ASIAN GAMES: ಕಬಡ್ಡಿಯಲ್ಲಿ ಮುಂದುವರಿದ ಭಾರತದ ಪ್ರಾಬಲ್ಯ

ಭಾರತದ ಪುರುಷರ ಮತ್ತು ಮಹಿಳಾ ತಂಡಗಳು ಶನಿವಾರ ಅವಳಿ ಸ್ವರ್ಣ ಪದಕದ ಸಂಭ್ರಮ ತಂದಿವೆ.
kabaddi
ಚಿನ್ನದ ಪದಕ ಗೆದ್ದ ಭಾರತದ ಪುರುಷರ ಕಬಡ್ಡಿ ತಂಡಪಿಟಿಐ
Published on: 

ಐಚಿ-ನಗೋಯಾ: ಏಷ್ಯಾಡ್​ ಕಬಡ್ಡಿ ಸ್ಪರ್ಧೆಯಲ್ಲಿ ತನ್ನ ಪ್ರಾಬಲ್ಯ ಮುಂದುವರಿಸುವಲ್ಲಿ ಯಶಸ್ವಿಯಾಗಿರುವ ಭಾರತದ ಪುರುಷರ ಮತ್ತು ಮಹಿಳಾ ತಂಡಗಳು ಶನಿವಾರ ಅವಳಿ ಸ್ವರ್ಣ ಪದಕದ ಸಂಭ್ರಮ ತಂದಿವೆ. ಭಾರತದ ಪುರುಷರ ತಂಡ 9ನೇ ಮತ್ತು ಮಹಿಳಾ ತಂಡ 4ನೇ ಬಾರಿ ಏಷ್ಯಾಡ್​ನಲ್ಲಿ ಚಿನ್ನದ ಪದಕ ಜಯಿಸಿದೆ. ಭಾರತದ ಎರಡೂ ತಂಡಗಳು ಶನಿವಾರ ನಡೆದ ಫೈನಲ್​ ಪಂದ್ಯದಲ್ಲಿ ಇರಾನ್​ ತಂಡದ ನಿಕಟ ಪೈಪೋಟಿಯನ್ನು ಹಿಮ್ಮೆಟ್ಟಿಸಿ ಚಿನ್ನದ ಪದಕ ಒಲಿಸಿಕೊಳ್ಳುವಲ್ಲಿ ಯಶಸ್ವಿಯಾದವು.

ಹರಿಯಾಣದ ಸುನೀಲ್​ ಕುಮಾರ್​ ಸಾರಥ್ಯದ ಭಾರತದ ಪುರುಷರ ತಂಡ ಸ್ವರ್ಣ ಪದಕದ ಹೋರಾಟದಲ್ಲಿ ಇರಾನ್​ ವಿರುದ್ಧ 40-34 ಅಂಕಗಳಿಂದ ಗೆಲುವು ಸಾಧಿಸಿತು. ಮೊದಲಾರ್ಧದಲ್ಲಿ ಭಾರತ ತಂಡ 17-18ರಿಂದ ಅಲ್ಪ ಹಿನ್ನಡೆ ಅನುಭವಿಸಿತ್ತು. ಬಳಿಕ ದ್ವೀತಿಯಾರ್ಧದಲ್ಲಿ ತಿರುಗೇಟು ನೀಡಿದ ಭಾರತದ ಗೆಲುವಿಗೆ ರೈಡರ್​ಗಳಾದ ಅರ್ಜುನ್​ ದೇಸ್ವಾಲ್​ ಮತ್ತು ದೇವಾಂಕ್​ ನೆರವಾದರು. ಅನುಭವಿ ಆಟಗಾರ ಪವನ್​ ಸೆಹ್ರಾವತ್​ ಕಣಕ್ಕಿಳಿಯದೆಯೇ ಭಾರತ ಈ ಗೆಲುವು ಒಲಿಸಿಕೊಂಡಿತು. ದ್ವೀತಿಯಾರ್ಧದಲ್ಲಿ ಕಾರ್ಯತಂತ್ರ ಬದಲಾಯಿಸಿದ ಭಾರತ ಪ್ರಮುಖ ರೈಡರ್​ಗಳನ್ನಷ್ಟೇ ಕಣಕ್ಕಿಳಿಸಿ ಯಶಸ್ಸು ಸಾಧಿಸಿತು. ಇರಾನ್​ ತಂಡವನ್ನು ಆಲೌಟ್​ ಬಲೆಗೆ ಬೀಳಿಸಿ 29-24ರಿಂದ ಮುನ್ನಡೆ ಸಾಧಿಸಿದ ಬಳಿಕ ಭಾರತ ಪಂದ್ಯವನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತೆಗೆದುಕೊಂಡಿತು.

kabaddi
ಚಿನ್ನದ ಪದಕ ಗೆದ್ದ ಭಾರತದ ಮಹಿಳಾ ಕಬಡ್ಡಿ ತಂಡಪಿಟಿಐ

ಇದಕ್ಕೆ ಮುನ್ನ ಹಿಮಾಚಲ ಪ್ರದೇಶದ ಪುಷ್ಪಾ ರಾಣಾ ಸಾರಥ್ಯದ ಭಾರತದ ಮಹಿಳಾ ತಂಡ ಇರಾನ್​ ವಿರುದ್ಧದ ಫೈನಲ್​ನಲ್ಲಿ 37-34ರಿಂದ ರೋಚಕ ಗೆಲುವು ಸಾಧಿಸಿತು. ಲೀಗ್​ ಹಂತದಲ್ಲಿ ಇರಾನ್​ ವಿರುದ್ಧ ಗೆದ್ದಿದ್ದ ವಿಶ್ವಾಸದಲ್ಲಿ ಕಣಕ್ಕಿಳಿದ ಭಾರತ ಪರ ನಿಕಿತಾ, ಪೂಜಾ ಮತ್ತು ಸಂಜು ದೇವಿ ಭರ್ಜರಿ ರೈಡಿಂಗ್​ನಿಂದ ಗಮನಸೆಳೆದರು. ಮೊದಲಾರ್ಧದಲ್ಲೇ ಇರಾನ್​ ತಂಡವನ್ನು ಆಲೌಟ್​ ಬಲೆಗೆ ಬೀಳಿಸಿದ ಭಾರತ 22-16ರಿಂದ ಮುನ್ನಡೆ ಸಾಧಿಸಿತು. ಆದರೆ ದ್ವಿತೀಯಾರ್ಧದಲ್ಲಿ ಇರಾನ್​ ನಿಕಟ ಪ್ರತಿರೋಧ ತೋರಿಸಿತು. ಇದರಿಂದ ಭಾರತದ ರಕ್ಷಣಾ ವಿಭಾಗಕ್ಕೆ ಪ್ರಬಲ ಸತ್ವಪರೀಕ್ಷೆ ಎದುರಾಯಿತು. ಈ ನಡುವೆ ಭಾರತ ಆಲೌಟ್​ ಆಗಿದ್ದರಿಂದ ಮುನ್ನಡೆ 28-27ಕ್ಕೆ ಕುಸಿಯಿತು. ಇದರಿಂದ ಕೊನೇ ಹಂತದಲ್ಲಿ ರೋಚಕತೆ ಹೆಚ್ಚಿತು. 2023ರ ಏಷ್ಯಾಡ್​ನಲ್ಲಿ ಚಿನ್ನ ಗೆದ್ದ ತಂಡದಲ್ಲೂ ಇದ್ದ ಭಾರತದ ಹೆಚ್ಚಿನ ಆಟಗಾರ್ತಿಯರು ಈ ಒತ್ತಡವನ್ನು ಸಮರ್ಥವಾಗಿ ನಿಭಾಯಿಸಿದರು. ಅಲ್ಲದೆ ರಕ್ಷಣಾತ್ಮಕ ತಂತ್ರಕ್ಕೆ ಬದಲಾಗಿ ಹೆಚ್ಚಿನ ಆಕ್ರಮಣ ನಡೆಸಿ ಯಶಸ್ಸು ಸಾಧಿಸಿದರು. ಇದರಿಂದ ಭಾರತ ಕೊನೇ ನಿಮಿಷ ಬಾಕಿ ಇದ್ದಾಗ 37-31ರಿಂದ ಮುನ್ನಡೆಯೊಂದಿಗೆ ಗೆಲುವು ಬಹುತೇಕ ಖಚಿತಪಡಿಸಿಕೊಂಡಿತು. ಇರಾನ್​ ಅಂತಿಮ ರೈಡ್​ನಲ್ಲಿ ಸೋಲಿನ ಅಂತರ ತಗ್ಗಿಸಿಕೊಳ್ಳಲಷ್ಟೇ ಶಕ್ತವಾಯಿತು. ಭಾರತದ ಆಟಗಾರ್ತಿಯರು "ವಂದೇ ಮಾತರಂ' ಉದ್ಘೋಷದೊಂದಿಗೆ ಸಂಭ್ರಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net