ಸಯ್ಯದ್ ಮೋದಿ ಇಂಟರ್‌ನ್ಯಾಷನಲ್ ಬ್ಯಾಡ್ಮಿಂಟನ್:ಸೆಮೀಸ್‌ಗೇರಿದ ಸಿಂಧು, ಲಕ್ಷ್ಯ ಸೇನ್, ಅಶ್ವಿನಿ-ತನಿಷಾ ಜೋಡಿ

New Project
Published on

ಲಖನೌ: ಅವಳಿ ಒಲಿಂಪಿಕ್ಸ್ ಪದಕ ವಿಜೇತೆ ಪಿವಿ ಸಿಂಧು, ಲಕ್ಷ್ಯ ಸೇನ್, ಉನ್ನತಿ ಹೂಡಾ, ಪ್ರಿಯಾಂಶ್ ರಾಜಾವತ್ ಹಾಗೂ 2ನೇ ಶ್ರೇಯಾಂಕಿತ ಗಾಯತ್ರಿ ಗೋಪಿಚಂದ್- ತ್ರಿಸಾ ಜೋಲಿ, ಕನ್ನಡತಿ ಅಶ್ವಿನಿ ಪೊನ್ನಪ್ಪ-ತನಿಷಾ ಕ್ರಾಸ್ಟೋ ಅವರು ಸಯ್ಯದ್ ಮೋದಿ ಇಂಟರ್‌ನ್ಯಾಷನಲ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸೆಮಿಫೈನಲ್‌ಗೇರಿದ್ದಾರೆ.

ಶುಕ್ರವಾರ ನಡೆದ ಮಹಿಳಾ ಸಿಂಗಲ್ಸ್ ಕ್ವಾರ್ಟರ್ ಫೈನಲ್ನಲ್ಲಿ ವಿಶ್ವ ನಂ.18 ಸಿಂಧು 21-15, 21-17ರಿಂದ ಚೀನಾದ ಡೈ ವಾಂಗ್ ಎದುರು ನೇರ ಗೇಮ್‌ಗಳ ಗೆಲುವು ಸಾಧಿಸಿದರು. ಎರಡು ಬಾರಿ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿರುವ ಸಿಂಧು, ಮುಂದಿನ ಸುತ್ತಿನಲ್ಲಿ ದೇಶಬಾಮಧವೆ ಉನ್ನತಿ ಹೂಡಾ ವಿರುದ್ಧ ಪ್ರಶಸ್ತಿ ಸುತ್ತಿಗೇರಲು ಹೋರಾಡಲಿದ್ದಾರೆ. ಯುವ ಷಟ್ಲರ್ ಉನ್ನತಿ 21-16, 21-9ರಿಂದ ಅಮೆರಿಕದ ಇಶಿಕಾ ಜೈಸ್ವಾಲ್ ಎದುರು ಸುಲಭ ಗೆಲುವು ದಾಖಲಿಸಿದರು.

ಪುರುಷರ ಸಿಂಗಲ್ಸ್ ಎಂಟರ ಘಟ್ಟದಲ್ಲಿ ಲಕ್ಷ್ಯಸೇನ್ 21-8, 21-19 ರಿಂದ ಭಾರತದವರೇ ಆದ ಮಿರಾಬ ಲುವಾಂಗ್ ಎದುರು 41 ನಿಮಿಷಗಳ ಕಾದಾಟದಲ್ಲಿ ಏಕಪಕ್ಷೀಯ ಗೆಲುವು ಒಲಿಸಿಕೊಂಡರು. 23 ವರ್ಷದ ಲಕ್ಷ್ಯ ಸೇನ್ ಮುಂದಿನ ಸುತ್ತಿನಲ್ಲಿ ಜಪಾನ್‌ನ ಶೊಗೊ ಒಗಾವ ಎದುರು ಸೆಣಸಲಿದ್ದಾರೆ. 2023ರ ಜೂ.ವಿಶ್ವ ಚಾಂಪಿಯನ್‌ಷಿಪ್ ಕಂಚು ವಿಜೇತ ಕನ್ನಡಿಗ ಆಯುಷ್ ಶೆಟ್ಟಿ 7-21, 14-21 ರಿಂದ ಶೊಗೊ ಒಗಾವ ಎದುರು ನಿರಾಸೆ ಅನುಭವಿಸಿದರು. ಇನ್ನೊಂದು ಪಂದ್ಯದಲ್ಲಿ ಪ್ರಿಯಾಂಶ್ ರಾಜಾವತ್ 21-13, 21-8 ರಿಂದ ವಿಯೆಟ್ನಾಂನ ಎನ್‌ಗುಯೆನ್ ಹೈ ಡ್ಯಾಂಗ್ ಎದುರು ಜಯ ಸಾಧಿಸಿದರು.

ವರ್ಲ್ಡ್ ಟೂರ್ ಫೈನಲ್ಸ್‌ಗೆ ಅರ್ಹತೆ ಪಡೆದಿರುವ ಗಾಯತ್ರಿ-ತ್ರಿಸಾ ಮಹಿಳಾ ಡಬಲ್ಸ್‌ನಲ್ಲಿ 21-8, 21-15 ರಿಂದ 6ನೇ ಶ್ರೇಯಾಂಕಿತ ಗೊ ಪಿಯ್ ಕೀ - ಟಿಯೋ ಮೇ ಕ್ಸಿಂಗ್ ಜೋಡಿಯನ್ನು ಮಣಿಸಿ 4ರ ಘಟ್ಟಕ್ಕೇರಿದರು.ಇನ್ನೊಂದು ಕ್ವಾರ್ಟರ್‌ೈನಲ್‌ನಲ್ಲಿ ಅಶ್ವಿನಿ-ತನಿಷಾ ಜೋಡಿ 21-12, 17-21, 21-16 ರಿಂದ ದೇಶಬಾಂಧವ ಪ್ರಿಯಾ-ಶೃತಿ ಮಿಶ್ರಾ ಜೋಡಿಯನ್ನು ಪರಾಭವಗೊಳಿಸಿತು. ಮಿಶ್ರ ಡಬಲ್ಸ್‌ನಲ್ಲಿ 5ನೇ ಶ್ರೇಯಾಂಕಿತ ಧ್ರುವ ಕಪಿಲ-ತನಿಷಾ ಕ್ರಾಸ್ಟೋ 21-16, 21-13 ರಿಂದ ಮಲೇಷ್ಯಾದ ಲೊ ಬಿಂಗ್ ಕುನ್- ಹೊ ಲೊ ಈ ಜೋಡಿಯನ್ನು ಮಣಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net