲಿ ಕೇವಲ ಮೂರು ವಿಕೆಟ್ ನಷ್ಟಕ್ಕೆ( ಟಾಮ್ ಲಾಥಮ್ 52, ಟಾಮ್ ಬ್ಲಂಡೆಲ್ 55 ಮತ್ತು ಕೇನ್ ವಿಲಿಯಮ್ಶನ್ 5) 132 ರನ್ ಗಳಿಸುವ ಮೂಲಕ 7 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿತು. ಕೊನೆಯಲ್ಲಿ ರಾಸ್ ಟೇಲರ್(5*) ಹಾಗೂ ಹೆನ್ಸಿ ನಿಕೋಲಸ್(4*) ಅಜೇಯರಾಗಿ ಉಳಿದರು.
ಪ್ರಮುಖ ಬ್ಯಾಟ್ಸ್ಮನ್ಗಳ ವೈಫಲ್ಯವೇ ಸೋಲಿಗೆ ಕಾರಣ
ನಾಯಕ ವಿರಾಟ್ ಕೊಹ್ಲಿ ಮೊದಲು ಮತ್ತು ಎರಡನೇ ಇನ್ನಿಂಗ್ಸ್ನಲ್ಲಿ ಕ್ರಮವಾಗಿ 3 ಮತ್ತು 14 ರನ್ ಕಲೆ ಹಾಕುವ ಮೂಲಕ ಜವಬ್ದಾರಿಯುತ ಆಟವಾಡಲಿಲ್ಲ. ಸ್ಟಾರ್ ಆಟಗಾರ ಅಂಜಿಂಕ್ಯ ರಹಾನೆ ಕೂಡ ಎರಡೂ ಇನ್ನಿಂಗ್ಸ್ನಲ್ಲಿ ಕೇವಲ ಒಂದಕಿಗೆ ತೃಪ್ತಿಪಟ್ಟರು. ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ಕೂಡ ಸಿಕ್ಕ ಅವಕಾಶ ಉಪಯೋಗಿಸಿಕೊಳ್ಳದೇ ಎರಡೂ ಇನ್ನಿಂಗ್ಸ್ನಲ್ಲೂ ಕ್ರಮವಾಗಿ 7 ಮತ್ತು 3 ರನ್ಗೆ ತೃಪ್ತಿಪಟ್ಟುಕೊಂಡರು. ಪೃಥ್ವಿ ಷಾ, ಚೇತೇಶ್ವರ ಪೂಜಾರ ಅವರು ಮೊದಲ ಇನ್ನಿಂಗ್ಸ್ನಲ್ಲಿ ಅರ್ಧಶತಕ ದಾಖಲಿಸಿದಾದರೂ ಎರಡನೇ ಇನ್ನಿಂಗ್ಸ್ನಲ್ಲಿ ಮತ್ತೆ ಮುಗ್ಗರಿಸಿದರು. ಟೀಮ್ ಇಂಡಿಯಾದ ಬೌಲರ್ಗಳ ಮಾತ್ರ ಉತ್ತಮ ಶ್ರಮ ಹಾಕಿದರು. ಆದರೆ, ಬ್ಯಾಟ್ಸ್ಮನ್ಗಳ ವೈಫಲ್ಯವೇ ಹೀನಾಯ ಸೋಲಿಗೆ ಕಾರಣವಾಗಿದೆ. (ಏಜೆನ್ಸೀಸ್)