

ಐಚಿ-ನಗೋಯಾ: ಕಾಮನ್ವೆಲ್ತ್ ಗೇಮ್ಸ್-ಏಷ್ಯನ್ ಗೇಮ್ಸ್ ಬಳಿಕ ಹಾಲಿ ವರ್ಷದ ಮತ್ತೊಂದು ಪ್ರಮುಖ ಕ್ರೀಡಾಹಬ್ಬಕ್ಕೆ ವೇದಿಕೆ ಸಜ್ಜಾಗಿದೆ. 5ನೇ ಆವೃತ್ತಿಯ ಏಷ್ಯನ್ ಪ್ಯಾರಾ ಗೇಮ್ಸ್ಗೆ ಭಾನುವಾರ ಜಪಾನ್ನ ಐಚಿ-ನಗೋಯಾದಲ್ಲಿ ಚಾಲನೆ ದೊರೆಯಲಿದೆ. ವರ್ಣರಂಜಿತ ಉದ್ಘಾಟನಾ ಸಮಾರಂಭದೊಂದಿಗೆ 7 ದಿನಗಳ ಕ್ರೀಡಾಕೂಟಕ್ಕೆ ಚಾಲನೆ ಸಿಗಲಿದೆ. 20ನೇ ಆವೃತ್ತಿಯ ಏಷ್ಯಾಡ್ ನಡೆದ ತಾಣಗಳಲ್ಲೇ, ಪ್ಯಾರಾ ಕ್ರೀಡಾಪಟುಗಳ ಏಷ್ಯನ್ ಕ್ರೀಡಾಹಬ್ಬವೂ ಆಯೋಜನೆಗೊಂಡಿದೆ. ಕ್ರೀಡಾಕೂಟದಲ್ಲಿ 45 ದೇಶಗಳಿಂದ ಸುಮಾರು 3 ಸಾವಿರ ಪ್ಯಾರಾ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಸೋಮವಾರದಿಂದ ಪದಕ ಸ್ಪರ್ಧೆಗಳು ನಡೆಯಲಿವೆ.
ಪಲೋಮಾ ಮಿಜುಹೊ ಸ್ಟೇಡಿಯಂನಲ್ಲಿ ನಡೆಯಲಿರುವ 2 ಗಂಟೆಗಳ ಆರಂಭೋತ್ಸವದಲ್ಲಿ ಆತಿಥೇಯ ಜಪಾನ್ನ ಸಾಂಸತಿಕ ಮತ್ತು ತಂತ್ರಜ್ಞಾನಗಳ ವೈಭವ ಅನಾವರಣಗೊಳ್ಳಲಿದೆ. "ನಾವು ಸುಂದರ ವ್ಯಕ್ತಿಗಳು' ಎಂಬುದು ಉದ್ಘಾಟನಾ ಸಮಾರಂಭದ ಪ್ರಮುಖ ಪರಿಕಲ್ಪನೆಯಾಗಿದೆ. ಕ್ರೀಡಾಪಟುಗಳ ಪಥ ಸಂಚಲನದಲ್ಲಿ ಪ್ಯಾರಾ ಬ್ಯಾಡ್ಮಿಂಟನ್ ಆಟಗಾರ ಪ್ರಮೋದ್ ಭಗತ್ ಮತ್ತು ಅಥ್ಲೀಟ್ ಸಿಮ್ರನ್ ಶರ್ಮ ತ್ರಿವರ್ಣ ಧ್ವಜದೊಂದಿಗೆ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.
*ಉದ್ಘಾಟನಾ ಸಮಾರಂಭ ಆರಂಭ: ಮಧ್ಯಾಹ್ನ 2.30
*ನೇರಪ್ರಸಾರ: ಸೋನಿ ಸ್ಪೋರ್ಟ್ಸ್, ಸೋನಿ ಲಿವ್.
90 ಪ್ಲಸ್ ಪದಕಗಳ ಗುರಿ
ಭಾರತ 112 ಪುರುಷ, 156 ಮಹಿಳೆಯರ ಸಹಿತ ಒಟ್ಟು 168 ಅಂಗವಿಕಲ ಕ್ರೀಡಾಪಟುಗಳ ಬೃಹತ್ ತಂಡದೊಂದಿಗೆ ಕಣಕ್ಕಿಳಿಯಲಿದೆ. ಭಾರತ ಕಳೆದ ಆವೃತ್ತಿಯಲ್ಲಿ ಪದಕಗಳ ಶತಕ ಬಾರಿಸಿ ಐತಿಹಾಸಿಕ ಸಾಧನೆ ಮೆರೆದಿತ್ತು. ಆದರೆ ಈ ಬಾರಿ ಭಾರತದ ಕೋಟಾ ಸ್ಥಾನ ಕಡಿತಗೊಳಿಸಿದ್ದರಿಂದ ಕ್ರೀಡಾಸ್ಪರ್ಧಿಗಳ ಸಂಖ್ಯೆಯೂ ಕಡಿಮೆಯಾಗಿದೆ. ಹೀಗಾಗಿ ಭಾರತ ಈ ಬಾರಿ 90ಕ್ಕಿಂತ ಅಧಿಕ ಪದಕಗಳನ್ನು ಗೆಲ್ಲುವ ಗುರಿಯನ್ನು ಇಟ್ಟುಕೊಂಡಿದೆ. 2024ರ ಪ್ಯಾರಿಸ್ ಪ್ಯಾರಾಲಿಂಪಿಕ್ನಲ್ಲಿ ಪದಕಗಳನ್ನು ಗೆದ್ದ ಭಾರತದ ಹೆಚ್ಚಿನ ಕ್ರೀಡಾಪಟುಗಳು ಈ ಬಾರಿಯೂ ಕಣಕ್ಕಿಳಿಯಲಿದ್ದಾರೆ. ಕಳೆದ ಆವೃತ್ತಿಯ ಪ್ಯಾರಾ ಏಷ್ಯಾಡ್ನಲ್ಲಿ ಭಾರತ ಅಥ್ಲೆಟಿಕ್ಸ್ನಲ್ಲೇ 55 ಪದಕಗಳನ್ನು (18 ಚಿನ್ನ, 17 ಬೆಳ್ಳಿ, 20 ಕಂಚು) ಗೆದ್ದುಕೊಂಡಿತ್ತು. ಈ ಬಾರಿ ಅಥ್ಲೆಟಿಕ್ಸ್ನಲ್ಲಿ ಭಾರತದ ಸ್ಪರ್ಧಿಗಳ ಸಂಖ್ಯೆ 123ರಿಂದ 62ಕ್ಕೆ (46 ಪುರುಷ, 16 ಮಹಿಳೆ) ಇಳಿಕೆಯಾಗಿದೆ. ಇನ್ನು ಬ್ಯಾಡ್ಮಿಂಟನ್, ಶೂಟಿಂಗ್, ಆರ್ಚರಿ, ಟೇಬಲ್ ಟೆನಿಸ್ನಲ್ಲೂ ಭಾರತ ಹೆಚ್ಚಿನ ಪದಕಗಳನ್ನು ಗೆಲ್ಲುವ ನಿರೀೆ ಇದೆ.
ರಾಜ್ಯದ 12 ಕ್ರೀಡಾಪಟುಗಳು
ಪ್ಯಾರಾ ಏಷ್ಯಾಡ್ನಲ್ಲಿ ಕರ್ನಾಟಕದ 12 ಪ್ಯಾರಾ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಪ್ಯಾರಾ ಅಥ್ಲೆಟಿಕ್ಸ್ನಲ್ಲಿ ರಾಧಾ ವೆಂಕಟೇಶ್, ರಕ್ಷಿತಾ ರಾಜು, ಸೌಮ್ಯಾ, ಶರತ್ ಎಂ.ಎಸ್, ಈಜುಸ್ಪರ್ಧೆಯಲ್ಲಿ ನಿರಂಜನ್ ಮುಕುಂದನ್, ಗೋಪಿಚಂದ್ ಲಿಂಗುಟ್ಲಾ, ಸ್ವಾತಿಕ್ ಪಾಟೀಲ್, ತೇಜಸ್ ನಂದಕುಮಾರ್, ಟೇಬಲ್ ಟೆನಿಸ್ನಲ್ಲಿ ಸವಿತಾ ವಿಟ್ಟಲ್ ಅಜ್ಜನಕಟ್ಟಿ, ಶೂಟಿಂಗ್ನಲ್ಲಿ ರಾಕೇಶ್ ನಿಡಗುಂದಿ, ಬ್ಯಾಡ್ಮಿಂಟನ್ನಲ್ಲಿ ಪಲ್ಲವಿ ಕೆ. ಮಂಜುನಾಥ್ ಸ್ಪರ್ಧಿಸಲಿದ್ದಾರೆ. ಜತೆಗೆ ಉತ್ತರ ಪ್ರದೇಶದಲ್ಲಿ ಐಎಎಸ್ ಅಧಿಕಾರಿಯಾಗಿರುವ ಕರ್ನಾಟಕ ಮೂಲದ ಸುಹಾಸ್ ಯತಿರಾಜ್ ಪ್ಯಾರಾ ಬ್ಯಾಡ್ಮಿಂಟನ್ನಲ್ಲಿ ಸ್ಪರ್ಧಿಸಲಿದ್ದಾರೆ.
*489: ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ 18 ಕ್ರೀಡಾ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿದ್ದು, ಒಟ್ಟಾರೆ 489 ಸ್ವರ್ಣ ಪದಕಗಳು ಪಣಕ್ಕಿವೆ. ಈ ಪೈಕಿ ಭಾರತ 11 ಕ್ರೀಡೆಗಳಲ್ಲಿ ಸ್ಪರ್ಧಿಸಲಿದೆ.
ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಭಾರತ
ವರ್ಷ ಚಿನ್ನ ಬೆಳ್ಳಿ ಕಂಚು ಒಟ್ಟು ಸ್ಥಾನ
2010 1 4 9 14 15
2014 3 14 16 33 15
2018 15 24 33 72 9
2023 27 32 49 108 5
ಒಟ್ಟು 46 74 107 227 9
ನ್ಯೂನತೆಗೆ ತಕ್ಕಂತೆ ವರ್ಗೀಕರಣ
ಪ್ಯಾರಾ ಕ್ರೀಡೆಯಲ್ಲಿ ಕ್ರೀಡಾಪಟುಗಳ ಅಂಗ ನ್ಯೂನತೆಗೆ ತಕ್ಕಂತೆ ಅವರನ್ನು ವರ್ಗೀಕರಿಸಲಾಗುತ್ತದೆ. ಇದರಿಂದಾಗಿ ಕೆಲವು ಕ್ರೀಡೆಗಳಲ್ಲಿ ಒಂದೇ ವಿಭಾಗದಲ್ಲಿ ಹಲವು ವರ್ಗೀಕರಣದೊಂದಿಗೆ ಪ್ರತ್ಯೇಕವಾದ ಸ್ಪರ್ಧೆಗಳು ನಡೆಯುತ್ತವೆ. ಉದಾಹರಣೆಗೆ ಪ್ಯಾರಾ ಬ್ಯಾಡ್ಮಿಂಟನ್ನಲ್ಲೇ ಸಿಂಗಲ್ಸ್ ವಿಭಾಗದಲ್ಲಿ 6 ಭಿನ್ನ ವರ್ಗೀಕರಣದೊಂದಿಗೆ ಸ್ವರ್ಣ ಪದಕಕ್ಕೆ ಸ್ಪರ್ಧೆ ನಡೆಯುತ್ತವೆ. ಪುರುಷರ 100 ಮೀ. ಓಟದಲ್ಲಿ ಒಟ್ಟು 15 ವರ್ಗೀಕರಣದೊಂದಿಗೆ ಸ್ಪರ್ಧೆ ನಡೆಯುತ್ತವೆ.