ಕರೊನಾ ಕ್ವಾರಂಟೈನ್​ ವ್ಯವಸ್ಥೆಗೆ ಬೇಕಾಗುತ್ತಿದೆ ಹೆಚ್ಚೆಚ್ಚು ಸ್ಥಳ; ಭಾರತೀಯ ಕ್ರೀಡಾ ಪ್ರಾಧಿಕಾರದಿಂದ ಮಹತ್ವದ ನಿರ್ಧಾರ

SAI 31 marh 20
Published on

ನವದೆಹಲಿ: ಕರೊನಾ ಸೋಂಕಿತರ ಸಂಖ್ಯೆ ಸಾವಿರಕ್ಕಿಂತಲೂ ಹೆಚ್ಚಾಗಿದೆ. ಆದರೆ ಕ್ವಾರಂಟೈನ್​​ನಲ್ಲಿ ಇರುವವರ ಸಂಖ್ಯೆ ಲಕ್ಷವನ್ನೂ ಮೀರಿದೆ.

ಕರೊನಾ ಸೋಂಕಿತರ ಸಂಪರ್ಕಕ್ಕೆ ಹೋದವರು, ಲಾಕ್​ಡೌನ್​ಗೂ ಮೊದಲು ಫ್ಲೈಟ್​, ರೈಲು, ಬಸ್​ಗಳಲ್ಲಿ ಪ್ರಯಾಣ ಮಾಡಿದವರನ್ನು ಕಡ್ಡಾಯವಾಗಿ 14ದಿನಗಳ ಕ್ವಾರಂಟೈನ್​ಗೆ ಒಳಪಡಿಸಲಾಗಿದೆ. ಸೋಂಕಿತರ ಸಂಖ್ಯೆ ಹೆಚ್ಚಿದಷ್ಟೂ ಈ ಕ್ವಾರಂಟೈನ್​ಗೆ ಹೋಗುವವರ ಸಂಖ್ಯೆಯೂ ಅಧಿಕವಾಗುತ್ತಿದೆ.

ದೆಹಲಿ ಸೇರಿ ಅನೇಕ ಕಡೆಗಳಲ್ಲಿ ಕ್ವಾರಂಟೈನ್​ಗೆ ಸ್ಥಳವೇ ಸಾಕಾಗುತ್ತಿಲ್ಲ. ಒಂದಷ್ಟು ಹೋಟೆಲ್​ಗಳ ಮಾಲೀಕರು ಅನುಕೂಲ ಕಲ್ಪಿಸಿಕೊಟ್ಟಿದ್ದಾರೆ.

ಈಗ ದೆಹಲಿಯ ಜವಾಹಾರ್​ಲಾಲ್​ ನೆಹರೂ ಸ್ಟೇಡಿಯಂನ್ನು ಕ್ವಾರಂಟೈನ್​ ವ್ಯವಸ್ಥೆಗೆ ಬಳಸಿಕೊಳ್ಳಲು ಅಲ್ಲಿನ ಸರ್ಕಾರ ನಿರ್ಧರಿಸಿದೆ. ಭಾರತೀಯ ಕ್ರೀಡಾ ಪ್ರಾಧಿಕಾರವು ಜವಾಹಾರ್​ ಲಾಲ್​ ನೆಹರೂ ಕ್ರೀಡಾಂಗಣವನ್ನು ಸರ್ಕಾರಕ್ಕೆ ಹಸ್ತಾಂತರ ಮಾಡಿದೆ. ಇಲ್ಲಿ ಕರೊನಾ ರೋಗಿಗಳನ್ನು ಪ್ರತ್ಯೇಕವಾಗಿಟ್ಟು ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡುವ ಬಗ್ಗೆಯೂ ಚಿಂತಿಸಲಾಗುತ್ತಿದೆ ಎನ್ನಲಾಗಿದೆ.
ಭಾರತದಲ್ಲಿ ಕರೊನಾ ಸೋಂಕಿತರ ಸಂಖ್ಯೆ 1250ಕ್ಕೆ ತಲುಪಿದ್ದು, 36 ಮಂದಿ ಮೃತಪಟ್ಟಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net