ಸಯ್ಯದ್​ ಮುಷ್ತಾಕ್​ ಅಲಿ ಟ್ರೋಫಿ ಟಿ20: ಕರ್ನಾಟಕಕ್ಕೆ ಚಂಡೀಗಢ ಆಘಾತ

ಸ್ಮರಣ್​ ಬಳಗಕ್ಕೆ ಮೂರನೇ ಸೋಲು; ಸೂಪರ್​ ಲೀಗ್​ ಆಸೆಗೆ ಹೊಡೆತ
cricket
ಕರ್ನಾಟಕ ತಂಡದ ನಾಯಕ ಆರ್. ಸ್ಮರಣ್​ಏಜೆನ್ಸಿ
Published on: 

ಮುಂಬೈ: ಕರ್ನಾಟಕ ತಂಡ ಸಯ್ಯದ್​ ಮುಷ್ತಾಕ್​ ಅಲಿ ಟ್ರೋಫಿ ಟಿ20 ಟೂರ್ನಿಯ ಎ ಗುಂಪಿನಲ್ಲಿ 3ನೇ ಸೋಲು ಅನುಭವಿಸುವುದರೊಂದಿಗೆ ಸೂಪರ್​ ಲೀಗ್​ ಹಂತಕ್ಕೇರುವ ರೇಸ್​ನಲ್ಲಿ ಭಾರಿ ಹಿನ್ನಡೆ ಕಂಡಿದೆ. ಕರ್ನಾಟಕ ತಂಡ ಭಾನುವಾರ ನಡೆದ ತನ್ನ 5ನೇ ಲೀಗ್​ ಪಂದ್ಯದಲ್ಲಿ ದಯನೀಯ ಬ್ಯಾಟಿಂಗ್​ ವೈಫಲ್ಯ ಅನುಭವಿಸಿ ಚಂಡೀಗಢ ಎದುರು 7 ವಿಕೆಟ್​ಗಳಿಂದ ಶರಣಾಯಿತು. ಇದರಿಂದ ಆರ್​. ಸ್ಮರಣ್​ ಪಡೆ ಅಂಕಪಟ್ಟಿಯಲ್ಲಿ 8 ಅಂಕದೊಂದಿಗೆ 5ನೇ ಸ್ಥಾನಕ್ಕೆ ಕುಸಿದಿದೆ. ರಾಜ್ಯಕ್ಕೆ ಇನ್ನು 2 ಲೀಗ್​ ಪಂದ್ಯಗಳಷ್ಟೇ ಬಾಕಿ ಇವೆ. ಗುಂಪಿನ ಅಗ್ರ 2 ತಂಡಗಳಷ್ಟೇ ಸೂಪರ್​ ಲೀಗ್​ ಹಂತಕ್ಕೇರಲಿವೆ.

ಶರದ್​ ಪವಾರ್​ ಕ್ರಿಕೆಟ್​ ಅಕಾಡೆಮಿಯಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದ ಕರ್ನಾಟಕ, ಹಾರ್ದಿಕ್​ ಚೌಧರಿ (17ಕ್ಕೆ 3) ಮತ್ತು ಭಾಗ್ಮೆಂದರ್​ ಲಾಥರ್​ (19ಕ್ಕೆ 3) ದಾಳಿಗೆ ಕುಸಿದು 17.5 ಓವರ್​ಗಳಲ್ಲಿ ಕೇವಲ 95 ರನ್​ಗಳಿಗೆ ಆಲೌಟ್​ ಆಯಿತು. ಲವನೀತ್​ ಸಿಸೋಡಿಯಾ (18), ಕರುಣ್​ ನಾಯರ್​ (25) ಮೊದಲ ವಿಕೆಟ್​ಗೆ 44 ರನ್​ ಕಲೆಹಾಕಿದ ಬಳಿಕ ಕರ್ನಾಟಕ, 51 ರನ್​ ಅಂತರದಲ್ಲಿ ಎಲ್ಲ 10 ವಿಕೆಟ್​ ಕಳೆದುಕೊಂಡಿತು. ಪ್ರತಿಯಾಗಿ ಚಂಡೀಗಢ 13.5 ಓವರ್​ಗಳಲ್ಲಿ 3 ವಿಕೆಟ್​ಗೆ 96 ರನ್​ ಗಳಿಸಿ ಜಯಿಸಿತು. ಎಡಗೈ ಸ್ಪಿನ್ನರ್​ ಶ್ರೀಶ ಆಚಾರ್​ (27ಕ್ಕೆ 2) ಆರಂಭಿಕರನ್ನು ಬೇಗನೆ ಔಟ್​ ಮಾಡಿ ಚಂಡೀಗಢಕ್ಕೆ ಆರಂಭಿಕ ಆಘಾತ ನೀಡಿದರೂ, ನಾಯಕ ಶಿವಂ ಭಾಂಬ್ರಿ (52) ಅರ್ಧಶತಕ ಬಾರಿಸಿ ರಾಜ್ಯದ ತಿರುಗೇಟಿಗೆ ತಡೆಯೊಡ್ಡಿದರು.

ಕರ್ನಾಟಕ: 17.5 ಓವರ್​ಗಳಲ್ಲಿ 95 (ಲವನೀತ್​ 18, ಕರುಣ್​ 25, ಅನೀಶ್ವರ್​ 2, ಸ್ಮರಣ್​ 3, ಮನೀಷ್​ 14, ಮನ್ವಂತ್​ 2, ಪ್ರವಿಣ್​ ದುಬೆ 16, ಎಲ್​ಆರ್​ ಕುಮಾರ್​ 9, ಅಭಿಲಾಷ್​ 9, ಶ್ರೀಶ 2*, ಭಾಗ್ಮೆಂದರ್​ 19ಕ್ಕೆ 3, ಹಾರ್ದಿಕ್​ ಚೌಧರಿ 17ಕ್ಕೆ 3, ಚಿರಾಗ್​ವೀರ್​ 20ಕ್ಕೆ 2, ಜಗ್​ಜೀತ್​ 11ಕ್ಕೆ 2), ಚಂಡೀಗಢ: 13.5 ಓವರ್​ಗಳಲ್ಲಿ 3 ವಿಕೆಟ್​ಗೆ 96 (ಶಿವಂ ಭಾಂಬ್ರಿ 52, ಸನ್ಯಾಮ್​ ಸೈನಿ 27*, ಶ್ರೀಶ ಆಚಾರ್​ 27ಕ್ಕೆ 2).

ಕರ್ನಾಟಕಕ್ಕೆ ಮುಂದಿನ ಪಂದ್ಯ

ಯಾವಾಗ: ಮಂಗಳವಾರ

ಎದುರಾಳಿ: ರಾಜಸ್ಥಾನ

ಆರಂಭ: ಮಧ್ಯಾಹ್ನ 1.30