

ನವದೆಹಲಿ: ಸೋಮವಾರ ನಡೆದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಹೀನಾಯವಾಗಿ ಸೋತ ಬೆನ್ನಲ್ಲೇ ಯುವ ಕ್ರಿಕೆಟಿಗರ ಬಗ್ಗೆ ಕಮೆಂಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂ. ಎಸ್. ಧೋನಿ ವಿರುದ್ಧ ಅಭಿಮಾನಿಗಳು ಗರಂ ಆಗಿದ್ದಾರೆ.
ನಿನ್ನೆಯ ಪಂದ್ಯದಲ್ಲಿ 7 ವಿಕೆಟ್ಗಳ ಅಂತರದಲ್ಲಿ ಧೋನಿ ಪಡೆ ಹೀನಾಯ ಸೋಲು ಕಂಡಿದ್ದು, ಟೂರ್ನಿಯಿಂದಲೇ ಹೊರಬೀಳುವ ಆತಂಕ ಎದುರಿಸುತ್ತಿದೆ. ಇದರ ನಡುವೆ ಪಂದ್ಯ ಮುಗಿದ ಬಳಿಕ ಮಾತನಾಡಿದ ಧೋನಿ, ಈ ಸೀಸನ್ನಲ್ಲಿ ಕೆಲ ಯುವ ಕ್ರಿಕೆಟಿಗರಲ್ಲಿ ನಾವು ತುಡಿತ ಕಾಣಲಿಲ್ಲ. ಅವರ ಆಟದಲ್ಲಿ ಯಾವುದೇ ಸ್ಪಾರ್ಕ್ ಇರಲಿಲ್ಲ. ಮುಂದಿನ ಪಂದ್ಯಗಳಲ್ಲಿ ಅವರನ್ನು ಕರೆತರುವುದರಿಂದ ಯಾವುದೇ ಒತ್ತಡವಿಲ್ಲದೇ ಆಡಬಹುದು ಎಂದು ವ್ಯಂಗ್ಯವಾಡಿದ್ದರು.
ಧೋನಿ ಹೇಳಿಕೆ ಬೆನ್ನಲ್ಲೇ ಅಭಿಮಾನಿಗಳು ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಧೋನಿ ಅವರ ಹೇಳಿಕೆಯಿಂದ ನಿಜಕ್ಕೂ ಬೇಸರವಾಗಿದೆ. ಯುವಕರಿಗೆ ಅವಕಾಶವನ್ನು ನೀಡದೆ ಅವರಲ್ಲಿ ಯಾವುದೇ ತುಡಿತವಿಲ್ಲ ಎನ್ನುವುದು ಎಷ್ಟು ಸರಿ ಎಂದು ಅನೇಕರು ಪ್ರಶ್ನಿಸಿದ್ದಾರೆ. ಜಡೇಜಾ ರನ್ ಕದಿಯುವಲ್ಲಿ ತುಂಬಾ ಕಷ್ಟಪಡುತ್ತಿದ್ದಾರೆ. ಜಾಧವ್ ಈ ಸೀಸನ್ನಲ್ಲಿ ನಿರಂತರ ವೈಫಲ್ಯ ಅನುಭವಿಸುತ್ತಿದ್ದಾರೆ. ಆದರೆ, ಇವರಿಗೆ ಮತ್ತೆ ಮತ್ತೆ ಅವಕಾಶ ನೀಡಲಾಗುತ್ತಿದೆ. ಇಂತವರನ್ನು ಪಕ್ಕಕ್ಕೆ ಇಟ್ಟು ಯುವಕರಿಗೆ ಅವಕಾಶ ಕೊಟ್ಟು ನೋಡಿ. ಆಬಳಿಕ ಯುವಕರಲ್ಲಿ ಸ್ಪಾರ್ಕ್ ಇದೆಯೋ? ಇಲ್ಲವೋ ನೋಡಿ ಎಂದು ಅಭಿಮಾನಿಗಳು ಕಿಡಿಕಾರಿದ್ದಾರೆ.
ಇದಕ್ಕೂ ಮುನ್ನ ಧೋನಿ ಹೇಳಿಕೆಗೆ ತಿರುಗೇಟು ನೀಡಿರುವ ಟೀಮ್ ಇಂಡಿಯಾದ ಮಾಜಿ ನಾಯಕ ಕ್ರಿಸ್ ಶ್ರೀಕಾಂತ್, ಧೋನಿ ಓರ್ವ ಅತ್ಯುತ್ತಮ ಕ್ರಿಕೆಟಿಗ ಎಂಬುದರಲ್ಲಿ ಸಂಶಯವೇ ಇಲ್ಲ. ಆದರೆ, ರಾಜಸ್ಥಾನ ರಾಯಲ್ಸ್ ವಿರುದ್ಧ ಸೋತ ಬಳಿಕ ಆಡಿದ ಮಾತುಗಳನ್ನು ಒಪ್ಪಲಾಗದು. ನೀವು ಪ್ರಕ್ರಿಯೆಯ ಬಗ್ಗೆ ಮಾತನಾಡುತ್ತಿದ್ದೀರಿ, ಆದರೆ ನಿಮ್ಮ ಆಯ್ಕೆಯ ಪ್ರಕ್ರಿಯೆಯೇ ತಪ್ಪಾಗಿದೆ ಎಂದು ಧೋನಿಯನ್ನು ಟೀಕಿಸಿದ್ದಾರೆ.
ಕೇದರ್ ಜಾಧವ್ ನಿರಂತರ ವೈಫಲ್ಯ ಕಾಣುತ್ತಿದ್ದಾರೆ. 8 ಪಂದ್ಯಗಳಿಂದ ಕೇವಲ 62 ರನ್ಗಳನ್ನು ಮಾತ್ರ ಗಳಿಸಿದ್ದಾರೆ. 24 ವರ್ಷದ ಎನ್ ಜಗದೀಶನ್ಗೆ ಆರ್ಸಿಬಿ ವಿರುದ್ಧ ಒಂದು ಅವಕಾಶ ನೀಡಲಾಯಿತು. ಮೊದಲ ಪಂದ್ಯದಲ್ಲೇ 28 ಎಸೆತದಲ್ಲಿ 33 ರನ್ ಗಳಿಸಿದ್ದರು. ಅವರಿಗೆ ಈ ಪಂದ್ಯದಲ್ಲೂ ಅವಕಾಶ ನೀಡಬಹುದಾಗಿತ್ತು. ಯುವಕರಲ್ಲಿ ತುಡಿತ ಇಲ್ಲ ಎನ್ನುತ್ತೀರಿ, ಹಾಗಾದರೆ ಜಾಧವ್ರಲ್ಲಿ ತುಡಿತವಿದೆಯೇ? ಪಿಯುಷ್ ಚಾವ್ಲಾರಲ್ಲಿ ಇದೆಯಾ? ಧೋನಿ ಮಾತು ಇದೆಲ್ಲ ಹಾಸ್ಯಸ್ಪದವಾಗಿದ್ದು, ಅವರು ನೀಡಿದ ಹೇಳಿಕೆಯನ್ನು ಒಪ್ಪಲು ಸಾಧ್ಯವೇ ಇಲ್ಲ. ಈಗಲಾದರೂ ಯುವಕರಿಗೆ ಅವಕಾಶ ನೀಡಿ ಎಂದರು. (ಏಜೆನ್ಸೀಸ್)