

ಭೋಪಾಲ್: ಭಾರತ ತಂಡ ಮಹಿಳೆಯರ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಸತತ 3ನೇ ಬಾರಿ ಫೈನಲ್ ಪ್ರವೇಶಿಸಿದೆ. ಸಲೀಮಾ ಟೆಟೆ ಪಡೆ ಶುಕ್ರವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಮಲೇಷ್ಯಾ ವಿರುದ್ಧ 6-2 ಗೋಲುಗಳಿಂದ ಗೆಲುವು ದಾಖಲಿಸಿತು. ಭಾರತ ಶನಿವಾರ ನಡೆಯಲಿರುವ ಪ್ರಶಸ್ತಿ ಕಾದಾಟದಲ್ಲಿ ಚೀನಾ ವಿರುದ್ಧ ಸೆಣಸಲಿದೆ.
ರ್ಬಖೆಡ ನಾಥು ಅಂತಾರಾಷ್ಟ್ರೀಯ ಸ್ಪೋರ್ಟ್ಸ್ ಕಾಂಪ್ಲೆಕ್ಸ್ನಲ್ಲಿ ನಡೆದ ಪಂದ್ಯದ ಮೊದಲಾರ್ಧದಲ್ಲಿ ಭಾರತ 4-1 ಅಂತರದಿಂದ ಮುನ್ನಡೆ ಸಾಧಿಸಿತು. ಭಾರತ ಪರ ದೀಪಿಕಾ (25, 30ನೇ ನಿಮಿಷ) ಅವಳಿ ಗೋಲು ಸಿಡಿಸಿದರೆ, ಮುಮ್ತಾಜ್ ಖಾನ್ (10), ನವನೀತ್ ಕೌರ್ (18), ಸುನೆಲಿತ ಟೊಪ್ಪೊ (33), ಇಶಿಕಾ (57) ತಲಾ ಒಂದು ಗೋಲು ಬಾರಿಸಿದರು. ಮಲೇಷ್ಯಾ ಪರ ಅಜರ್ (27) ಮತ್ತು ಜುಲ್ಕಿಫಿ (52) ತಲಾ ಒಂದು ಗೋಲು ಗಳಿಸಿ ಸೋಲಿನ ಅಂತರ ತಗ್ಗಿಸಿದರು.
ಲೀಗ್ ಹಂತದಲ್ಲಿ ಸತತ 5 ಜಯದೊಂದಿಗೆ ಅಜೇಯವಾಗಿದ್ದ ಭಾರತ ಈಗ ಸತತ 3ನೇ ಮತ್ತು ಒಟ್ಟಾರೆ 4ನೇ ಪ್ರಶಸ್ತಿ ನಿರೀಕ್ಷೆಯಲ್ಲಿದೆ. ಭಾರತ ಈ ಮುನ್ನ 2016, 2023, 2024ರಲ್ಲಿ ಪ್ರಶಸ್ತಿ ಜಯಿಸಿತ್ತು. ಭಾರತ ಒಟ್ಟಾರೆ 6ನೇ ಬಾರಿ ಫೈನಲ್ಗೇರಿದೆ.
ಮಲೇಷ್ಯಾ ಇನ್ನು ಶನಿವಾರ ಕಂಚಿನ ಪದಕಕ್ಕಾಗಿ ನಡೆಯಲಿರುವ ಪಂದ್ಯದಲ್ಲಿ ಜಪಾನ್ ವಿರುದ್ಧ ಸೆಣಸಲಿದೆ. ಇನ್ನೊಂದು ಸೆಮಿಫೈನಲ್ ಪಂದ್ಯದಲ್ಲಿ ಚೀನಾ 1-0 ಅಂತರದಿಂದ ಜಪಾನ್ ತಂಡವನ್ನು ಮಣಿಸಿತು. ಭಾರತ ತಂಡ ಲೀಗ್ ಹಂತದಲ್ಲಿ ಚೀನಾವನ್ನು 6-2 ಅಂತರದಿಂದ ಸೋಲಿಸಿದ ವಿಶ್ವಾಸದೊಂದಿಗೆ ಫೈನಲ್ನಲ್ಲಿ ಕಣಕ್ಕಿಳಿಯಲಿದೆ.
ಶನಿವಾರ ಫೈನಲ್
ಭಾರತ-ಚೀನಾ
ಆರಂಭ: ರಾತ್ರಿ 7.00
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್ಸ್ಟಾರ್.