

ಕ್ರೈಸ್ಟ್ಚರ್ಚ್: ಕೆಳ ಕ್ರಮಾಂಕದ ಬ್ಯಾಟರ್ಳೊಂದಿಗೆ ಯುವ ಬ್ಯಾಟರ್ ಧ್ರುವ ಜುರೆಲ್ (88 ರನ್, 170 ಎಸೆತ, 14 ಬೌಂಡರಿ) ನಡೆಸಿದ ದಿಟ್ಟ ಹೋರಾಟದಿಂದ ಭಾರತ ತಂಡ ಹಿನ್ನಡೆಯ ಅಂತರ ತಗ್ಗಿಸಿಕೊಂಡರೂ, ಆತಿಥೇಯ ನ್ಯೂಜಿಲೆಂಡ್ ತಂಡ ಎರಡನೇ ಹಾಗೂ ಅಂತಿಮ ಟೆಸ್ಟ್ನಲ್ಲಿ ಬಿಗಿ ಹಿಡಿತ ಮುಂದುವರಿಸಿದೆ. ಈಗಾಗಲೆ 240 ಪ್ಲಸ್ ರನ್ಗಳ ಮುನ್ನಡೆ ಬಿಟ್ಟುಕೊಟ್ಟಿರುವ ಭಾರತ ತಂಡ, ಕಿವೀಸ್ ನೆಲದಲ್ಲಿ ಸರಣಿಗಳ (ಟಿ20, ಏಕದಿನ, ಟೆಸ್ಟ್) ಕ್ಲೀನ್ಸ್ವೀಪ್ ಸಾಧಿಸುವ ಹಾದಿ ಕಠಿಣಗೊಂಡಿದ್ದು, ಎರಡನೇ ಸರದಿಯಲ್ಲಿ ನ್ಯೂಜಿಲೆಂಡ್ ಬ್ಯಾಟರ್ಗಳನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಿದರಷ್ಟೇ ಗೆಲುವಿನ ಆಸೆ ಜೀವಂತವಿರಲಿದೆ. ಪಂದ್ಯದ ಐದನೇ ದಿನದಾಟಕ್ಕೆ ಮಳೆ ಅಡಚಣೆಯ ಮುನ್ಸೂಚನೆಯೂ ಇದೆ.
ಹ್ಯಾಗ್ಲೆ ಓವಲ್ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ 6 ವಿಕೆಟ್ಗೆ 116 ರನ್ಗಳಿಂದ ಭಾನುವಾರ ಮೂರನೇ ದಿನದಾಟ ಆರಂಭಿಸಿದ ಭಾರತ ತಂಡ ಮತ್ತೆ 130 ರನ್ ಸೇರಿಸಿತು. ಭೋಜನ ವಿರಾಮದ ನಂತರ 86.1 ಓವರ್ಗಳಲ್ಲಿ 246 ರನ್ಗಳಿಗೆ ಮೊದಲ ಇನಿಂಗ್ಸ್ ಮುಗಿಸಿದ ಭಾರತ 110 ರನ್ ಹಿನ್ನಡೆ ಅನುಭವಿಸಿತು. ಉಪಯುಕ್ತ ಮುನ್ನಡೆಯೊಂದಿಗೆ ಎರಡನೇ ಸರದಿ ಆರಂಭಿಸಿದ ನ್ಯೂಜಿಲೆಂಡ್, ಲಯಕ್ಕೆ ಮರಳಿದ ವೇಗಿ ಜಸ್ಪ್ರೀತ್ ಬುಮ್ರಾ (34ಕ್ಕೆ 2) ಬಿಗಿ ದಾಳಿಯ ನಡುವೆಯೂ ದಿನದಂತ್ಯಕ್ಕೆ 46 ಓವರ್ಗಳಲ್ಲಿ 3 ವಿಕೆಟ್ಗೆ 133 ರನ್ ಕಲೆಹಾಕಿದ್ದು, ಒಟ್ಟಾರೆ 243 ರನ್ಗಳ ಮುನ್ನಡೆಯೊಂದಿಗೆ ಮೇಲುಗೈ ಸಾಧಿಸಿದೆ. ಪಂದ್ಯದಲ್ಲಿ ಇನ್ನೂ ಎರಡು ದಿನದ ಆಟ ಬಾಕಿಯಿದ್ದು, ಕಿವೀಸ್ ತಂಡ ಭಾರತದ ಗೆಲುವಿಗೆ 325 ಪ್ಲಸ್ ರನ್ಗಳ ಗುರಿ ನೀಡುವ ನಿರೀಕ್ಷೆ ಹರಡಿದೆ.
ಜುರೆಲ್ಗೆ ಬಾಲಂಗೋಚಿಗಳ ಬಲ
ಉತ್ತರ ಪ್ರದೇಶದ ಧ್ರುವ ಜುರೆಲ್ ಭಾರತದ ಬಾಲಂಗೋಚಿಗಳ ಜತೆಯಾಗಿ ನಾಲ್ಕೂವರೆ ಗಂಟೆ ಕಿವೀಸ್ ವೇಗಿಗಳನ್ನು ದಿಟ್ಟವಾಗಿ ಎದುರಿಸಿದರು. ದಿನದ ಎರಡನೇ ಓವರ್ನಲ್ಲಿ ಅಂಶುಲ್ ಕಂಬೋಜ್ (0), ಮ್ಯಾಟ್ ಹೆನ್ರಿಗೆ ವಿಕೆಟ್ ಒಪ್ಪಿಸಿದಾಗ ಭಾರತ ಸಂಕಷ್ಟಕ್ಕೆ ಸಿಲುಕಿತು. ಆಗ, ಜುರೆಲ್ ಜತೆಯಾದ ಆಕಾಶ್ದೀಪ್ (29) ಭಾರತಕ್ಕೆ ಹಿನ್ನಡೆ ತಗ್ಗಿಸಿಕೊಳ್ಳಲು ನೆರವಾದರು. ಇವರಿಬ್ಬರು 74 ಎಸೆತಗಳಲ್ಲಿ 46 ರನ್ ಗಳಿಸಿದರು. ಆಕಾಶ್ ದೀಪ್ ನಿಗರ್ಮನದ ನಂತರವೂ ಏಕಾಂಗಿ ಹೋರಾಟ ಮುಂದುವರಿಸಿದ ಜುರೆಲ್, ಟೆಸ್ಟ್ನಲ್ಲಿ 4ನೇ ಅರ್ಧಶತಕ ಪೂರೈಸಿದರು. ಇವರಿಗೆ ಕೆಲ ಹೊತ್ತು ಸಾಥ್ ನೀಡಿದ ಗುರ್ನೂರ್ ಬ್ರಾರ್ (10) ಹಿನ್ನಡೆಯ ಅಂತರವನ್ನು 150ರೊಳಗೆ ಇಳಿಸಿದರು. ಕೊನೇ ವಿಕೆಟ್ಗೆ ಜಸ್ಪ್ರಿತ್ ಬುಮ್ರಾ (4*) ಜತೆಯಾಗಿ 34 ಎಸೆತಗಳಲ್ಲಿ 19 ರನ್ ಸೇರಿಸಿದ ಧ್ರುವ ಜರೆಲ್, 86ನೇ ಓವರ್ನಲ್ಲಿ ಜೇಮಿಸನ್ ಎಸೆತದಲ್ಲಿ ಕೀಪರ್ಗೆ ಸುಲಭ ಕ್ಯಾಚ್ ನೀಡಿದರು. ಇದರೊಂದಿಗೆ ಭಾರತ ಮೊದಲ ಇನಿಂಗ್ಸ್ನಲ್ಲಿ ಆಲೌಟ್ ಆದರೆ, ಜುರೆಲ್ ಶತಕದ ಸನಿಹದಲ್ಲಿ ಎಡವಿದರು.
ತಂದೆಗೆ ಧ್ರುವ ಸೆಲ್ಯೂಟ್
ಕಿವೀಸ್ ನೆಲದಲ್ಲಿ ಸತತ ಎರಡನೇ ಅರ್ಧಶತಕ ಸಿಡಿಸಿದ 25 ವರ್ಷದ ಧ್ರುವ ಜುರೆಲ್ ಅರ್ಧಶತಕ ಪೂರೈಸಿದಾಗ, ಮೈದಾನದ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ತನ್ನ ತಂದೆ ಹಾಗೂ ಮಾಜಿ ಸೈನಿಕ ನೇಮ್ ಸಿಂಗ್ಗೆ ಸೆಲ್ಯೂಟ್ ಹೊಡೆದು ಸಂಭ್ರಮಿಸಿದರು. ನ್ಯೂಜಿಲೆಂಡ್, ಇಂಗ್ಲೆಂಡ್, ದ.ಆಫ್ರಿಕಾ ಹಾಗೂ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಕ್ರಿಕೆಟ್ ಆಡುವುದು ಚಿಕ್ಕ ವಯಸ್ಸಿನ ಕನಸಾಗಿತ್ತು ಎಂದಿರುವ ಧ್ರುವ ಜುರೆಲ್, ಅವರ ತಂದೆ ಹಾಗೂ ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಸೇನೆಯ ಭಾಗವಾಗಿದ್ದ ನೇಮಿ ಚಂದ್, ತಾಯಿ ರಜನಿ ಇಬ್ಬರೂ ಇದೇ ಮೊದಲ ಬಾರಿಗೆ ಭಾರತದಿಂದಾಚೆ ಬಂದಿದ್ದಾರೆ ಎಂದು ದಿನದಾಟದ ಬಳಿಕ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಪ್ರತಿ ಬಾರಿ ಅರ್ಧಶತಕ ಸಿಡಿಸಿದಾಗಲೂ ಜುರೆಲ್ ಸೆಲ್ಯೂಟ್ ಮಾಡುವ ಮೂಲಕ ತನ್ನ ತಂದೆಗೆ ಗೌರವ ಸಲ್ಲಿಸುತ್ತಾರೆ.